Asianet Suvarna News Asianet Suvarna News

ತುರ್ತುಪರಿಸ್ಥಿತಿಯಲ್ಲಿ ಕರಗಿದ್ದ ಸಂವಿಧಾನ ಮೌಲ್ಯಗಳು: ಡಾ.ಸುಧಾಕರ ಹೊಸಳ್ಳಿ

ಇಂದಿಗೆ 49 ವರ್ಷಗಳ ಹಿಂದೆ ಸಂವಿಧಾನದ ಮತ್ತು ಸಂವಿಧಾನ ರಚನಾಕಾರರ ಆಶಯ ಸೋತು ಹೋಗಿತ್ತು. ಹೇಗೆ ಪರತಂತ್ರ ಗೊತ್ತಿಲ್ಲದ ಯುವಕರು ಸ್ವಾತಂತ್ರ್ಯದ ಮಹತ್ವವನ್ನು ಪೂರ್ಣ ಪ್ರಮಾಣದಲ್ಲಿ ಅರಿಯಲಾರರೋ, ಹಾಗೆ ತುರ್ತು ಪರಿಸ್ಥಿತಿಯ ಅನುಭವವಿಲ್ಲದವರು ಅದರ ಕರಾಳತೆಯನ್ನು ಗುರುತಿಸಲಾರರು.
 

Constitutional values dissolved during Emergency  in India Says Dr Sudhakar Hosalli grg
Author
First Published Jun 25, 2024, 11:04 AM IST

ಡಾ.ಸುಧಾಕರ ಹೊಸಳ್ಳಿ ಬೆಂಗಳೂರು

ಬೆಂಗಳೂರು(ಜೂ.25): 75 ವರ್ಷಗಳ ಹಿಂದೆ ಸ್ವತಂತ್ರ ಭಾರತದ ಸಾರ್ವಭೌಮತೆಯ ಪ್ರತೀಕವಾಗಿ ಸ್ವಂತ ಸಂವಿಧಾನ ಹೊಂದುವ ಆಶಯದಿಂದ ಬಾಬು ರಾಜೇಂದ್ರ ಪ್ರಸಾದ್ ನೇತೃತ್ವದ ಸಂವಿಧಾನ ರಚನಾ ಸಭೆ ಹಾಗೂ ಬಾಬಾ ಸಾಹೇಬ್ ಅಂಬೇಡ್ಕರರ ನೇತೃತ್ವದ ಕರಡು ರಚನಾ ಸಮಿತಿಯ ನೇತೃತ್ವದಲ್ಲಿ ಸಂವಿಧಾನವನ್ನು ದೇಶೀಯವಾಗಿ ರಚಿಸಿ, ನವೆಂಬರ್ 26, 1949ರಂದು ಆತ್ಮಾರ್ಪಣೆ ಮಾಡಿಕೊಳ್ಳಲಾಯಿತು. ಸಂವಿಧಾನದ ಒಳಗೆ ಸುದೀರ್ಘವಾದ ವಿಧಿಗಳು, ನಿಯಮಗಳು, ಇದ್ದಾಗಿಯೂ ಅವುಗಳ ಒಟ್ಟಾರೆ ಪ್ರಧಾನ ಫಲಿತಾಂಶ ಪ್ರಜೆಗಳಿಗೆ ನೀಡಬಹುದಾದ ಗರಿಷ್ಠ ಹಕ್ಕುಗಳೇ ಆಗಿದ್ದವು.

ಸಂವಿಧಾನದ ಕುರಿತು ಮಾತನಾಡುವಾಗ ಅಂಬೇಡ್ಕರರು ನಾವು ಈ ಸಂವಿಧಾನದಲ್ಲಿ ಪ್ರಜೆಗಳಿಗೆ ವಿಶೇಷ ಮೂಲಭೂತ ಹಕ್ಕುಗಳನ್ನು ನೀಡಿದ್ದು, ಅದರಲ್ಲೂ ಅಂತಹ ಹಕ್ಕುಗಳಿಗೆ ಯಾವುದೇ ಧಕ್ಕೆ ತಗಲಿದರೂ, 32ನೇ ವಿಧಿಯ ಅನುಸಾರಸರ್ವೋಚ್ಚ ನ್ಯಾಯಾಲಯದ ರಕ್ಷಣೆ ಪಡೆಯುವಂತೆ ನಿಯಮ ಮಾಡಲಾಗಿದೆ. ಇದು ಸಂವಿಧಾನದ ಶ್ರೇಷ್ಠತೆಯ ಸೂಚಕ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಜನ ಸತ್ವ ಬಯಸುತ್ತಾರೆ, ಗಲಾಟೆ ಅಲ್ಲ: ವಿಪಕ್ಷಕ್ಕೆ ಮೋದಿ ಪ್ರಹಾರ

