ನವದೆಹಲಿ(ಅ.12): ಅನ್‌ಲಾಕ್‌ 5.0 ಭಾಗವಾಗಿ ಕೇಂದ್ರ ಸರ್ಕಾರ ಘೋಷಿಸಿದ್ದ ಎಲ್ಲಾ ಸಡಿಲಿಕೆಗಳನ್ನು ಜಾರಿಗೆ ತಂದಿರುವ ಬಹುತೇಕ ರಾಜ್ಯ ಸರ್ಕಾರಗಳು, ಶಾಲೆಗಳ ಪುನಾರಂಭದ ಕುರಿತು ಮಾತ್ರ ಇನ್ನೂ ಗೊಂದಲದಲ್ಲೇ ಉಳಿದುಕೊಂಡಿವೆ. ಅಕ್ಟೋಬರ್‌ 15ರ ನಂತರ ಪರಿಸ್ಥಿತಿ ನೋಡಿಕೊಂಡು ಶಾಲೆ ತೆರೆಯುವ ಅವಕಾಶವನ್ನು ಕೇಂದ್ರ ಸರ್ಕಾರವು ರಾಜ್ಯಗಳ ವಿವೇಚನೆಗೆ ಬಿಟ್ಟಿದ್ದರೂ, ಕೊರೋನಾ ವೈರಸ್‌ ತಾರಕಕ್ಕೇರಿರುವ ಈ ಸಂದರ್ಭದಲ್ಲಿ ಶಾಲೆ ಆರಂಭ ಏನು, ಹೇಗೆ? ಎಂಬ ಗೊಂದಲಕ್ಕೆ ಬಹುತೇಕ ರಾಜ್ಯಗಳು ಗುರಿಯಾಗಿವೆ.

ಕೇಂದ್ರ ಸರ್ಕಾರದ ಈ ಹಿಂದಿನ ಮಾರ್ಗಸೂಚಿಗಳ ಅನ್ವಯ ಸೆ.21ರಿಂದ ಮಧ್ಯಪ್ರದೇಶ, ಜಮ್ಮು-ಕಾಶ್ಮೀರ, ಅಸ್ಸಾಂ, ಚಂಡೀಗಢ, ಹಿಮಾಚಲ ಪ್ರದೇಶ, ಆಂಧ್ರಪ್ರದೇಶ, ಪಂಜಾಬ್‌ ಹಾಗೂ ಹರ್ಯಾಣದಲ್ಲಿ ಶಾಲೆ ತೆರೆಯಲಾಗಿದೆ. ಅದರೆ ಅದು 9ರಿಂದ 12ನೇ ತರಗತಿಯ ವಿದ್ಯಾರ್ಥಿಗಳು ಶಾಲೆಗೆ ಸ್ವಯಂಪ್ರೇರಿತವಾಗಿ ಆಗಮಿಸಿ ಪಾಠ ಕಲಿಯುವುದಕ್ಕೆ ಮಾತ್ರ.

ಆದರೆ ಈ 8 ರಾಜ್ಯಗಳಲ್ಲಿ ಶಾಲೆಗಳ ಆರಂಭವಾದ ಬಳಿಕ ಮಕ್ಕಳು ಮತ್ತು ಶಿಕ್ಷಕರ ಮೇಲಿನ ಕೊರೋನಾ ಸೋಂಕಿನ ಪರಿಣಾಮಗಳ ಕುರಿತು ಇನ್ನೂ ಸ್ಪಷ್ಟಮಾಹಿತಿ ಹೊರಬಿದ್ದಿಲ್ಲದ ಕಾರಣ, ಉಳಿದ ರಾಜ್ಯಗಳು ತಕ್ಷಣಕ್ಕೆ ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢ ಶಾಲೆಗಳನ್ನು ತೆರೆಯುವ ಕುರಿತು ಮನಸ್ಸು ಮಾಡುತ್ತಿಲ್ಲ ಎನ್ನಲಾಗಿದೆ.

ಎಲ್ಲೆಲ್ಲಿ ಏನೇನು ಸ್ಥಿತಿ?:

