* ಸಚಿವ ಸಜಿ ಚೆರಿಯನ್‌ ವಿವಾದಾತ್ಮಕ ಭಾಷಣ* ಭಾರತದ ಸಂವಿಧಾನ ಶೋಷಣೆ, ಲೂಟಿಕೋರರ ಪರ: ಕೇರಳ ಸಚಿವ* ಸಜಿ ವಜಾಕ್ಕೆ ವಿಪಕ್ಷ ಕಾಂಗ್ರೆಸ್‌, ಬಿಜೆಪಿ ಆಗ್ರಹ

ಪಟ್ಟಣಂತಿಟ್ಟ(ಜು.06): ‘ಭಾರತದ ಸಂವಿಧಾನವು ಶೋಷಣೆಯನ್ನು ಮನ್ನಿಸುವುದರ ಜೊತೆಗೆ, ದೇಶದ ಜನರನ್ನು ಲೂಟಿ ಹೊಡೆಯುವುದಕ್ಕೆ ನೆರವು ನೀಡುತ್ತದೆ’ ಎಂದು ಕೇರಳದ ಮೀನುಗಾರಿಕೆ ಮತ್ತು ಸಂಸ್ಕೃತಿ ಖಾತೆ ಸಚಿವ ಶಾಜಿ ಚೆರಿಯನ್‌ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

Add Asianetnews Kannada as a Preferred SourcegooglePreferred

ಈ ಹೇಳಿಕೆಯನ್ನು ಗಂಭೀರ ಅಪರಾಧ ಎಂದು ಬಣ್ಣಿಸಿರುವ ವಿಪಕ್ಷಗಳಾದ ಕಾಂಗ್ರೆಸ್‌ ಮತ್ತು ಬಿಜೆಪಿ, ಸಚಿವ ಶಾಜಿ ಅವರನ್ನು ವಜಾ ಮಾಡುವಂತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರನ್ನು ಒತ್ತಾಯಿಸಿದೆ.

ಮಲ್ಲಪ್ಪಲ್ಲಿ ಎಂಬಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಶಾಜಿ, ‘ನಾವೆಲ್ಲರೂ ಭಾರತೀಯ ಸಂವಿಧಾನವನ್ನು ಸುಂದರವಾಗಿ ರಚಿಸಲಾಗಿದೆ ಎಂದು ಹೇಳುತ್ತೇವೆ. ಆದರೆ, ನನ್ನ ಅಭಿಪ್ರಾಯದಲ್ಲಿ ಈ ಸುಂದರ ಸಂವಿಧಾನ ಬಹಳಷ್ಟುಜನರನ್ನು ಲೂಟಿ ಮಾಡಲು ನೆರವಾಗಬಲ್ಲದಷ್ಟೇ. 75 ವರ್ಷಗಳಿಂದ ದೇಶದಲ್ಲಿ ಜಾರಿಯಲ್ಲಿರುವ ಈ ಸಂವಿಧಾನವನ್ನು ಕ್ರೋಡೀಕರಿಸಿದ್ದು ಬ್ರಿಟೀಷರು. ಆದರೆ ಇದನ್ನು ಭಾರತೀಯರು ಬರೆದಂತೆ ಬಿಂಬಿಸಲಾಗಿದೆ’ ಎಂದು ಹೇಳಿದ್ದಾರೆ.

‘ಜಾತ್ಯತೀತತೆ ಮತ್ತು ಪ್ರಜಾಪ್ರಭುತ್ವ ಹಾಗೂ ಸುತ್ತಿಗೆ ಮತ್ತು ಚಕ್ರವನ್ನು ಸುಮ್ಮನೆ ಅದರ ಬದಿಯಲ್ಲಿ ಸೇರಿಸಲಾಗಿದೆ. ನಮ್ಮ ದೇಶದ ಕಾರ್ಮಿಕರ ಹೋರಾಟವನ್ನು ಒಪ್ಪಿಕೊಳ್ಳುವುದಿಲ್ಲ, ಭಾರತೀಯ ಸಂವಿಧಾನ ಶೋಷಣೆಯನ್ನು (ಕಾರ್ಮಿಕರ ಶೋಷಣೆಯನ್ನು) ಮನ್ನಿಸುತ್ತದೆ. ಈ ಕಾರಣಕ್ಕಾಗಿಯೇ ದೇಶದ ಕಾರ್ಪೊರೆಟ್‌ ವಲಯದಲ್ಲಿನ ಕೆಲ ಕೋಟ್ಯಾಧೀಶರು ಮತ್ತಷ್ಟುಸಿರಿವಂತರಾಗಿದ್ದಾರೆ’ ಎಂದು ಹೇಳಿದ್ದಾರೆ.