ತುರ್ತುಸ್ಥಿತಿ ಹೇರಿದರೂ ಹಕ್ಕುಗಳಿಗೆ ಚ್ಯುತಿ ಬರಬಾರದು

1946ರಿಂದ1949ರ ಸಂವಿಧಾನ ರಚನಾ ಸಭೆಯ ಚರ್ಚೆಯ ವೇಳೆಯಲ್ಲಿ ವ್ಯಕ್ತಿಯ ವೈಯಕ್ತಿಕ ಮತ್ತು ಜೀವಿಸುವ ಹಕ್ಕು (20 ಮತ್ತು 21ನೇ ವಿಧಿ) ಯಾವುದೇ ಸಂದರ್ಭದಲ್ಲಿ ನಿರ್ಬಂಧಕ್ಕೆ ಒಳಗಾಗಬಾರದು, ಒಂದೊಮ್ಮೆ ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಯಾದಾಗಲೂ ಈ ಹಕ್ಕುಗಳಿಗೆ ನಿರ್ಬಂಧ ಹೇರುವ ಅಧಿಕಾರ ಸರ್ಕಾರಗಳಿಗೆ ಇರುವುದಿಲ್ಲ ಎಂಬ ನಿಯಮವನ್ನು ತುಲನಾತ್ಮಕ ಚರ್ಚೆಯ ಮುಖಾಂತರ ಅಂಗೀಕಾರ ಮಾಡಿದ್ದರು.
1 352, 356, 360 2 ಕಲ್ಪಿಸುವಾಗಲೂ, ವ್ಯಕ್ತಿ ಪ್ರಧಾನವಾದ ಈ ಹಕ್ಕುಗಳು ನಿರ್ಬಂಧವಾಗಲೇಬಾರದೆಂಬ ಸದುದ್ದೇಶದಿಂದ ಸಂವಿಧಾನದ ಒಳಗೆ ಆ ನಿಬಂಧನೆಯನ್ನು ಹೇರಲಾಗಿತ್ತು. ಜೀವಿಸುವ ಹಕ್ಕನ್ನು ಕಸಿದುಕೊಳ್ಳುವುದು ಪ್ರಕೃತಿ ನಿಯಮಕ್ಕೂ ವಿರುದ್ಧವೇ ಹೌದು. 

ಒಬ್ಬರಿಗಾಗಿ ಎಲ್ಲರ ಹಕ್ಕು ಕಸಿದರು

ಇಂದಿಗೆ 49 ವರ್ಷಗಳ ಹಿಂದೆ ಸಂವಿಧಾನದ ಮತ್ತು ಸಂವಿಧಾನ ರಚನಾಕಾರದ ಆಶಯ ಸೋತು ಹೋಗಿತ್ತು ಎಂಬುದನ್ನು ಮರೆಮಾಚಲು ಸಾಧ್ಯವಿಲ್ಲ, ಹೇಗೆ ಪರತಂತ್ರ ಗೊತ್ತಿಲ್ಲದ ಯುವಕರು ಸ್ವಾತಂತ್ರ್ಯವಮಹತ್ವವನ್ನು ಪೂರ್ಣ ಪ್ರಮಾಣದಲ್ಲಿ ಅರಿಯಲಾರರೋ ಹಾಗೆ ತುರ್ತು ಪರಿಸ್ಥಿತಿಯ ಸ್ವಅನುಭವವಿಲ್ಲದವರು ತುರ್ತು ಪರಿಸ್ಥಿತಿಯ ಕರಾಳತೆಯನ್ನು ಗುರುತಿಸಲಾರರು.

