Asianet Suvarna News Asianet Suvarna News

ಕರ್ನಾಟಕ ಸೇರಿ 6 ರಾಜ್ಯಗಳಲ್ಲಿ ಶವಸಂಸ್ಕಾರಕ್ಕೂ ಹೆಣಗಾಟ!

ಶವಸಂಸ್ಕಾರಕ್ಕೂ ಕಾಯುವ ಪರಿಸ್ಥಿತಿ!| ಕರ್ನಾಟಕ, ಮಹಾರಾಷ್ಟ್ರ, ಛತ್ತೀಸ್‌ಗಢ, ಗುಜರಾತ್‌, ದೆಹಲಿ, ಯುಪಿಯಲ್ಲಿ ಅಂತ್ಯಸಂಸ್ಕಾರಕ್ಕೆ ಸಮಸ್ಯೆ| ಕೊರೋನಾ ಸಾವಿನ ಪ್ರಮಾಣ ದಿಢೀರ್‌ ಹೆಚ್ಚಿದ ಬೆನ್ನಲ್ಲೇ ಶವಸಂಸ್ಕಾರಕ್ಕೆ ದಿನಗಟ್ಟಲೆ ಕಾಯುವ ಸಂಕಷ್ಟ

Corona 2nd Wave People Are Stuggling Waiting In Que For Creamation Of Deadbodies in 6 States pod
Author
Bangalore, First Published Apr 15, 2021, 7:18 AM IST

ನವದೆಹಲಿ(ಏ.15): ಕೊರೋನಾ ಸೋಂಕಿತರನ್ನು ಆಸ್ಪತ್ರೆಗೆ ಸೇರಿಸಲು ಹರಸಾಹಸ ಪಡುವ ಜೊತೆಗೆ ಅವರು ಮೃತಪಟ್ಟರೆ ಇದೀಗ ಅಂತ್ಯಸಂಸ್ಕಾರ ನಡೆಸಲೂ ಕುಟುಂಬದ ಸದಸ್ಯರು ಹೆಣಗಾಡುವ ಪರಿಸ್ಥಿತಿ ಎದುರಾಗಿದೆ. ಇದು ಯಾವುದೋ ಒಂದು ನಗರದ ಕಥೆಯಲ್ಲ. ಸೋಂಕು ಮತ್ತು ಸಾವು ಭಾರೀ ಪ್ರಮಾಣದಲ್ಲಿ ದಾಖಲಾಗುತ್ತಿರುವ ಮಹಾರಾಷ್ಟ್ರ, ಕರ್ನಾಟಕ, ದೆಹಲಿ, ಛತ್ತೀಸ್‌ಗಢ, ಮಧ್ಯಪ್ರದೇಶ, ಗುಜರಾತ್‌, ಉತ್ತರಪ್ರದೇಶದ ಹಲವು ದೊಡ್ಡ ನಗರಗಳ ವ್ಯಥೆ.

ಕೊರೋನಾ 2ನೇ ಅಲೆಯಲ್ಲಿ ಸಾವಿನ ಪ್ರಮಾಣ ದಿನೇ ದಿನೇ ಏರಿಕೆಯಾಗುತ್ತಲೇ, ಚಿತಾಗಾರಗಳಿಗೆ ಅಂತ್ಯಸಂಸ್ಕಾರಕ್ಕೆ ತರುವ ಶವಗಳ ಸಂಖ್ಯೆಯಲ್ಲಿಯೂ ಏರಿಕೆಯಾಗಿದೆ. ಆದರೆ ಚಿತಾಗಾರಗಳಲ್ಲಿ ಏಕಕಾಲಕ್ಕೆ ಅಷ್ಟೊಂದು ಜನರ ಅಂತ್ಯಕ್ರಿಯೆಗೆ ವ್ಯವಸ್ಥೆ ಇಲ್ಲದ ಕಾರಣ ಭಾರೀ ಸಮಸ್ಯೆ ಎದುರಾಗಿದೆ. ಮಹಾರಾಷ್ಟ್ರ, ಗುಜರಾತ್‌ ಛತ್ತೀಸ್‌ಗಢದ ಹಲವು ನಗರಗಳ ಚಿತಾಗಾರಗಳಲ್ಲಿ ದಿನದ 24 ಗಂಟೆಯೂ ಮೃತರ ಅಂತ್ಯಸಂಸ್ಕಾರ ನಡೆಸಲಾಗುತ್ತಿದೆ. ಆದರೂ ಶವ ಸಂಸ್ಕಾರಕ್ಕಾಗಿ ಜನರು ತಾಸುಗಟ್ಟಲೆ, ದಿನಗಟ್ಟಲೆ ಸರದಿಯಲ್ಲಿ ಕಾಯುವಂತಾಗಿದೆ.

