ನವದೆಹಲಿ (ಮಾ.15): ವಿಶ್ವದಾದ್ಯಂತ 130 ದೇಶಗಳಲ್ಲಿ 1.50 ಲಕ್ಷ ಜನರನ್ನು ತಗುಲಿ, 5600ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿರುವ ಮಾರಕ ಕೊರೋನಾ ವೈರಸ್‌ ಸೋಂಕು ನಿಯಂತ್ರಣದ ನಿಟ್ಟಿನಲ್ಲಿ ಇದೀಗ ಇಡೀ ಭಾರತ ದೇಶವೇ ತನ್ನನ್ನು ತಾನು ಪ್ರತ್ಯೇಕಿಸಿಕೊಂಡಿದೆ. ದೇಶದ 28 ರಾಜ್ಯ ಮತ್ತು 8 ಕೇಂದ್ರಾಡಳಿತ ಪ್ರದೇಶಗಳ ಪೈಕಿ ಕರ್ನಾಟಕ ಸೇರಿದಂತೆ ದೇಶದ 20ಕ್ಕೂ ಹೆಚ್ಚು ರಾಜ್ಯಗಳಲ್ಲಿ ಸೋಂಕು ತಡೆಯುವ ನಿಟ್ಟಿನಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಹಲವು ಕಠಿಣ ಕ್ರಮಗಳನ್ನು ಘೋಷಿಸಿದ್ದು, ಸಾಮಾನ್ಯ ಜನಜೀವನದ ಮೇಲೆ ಪರಿಣಾಮ ಬೀರಿದೆ.

ದೇಶವ್ಯಾಪಿ ಬಂದ್‌, ಮುಷ್ಕರ ಹೊರತುಪಡಿಸಿ ಇತರೆ ಯಾವುದೇ ಸಂದರ್ಭದಲ್ಲಿ, ಅದರಲ್ಲೂ ಆರೋಗ್ಯ ಸಂಬಂಧಿ ವಿಷಯಕ್ಕೆ ದೇಶದಲ್ಲಿ ಇಂಥ ವಾತಾವರಣ ನಿರ್ಮಾಣವಾಗಿದ್ದು ಇತ್ತೀಚಿನ ದಶಕಗಳಲ್ಲೇ ಇದೇ ಮೊದಲು ಎನ್ನಲಾಗಿದೆ.

20 ರಾಜ್ಯಗಳಲ್ಲಿ ಕಠಿಣ ಕ್ರಮ:

ದೇಶದಲ್ಲಿ 95 ಜನರಿಗೆ ಕೊರೋನಾ ಸೋಂಕು ತಗುಲಿ ಇಬ್ಬರು ಸಾವನ್ನಪ್ಪಿದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಬಹುತೇಕ ರಾಜ್ಯಗಳು ತಕ್ಷಣದಿಂದಲೇ ಜಾರಿಗೆ ಬರುವಂತೆ ಹಲವು ಕ್ರಮಗಳನ್ನು ಘೋಷಿಸಿವೆ. ಈ ಪೈಕಿ ಈಶಾನ್ಯ ರಾಜ್ಯಗಳನ್ನು ಹೊರತುಪಡಿಸಿ ಬಹುತೇಕ ಉಳಿದೆಲ್ಲಾ ರಾಜ್ಯಗಳಲ್ಲಿ ಶಾಲಾ- ಕಾಲೇಜುಗಳನ್ನು ಮಾಚ್‌ರ್‍ ಅಂತ್ಯದವರೆಗೂ ಮುಂದೂಡಲಾಗಿದೆ. ಜೊತೆಗೆ 1-7ನೇ ತರಗತಿವರೆಗಿನ ಪರೀಕ್ಷೆಗಳನ್ನು ಮುಂದೂಡುವ ಮೂಲಕ, ಮಕ್ಕಳನ್ನು ಸೋಂಕಿನಿಂದ ರಕ್ಷಿಸುವ ಯತ್ನವನ್ನು ಸರ್ಕಾರಗಳು ಮಾಡಿವೆ.

ಇನ್ನು ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಸಾರ್ವಜನಿಕ ಸಮಾರಂಭ, ವಿವಾಹ ಕಾರ್ಯಕ್ರಮ, ಧಾರ್ಮಿಕ ಕಾರ್ಯಕ್ರಮಗಳ ಮೇಲೆ ಪರೋಕ್ಷ ನಿರ್ಬಂಧ ಹೇರಲಾಗಿದೆ. ಜೊತೆಗೆ ಹಲವು ರಾಜ್ಯಗಳಲ್ಲಿ ಮಾಲ್‌, ಬಾರ್‌, ಜಿಮ್‌, ಪಬ್‌, ಸಿನೆಮಾಹಾಲ್‌, ಮಾಲ್‌ಗಳನ್ನು ಮಾರ್ಚ್ ಅಂತ್ಯದವರೆಗೂ ಮುಚ್ಚಲು ಆಯಾ ರಾಜ್ಯ ಸರ್ಕಾರಗಳು ಆದೇಶಿಸಿವೆ. ಹಲವು ರಾಜ್ಯಗಳಲ್ಲಿ ವಿಧಾನಸಭಾ ಅಧಿವೇಶವನ್ನೇ ಮುಂದೂಡಲಾಗಿದೆ.

