ತಮ್ಮ ಹೆಸರಿನಲ್ಲಿ ಬ್ಯಾಂಕ್‌ನಲ್ಲಿ 26.25 ಲಕ್ಷ ರೂಪಾಯಿ ಠೇವಣಿ ಇದೆ ಎಂದು ರಾಹುಲ್‌ ಗಾಂಧಿ ಅಫಡವಿಟ್‌ನಲ್ಲಿ ತಿಳಿಸಿದ್ದು, ಕೈಯಲ್ಲಿ 55 ಸಾವಿರ ರೂಪಾಯಿ ನಗದು ಹಣ ಇದೆ ಎಂದಿದ್ದಾರೆ

ಬೆಂಗಳೂರು (ಏ.3): ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಬುಧವಾರ ವಯನಾಡ್‌ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವ ನಿಟ್ಟಿನಲ್ಲಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಅವರು ಸಲ್ಲಿಸಿರುವ ನಾಮಪತ್ರದ ಅನುಸಾರ, ತಮ್ಮ ಬಳಿ 55 ಸಾವಿರ ರೂಪಾಯಿ ಹಣವಿದೆ ಎಂದಿರುವ ರಾಹುಲ್‌ ಗಾಂಧಿ, 2022-23ರ ಹಣಕಾಸು ವರ್ಷದಲ್ಲಿ ತಮ್ಮ ಆದಾಯ 1,02,78,680 ರೂಪಾಯಿ ಎಂದು ತಿಳಿಸಿದ್ದಾರೆ. ತಮ್ಮಲ್ಲಿ ಎರಡು ಸೇವಿಂಗ್ಸ್‌ ಬ್ಯಾಂಕ್‌ ಅಕೌಂಟ್‌ ಖಾತೆಗಳಿದ್ದು, ಎಸ್‌ಬಿಐ ಹಾಗೂ ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಒಟ್ಟು 26, 25,157 ರೂಪಾಯಿ ಹಣವಿದೆ ಎಂದಿದ್ದಾರೆ. ಇನ್ನು ಷೇರು ಮಾರುಕಟ್ಟೆಯಲ್ಲಿ ತಾವು ಮಾಡಿರುವ ಹೂಡಿಕೆಯ ಮೌಲ್ಯ 4.33 ಕೋಟಿ ರೂಪಾಯಿ ಎಂದು ತಿಳಿಸಿದ್ದಾರೆ. ಇನ್ನು ಮ್ಯೂಚುಫಲ್‌ ಫಂಡ್‌ನಲ್ಲಿಯೂ ರಾಹುಲ್‌ ಗಾಂಧಿ ಹೂಡಿಕೆ ಮಾಡಿದ್ದು, ಇದರ ಮೌಲ್ಯ 3.81 ಕೋಟಿ ರೂಪಾಯಿ ಎನ್ನಲಾಗಿದೆ. ಇನ್ನು ಸಾವರ್ಜಿನ್‌ ಗೋಲ್ಡ್‌ ಬಾಂಡ್‌ (ಎಸ್‌ಜಿಬಿ) ನಲ್ಲಿಯೂ ರಾಹುಲ್‌ ಗಾಂಧಿ ಹೂಡಿಕೆ ಮಾಡಿದ್ದು, 15.2 ಲಕ್ಷ ರೂಪಾಯಿಯ ಬಾಂಡ್‌ ತಮ್ಮಲ್ಲಿದೆ ಎಂದಿದ್ದಾರೆ. ಇನ್ನು ತಮ್ಮ 4.2 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳು ಇವೆ ಎಂದು ತಿಳಿಸಿದ್ದಾರೆ. 

"ರಾಹುಲ್ ಗಾಂಧಿಯವರ ಆದಾಯದ ಮೂಲ ಯಾವುದು?" ಇದು ದೇಶದಲ್ಲಿ ಸದಾ ಚರ್ಚೆಗೆ ಗ್ರಾಸವಾಗಿರುತ್ತದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ, ಗಾಂಧಿ ಕುಟುಂಬ ಭ್ರಷ್ಟಾಚಾರ ಮತ್ತು ಅಕ್ರಮ ಆದಾಯದ ಮೂಲಗಳನ್ನು ಹೊಂದಿದೆ ಎಂದು ಆರೋಪಿಸಿದರೆ, ಕಾಂಗ್ರೆಸ್‌ ರಾಹುಲ್‌ ಗಾಂಧಿಯನ್ನು ಸಮರ್ಥಿಸಿಕೊಳ್ಳುತ್ತಲೇ ಇದೆ. ರಾಷ್ಟ್ರದ ಕುತೂಹಲದ ಈ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಅಫಿಡವಿಟ್‌ನಲ್ಲಿ, ವೈವಾಹಿಕ ಸ್ಥಿತಿ, ಆಸ್ತಿಯ ವಿವರಗಳು, ಶಾಶ್ವತ ವಿಳಾಸ, ಮ್ಯೂಚುವಲ್ ಫಂಡ್ ಮತ್ತು ಷೇರುಗಳು, ಒಳಗೊಂಡಿರುವ ಕ್ರಿಮಿನಲ್ ಪ್ರಕರಣಗಳು, ಅವರನ್ನು ಅವಲಂಬಿಸಿರುವವರ ಸಂಖ್ಯೆ ಇತ್ಯಾದಿ ವಿವಿಧ ವೈಯಕ್ತಿಕ ಮಾಹಿತಿಯನ್ನು ರಾಹುಲ್ ಗಾಂಧಿ ಘೋಷಿಸಿದ್ದಾರೆ.