ಅಂದು ಜೂನ್ 25, 1975ರಂದು ಪ್ರಧಾನಮಂತ್ರಿಯೊಬ್ಬರ ಅಧಿಕಾರದ ಉಳಿವಿಗಾಗಿ ಸಂವಿಧಾನ ಸೋತಿತ್ತು, ಪ್ರಜೆಗಳು ಸೋತಿದ್ದರು, ಹಕ್ಕುಗಳು ಅಸ್ತಿತ್ವವನ್ನು ಕಳೆದುಕೊಂಡಿದ್ದವು. ಜೂನ್ 12, 1975ರಂದು ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶರಾದ ಜಗಮೋಹನ್ ಲಾಲ್ ಸಿನ್ಹಾ ಅಂದಿನ ಪ್ರಧಾನ ಮಂತ್ರಿಗಳಾಗಿದ್ದ ಇಂದಿರಾ ಗಾಂಧಿಯವರ ಚುನಾವಣಾ ದಾವೆಯನ್ನು ಪರಿಶೀಲಿಸಿ, ಆಯ್ಕೆಯನ್ನು ಅಸಿಂಧುಗೊಳಿಸಿದರು. ಅಲ್ಲದೆ, ಮುಂದಿನ ಆರು ವರ್ಷಗಳವರೆಗೆ ಚುನಾವಣೆಗೂ ನಿಲ್ಲಬಾರದೆಂದು ಆದೇಶ ನೀಡಿದರು.

ಇಂಥದ್ದೊಂದು ನ್ಯಾಯಾಂಗ ಆದೇಶದ ವಿರುದ್ಧ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸಾಂವಿಧಾನಿಕ ನಿಯಮಗಳನ್ನೇ ಬುಡಮೇಲು ಮಾಡಿದ್ದು ಭಾರತದ ಸಾಂವಿಧಾನಿಕ ಇತಿಹಾಸದಲ್ಲಿ ಅತ್ಯಂತ ಕರಾಳ ಅಧ್ಯಾಯ, ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂಕೋರ್ಟ್‌ನ ಕದ ತಟ್ಟಿದ್ದ ಇಂದಿರಾ ಗಾಂಧಿ ಅವರಿಗೆ ಜೂನ್ 24, 1973ರಂದು ನ್ಯಾಯಮೂರ್ತಿ ವಿ.ಆರ್. ಕೃಷ್ಣ ಅಯ್ಯರ್ ಅವರು ಷರತ್ತು ಬದ್ಧ ತಡೆ ಒಡ್ಡಿ, ಸಂಸತ್ತಿನ ಯಾವುದೇ ಚಟುವಟಿಕೆಯಲ್ಲಿ ಭಾಗವಹಿಸುವಂತಿಲ್ಲ ಎಂಬ ಆದೇಶವಿತ್ತಿದ್ದರು. ಅದರ ಬೆನ್ನಲ್ಲೇ ಜೂನ್ 25ರ ತಡರಾತ್ರಿಯಲ್ಲಿ ತುರ್ತು ಪರಿಸ್ಥಿತಿ ಎಂಬ ಸಂವಿಧಾನದ ಜಾಗೃತಿಕ ಶಕ್ತಿ ತಂಡವನ್ನು ಕೇವಲ ಅಧಿಕಾರದ ಉಳಿವಿಗಾಗಿ ರಾಷ್ಟ್ರದ ಮೇಲೆ ಹೇರಲಾಯಿತು.

