ದೇಶದಲ್ಲಿ ಕೋವಿಡ್ ಪ್ರಕರಣ ಗಣನೀಯ ಹೆಚ್ಚಳ ದೆಹಲಿ ಬಳಿಕ ಪಂಜಾಬ್‌ನಲ್ಲಿ ಮಾಸ್ಕ್ ಕಡ್ಡಾಯ ಸಿನಿಮಾ ಹಾಲ್, ಸಾರಿಗೆ, ಮಾಲ್‌ಗಳಲ್ಲಿ ಮಾಸ್ಕ್ ಕಡ್ಡಾಯ
ಚಂಡೀಘಡ(ಏ.21): ಭಾರತದಲ್ಲಿ ಮತ್ತೆ ಕೊರೋನಾ ಆರ್ಭಟ ಶುರುವಾಗಿದೆ. ಚೀನಾ, ಯೂರೋಪ್ ಸೇರಿದಂತೆ ವಿದೇಶಗಳಲ್ಲಿ ಹೊಸ ತಳಿಗಳ ಆತಂಕ ಹೆಚ್ಚಾಗುತ್ತಿದ್ದಂತೆ ಭಾರತದಲ್ಲೂ ಇದೀಗ ಕೊರೋನಾ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಪರಿಣಾಮ ಒಂದೊಂದೆ ರಾಜ್ಯಗಳಲ್ಲಿ ಕಠಿಣ ನಿರ್ಬಂಧಗಳು ಜಾರಿಯಾಗುತ್ತಿದೆ. ಇದೀಗ ದೆಹಲಿ ಬಳಿಕ ಪಂಜಾಬ್‌ನಲ್ಲೂ ಮಾಸ್ಕ್ ಕಡ್ಡಾಯ ಮಾಡಲಾಗಿದೆ.
ಕೊರೋನಾ ಇಳಿಕೆಯಾಗಿ ಸಹಜಸ್ಥಿತಿಗೆ ಮರಳಿದ ಕಾರಣ ಪಂಜಾಬ್ ಸೇರಿದಂತೆ ಭಾರತದ ಬಹುತೇಕ ರಾಜ್ಯಗಳಲ್ಲಿ ಕೊರೋನಾ ನಿರ್ಬಂಧ ಸಡಿಲಗೊಳಿಸಲಾಗಿತ್ತು. ಇದೀಗ ಮತ್ತೆ ನಿರ್ಬಂಧಗಳು ಜಾರಿಯಾಗುತ್ತಿದೆ. ಪಂಜಾಬ್‌ನಲ್ಲಿ ಸಿನಿಮಾ ಹಾಲ್, ಸಾರ್ವಜನಿಕ ಸಾರಿಗೆ, ಶಾಪಿಂಗ್ ಮಾಲ್ ಸೇರಿದಂತೆ ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್ ಕಡ್ಡಾಯ ಮಾಡಲಾಗಿದೆ.
ದೆಹಲಿಯಲ್ಲಿ ಮತ್ತೆ ಮಾಸ್ಕ್ ಕಡ್ಡಾಯ, ನಿಯಮ ಉಲ್ಲಂಘಿಸಿದರೆ ₹500 ದಂಡ
ಶಾಲಾ ತರಗತಿ, ಕಚೇರಿ, ಒಳಾಂಗಣ ಸಭೆ, ಸಮಾರಂಭ, ಸಾರ್ವಜನಿಕ ಸಭೆ ಸೇರಿದಂತೆ ಎಲ್ಲಾ ಕಡೆಗಳಲ್ಲಿ ಮಾಸ್ಕ್ ಕಡ್ಡಾಯ ಎಂದು ಆಮ್ ಆದ್ಮಿ ಸರ್ಕಾರ ಆದೇಶಿಸಿದೆ. ಪಂಜಾಬ್‌ನಲ್ಲೂ ಕೊರೋನಾ ಪ್ರಕರಣ ಗಣನೀಯ ಏರಿಕೆ ಕಂಡಿದೆ. 4ನೇ ಅಲೆ ಭೀತಿಯೂ ಎದುರಾಗಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಮಾಸ್ಕ್ ಕಡ್ಡಾಯ ಮಾಡಲಾಗಿದೆ.
ದೆಹಲಿಯಲ್ಲಿ ಕೊರೋನಾ ಪ್ರಕರಣ ದುಪ್ಪಟ್ಟಾಗಿದೆ. ದಿನದಿಂದ ದಿನಕ್ಕೆ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ದೆಹಲಿ ಸರ್ಕಾರ ಮಾಸ್ಕ್ ಕಡ್ಡಾಯ ಎಂದು ಘೋಷಿಸಿದೆ. ಈ ಮೂಲಕ ಮತ್ತೆ ಕಠಿಣ ನಿಯಮಗಳನ್ನು ಜಾರಿಗೊಳಿಸುತ್ತಿದೆ. ಇನ್ನು ಹರ್ಯಾಣದಲ್ಲೂ ಕೊರೋನಾ ಹೆಚ್ಚಾಗಿರುವ ಕಾರಣ ಗುರುಗ್ರಾಂ, ಫರೀದಾಬಾದ್, ಸೋನಿಪತ್ ಹಾಗೂ ಝಾಜರ್ ಪ್ರದೇಶಗಳಲ್ಲಿ ಮಾಸ್ಕ್ ಕಡ್ಡಾಯ ಮಾಡಲಾಗಿದೆ.
