ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮವೊಂದರಲ್ಲಿ ಹಮಾಸ್ ನಾಯಕರ ಚಿತ್ರ ಪ್ರದರ್ಶಿಸಿ ಮೆರವಣಿಗೆ ನಡೆಸಿದ್ದು ವಿವಾದಕ್ಕೆ ಕಾರಣವಾಗಿದೆ. ಬಿಜೆಪಿ ಘಟನೆಯನ್ನು ಖಂಡಿಸಿದರೆ, ಕಾಂಗ್ರೆಸ್ ಸಮರ್ಥಿಸಿಕೊಂಡಿದೆ.
ಕೇರಳದ ಸಾಂಸ್ಕೃತಿಕ ಉತ್ಸವದಲ್ಲಿ ಹಮಾಸ್ ನಾಯಕರ ಚಿತ್ರ: ವಿವಾದ
ಪಾಲಕ್ಕಾಡ್: ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮವೊಂದರಲ್ಲಿ ಹಮಾಸ್ ನಾಯಕರ ಚಿತ್ರ ಪ್ರದರ್ಶಿಸಿ ಮೆರವಣಿಗೆ ನಡೆಸಿದ್ದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಭಾನುವಾರ ಸಂಜೆ ಇಲ್ಲಿನ ತ್ರಿಥಾಲದಲ್ಲಿ ನಡೆದ ‘ತ್ರಿಥಾಲ ಉತ್ಸವ’ದಲ್ಲಿ ಯುವಕರ ಗುಂಪೊಂದು ಆನೆಗಳ ಮೇಲೆ ಹಮಾಸ್ ನಾಯಕರ ಚಿತ್ರಗಳನ್ನಿಟ್ಟು ಮೆರವಣಿಗೆ ಮಾಡಿದೆ. ಕಾರ್ಯಕ್ರಮದಲ್ಲಿ ಸಚಿವ ಎಂ.ಬಿ.ರಾಜೇಶ ಹಾಗೂ ಕಾಂಗ್ರೆಸ್ ಮುಖಂಡ ವಿ.ಟಿ. ಬಲರಾಮ್ ಸಹ ಭಾಗವಹಿಸಿದ್ದರು. ಇದು ಪ್ರಕರಣಕ್ಕೆ ರಾಜಕೀಯ ತಿರುವು ನೀಡಿದೆ. ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಘಟನೆಯನ್ನು ‘ಆಘಾತಕಾರಿ’ ಎಂದಿದ್ದು, ಸರ್ಕಾರ ಹಾಗೂ ವಿಪಕ್ಷ ಯುಡಿಎಫ್ ಮುಸ್ಲಿಂ ತುಷ್ಟೀಕರಣದಲ್ಲಿ ಮುಳುಗಿವೆ ಎಂದು ಟೀಕಿಸಿದ್ದಾರೆ. ಕಾಂಗ್ರೆಸ್ ನಾಯಕ ಬಲರಾಂ ಘಟನೆಯನ್ನು ಸಮರ್ಥಿಸಿಕೊಂಡಿದ್ದು, ಸಂಘ ಪರಿವಾರದೊಂದಿಗೆ ಸಂಬಂಧ ಹೊಂದಿರದ ಎಲ್ಲಾ ಭಾರತೀಯರು ಪ್ಯಾಲೆಸ್ತೀನಿಯರು ಮತ್ತು ಅವರ ಸ್ವಾತಂತ್ರ್ಯದ ಬಯಕೆಯನ್ನು ಬೆಂಬಲಿಸುತ್ತಾರೆ ಎಂದಿದ್ದಾರೆ.
ಇಸ್ರೇಲ್, ಹಮಾಸ್ ಉಗ್ರ ಯುದ್ಧಕ್ಕೆ 500 ದಿನ ಪೂರ್ಣ
ಜೆರುಸಲೇಂ: 2023ರ ಅ.7ರಂದು ಇಸ್ರೇಲ್ ಮೇಲಿನ ಹಮಾಸ್ ಉಗ್ರರ ದಾಳಿಯೊಂದಿಗೆ ಆರಂಭವಾಗಿದ್ದ ಯುದ್ಧ ಸೋಮವಾರಕ್ಕೆ 500 ದಿನ ಪೂರೈಸಿದೆ. ಅಂದು ಹಮಾಸ್ ನಡೆಸಿದ್ದ ದಾಳಿಯಲ್ಲಿ 1200 ಜನರು ಸಾವನ್ನಪ್ಪಿದ್ದರು. ಜೊತೆಗೆ ಉಗ್ರರು 251 ಜನರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದರು. ನಂತರದ ದಿನಗಳಲ್ಲಿ 36 ಒತ್ತೆಯಾಳುಗಳು ಉಗ್ರರ ವಶದಲ್ಲಿ ಸಾವನ್ನಪ್ಪಿದ್ದರೆ, ಇನ್ನೂ 73 ಜನರು ಅವರ ವಶದಲ್ಲೇ ಇದ್ದಾರೆ. ಉಳಿದವರನ್ನು ಬಿಡುಗಡೆ ಮಾಡಲಾಗಿದೆ. ಇಸ್ರೇಲ್ ದಾಳಿಗೆ ಗಾಜಾದಲ್ಲಿ 75000ಕ್ಕೂ ಹೆಚ್ಚು ಕಟ್ಟಡ ನಾಶವಾಗಿದೆ. 48200 ಪ್ಯಾಲಿಸ್ತೀನಿಯರು ಸಾವನ್ನಪ್ಪಿದ್ದಾರೆ. 1.10 ಲಕ್ಷ ಪ್ಯಾಲೆಸ್ತೀನಿಯರು ಗಾಯಗೊಂಡಿದ್ದಾರೆ. ಗಾಜಾದಿಂದ ಶೇ.90ರಷ್ಟು ಜನರು ತೆರವಾಗಿದ್ದಾರೆ.
