Asianet Suvarna News Asianet Suvarna News

4 ರಾಜ್ಯಗಳಲ್ಲಿ 28, 29ಕ್ಕೆ ಲಸಿಕೆ ನೀಡಿಕೆ ತಾಲೀಮು

4 ರಾಜ್ಯಗಳಲ್ಲಿ 28, 29ಕ್ಕೆ ಲಸಿಕೆ ನೀಡಿಕೆ ತಾಲೀಮು | ಪಂಜಾಬ್‌, ಅಸ್ಸಾಂ, ಆಂಧ್ರ, ಗುಜರಾತಲ್ಲಿ ರಿಹರ್ಸಲ್‌ | ಲಸಿಕೆ ಸಾಗಣೆ, ನೋಂದಣಿ ಮತ್ತಿತರ ಸಿದ್ಧತೆಗಳ ಪರೀಕ್ಷೆ

Coronavirus Dry run for COVID-19 vaccine rollout in 4 States on 28th and 29th December Govt dpl
Author
Bangalore, First Published Dec 26, 2020, 9:15 AM IST

ಪಿಟಿಐ ನವದೆಹಲಿ(ಡಿ.26): ಕೊರೋನಾ ಲಸಿಕೆಗೆ ಒಪ್ಪಿಗೆ ದೊರೆತಾಕ್ಷಣ ಅದನ್ನು ಜನರಿಗೆ ನೀಡಲು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿರುವ ಕೇಂದ್ರ ಸರ್ಕಾರ, ಡಿ.28 ಹಾಗೂ 29ರಂದು ನಾಲ್ಕು ರಾಜ್ಯಗಳಲ್ಲಿ ಲಸಿಕೆ ನೀಡಿಕೆಯ ಅಣಕು ಕಾರ್ಯಾಚರಣೆ ನಡೆಸಲು ನಿರ್ಧರಿಸಿದೆ. ಪಂಜಾಬ್‌, ಅಸ್ಸಾಂ, ಆಂಧ್ರಪ್ರದೇಶ ಮತ್ತು ಗುಜರಾತ್‌ನ ಕೆಲ ಜಿಲ್ಲೆಗಳಲ್ಲಿ ಈ ಅಣಕು ಕಾರ್ಯಾಚರಣೆ ನಡೆಯಲಿದೆ.

"

ಲಸಿಕೆ ನೀಡಲು ದೇಶದ ಆರೋಗ್ಯ ವ್ಯವಸ್ಥೆ ಹೇಗೆ ಸಜ್ಜಾಗಿದೆ ಎಂಬುದನ್ನು ತಿಳಿದುಕೊಳ್ಳಲು ಇದನ್ನು ನಡೆಸಲಾಗುತ್ತಿದ್ದು, ಕೋವಿನ್‌ ವೆಬ್‌ಸೈಟ್‌ನಲ್ಲಿ ಲಸಿಕೆಯ ಫಲಾನುಭವಿಗಳ ಹೆಸರು ನೋಂದಣಿ, ಲಸಿಕೆ ಸಾಗಣೆಯ ಆನ್‌ಲೈನ್‌ ಮೇಲ್ವಿಚಾರಣೆ, ಲಸಿಕೆ ಪಡೆಯುವವರನ್ನು ಆಯ್ಕೆ ಮಾಡುವುದು, ಲಸಿಕಾ ಕೇಂದ್ರಗಳಿಗೆ ಸದಸ್ಯರನ್ನು ನಿಯೋಜಿಸುವುದು, ಲಸಿಕೆ ಕೇಂದ್ರಗಳಲ್ಲಿ ಫಲಾನುಭವಿಗಳಿಗೆ ಅಣಕು ಲಸಿಕೆ ನೀಡುವುದು, ಈ ಕುರಿತು ವರದಿ ತಯಾರಿಸುವುದು ಹಾಗೂ ಸಂಜೆ ಸಭೆ ನಡೆಸುವುದು - ಇವಿಷ್ಟುಕಾರ್ಯಗಳು ಅಣಕು ಕಾರ್ಯಾಚರಣೆಯಲ್ಲಿ ನಡೆಯಲಿವೆ.

ಬ್ರಿಟನ್‌ ಆಯ್ತು, ಈಗ ನೈಜೀರಿಯಾ ವೈರಸ್‌

ಕೊರೋನಾ ಲಸಿಕೆಯನ್ನು ಶೇಖರಿಸಿಡಲು ಕೋಲ್ಡ್‌ ಸ್ಟೋರೇಜ್‌ಗಳ ಸಿದ್ಧತೆ ಹಾಗೂ ಸಾಗಣೆಗೆ ಮಾಡಿಕೊಂಡ ವ್ಯವಸ್ಥೆ ಪರಿಶೀಲನೆ, ಲಸಿಕಾ ಕೇಂದ್ರಗಳಲ್ಲಿ ಜನಜಂಗುಳಿ ನಿಯಂತ್ರಣ, ಸರಿಯಾದ ಸಾಮಾಜಿಕ ಅಂತರ ಮುಂತಾದವುಗಳನ್ನೂ ಪರಿಶೀಲಿಸಲಾಗುತ್ತದೆ. ಪ್ರತಿ ರಾಜ್ಯದಲ್ಲಿ ಎರಡು ಜಿಲ್ಲೆಗಳಲ್ಲಿ ಐದು ವಿಭಿನ್ನ ರೀತಿಯ ಲಸಿಕಾ ಕೇಂದ್ರಗಳಲ್ಲಿ ಅಣಕು ಕಾರ್ಯಾಚರಣೆ ನಡೆಯಲಿದೆ. ಜಿಲ್ಲಾಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ ಅಥವಾ ಪ್ರಾಥಮಿಕ ಆರೋಗ್ಯ ಕೇಂದ್ರ, ನಗರ ಪ್ರದೇಶದಲ್ಲಿ ಒಂದು ಕೇಂದ್ರ, ಖಾಸಗಿ ಲಸಿಕಾ ಕೇಂದ್ರ ಹಾಗೂ ಗ್ರಾಮೀಣ ಕೇಂದ್ರಗಳಲ್ಲಿ ಅಣಕು ಕಾರ್ಯಾಚರಣೆ ನಡೆಸಲಾಗುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಈ ಅಣಕು ಆಂದೋಲನದಲ್ಲಿ ಕೊರೋನಾ ಲಸಿಕೆಯೊಂದನ್ನು ಬಿಟ್ಟು ಬೇರೆಲ್ಲವೂ ಇರಲಿದೆ. ಕೋವಿನ್‌ ವೆಬ್‌ಸೈಟ್‌ ಹೇಗೆ ಕೆಲಸ ಮಾಡುತ್ತದೆ ಹಾಗೂ ಲಸಿಕೆ ನೀಡಿಕೆ ವ್ಯವಸ್ಥೆಯಲ್ಲಿ ಆಗಬೇಕಾದ ಸುಧಾರಣೆಗಳೇನು ಎಂಬುದನ್ನು ಕೂಡ ಈ ವೇಳೆ ಕಂಡುಕೊಳ್ಳಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

Follow Us:
Download App:
  • android
  • ios