ತಿರುವನಂತಪುರಂ(ನ.23): ಕೇರಳದಲ್ಲಿ ಸದ್ಯ ಭಾರೀ ವಿವಾದ ಸೃಷ್ಟಿಸಿರುವ '118-ಎ'  ಕೇರಳ ಪೊಲೀಸ್ ಕಾಯ್ದೆ ಜಾರಿಯಾಗುವುದಿಲ್ಲ. ಈ ಕಾಯ್ದೆಗೆ ಭಾರೀ ವಿರೋಧ ವ್ಯಕ್ತವಾದ ಬೆನ್ನಲ್ಲೇ ಸರ್ಕಾರ ಇಂತಹುದ್ದೊಂದು ನಿರ್ಧಾರ ಪ್ರಕಟಿಸಿದೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಾತನಾಡುತ್ತಾ ವಿಧಾನಸಭಾ ಕಲಾಪದಲ್ಲಿ ಈ ಬಗ್ಗೆ ಚರ್ಚೆ ನಡೆದ ಬಳಿಕವಷ್ಟೇ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಹೊಸ ಕಾನೂನಲ್ಲೇನಿದೆ?

ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗುವ ಯಾವುದೇ ಪೋಸ್ಟ್ ಆಕ್ಷೇಪಾರ್ಹ ಅಥವಾ ಬೆದರಿಕೆಯೊಡ್ಡುವಂತೆ ಇದ್ದರೆ ಇಂತಹ ಪೋಸ್ಟ್ ಹಾಕಿದವರನ್ನು ಅಥವಾ ಪೋಸ್ಟ್ ಹಂಚಿಕೊಂಡವರಿಗೆ 5 ವರ್ಷ ಜೈಲು ಶಿಕ್ಷೆ ವಿಧಿಸಲು ಕೇರಳ ಸರ್ಕಾರ ಹೊಸ ಕಾನೂನು ಜಾರಿಗೊಳಿಸಲು ನಿರ್ಧರಿಸಿತ್ತು. ಶಿಕ್ಷೆ ವಿಧಿಸಲು ಅವಕಾಶವಿರುವ ಸುಗ್ರೀವಾಜ್ಞೆಗೆ ಕೇರಳ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ಅವರು ಸಹಿ ಕೂಡಾ ಹಾಕಿದ್ದರು. 

ಮಾನಹಾನಿಕರ ಸುದ್ದಿಗೆ ಇನ್ನು 5 ವರ್ಷ ಜೈಲು, 10 ಸಾವಿರ ರೂ. ದಂಡ!

ಅಪರಾಧಕ್ಕೆ ಪ್ರೇರೇಪಿಸುವ ಅಥವಾ ಯಾರಿಗಾದರೂ ಬೆದರಿಕೆಯೊಡ್ಡುವ ಸಂದೇಶವನ್ನು ಯಾವುದೇ ಮಾಧ್ಯಮದ ಮೂಲಕ ಸಿದ್ಧಪಡಿಸುವುದು, ಕಳಿಸುವುದು, ಹಂಚಿಕೊಳ್ಳುವುದು ಅಪರಾಧವಾಗುತ್ತದೆ. ಇಂಥವರಿಗೆ ಐದು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ 10 ಸಾವಿರ ರೂ ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿದೆ. ಕೇರಳ ಪೊಲೀಸ್ ಕಾಯ್ದೆಗೆ ಹೊಸದೊಂದು ಪರಿಚ್ಛೇದ (118 A) ಸೇರಿಸುವ ಈ ವಿಧಿಗೆ ಕೇರಳ ರಾಜ್ಯಪಾಲರು ಸಹಿ ಹಾಕಿದ್ದಾರೆ.

ಈ ಕಾನೂನು ಮಾಧ್ಯಮ ಸ್ವಾತಂತ್ರ್ಯ ಹತ್ತಿಕ್ಕಲು ಬಳಕೆಯಾಗಬಹುದು ಎಂಬ ಆತಂಕ ವ್ಯಕ್ತವಾಗಿದ್ದು, ಹೊಸ ಕಾನೂನಿಗೆ ಭಾರೀ ವಿರೋಧ ವ್ಯಕ್ತವಾಗಿತ್ತು.