ಹಲ್ಲಿನಿಂದ 125 ಕೇಜಿ ಭಾರ ಎತ್ತಿ ಸ್ವಾಮಿ ಗಿನ್ನೆಸ್ ದಾಖಲೆ
ಮೇರಠ್: ಇಟಲಿಯ ಮಿಲಾನ್‌ನಲ್ಲಿ ಇತ್ತೀಚೆಗೆ ನಡೆದ ಸ್ಪರ್ಧೆಯಲ್ಲಿ ಮೇರಠ್‌ನ ಯೋಗ ಪಟು ವಿಕಾಸ್ ಸ್ವಾಮಿ ತಮ್ಮ ಹಲ್ಲಿನಿಂದಲೇ 125 ಕೆಜಿ ಭಾರ ಎತ್ತಿ ಹೊಸ ಗಿನ್ನೆಸ್ ದಾಖಲೆ ನಿರ್ಮಿಸಿದ್ದಾರೆ. ಫೆ.14 ರಂದು ನಡೆದ ಕಾರ್ಯಕ್ರಮದಲ್ಲಿ ಸ್ವಾಮಿ 35.57 ಸೆಕೆಂಡುಗಳ ಕಾಲ 125 ಕೇಜಿ ಭಾರವನ್ನು ತಮ್ಮ ಹಲ್ಲುಗಳಿಂದ ಹಿಡಿಯುವ ಮೂಲಕ ದಾಖಲೆ ಬರೆದಿದ್ದಾರೆ.
20 ಶಾಲೆ ಆರಂಭಕ್ಕೆ 2000 ಕೋಟಿ ದಾನ: ಗೌತಮ್ ಅದಾನಿ
ನವದೆಹಲಿ: ತಮ್ಮ ಕಿರಿಯ ಪುತ್ರ ಜೀತ್ ಅದಾನಿ ವಿವಾಹ ಸಮಾರಂಭದಲ್ಲಿ 10 ಸಾವಿರ ಕೋ.ರು. ಹಣವನ್ನು ಸಮಾಜ ಸೇವೆಗೆ ಕೊಡುಗೆಯಾಗಿ ನೀಡುವುದಾಗಿ ಘೋಷಿಸಿದ್ದ ಉದ್ಯಮಿ ಗೌತಮ್ ಅದಾನಿ ಅದರ ಭಾಗವಾಗಿ ದೇಶಾದ್ಯಂತ ಕನಿಷ್ಠ 20 ಶಾಲೆಗಳನ್ನು ಪ್ರಾರಂಭಿಸಲು 2,000 ಕೋ.ರು. ಹಣವನ್ನು ದೇಣಿಗೆ ರೂಪದಲ್ಲಿ ನೀಡುವುದಾಗಿ ಘೋಷಿಸಿದ್ದಾರೆ.ಅದಾನಿ ಸಂಸ್ಥೆಯು ಒಟ್ಟಾರೆ ಹಣದಲ್ಲಿ 6,000 ಕೋ.ರು.ವನ್ನು ಆಸ್ಪತ್ರೆಗಳ ಅಭಿವೃದ್ಧಿಗೆ ಮತ್ತು 2,000 ಕೋ.ರು.ಹಣವನ್ನು ಕೌಶಲ್ಯಾಭಿವೃದ್ಧಿಗೆ ನೀಡುವುದಾಗಿ ಘೋಷಿಸಿದ್ದಾರೆ. 2000 ಕೋ.ರು. ದೇಣಿಗೆಯೊಂದಿಗೆ ವಿಶ್ವದರ್ಜೆಯ ಶಿಕ್ಷಣ ಕಲಿಕೆ ಮತ್ತು ಅತ್ಯಾಧುನಿಕ ಮೂಲ ಸೌಕರ್ಯವನ್ನು ಎಲ್ಲಾ ಸ್ತರದ ಜನರಿಗೆ ಕೈಗೆಟಕುವಂತೆ ಮಾಡಲು ಆದ್ಯತೆ ನೀಡುವುದಾಗಿ ಹೇಳಿದ್ದಾರೆ.
