ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಕ್ರೌಡ್ ಫಂಡಿಂಗ್; ಅಭಿಯಾನಕ್ಕೆ ನಾಳೆ ಚಾಲನೆ
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಈ ವಿಷಯ ಪ್ರಕಟಿಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್ ಮತ್ತು ಖಜಾಂಚಿ ಅಜಯ್ ಮಾಕನ್ ಅವರು, ‘18 ವರ್ಷಕ್ಕಿಂತ ಮೇಲ್ಪಟ್ಟ ಭಾರತೀಯರು ಕನಿಷ್ಠ 138 ರೂ. ಅಥವಾ 1,380 ರೂ. ಮತ್ತು 13,800 ರೂ. ಹೀಗೆ ತಮಗೆ ಕೈಲಾದಷ್ಟು ದೇಣಿಗೆ ನೀಡಬಹುದು’ ಎಂದರು.
ನವದೆಹಲಿ (ಡಿಸೆಂಬರ್ 17, 2023): 2024ರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷಕ್ಕೆ ಆರ್ಥಿಕ ಸಂಪನ್ಮೂಲ ಸೃಷ್ಟಿಸಲು ಮುಂದಾಗಿರುವ ಕಾಂಗ್ರೆಸ್ ಪಕ್ಷ ‘ದೇಶಕ್ಕೆ ದೇಣಿಗೆ ನೀಡಿ’ ಎಂಬ ಕ್ರೌಡ್‌ಫಂಡಿಂಗ್ ಅಭಿಯಾನವನ್ನು ದೇಶಾದ್ಯಂತ ಆರಂಭಿಸುವುದಾಗಿ ಘೋಷಿಸಿದೆ.
ಪಕ್ಷ ಸ್ಥಾಪನೆಯಾಗಿ 138 ವರ್ಷ ತುಂಬುತ್ತಿರುವ ನಿಮಿತ್ತ ಈ ಅಭಿಯಾನ ನಡೆಸಲಾಗುತ್ತದೆ. ಡಿಸೆಂಬರ್ 18 ರಂದು ದೆಹಲಿಯಲ್ಲಿ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರು ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ.
ಇದನ್ನು ಓದಿ: 'ಕಾಂಗ್ರೆಸ್‌ಗಾಗಿ ಕಾಸು ಕೊಡಿ..' ಲೋಕಸಭೆ ಚುನಾವಣೆಗೆ ಜನರಿಂದ ಹಣವೆತ್ತಲು ಮುಂದಾದ ಕಾಂಗ್ರೆಸ್!
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಈ ವಿಷಯ ಪ್ರಕಟಿಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್ ಮತ್ತು ಖಜಾಂಚಿ ಅಜಯ್ ಮಾಕನ್ ಅವರು, ‘18 ವರ್ಷಕ್ಕಿಂತ ಮೇಲ್ಪಟ್ಟ ಭಾರತೀಯರು ಕನಿಷ್ಠ 138 ರೂ. ಅಥವಾ 1,380 ರೂ. ಮತ್ತು 13,800 ರೂ. ಹೀಗೆ ತಮಗೆ ಕೈಲಾದಷ್ಟು ದೇಣಿಗೆ ನೀಡಬಹುದು’ ಎಂದರು.
ಇದೇ ವೇಳೆ, ದೇಣಿಗೆಯಲ್ಲಿನ ‘138’ ಅಂಕಿಯ ಮಹತ್ವ ವಿವರಿಸಿದ ಅವರು, ‘ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆಯಾಗಿ ಈಗ 138 ವರ್ಷಗಳಾಗಿವೆ. ಹೀಗಾಗಿ ದೇಣಿಗೆಯಲ್ಲಿನ 138 ರೂ. ಅಂಕಿಯು ಕಾಂಗ್ರೆಸ್‌ನ 138 ವರ್ಷದ ಪ್ರಯಾಣವನ್ನು ನೆನಪಿಸುತ್ತದೆ’ ಎಂದು ವೇಣುಗೋಪಾಲ್ ಹೇಳಿದರು.
ಕಾಂಗ್ರೆಸ್‌ಗೆ ಮಿಷನ್, ವಿಷನ್ ಎರಡೂ ಇಲ್ಲ, ಇರೋದು ಬರೀ ಕರಪ್ಶನ್, ಬಿಜೆಪಿ ವಾಗ್ದಾಳಿ!
