ನವದೆಹಲಿ(ಜೂ.01):ದೇಶದಲ್ಲಿ ಕೊರೋನಾ ವೈರಸ್‌ ಹಾವಳಿ ಮುಂದುವರಿದಿದ್ದು, ಭಾನುವಾರ 7870 ಮಂದಿಯಲ್ಲಿ ಹೊಸದಾಗಿ ಸೋಂಕು ಕಂಡುಬಂದಿದೆ. ಇದರೊಂದಿಗೆ ಭಾರತದ ಒಟ್ಟಾರೆ ಸೋಂಕಿತರ ಸಂಖ್ಯೆ 1,84,662ಕ್ಕೆ ಏರಿಕೆಯಾಗಿದ್ದು, ವಿಶ್ವದ ಟಾಪ್‌ 10 ಕೊರೋನಾಪೀಡಿತ ರಾಷ್ಟ್ರಗಳ ಪಟ್ಟಿಯಲ್ಲಿ ಜರ್ಮನಿಯನ್ನು ಹಿಂದಿಕ್ಕಿ ಭಾರತವು 8ನೇ ಸ್ಥಾನಕ್ಕೇರಿಕೆಯಾಗಿದೆ.

ಕೊರೋನಾ ಸಾವಿನಲ್ಲೂ ಚೀನಾ ಹಿಂದಿಕ್ಕಿದ ಭಾರತ!

ಈ ನಡುವೆ, 223 ಮಂದಿ ಕೊರೋನಾದಿಂದ ಬಲಿಯಾಗಿದ್ದು, ಮೃತರ ಸಂಖ್ಯೆ 5323ಕ್ಕೇರಿಕೆಯಾಗಿದೆ. ಶನಿವಾರ ದಾಖಲೆಯ 8400 ಮಂದಿಗೆ ಸೋಂಕು ಕಂಡುಬಂದಿತ್ತು. ದಾಖಲೆಯ 316 ಮಂದಿ ಸಾವಿಗೀಡಾಗಿದ್ದರು. ಅದಕ್ಕೆ ಹೋಲಿಸಿದರೆ ಭಾನುವಾರ ಸಂಖ್ಯೆ ಕಡಿಮೆ ಇದೆ.

ಲಾಕ್‌ಡೌನ್‌ ಜಾರಿಯಲ್ಲಿದ್ದಾಗ ಕಡಿಮೆ ಇದ್ದ ಸೋಂಕಿನ ಪ್ರಮಾಣ ಈಗ ಅಧಿಕವಾಗಿದೆ. ಭಾರತ ಇದೇ ವೇಗದಲ್ಲಿ ಹೋದರೆ ಬಹುತೇಕ ಸೋಮವಾರ ಫ್ರಾನ್ಸ್‌ ಅನ್ನು ಹಿಂದಿಕ್ಕಿ 7ನೇ ಸ್ಥಾನಕ್ಕೇರುವ ಎಲ್ಲ ಸಾಧ್ಯತೆ ಇದೆ. 2.33 ಲಕ್ಷ ಪ್ರಕರಣಗಳಿರುವ ಇಟಲಿಯನ್ನು 4-5 ದಿನದಲ್ಲಿ ಹಿಂದಿಕ್ಕಿ 6ನೇ ಸ್ಥಾನಕ್ಕೆ ಜಿಗಿಯುವ ಅಪಾಯವೂ ಕಂಡುಬರುತ್ತಿದೆ.