ಮಾರಕವಾದ ಸಂವಿಧಾನ ತಿದ್ದುಪಡಿ

1973ರ ಕೇಶವಾನಂದ ಭಾರತಿ ವರ್ಸಸ್ ಕೇರಳ ಪ್ರಕರಣ ಭಾರತದ ನ್ಯಾಯಾಂಗ ಇತಿಹಾಸದಲ್ಲೇ ಅತ್ಯಂತ ಪ್ರಮುಖ ನ್ಯಾಯಿಕ ವಿಮರ್ಶಾಧಿಕಾರಕ್ಕೆ ಸಾಕ್ಷಿಯಾದಂತಹ ಪ್ರಕರಣ. ಅದರಲ್ಲಿ ಸಂಸತ್ತು ಮಾಡುವ ಯಾವುದೇ ಸಾಂವಿಧಾನಿಕ ತಿದ್ದುಪಡಿಗಳು ಸಂವಿಧಾನದ ಮೂಲ ರಚನೆಗೆ ಧಕ್ಕೆ ತರುವಂತಿಲ್ಲ ಎಂಬ ತೀರ್ಪು ನೀಡಲಾಗಿದೆ. ಆದರೂ ಜುಲೈ 24, 1975ರಲ್ಲಿ ತಂದ 38ನೇ ತಿದ್ದುಪಡಿ (ರಾಷ್ಟ್ರಪತಿಗಳು ಘೋಷಿಸುವ ತುರ್ತು ಪರಿಸ್ಥಿತಿಯನ್ನು ಯಾವುದೇ ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿಲ್ಲ), ಆಗಸ್ಟ್ 5, 1975ರ 39ನೇ ತಿದ್ದುಪಡಿ (ರಾಷ್ಟ್ರಪತಿ, ಪ್ರಧಾನಮಂತ್ರಿ, ಸಭಾಪತಿ, ಉಪರಾಷ್ಟ್ರಪತಿಗಳ ಬಗ್ಗೆ ನ್ಯಾಯಾಲಯಗಳು ವಿಚಾರಣೆ ನಡೆಸುವಂತಿಲ್ಲ), 40ನೇ ತಿದ್ದುಪಡಿ (ದೇಶದ ಮಾಧ್ಯಮಗಳ ಮೇಲೆ ನಿರ್ಬಂಧ), ಆಗಸ್ಟ್ 9, 1975ರಲ್ಲಿ ತಂದ 41ನೇ ತಿದ್ದುಪಡಿ (ಪ್ರಧಾನಿ, ರಾಷ್ಟ್ರಪತಿ, ಸ್ಪೀಕರ್, ರಾಜ್ಯವಾಲರು ಅವರು ಹುದ್ದೆಗೆ ಬರುವುದಕ್ಕಿಂತ ಮೊದಲಿನ ಪ್ರಕರಣಗಳನ್ನು ನ್ಯಾಯಾಲಯಗಳು ವಿಚಾರಣೆ ಮಾಡುವಂತಿಲ್ಲ) ಗಳು ಇಂದಿರಾ ಗಾಂಧಿಯವರ ಅಧಿಕಾರವನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾದದ್ದು ದಿಟ. ಆದರೆ ಒಟ್ಟು ಭಾರತ ಅಪಜಯ ಕಂಡಿತ್ತು.

ಸಂವಿಧಾನ ಶಿಲ್ಪಿ ಅಂಬೇಡ್ಕರರ ಮಾತೊಂದು ನೆನಪಾಗುತ್ತದೆ. 'ಸಂವಿಧಾನವೆಂಬ ಪ್ರಗತಿಯ ತೇರನ್ನು ಇಲ್ಲಿಯವರೆಗೆ ಎಳೆದು ತಂದಿದ್ದೇನೆ. ಸಾಧ್ಯವಾದರೆ ಮುಂದಕ್ಕೆ ತಳ್ಳಿ, ಆದರೆ ಹಿಂದಕ್ಕೆ ತಳ್ಳುವ ಕೆಲಸ ದಯವಿಟ್ಟು ಯಾರೂ ಮಾಡಬೇಕೆ. ಹಾಗಿದ್ದರೆ ತುರ್ತು ಪರಿಸ್ಥಿತಿ ಇವಿಷ್ಟೇ ಅಸಾಂವಿಧಾನಿಕ ನಡೆಗಳಿಗೆ ನಿದರ್ಶನವೇ ಎಂದು ಅವಲೋಕಿಸಿದರೆ, ಪಟ್ಟಿ ಬೆಳೆಯುತ್ತದೆ. ಡಿಸೆಂಬರ್ 18, 1975ರಂದು ಸಂವಿಧಾನಕ್ಕೆ ತಂದ 42ನೇ ತಿದ್ದುಪಡಿ, ಈ ತಿದ್ದುಪಡಿ ಮೂಲ ಸಂವಿಧಾನದ ಆಶಯಗಳಿಗೆ ತಿಲಾಂಜಲಿ ಇಟ್ಟ ಅಪಕೀರ್ತಿಗೆ ಭಾಜನವಾಗಿದೆ. ಎರಡು ವರ್ಷದ 11 ತಿಂಗಳು 18 ದಿವಸ ಸಂವಿಧಾನ ರಚನಾಕಾರರು ತಮ್ಮ ಅದಮ್ಯವಾದ ಜ್ಞಾನ, ಚರ್ಚೆ, ಮೌಲ್ಯ ಮಾಪನದ ಜೊತೆಗೆ ಸಂವಿಧಾನಕ್ಕೆ ಕಟ್ಟಿಕೊಟ್ಟಿದ್ದ 395 ವಿಧಿಗಳಲ್ಲಿ 59 ವಿಧಿಗಳನ್ನು ಒಟ್ಟಿಗೆ ತಿರುಚಿದ ಕಪ್ಪು ದಿನವದು.