ಕೋವಿಡ್ 4ನೇ ಅಲೆಯ ಮುನ್ಸೂಚನೆ: ದೇಶದಲ್ಲಿ ಕೋವಿಡ್ ಪ್ರಸರಣ ವೇಗ 3 ತಿಂಗಳ ಗರಿಷ್ಠಕ್ಕೆ ಏರಿಕೆ
ದಿಲ್ಲಿಗೆ 4ನೇ ಅಲೆ ಆತಂಕ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದೈನಂದಿನ ಕೋವಿಡ್ ಪ್ರಕರಣಗಳ ಸಂಖ್ಯೆ ಆತಂಕಕಾರಿಯಾಗಿ ಏರಿಕೆಯಾಗುತ್ತಿದ್ದು, ಬುಧವಾರ 1009 ಪ್ರಕರಣಗಳು ದೃಢಪಟ್ಟಿವೆ. ಈ ಮೂಲಕ ಕೋವಿಡ್ ಪಾಸಿಟಿವಿಟಿ ದರ ಶೇ.5.7ಕ್ಕೆ ಏರಿಕೆಯಾಗಿದೆ. ಪಾಸಿಟಿವಿಟಿ ದರ ಏ.11- 18ರ ಅವಧಿಗಿಂತ ಮೂರು ಪಟ್ಟು ಅಧಿಕವಾಗಿದೆ.
ಇನ್ನು ಸಕ್ರಿಯ ಪ್ರಕರಣಗಳ ಸಂಖ್ಯೆ 2641ಕ್ಕೆ ಏರಿಕೆಯಾಗಿದೆ. ದೆಹಲಿಯಲ್ಲಿ ಭಾನುವಾರ 517, ಸೋಮವಾರ 501, ಮಂಗಳವಾರ 632 ಕೊರೋನಾ ಕೇಸ್ ಪತ್ತೆಯಾಗಿದ್ದವು. ಆದರೆ ಮಂಗಳವಾರಕ್ಕೆ ಹೋಲಿಸಿದರೆ ಬುಧವಾರ ದೈನಂದಿನ ಕೋವಿಡ್ ಕೇಸುಗಳ ಪ್ರಮಾಣ ಏಕಾಏಕಿ ಶೇ.60ರಷ್ಟುಏರಿಕೆಯಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ದೆಹಲಿ ಸರ್ಕಾರ,‘ರಾಜ್ಯದಲ್ಲಿ ಕೋವಿಡ್ ಕೇಸ್ ಹೆಚ್ಚುತ್ತಿದ್ದರೂ ಆಸ್ಪತ್ರೆ ದಾಖಲಾಗುವವರ ಪ್ರಮಾಣ ಕಡಿಮೆ ಇದೆ. ಒಟ್ಟು ಸಕ್ರಿಯ ಪ್ರಕರಣಗಳ ಪೈಕಿ ಶೇ.3ಕ್ಕಿಂತ ಕಡಿಮೆ ಜನರು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಹಾಗಾಗಿ ಆತಂಕ ಬೇಡ’ ಎಂದು ಸರ್ಕಾರ ತಿಳಿಸಿದೆ.
ಕೊರೋನಾ ಹರಡುವಿಕೆ ದುಪ್ಪಟ್ಟು
ಒಬ್ಬರಿಂದ ಇನ್ನೊಬ್ಬರಿಗೆ ಕೋವಿಡ್ ಹರಡುವ ಸೂಚ್ಯಂಕವಾದ ‘ಆರ್-ವ್ಯಾಲ್ಯೂ’ ಜನವರಿ ಬಳಿಕ ಇದೇ ಮೊದಲ ಬಾರಿಗೆ 1ಕ್ಕಿಂತ ಏರಿದೆ. ದಿಲ್ಲಿಯಲ್ಲಿ ಕೇಸು ಏರುತ್ತಿರುವ ನಡುವೆಯೇ ಈ ಆತಂಕದ ಸಮಾಚಾರ ಹೊರಬಿದ್ದಿದೆ. ಇದು ದೇಶದಲ್ಲಿ ಕೋವಿಡ್ 4ನೇ ಅಲೆಯ ಮುನ್ಸೂಚನೆಯೇ ಎಂಬ ಚರ್ಚೆಗೆ ನಾಂದಿ ಹಾಡಿದೆ.
ಈ ಹಿಂದೆ ಜನವರಿಯಲ್ಲಿ (ಜ.16-ಜ.22) ಆರ್-ವ್ಯಾಲ್ಯೂ 1.28 ಇತ್ತು. ಬಳಿಕ ಅದು 1ಕ್ಕಿಂತ ಕೆಳಗೆ ಕುಸಿದಿತ್ತು. ಏ.5ರಿಂದ 11ರ ನಡುವಿನ ವಾರದಲ್ಲಿ ಕೂಡ 0.93 ಇತ್ತು. ಆದರೆ ಏ.12ರಿಂದ 18ರ ನಡುವಿನ ಅವಧಿಯಲ್ಲಿ 1ಕ್ಕಿಂತ ಹೆಚ್ಚಾಗಿದ್ದು, 1.07 ದರ ದಾಖಲಿಸಿದೆ ಎಂದು ಚೆನ್ನೈ ಗಣಿತಶಾಸ್ತ್ರ ವಿಜ್ಞಾನ ಸಂಸ್ಥೆಯ ಅಧ್ಯಯನ ತಿಳಿಸಿದೆ.