ಗುಜರಾತ್‌ನ ಸೂರತ್‌ ಚಿತಾಗಾರವೊಂದರಲ್ಲಿ ದಿನಕ್ಕೆ 80- 100 ಶವಗಳನ್ನು ಅಂತ್ಯ ಸಂಸ್ಕಾರಕ್ಕೆ ತರಲಾಗುತ್ತಿದೆ. ಮಹಾರಾಷ್ಟ್ರದ ಮುಂಬೈ, ಅಹಮದ್‌ ನಗರ, ಪುಣೆ, ಥಾಣೆ, ನಾಂದೇಡ್‌ನಲ್ಲೂ ಇದೇ ಪರಿಸ್ಥಿತಿ ಇದೆ. ಕುಟುಂಬದ ಸದಸ್ಯರನ್ನು ಕಳೆದುಕೊಂಡವರು ಅಂತ್ಯಸಂಸ್ಕಾರಕ್ಕೂ ಕಷ್ಟಪಡಬೇಕಾದ ಪರಿಸ್ಥಿತಿ ಜನರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಇನ್ನು ಛತ್ತೀಸ್‌ಗಢದಲ್ಲಿ ಸೋಮವಾರ ಒಂದೇ ದಿನ 132 ಮಂದಿ ಕೊರೋನಾಕ್ಕೆ ಬಲಿ ಆಗಿದ್ದಾರೆ. ರಾಯ್ಪುರದಲ್ಲಿ ಕಳೆದ 2 ದಿನಗಳಿಂದ 100ಕ್ಕೂ ಹೆಚ್ಚು ಮೃತ ದೇಹಗಳ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಶವಸಂಸ್ಕಾರಕ್ಕಾಗಿ ಸರ್ಕಾರ ರಾಯ್ಪುರದಲ್ಲಿ ಹೊಸದಾಗಿ 14 ಶವ ಸಂಸ್ಕಾರ ಕೇಂದ್ರಗಳನ್ನು ತೆರೆದಿದೆ. ಉತ್ತರ ಪ್ರದೇಶದ ರಾಜಧಾನಿ ಲಖನೌದಲ್ಲಿಯೂ ಸಾವಿನ ಪ್ರಕರಣಗಳು ಏರಿಕೆ ಆಗುತ್ತಿದ್ದು ಸೋಮವಾರ ಒಂದೇ ದಿನ ರಾಜ್ಯದಲ್ಲಿ 72 ಮಂದಿ ಕೊರೋನಾಕ್ಕೆ ಬಲಿ ಆಗಿದ್ದಾರೆ. ಪರಿಣಾಮ ಮೃತ ದೇಹಗಳ ನಿರ್ವಹಣೆ ಭೀತಿ ಸೃಷ್ಟಿಸುತ್ತಿದೆ.

ಚಿತಾಗಾರ ಭರ್ತಿ:

ಸೂರತ್‌ನಲ್ಲಿ ಆಸ್ಪತ್ರೆಯಷ್ಟೇ ಅಲ್ಲ ಚಿತಾಗಾರಗಳು ಕೂಡ ಭರ್ತಿ ಆಗಿವೆ. ಶವ ಸಂಸ್ಕಾರಕ್ಕೆ ಸಾಲಿನಲ್ಲಿ ದಿನಗಟ್ಟಲೇ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಮುನ್ನ ನಗರದ ಚಿತಾಗಾರಗಳಿಗೆ ಸರಾಸರಿ 15ರಿಂದ 20 ಮೃತ ದೇಹಗಳು ಬರುತ್ತಿದ್ದವು. ಆದರೆ, ಇದೀಗ 80ರಿಂದ 100 ಮೃತ ದೇಹಗಳನ್ನು ಅಂತ್ಯ ಸಂಸ್ಕಾರಕ್ಕೆ ತರಲಾಗುತ್ತಿದೆ. ಚಿತಾಗಾರದಲ್ಲಿ ನಿರಂತರವಾಗಿ ಉರಿಯುತ್ತಿರುವ ಬೆಂಕಿಯಿಂದಾಗಿ ಕುಲುಮೆಯ ಸತ್ತಲೂ ಹಾಕಿರುವ ಉಕ್ಕಿನ ರಚನೆಗಳು ಕರಗುತ್ತಿವೆ. ನಿರಂತರ ಹೊಗೆಯಿಂದಾಗಿ ಚಿತಾಗಾರಗಳ ಅಕ್ಕ ಪಕ್ಕದ ನಿವಾಸಿಗಳು ವಿವಿಧ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಸೂರತ್‌ ಚಿತಾಗಾರಗಳ ನಿರ್ವಹಣೆ ಮಾಡುತ್ತಿರುವ ಟ್ರಸ್ಟ್‌ನ ಅಧ್ಯಕ್ಷ ಕಮಲೇಶ್‌ ಸೈಲರ್‌ ಹೇಳಿದ್ದಾರೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿರುವ ಅತಿದೊಡ್ಡ ರುದ್ರಭೂಮಿ ಹಾಗೂ ಅಂತ್ಯಸಂಸ್ಕಾರ ಕೇಂದ್ರಗಳಲ್ಲಿ ಒಂದು ತಿಂಗಳ ಹಿಂದೆ ಕೇವಲ 1ರಿಂದ 2 ಕೊರೋನಾ ರೋಗಿಗಳ ಅಂತ್ಯಕ್ರಿಯೆ ನೆರವೇರಿಸಲಾಗುತ್ತಿತ್ತು. ಆದರೆ, ಈಗ ಪ್ರತಿನಿತ್ಯ 80-90ರವರೆಗೆ ಶವಗಳು ಬರುತ್ತಿದ್ದು, ಅವುಗಳ ನಿರ್ವಹಣೆ ದೊಡ್ಡ ಸಮಸ್ಯೆಯಾಗಿ ಉದ್ಭವಿಸಿದೆ.

Follow Us:
Download App:
  • android
  • ios