ಒಂದಷ್ಟು ಅಸಂಗತ ತಿದ್ದುಪಡಿಗಳು

ಕೆ.ಟಿ.ಷಾ ಎಂಬುವರು 15, ನವೆಂಬರ್ 1948ರಲ್ಲಿ ಎರಡನೇ ಬಾರಿಗೆ ಅಂಬೇಡ್ಕರರ ಎದುರಿಗೆ ನಿಂತು ಜಾತ್ಯತೀತತೆ ಮತ್ತು ಸಮಾಜವಾದಿ ಪದವನ್ನು ಸಂವಿಧಾನದ ಭಾಗವನ್ನಾಗಿ ಮಾಡಬೇಕೆಂಬ ತಿದ್ದುಪಡಿ ಮಾಡಿಸಿದಾಗ, ಅಂಬೇಡ್ಕರರು ಅತ್ಯಂತ ಕಠೋರವಾಗಿ ಸದರಿ ತಿದ್ದುಪಡಿಗಳಿಗೆ ವಿರೋಧವ್ಯಕ್ತಪಡಿಸಿಈ ನೆಲದಗುಣಕ್ಕೆ ವಿರುದ್ಧವಾದ ಜಾತ್ಯತೀತತೆಯನ್ನು ಸಂವಿಧಾನದ ಭಾಗವನ್ನಾಗಿ ಮಾಡಲಾರೆ ಎಂದಿದ್ದರು. ಇಂತಹ ಆಶಯವನ್ನು ಕಮರಿಸಿ ಪ್ರಸ್ತಾವನೆಗೆ ಎರಡು ಅಂಶಗಳನ್ನು ತುರುಕಲಾಯಿತು (ಇದರ ವಿರುದ್ಧ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಕರಣ ಬಾಕಿ ಇದೆ). ಒಂದೇ ತಿದ್ದುಪಡಿಯಲ್ಲಿ, ಅದೂ ಕೇವಲ 26 ವರ್ಷಗಳ ಅಂತರದಲ್ಲಿ 59 ವಿಧಿಗಳನ್ನು ಮಾರ್ಪಡಿಸುವುದು ಎಂದರೆ, ನಮ್ಮ ಸಂವಿಧಾನ ಅಷ್ಟು ಅಶಕ್ತವಾಗಿತ್ತೇ? ಅಥವಾ ಉದ್ದೇಶಪೂರ್ವಕವಾಗಿ ಅಶಕ್ತವಾಗಿಸಲಾಯಿತೇ? ಇದು ಚರ್ಚೆಯಾಗಬೇಕಾದ ವಿಷಯ.