ರಾಹುಲ್‌ ಗಾಂಧಿ ಅವರ ಬಳಿ ಇರುವ ಆಸ್ತಿ

ಚರಾಸ್ಥಿ9,24,59,264 (9.24 ಕೋಟಿ)
ಸ್ಥಿರಾಸ್ಥಿ11,15,02, 598 (11.15 ಕೋಟಿ)
ಲಯಾಬಿಲಿಟಿ (ಸಾಲ, ಇತರೆ)49, 79, 184 (49.79 ಲಕ್ಷ)

ರಾಹುಲ್ ಗಾಂಧಿ ಆಸ್ತಿ ವಿವರ: ಹೊಸದಿಲ್ಲಿಯ ಮೆಹ್ರೌಲಿಯಲ್ಲಿ ಪಿತ್ರಾರ್ಜಿತವಾಗಿ ಬಂದಿರುವ ಎರಡು ಪ್ಲಾಟ್‌ಗಳ ಕೃಷಿ ಭೂಮಿಯನ್ನೂ ಘೋಷಿಸಿದ್ದಾರೆ. ಇದನ್ನು ಸಹೋದರಿ ಮತ್ತು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ಜಂಟಿಯಾಗಿ ಹಂಚಿಕೊಂಇದ್ದಾಗಿ ತಿಳಿಸಿದ್ದಾರೆ. ಅದರೊಂದಿಗೆ ಗುರುಗ್ರಾಮ್‌ನಲ್ಲಿ ಎರಡು ವಾಣಿಜ್ಯ ಆಸ್ತಿಗಳನ್ನು ಹೊಂದಿದ್ದಾರೆ. 

ನಾಮಪತ್ರ ಸಲ್ಲಿಕೆ ಮಾಡಿದ ಡಿಕೆ ಸುರೇಶ್‌, ಕಳೆದ ಐದು ವರ್ಷದಲ್ಲಿ ಡಿಕೆ ಸುರೇಶ್‌ ಆಸ್ತಿ ಶೇ. 75ರಷ್ಟು ಏರಿಕೆ!

2022-23ರ ಹಣಕಾಸು ವರ್ಷದ ಕೊನೆಯ ಆದಾಯ ತೆರಿಗೆ ರಿಟರ್ನ್‌ನಲ್ಲಿ ರಾಹುಲ್ ಗಾಂಧಿ ಒಟ್ಟು ರೂ 1,02,78,680 ಆದಾಯವನ್ನು ಘೋಷಿಸಿದ್ದಾರೆ. ರಾಹುಲ್ ಗಾಂಧಿ ತಮ್ಮ ಆದಾಯದ ಹಲವು ಮೂಲಗಳನ್ನು ಬಹಿರಂಗಪಡಿಸಿದ್ದಾರೆ. ಇದು ಬಾಡಿಗೆ ಆದಾಯ, ಸಂಸದರ ವೇತನ, ರಾಯಲ್ಟಿ ಆದಾಯ, ಬ್ಯಾಂಕ್‌ಗಳಿಂದ ಬಡ್ಡಿ, ಬಾಂಡ್‌ಗಳು, ಡಿವಿಡೆಂಡ್‌ಗಳು ಮತ್ತು ಮ್ಯೂಚುಯಲ್ ಫಂಡ್‌ಗಳು, ಷೇರುಗಳು ಮತ್ತು ಇತರ ಆದಾಯಗಳಿಂದ ಬಂಡವಾಳ ಲಾಭಗಳನ್ನು ಒಳಗೊಂಡಿರುತ್ತದೆ ಎಂದು ತಿಳಿಸಿದ್ದಾರೆ. ನ್ಯಾಷನಲ್‌ ಸೇವಿಂಗ್‌ ಸ್ಕೀಮ್‌, ಪೋಸ್ಟಲ್‌ ಸೇವಿಂಗ್‌ ಹಾಗೂ ಇನ್ಶುರೆನ್ಸ್‌ ಸ್ಕೀಮ್‌ಗಳಲ್ಲಿ 61.52 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದಾರೆ.

ಕಳೆದ ಬಾರಿಗಿಂತ 5 ಕೋಟಿ ಏರಿಕೆ: 2019ರಲ್ಲಿ ತಮ್ಮ ಆಸ್ತಿಯನ್ನು 15 ಕೋಟಿ ಎಂದು ಘೋಷಣೆ ಮಾಡಿದ್ದರು. ಈ ಬಾರಿ ಇದರಲ್ಲಿ ಐದು ಕೋಟಿ ಏರಿಕೆಯಾಗಿದೆ. ಅದಲ್ಲದೆ, ಕಳೆದ ಬಾರಿ ತಮಗೆ 72 ಲಕ್ಷ ರೂಪಾಯಿ ಸಾಲ ಇದ್ದಿದ್ದಾಗಿಯೂ ರಾಹುಲ್‌ ಗಾಂಧಿ ತಿಳಿಸಿದ್ದರು. 2004ರಲ್ಲಿ ರಾಹುಲ್‌ ಗಾಂಧಿ ತಮ್ಮ ಮೊದಲ ಚುನಾವಣೆಗೆ ಸ್ಪರ್ಧಿಸಿದ್ದಾಗ ಅವರ ಆಸ್ತಿ ಕೇವಲ 55 ಲಕ್ಷ ರೂಪಾಯಿ ಆಗಿತ್ತು.