ನವದೆಹಲಿ[ಫೆ.02]: ಮಾರಕ ಕೊರೋನಾ ವೈರಸ್‌ ಹಾವಳಿಯಿಂದ ತತ್ತರಿಸುವ ಚೀನಾದ ವುಹಾನ್‌ನಿಂದ 324 ಭಾರತೀಯರು ಶನಿವಾರ ತವರಿಗೆ ಮರಳಿದ್ದಾರೆ. 211 ವಿದ್ಯಾರ್ಥಿಗಳು, 110 ಉದ್ಯೋಗಿಗಳು ಸೇರಿದಂತೆ ಒಟ್ಟು 324 ಭಾರತೀಯರನ್ನು ಹೊತ್ತ 423 ಆಸನವನ್ನೊಳಗೊಂಡ ಸೂಪರ್‌ ಜಂಬೋ ಬಿ-747 ವಿಶೇಷ ವಿಮಾನ ಶನಿವಾರ ಬೆಳಗ್ಗೆ 7.30ರ ವೇಳೆಗೆ ದೆಹಲಿ ತಲುಪಿದೆ.

ಆದರೆ, ವುಹಾನ್‌ನಲ್ಲಿ ದೈಹಿಕ ತಪಾಸಣೆ ವೇಳೆ ದೇಹದಲ್ಲಿ ಅತಿಹೆಚ್ಚು ತಾಪಮಾನ ಕಂಡುಬಂದ ಭಾರತದ 6 ಮಂದಿಗೆ ಭಾರತಕ್ಕೆ ಆಗಮಿಸಲು ವಿಮಾನ ಹತ್ತಲು ಚೀನಾ ಅಧಿಕಾರಿಗಳು ಅವಕಾಶ ನೀಡಿಲ್ಲ. ಇದರ ಬೆನ್ನಲ್ಲೇ, ಚೀನಾದಲ್ಲಿರುವ ಮತ್ತಷ್ಟು ಭಾರತೀಯರ ಸುರಕ್ಷಿತವಾಗಿ ಭಾರತಕ್ಕೆ ಕರೆತರುವ ನಿಟ್ಟಿನಲ್ಲಿ ಶನಿವಾರ ಮಧ್ಯಾಹ್ನ ಮತ್ತೊಂದು ವಿಮಾನವು ವೈದ್ಯರ ತಂಡದೊಂದಿಗೆ ಚೀನಾಕ್ಕೆ ತಲುಪಿದೆ.

ಚೀನಾದಿಂದ ಭಾರತಕ್ಕೆ ಬಂದಿಳಿದ ಎಲ್ಲಾ 324 ಜನರನ್ನು ದೆಹಲಿ ಬಳಿಯ ಮನೇಸಾರ್‌ ಹಾಗೂ ಛವ್ಲಾ ಎಂಬಲ್ಲಿ ಸ್ಥಾಪಿಸಲಾಗಿರುವ ವಿಶೇಷ ಆಸ್ಪತ್ರೆಗಳಲ್ಲಿ 14 ದಿನಗಳ ಕಾಲ ತೀವ್ರ ನಿಗಾ ವಹಿಸಲಾಗುತ್ತದೆ. ಅವರಲ್ಲಿ ವೈರಸ್‌ ಇಲ್ಲ ಎಂಬುದು ಖಚಿತವಾದ ಬಳಿಕವಷ್ಟೇ, ಅವರವರ ಮನೆಗಳಿಗೆ ಕಳುಹಿಸಿಕೊಡಲಾಗುತ್ತದೆ.