ನವದೆಹಲಿ(ಮೇ.30): ವಿಶ್ವದ ಪಾಲಿಗೆ ಕೊರೋನಾ ವೈರಸ್‌ ತವರೂರು ಎನಿಸಿಕೊಂಡಿರುವ ಚೀನಾವನ್ನು ಸೋಂಕಿತರ ಸಂಖ್ಯೆಯಲ್ಲಿ 10 ದಿನಗಳ ಹಿಂದಷ್ಟೇ ಮೀರಿಸಿದ್ದ ಭಾರತ ಈಗ ಸಾವಿನ ಸಂಖ್ಯೆಯಲ್ಲೂ ನೆರೆ ದೇಶವನ್ನು ಹಿಂದಿಕ್ಕಿದೆ.

ಅತಿ ಹೆಚ್ಚು ಕೊರೋನಾ ಸೋಂಕಿತರನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದ್ದ ಟರ್ಕಿಯನ್ನು ಗುರುವಾರವಷ್ಟೇ 10ನೇ ಸ್ಥಾನಕ್ಕೆ ದಬ್ಬಿ 9ನೇ ಸ್ಥಾನಕ್ಕೇ ಏರಿದ್ದ ಭಾರತ, ಇದೀಗ ವೈರಸ್‌ಗೆ ಬಲಿಯಾದವರ ಸಂಖ್ಯೆಯಲ್ಲೂ ಹೊಸ ದಾಖಲೆ ಸ್ಥಾಪಿಸಿದೆ. ಚೀನಾದಲ್ಲಿ ಕೊರೋನಾ ವೈರಸ್‌ಗೆ ಈವರೆಗೆ 4634 ಮಂದಿ ಬಲಿಯಾಗಿದ್ದರೆ, ಭಾರತದಲ್ಲಿ ಈ ಸಂಖ್ಯೆ ಶುಕ್ರವಾರ 4784ಕ್ಕೇರಿಕೆಯಾಗಿದೆ. ಈ ಮೂಲಕ ಕೊರೋನಾದಿಂದ ಅತಿ ಹೆಚ್ಚು ಸಾವು ಸಂಭವಿಸಿದ ದೇಶಗಳ ಪಟ್ಟಿಯಲ್ಲಿ ಭಾರತ 12ನೇ ಸ್ಥಾನಕ್ಕೇರಿಕೆಯಾಗಿದೆ.

ಚೀನಾದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 82,995 ಇದ್ದರೆ, ಭಾರತದಲ್ಲಿ 1,68,386ಕ್ಕೇರಿಕೆಯಾಗಿದೆ. ತನ್ಮೂಲಕ ಚೀನಾಕ್ಕಿಂತ ಡಬಲ್‌ ಸೋಂಕಿತರನ್ನು ಭಾರತ ಹೊಂದಿದಂತಾಗಿದೆ.

1.82 ಲಕ್ಷ ಸೋಂಕಿತರನ್ನು ಹೊಂದಿರುವ ಜರ್ಮನಿ 8ನೇ ಸ್ಥಾನ, 1.86 ಲಕ್ಷ ಸೋಂಕಿತರೊಂದಿಗೆ ಫ್ರಾನ್ಸ್‌ 7ನೇ ಸ್ಥಾನದಲ್ಲಿವೆ. ಭಾರತದಲ್ಲಿ ಶುಕ್ರವಾರ 7720 ಮಂದಿ ಸೋಂಕಿತರು ಪತ್ತೆಯಾಗಿದ್ದಾರೆ. ಇದೇ ವೇಗದಲ್ಲಿ ಭಾರತ ಹೋದರೆ ಇನ್ನು ಮೂರು ದಿನದಲ್ಲಿ ಆ ಎರಡೂ ದೇಶಗಳನ್ನು ಹಿಂದಿಕ್ಕಿ 6ನೇ ಸ್ಥಾನಕ್ಕೇರುವ ಎಲ್ಲ ಸಾಧ್ಯತೆಗಳೂ ಇವೆ.

ನಿನ್ನೆ ದೇಶದಲ್ಲಿ 7720 ಹೊಸ ಸೋಂಕಿತರು

151 ಮಂದಿ ಸಾವು

168386: ಒಟ್ಟು ಸೋಂಕಿತರು

4782: ಒಟ್ಟು ಸಾವು