‘1920-21ರಲ್ಲಿ ಮಹಾತ್ಮಾ ಗಾಂಧೀಜಿ ಅವರು ‘ತಿಲಕ್ ಸ್ವರಾಜ್ ನಿಧಿ’ ಎಂಬ ನಿಧಿ ಸಂಗ್ರಹ ಅಭಿಯಾನವನ್ನು ಆರಂಭಿಸಿದ್ದರು. ಅದರಿಂದ ನಮ್ಮ ನಿಧಿ ಸಂಗ್ರಹವು ಪ್ರೇರಣೆ ಪಡೆದಿದೆ. ಸಮೃದ್ಧ ಭಾರತ ರೂಪಿಸುವ ದೃಷ್ಟಿಯಿಂದ ಪಕ್ಷವನ್ನು ಬಲಪಡಿಸುವುದು ಅಗತ್ಯವಾಗಿದೆ. ಹೀಗಾಗಿ ಈ ನಿಧಿ ಸಂಗ್ರಹ ಅಭಿಯಾನ ಮಾಡಲಾಗುತ್ತಿದೆ’ ಎಂದರು.
ಇನ್ನು ಪಕ್ಷದ 138ನೇ ಸಂಸ್ಥಾಪನಾ ದಿನವನ್ನು ಡಿಸೆಂಬರ್ 28ರಂದು ಮಹಾರಾಷ್ಟ್ರದ ನಾಗ್ಪುರ ನಡೆಯಲಿದೆ. ಅಂದು ಅಲ್ಲಿ ‘ಬೃಹತ್ ರ್‍ಯಾಲಿ’ ಹಮ್ಮಿಕೊಳ್ಳಲಾಗುವುದು ಹಾಗೂ ಸಮಾವೇಶಕ್ಕೆ ಕನಿಷ್ಠ 10 ಲಕ್ಷ ಜನ ಸೇರುವ ನಿರೀಕ್ಷೆ ಇದೆ ಎಂದರು.
ದೇಣಿಗೆ ಹೇಗೆ ನೀಡಬೇಕು?
ಕ್ರೌಡ್‌ಫಂಡಿಂಗ್ ಪ್ರಚಾರಕ್ಕಾಗಿ ಪಕ್ಷವು 2 ವೆಬ್‌ಸೈಟ್‌ಗಳನ್ನು ರಚಿಸಿದೆ. donateinc.in ಎಂಬ ವೆಬ್‌ಸೈಟನ್ನು ನಿಧಿ ಸಂಗ್ರಹ ಅಭಿಯಾನಕ್ಕೆಂದೇ ರೂಪಿಸಿದೆ. ಇದೇ ವೇಳೆ, ಕಾಂಗ್ರೆಸ್‌ನ ಅಧಿಕೃತ ವೆಬ್‌ಸೈಟ್ ಆದ inc.in ನಲ್ಲಿ ಕೂಡ ಮಾಹಿತಿ ಪಡೆಯಬಹುದಾಗಿದೆ. ಡಿಸೆಂಬರ್ 18ರಂದು ನಿಧಿ ಸಂಗ್ರಹಕ್ಕೆ ಅಧಿಕೃತ ಚಾಲನೆ ಸಿಗಲಿದ್ದು, ಅದೇ ಸಮಯದಲ್ಲಿ ದೇಣಿಗೆ ಲಿಂಕ್ ಅನ್ನು ವೆಬ್‌ಸೈಟ್‌ನಲ್ಲಿ ಹಾಕಲಾಗುತ್ತದೆ. ಆನ್‌ಲೈನ್ ಮೂಲಕ ಡಿಸೆಂಬರ್ 18ರಿಂದ ಕಾಂಗ್ರೆಸ್ ಸಂಸ್ಥಾಪನಾ ದಿನ ಡಿಸೆಂಬರ್ 28ರವರೆಗೆ ದೇಣಿಗೆ ನೀಡಬಹುದು.
ಡಿಸೆಂಬರ್ 28ರ ನಂತರ ಪಕ್ಷದ ಕಾರ್ಯಕರ್ತರು ಮನೆ-ಮನೆಗೆ ಭೇಟಿ ನೀಡುತ್ತಾರೆ. ಪ್ರತಿ ಬೂತ್‌ನಲ್ಲಿ ಕನಿಷ್ಠ 10 ಮನೆಗಳನ್ನು ಗುರಿಯಾಗಿಟ್ಟುಕೊಂಡು ಪ್ರತಿಯೊಬ್ಬರಿಂದ ಕನಿಷ್ಠ 138 ರೂ.ಗಳ ದೇಣಿಗೆ ಸಂಗ್ರಹಿಸಲಿದ್ದಾರೆ. ಪಕ್ಷದ ರಾಜ್ಯ ಮಟ್ಟದ ಪದಾಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರು, ಪಿಸಿಸಿ ಮುಖ್ಯಸ್ಥರು ಮತ್ತು ಎಐಸಿಸಿ ಪದಾಧಿಕಾರಿಗಳು ತಲಾ ಕನಿಷ್ಠ 1380 ರೂ. ದೇಣಿಗೆ ನೀಡಬೇಕು.