ಏಪ್ರಿಲ್ 28, 1976ರಲ್ಲಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಎ.ಎನ್. ರೇ, ಎಚ್.ಎಂ. ಬೇಗ್, ವೈ.ವಿ.ಚಂದ್ರಚೂಡ್, ಪಿ.ಎನ್. ಭಗವತಿ ಅವರ ನ್ಯಾಯಪೀಠವು ಅಂಬೇಡ್ಕರ್ ನೀಡಿದ್ದ ಹೇಬಿಯಸ್ ಕಾರ್ದಸ್ (ನಾಗರೀಕನ ಅಕ್ರಮ ಬಂಧನ ಕುರಿತು ರಕ್ಷಣೆ) ಅರ್ಜಿಯನ್ನು ದಾಖಲಿಸುವ ಅಧಿಕಾರನಾಗರಿಕರಿಗಿಲ್ಲ ಎಂಬ ತೀರ್ಪು ನೀಡಿತು. (ನ್ಯಾಯಮೂರ್ತಿ ಎಚ್‌ಆರ್‌ಖನ್ನ ವಿರೋಧ ವ್ಯಕ್ತಪಡಿಸಿದ್ದರು).

ಮೊದಲ ಅಧಿವೇಶನ ದಿನವೇ ಸಂಘರ್ಷ; ಸದನದೊಳಗೆ ಮೊಳಗಿದ ಜೈಶ್ರೀರಾಮ್ ಘೋಷಣೆ!

ಬಹಳ ಮುಖ್ಯವಾಗಿ ಆ ಕಾಲಘಟ್ಟದಲ್ಲಿ ತಂದ ಮೀಸಾ ಕಾನೂನು 1.1 ಲಕ್ಷ ಜನರನ್ನು ಬಂಧಿಸಿತ್ತು. ಈ ಕಾನೂನು ಜಗತ್ತಿನ ಯಾವ ಪ್ರಜಾಪ್ರಭುತ್ವ ರಾಷ್ಟ್ರ ಇಂದಿಗೂ ಜಾರಿಗೆ ತರಲಾರದಂತಹ ಅನಿರೀಕ್ಷಿತ ಕಾನೂನು, ಬಂಧನದ ಉದ್ದೇಶ, ಬಂಧಿತರ ಬಗೆಗಿನ ಮಾಹಿತಿ ಕೇಳುವುದೇ ಅಪರಾಧ ಎನ್ನುವ ಈ ಕಾನೂನು, ಅಂಬೇಡ್ಕರರ, ಸಂವಿಧಾನದ ಮಾನವ ಸ್ಫೂರ್ತಿಯನ್ನೇ ತಿರಸ್ಕರಿಸಿ ನಿಂತದ್ದು. ಸಂಸತ್ತು ನಡೆಸಲು ಕೋರಮ್ ಅಗತ್ಯವಿಲ್ಲವೆಂಬ ನಿಯಮ ಜಾರಿ, ಕೇವಲ ನಾಲ್ಕು ದಿನಗಳಲ್ಲಿ ಸಂವಿಧಾನಕ್ಕೆ ಮಹತ್ವದ ತಿದ್ದುಪಡಿಗಳನ್ನು ತಂದದ್ದು, 253 ಪತ್ರಕರ್ತರ ಬಂಧನ, ಈ ಎಲ್ಲಾ ಅವಘಡಗಳನ್ನು ಗಮನಿಸಿದಾಗ ಇಂದಿರಾ ಗಾಂಧಿಯವರನ್ನು ಅಲಹಾಬಾದ್ ಕೋರ್ಟು ಸೋಲಿಸುವ ಬದಲು ಗೆಲ್ಲಿಸಿ ಬಿಡಬೇಕಿತ್ತೇನೋ ಎನಿಸುತ್ತದೆ!

ಕೋರ್ಟ್ ಇಂದಿರಾ ಗಾಂಧಿಯನ್ನು ಸೋಲಿಸುವಾಗ, ತಾನು ಸೋಲಬಹುದು, ಪ್ರಜಾಪ್ರಭುತ್ವವು ಸೋಲಬಹುದು, ಸಂವಿಧಾನವು ಸೋಲಬಹುದು, ದೇಶವೇ ಸೋಲಬಹುದೆಂದು ಎಣಿಸಿರಲಾರದು.

• ಆಧಾರ: ತುರ್ತು ಪರಿಸ್ಥಿತಿ- ಭಾರತದ ಪ್ರಜಾಪ್ರಭುತ್ವದ ಕರಾಳ ಅವಧಿ

Latest Videos
Follow Us:
Download App:
  • android
  • ios