ಚೆನ್ನೈ(ಮೇ.06): ಪೊಲೀಸರಿಗೆ ಕೊರೋನಾ ಸೋಂಕು ತಗಲಿದರೆ ಏನು ಮಾಡಬೇಕು ಎಂಬುದನ್ನು ಈಗಿನಿಂದಲೇ ಯೋಚಿಸಿ ಭದ್ರತೆಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಿ ಎಂದು ಕೇಂದ್ರ ಸರ್ಕಾರ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ.

ಹಲವು ರಾಜ್ಯಗಳಲ್ಲಿ ಪೊಲೀಸರಿಗೂ ಕೊರೋನಾ ಸೋಂಕು ತಗಲುವುದು ವರದಿಯಾಗುತ್ತಿದೆ. ಅದರ ಪ್ರಮಾಣ ಹೆಚ್ಚಾದರೆ ಪೊಲೀಸಿಂಗ್‌ ಕುಸಿದು ಬೀಳುತ್ತದೆ. ಹೀಗಾಗಿ ಪೊಲೀಸರ ಅಗತ್ಯವಿಲ್ಲದ ಪ್ರದೇಶಗಳಲ್ಲಿ ಭದ್ರತೆಗೆ ಹೋಮ್‌ ಗಾರ್ಡ್ಸ್, ಸಿವಿಲ್‌ ಡಿಫೆನ್ಸ್‌ ಸಿಬ್ಬಂದಿ, ಎನ್‌ಸಿಸಿ ಕೆಡೆಟ್‌ಗಳು, ಸ್ಕೌಟ್ಸ್‌ ಮತ್ತು ಗೈಡ್ಸ್‌ ಹಾಗೂ ಸ್ಟೂಡೆಂಟ್‌ ಪೊಲೀಸ್‌ ಕೆಡೆಟ್‌ಗಳನ್ನು ನಿಯೋಜಿಸಿ, ಪೊಲೀಸ್‌ ಸಿಬ್ಬಂದಿಯನ್ನು ಮೀಸಲಾಗಿ ಇರಿಸಿಕೊಳ್ಳಿ.

ಸಾಧ್ಯವಾದರೆ ಭದ್ರತಾ ಕಾರ್ಯ ಹೊರತುಪಡಿಸಿ ಇನ್ನಿತರ ಕಾರ್ಯಕ್ಕೆ ನಿಯೋಜನೆಗೊಂಡ ಪೊಲೀಸರಿಗೆ ವರ್ಕ್ ಫ್ರಂ ಹೋಮ್‌ ಆಯ್ಕೆ ನೀಡುವ ಬಗ್ಗೆಯೂ ರಾಜ್ಯಗಳ ಪೊಲೀಸ್‌ ಮುಖ್ಯಸ್ಥರು ಯೋಚಿಸಬಹುದು ಎಂದು ಕೇಂದ್ರ ಗೃಹ ಇಲಾಖೆಯ ಸುತ್ತೋಲೆ ತಿಳಿಸಿದೆ.

ಕೇಂದ್ರದ ಸೂಚನೆಗೂ ಮೊದಲೇ ತಮಿಳುನಾಡಿನಲ್ಲಿ ಶೇ.25ರಷ್ಟುಪೊಲೀಸರನ್ನು ಮನೆಯಲ್ಲಿರಿಸಿ, ಮೀಸಲು ಪಡೆಯಂತೆ ಪರಿಗಣಿಸಲಾಗುತ್ತಿದೆ.