ದಿಲ್ಲಿಯಲ್ಲಿ ಶಾಲೆಗಳು ತೆರೆದಿಲ್ಲ. ಅ.31ರವರೆಗೆ ಇದೇ ಸ್ಥಿತಿ ಮುಂದುವರಿಸಲು ಸರ್ಕಾರ ನಿರ್ಧರಿಸಿದೆ. ಅ.31ರಂದು ಆಗಿನ ಸ್ಥಿತಿ ನೋಡಿ ಮುಂದಿನ ನಿರ್ಣಯ ಕೈಗೊಳ್ಳಲಿದೆ. ಇನ್ನು ಕರ್ನಾಟಕದಲ್ಲಿ ಕೊರೋನಾ ಕಾರಣ ವಿದ್ಯಾಗಮ ಶಾಲೆ ಸ್ಥಗಿತಗೊಳಿಸಲಾಗಿದೆ. ಜೊತೆಗೆ ಅ. 12ರಿಂದ ತಿಂಗಳಾಂತ್ಯದವರೆಗೆ ರಜೆ ಘೋಷಿಸಲಾಗಿದೆ. ಹೀಗಾಗಿ ಅ.15ರಿಂದ ಶಾಲೆಗಳು ಆರಂಭವಾಗಲ್ಲ. ಮತ್ತೊಂದೆಡೆ ಕೊರೋನಾ ಪರಿಸ್ಥಿತಿ ನೋಡಿಕೊಂಡು ಮುಂದಿನ ನಿರ್ಧಾರ ಕೈಗೊಳ್ಳುವವರೆಗೆ ಶಾಲೆ ಆರಂಭವಾಗುವುದಿಲ್ಲ ಎಂದು ಛತ್ತೀಸ್‌ಗಢದ ಕಾಂಗ್ರೆಸ್‌ ಸರ್ಕಾರ ನಿರ್ಣಯಿಸಿದೆ.

ಇನ್ನು ಆಂಧ್ರಪ್ರದೇಶ, ಮಹಾರಾಷ್ಟ್ರ, ಗುಜರಾತ್‌ ಮತ್ತು ಮಧ್ಯಪ್ರದೇಶ ಸರ್ಕಾರಗಳು ಕೂಡ ದೀಪಾವಳಿವರೆಗೆ ಶಾಲಾರಂಭವಿಲ್ಲ ಎಂದು ಹೇಳಿದೆ. ಬಂಗಾಳದಲ್ಲಿ ನ.15ರಂದು ಕಾಳಿ ಪೂಜೆ ಇದೆ. ಆ ನಂತರ ಶಾಲಾರಂಭದ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದರು. ಹೀಗಾಗಿ ಅನಿಶ್ಚಿತ ಪರಿಸ್ಥಿತಿ ಇದೆ.

ಭಾಗಶಃ ಶುರು:

ಉತ್ತರ ಪ್ರದೇಶವು ಕಂಟೈನ್ಮೆಂಟ್‌ ವಲಯದ ಹೊರಗೆ ಇರುವ 9ರಿಂದ 12ನೇ ತರಗತಿ ಶಾಲೆಗಳನ್ನು ಅಕ್ಟೋಬರ್‌ 19ರಿಂದ ಆರಂಭಿಸಲು ನಿರ್ಧರಿಸಿದೆ. ಪುದುಚೇರಿಯೂ 9ರಿಂದ 12ನೇ ಕ್ಲಾಸ್‌ ಆರಂಭಕ್ಕೆ ತೀರ್ಮಾನಿಸಿದೆ. ಹರ್ಯಾಣದಲ್ಲಿ 6ರಿಂದ 9ನೇ ಕ್ಲಾಸ್‌ ವಿದ್ಯಾರ್ಥಿಗಳು ಅಗತ್ಯಬಿದ್ದರೆ ತಮ್ಮ ಸಂದೇಹ ನಿವಾರಿಸಿಕೊಳ್ಳಲು ಶಾಲೆಗೆ ತೆರಳಲು ವಿದ್ಯಾರ್ಥಿಗಳಿಗೆ ಅನುಮತಿಸುವ ಚಿಂತನೆ ನಡೆಸಿದೆ. ನ.1ರ ನಂತರ ಅಸ್ಸಾಂನಲ್ಲಿ 6ನೇ ತರಗತಿ ನಂತರ ಶಾಲೆ ಆರಂಭಿಸಲು ಸರ್ಕಾರ ಚಿಂತನೆ ನಡೆಸಿದೆ. ಆದರೆ ಲಸಿಕೆ ಸಿಗುವವರೆಗೆ ಮಕ್ಕಳನ್ನು ಶಾಲೆಗೆ ಕಳಿಸಲು ನಮಗೆ ಮನಸ್ಸಿಲ್ಲ ಎಂದು ಪಾಲಕರು ಹೇಳುತ್ತಿದ್ದಾರೆ.

ಮೇಘಾಲಯ, ಗೋವಾ:

ಮೇಘಾಲಯ, ಗೋವಾ ಸರ್ಕಾರಗಳು ಪಾಲಕರು, ಶಿಕ್ಷಕರ ಅಭಿಪ್ರಾಯ ಯಾಚಿಸಿವೆ.