ನವದೆಹಲಿ(ಮಾ.03): ಪುರುಷನು ತಾನು ‘ಲಿವ್‌-ಇನ್‌’ ಸಂಬಂಧ ಹೊಂದಿದ್ದ ಮಹಿಳೆಯನ್ನು ಕೊಟ್ಟಮಾತಿನಂತೆ ಮದುವೆಯಾಗದೇ ಹೋದರೂ ‘ಲಿವ್‌-ಇನ್‌ ಸಂಬಂಧ’ದಲ್ಲಿ ನಡೆಯುವ ಸಹಮತದ ಲೈಂಗಿಕ ಕ್ರಿಯೆ ‘ಅತ್ಯಾಚಾರ’ ಎನ್ನಿಸಿಕೊಳ್ಳುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

‘ಮದುವೆ ಆಗುತ್ತೇನೆ ಎಂದು ಸುಳ್ಳು ಭರವಸೆ ನೀಡುವುದು ತಪ್ಪು. ಅಂತೆಯೇ ಮಹಿಳೆ ಕೂಡ ಇದೇ ರೀತಿ ಮಾತು ಕೊಟ್ಟು ಕೈಕೊಡುವುದು ಕೂಡ ತಪ್ಪು. ಆದರೆ ಸುದೀರ್ಘ ಅವಧಿಯ ‘ಲಿವ್‌-ಇನ್‌’ ಸಂಬಂಧದ ವೇಳೆ ಸಮ್ಮತದ ಲೈಂಗಿಕ ಕ್ರಿಯೆ ನಡೆದಿದ್ದರೆ ಅದನ್ನು ಅತ್ಯಾಚಾರ ಎಂದು ಪರಿಗಣಿಸಲು ಆಗದು’ ಎಂದು ಮುಖ್ಯ ನ್ಯಾಯಾಧೀಶ ನ್ಯಾ| ಎಸ್‌.ಎ. ಬೋಬ್ಡೆ, ನ್ಯಾ| ಎ.ಎಸ್‌. ಬೋಪಣ್ಣ ಹಾಗೂ ನ್ಯಾ| ವಿ. ರಾಮಸುಮ್ರಮಣಿಯನ್‌ ಅವರ ಪೀಠ ಸ್ಪಷ್ಟಪಡಿಸಿದೆ.

ಇಬ್ಬರು ಕಾಲ್‌ ಸೆಂಟರ್‌ ಉದ್ಯೋಗಿಗಳು 5 ವರ್ಷದ ಲಿವ್‌-ಇನ್‌ ಸಂಬಂಧ ಹೊಂದಿದ್ದರು. ಆದರೆ ನಂತರ ಪುರುಷನು ಇನ್ನೊಬ್ಬ ಮಹಿಳೆಯನ್ನು ಮದುವೆ ಆಗಿದ್ದ. ಬಳಿಕ ಕ್ರುದ್ಧಗೊಂಡ ಲಿವ್‌-ಇನ್‌ ಸ್ನೇಹಿತೆಯು, ಆತನ ವಿರುದ್ಧ ಅತ್ಯಚಾರ ಪ್ರಕರಣ ದಾಖಲಿಸಿದ್ದಳು. ‘ಮದುವೆಯಾಗುವುದಾಗಿ ನಂಬಿಸಿ ಈತ ನನ್ನ ಜತೆ ಲೈಂಗಿಕ ಕ್ರಿಯೆ ನಡೆಸಿದ್ದ’ ಎಂದು ದೂರಿದ್ದಳು.

ಆದರೆ ಯುವಕ ಇದನ್ನು ವಿರೋಧಿಸಿ ಯುವಕ ಕೋರ್ಟ್‌ ಮೊರೆ ಹೋಗಿದ್ದ. ಆತನ ಅರ್ಜಿ ಪರಿಗಣಿಸಿದ ಕೋರ್ಟು, ಈತನ ಬಂಧನಕ್ಕೆ 8 ವಾರಗಳ ತಡೆ ನೀಡಿ ಈ ಮೇಲಿನಂತೆ ಅಭಿಪ್ರಾಯ ವ್ಯಕ್ತಪಡಿಸಿತು ಹಾಗೂ ‘ವಿಚಾರಣಾ ನ್ಯಾಯಾಲಯ ಪ್ರಕರಣ ಇತ್ಯರ್ಥಗೊಳಿಸಲಿ’ ಎಂದು ಹೇಳಿತು.