ಕೊರೋನಾ ಭಯ: ನಾನೊಬ್ಬನೇ ಮಗ, 100 ದಿನ ರಜೆ ಕೊಡಿ ಎಂದು ಪತ್ರ ಬರೆದ ಪೇದೆ...

ಇನ್ನು ಮಾಚ್‌ರ್‍ನಲ್ಲಿ ಹೆಚ್ಚಾಗಿ ಧಾರ್ಮಿಕ ಕಾರ್ಯಕ್ರಮ ಆಯೋಜನೆಗೊಳ್ಳುವ ಸಮಯವಾದ ಕಾರಣ, ನೇರವಾಗಿ ಅವುಗಳನ್ನು ನಿಷೇಧಿಸುವ ಬದಲು, ಇಂಥ ಕಾರ್ಯಕ್ರಮಗಳನ್ನು ಸಂಪ್ರದಾಯಕ್ಕೆ ಸೀಮಿತಗೊಳಿಸುವಂತೆ ಹಲವು ರಾಜ್ಯ ಸರ್ಕಾರಗಳು ಸೂಚಿಸಿವೆ. ಈ ಕುರಿತು ಅವರು ಧಾರ್ಮಿಕ ನಾಯಕರ ಜೊತೆ ಮಾತುಕತೆ ನಡೆಸುವ ಮೂಲಕ ಇಂಥ ನಿಯಮಗಳನ್ನು ಕಾನೂನಿಗೆ ಬದಲಾಗಿ ಜಾಗೃತಿಯ ಮೂಲಕ ರಾಜ್ಯ ಸರ್ಕಾರಗಳು ಜಾರಿಗೊಳಿಸುತ್ತಿವೆ.

ಇನ್ನು ನೆರೆ ದೇಶಗಳೊಂದಿಗೆ ಗಡಿ ಹಂಚಿಕೊಂಡಿರುವ ಪಶ್ಚಿಮ ಬಂಗಾಳ, ಬಿಹಾರ ಸೇರಿದಂತೆ ಕೆಲ ರಾಜ್ಯಗಳು ತಮ್ಮ ಗಡಿ ಪ್ರದೇಶವನ್ನು ಬಂದ್‌ ಮಾಡಿವೆ.

ಕೇರಳದಲ್ಲಿ ಶಬರಿಮಲೆ ದೇಗುಲಕ್ಕೆ ಪ್ರವಾಸಿಗರು ಬರದೇ ಇರುವುದು ಒಳಿತು ಎಂದು ಸ್ವತಃ ರಾಜ್ಯ ಸರ್ಕಾರ ಸಲಹೆ ನೀಡಿದೆ. ಜೊತೆಗೆ ಬೀಚ್‌ಗಳಿಗೆ ಪ್ರವಾಸಿಗರ ಆಗಮನ ನಿಷೇಧಿಸಿದೆ. ಗೋವಾ ಸರ್ಕಾರ ಕೂಡಾ ಬೀಚ್‌ ಮತ್ತು ಕ್ಯಾಸಿನೋಗಳನ್ನು ಬಂದ್‌ ಮಾಡುವ ಮೂಲಕ ರೋಗ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದೆ. ಮತ್ತೊಂದೆಡೆ ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಆಗಮಿಸುವವರಿಗೂ ನಾನಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ದೇಗುಲದ ಆಡಳಿತ ಮಂಡಳಿ ಸೂಚಿಸಿದೆ.

ಯಾವ್ಯಾವ ರಾಜ್ಯಗಳು?

ಕರ್ನಾಟಕ, ದೆಹಲಿ, ಹರಾರ‍ಯಣ, ತಮಿಳುನಾಡು, ಉತ್ತರ ಪ್ರದೇಶ, ಹರ್ಯಾಣ, ಬಿಹಾರ, ಪಶ್ಚಿಮ ಬಂಗಾಳ, ಗೋವಾ, ರಾಜಸ್ಥಾನ, ಮಹಾರಾಷ್ಟ್ರ, ಛತ್ತೀಸ್‌ಗಢ, ಪಂಜಾಬ್‌, ಜಮ್ಮು-ಕಾಶ್ಮೀರ, ತೆಲಂಗಾಣ, ಹಿಮಾಚಲ ಪ್ರದೇಶ, ಕೇರಳ, ಮಿಜೋರಂ, ಜಾರ್ಖಂಡ್‌, ಮಧ್ಯಪ್ರದೇಶ.