ಕೊಚ್ಚಿ[ಮಾ.16]: ಕೊರೋನಾ ತಾಂಡವಕ್ಕೆ ಜಗತ್ತೇ ತತ್ತರಿಸಿದೆ. ಸಾವಿನ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಸೋಂಕಿತರ ಸಂಖ್ಯೆ ದುಪ್ಪಟ್ಟಾಗಿದೆ. ಹೀಗಿರುವಾಗ ವೈರಸ್ ನಿಯಂತ್ರಿಸುವ ನಿಟ್ಟಿನಲ್ಲಿ ಅನೇಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿವೆ. ಸದ್ಯ ಸ್ಯಾನಿಟೈಸರ್ ಹಾಗೂ ಮಾಸ್ಕ್ ಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿದ್ದು, ಜನರು ಇದನ್ನು ಖರೀದಿಸಲು ಮುಗಿ ಬಿದ್ದಿದ್ದಾರೆ. ಔಷಧ ಮಳಿಗೆ ಮಾಲೀಕರು ಇದನ್ನೇ ನೆಪವಾಗಿಟ್ಟುಕೊಂಡು ದುಪ್ಪಟ್ಟು ಬೆಲೆಗೆ ಮಾಸ್ಕ್ ಮಾರಾಟ ಮಾಡಲಾರಂಭಿಸಿದ್ದಾರೆ. ಆದರೀಗ ಕೇರಳದ ಮೆಡಿಕಲ್ ಶಾಪ್ ಒಂದು ಕೇವಲ 2 ರೂಪಾಯಿಗೆ ಮಾಸ್ಕ್ ಗಳನ್ನು ಮಾರಾಟ ಮಾಡಿ ಜನ ಸಾಮಾನ್ಯರ ನೆರವಿಗೆ ಧಾವಿಸಿದೆ. 

ಕೇರಳದಲ್ಲಿ ಈಗಾಗಲೇ 19 ಮಂದಿಯಲ್ಲಿ ಕೊರೋನಾ ವೈರಸ್ ಸೋಂಕು ಪತ್ತೆಯಾಗಿದೆ. ಇಲ್ಲಿನ ಸರ್ಕಾರ ಈಗಾಗಲೇ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಕ್ರಮ ವಹಿಸಿದೆ. ಹೀಗಿದ್ದರೂ ಮಾಸ್ಕ್ ಕೊರತೆ ಎದುರಾಗಿದ್ದು, ಇದನ್ನು ನೀಗಿಸುವ ನಿಟ್ಟಿನಲ್ಲಿ ಪಿಣರಾಯಿ ಸರ್ಕಾರ ಮಹತ್ವದ ಹೆಜ್ಜೆ ಇರಿಸಿದೆ. ಇಲ್ಲಿನ ಜೈಲಿನಲ್ಲಿ ಬಂಧಿತರಾಗಿರುವ ಕೈದಿಗಳು ಮಾಸ್ಕ್ ತಯಾರಿಸುವ ಕಾಯಕದಲ್ಲಿ ತೊಡಗಿದ್ದಾರೆ. ಅದೇನಿದ್ದರೂ ಮೆಡಿಕಲ್ ಶಾಪ್ ಗಳು ಮಾತ್ರ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆ ಮಾಸ್ಕ್ ಬೆಲೆಯನ್ನೂ ಏರಿಸುತ್ತಿದ್ದಾರೆ. ಆದರೆ ಇವೆಲ್ಲದರ ನಡುವೆ ಕೊಚ್ಚಿಯ ಸರ್ಜಿಕಲ್ ಶಾಪ್ ಒಂದು ಕೇವಲ 2. ರೂಪಾಯಿಗೆ ಮಾಸ್ಕ್ ಮಾರಾಟ ಮಾಡಲಾರಂಭಿಸಿದ್ದು, ಜನರ ಸಹಾಯಕ್ಕೆ ಮುಂದಾಗಿದೆ.

ಮಾಸ್ಕ್ ಕೊರತೆ ನೀಗಿಸುವಲ್ಲಿ ಕೇರಳ ಯಶಸ್ವಿ, ಕ್ಲಿಕ್ ಆಯ್ತು ಐಡಿಯಾ!

ಕೊಚ್ಚಿಯ ಈ ಸರ್ಜಿಕಲ್ ಶಾಪ್ 10 ರೂಪಾಯಿಗೆ ಉತ್ಪಾದಕರಿಂದ ಮಾಸ್ಕ್ ಖರೀದಿಸುತ್ತಿದೆಯಾದರೂ, ಕೇವಲ 2 ರೂಪಾಯಿಗೆ ಮಾರಾಟ ಮಾಡುತ್ತಿದೆ. ಅದರಲ್ಲೂ ವಿಶೇಷವಾಗಿ ಹೆಚ್ಚು ಬೇಡಿಕೆ ಇರುವ ಆಸ್ಪತ್ರೆ ಹಾಗೂ ಮೆಡಿಕಲ್ ತಂಡಕ್ಕೆ ಇದು ಮಾಸ್ಕ್ ಪೂರೈಸುತ್ತಿದೆ. 

ಇನ್ನು ಈ ಕುರಿತು ಪ್ರಶ್ನಿಸಿದಾಗ ಪ್ರತಿಕ್ರಿಯಿಸಿದ ತಸ್ಲೀಮ್ ಹಾಗೂ ನದೀಂ ಮಾಸ್ಕ್ ಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವುದರಿಂದ ನಷ್ಟವಾಗುತ್ತಿದೆ. ಆದರೆ ಈ ಕುರಿತು ಯಾವುದೇ ಬೇಜಾರಿಲ್ಲ. ಯಾರಿಗೊತ್ತು ನಾಳೆ ನಮಗೂ ಈ ಸೋಂಕು ತಗುಲಬಹುದು ಆಗ ಇಂತಹ ಸಹಾಯ ನಮಗೂ ಸಿಗಬಹುದು ಎಂದಿದ್ದಾರೆ.

ಅದೇನಿದ್ದರೂ ಇಂತಹ ಕಠಿಣ ಪರಿಸ್ಥಿತಿ ಎದುರಾಗಿದ್ದರೂ, ಮಾಸ್ಕ್ ಬೇಡಿಕೆ ಹೆಚ್ಚುತ್ತಿರುವುದನ್ನು ಕಂಡು ದುಪ್ಪಟ್ಟು ಬೆಲೆಗೆ ಮಾರಾಟ ಮಾಡಿ ಸ್ವಾರ್ಥ ಮೆರೆಯುತ್ತಿರುವ ಔಷಧ ಮಳಿಗೆ ಸಿಬ್ಬಂದಿ ನಡುವೆ ಈ ಇಬ್ಬರು ಮಾನವೀಯತೆ ಮೆರೆದ ಇಬ್ಬರಿಗೆ ಸಲಾಂ