ಸರ್ಜಿಕಲ್ ಸ್ಟ್ರೈಕ್ ಅನುಮಾನ, ಬಾಟ್ಲಾ ಉಗ್ರರ ಪರ ಕಣ್ಣೀರು, ಮೋದಿ ಭಾಷಣಕ್ಕೆ ಕಾಂಗ್ರೆಸ್, ಆಪ್ ಕಂಗಾಲು!
ಗುಜರಾತ್ ಚುನಾವಣೆ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಖೇಡಾದಲ್ಲಿ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದ್ದಾರೆ. ಈ ವೇಳೆ ದೇಶವನ್ನು ರಕ್ಷಿಸಲು, ಭಯೋತ್ಪಾದಕರ ಪರ ಕಣ್ಣೀರು ಹಾಕುವ, ಸಮರ್ಥಿಸಿಕೊಳ್ಳುವ ಪಕ್ಷಗಳಿಂದ ಜನರನ್ನು ರಕ್ಷಿಸಲು ಬಿಜೆಪಿ ಬೆಂಬಲಿಸಲು ಮೋದಿ ಮನವಿ ಮಾಡಿದ್ದಾರೆ.
ಖೇದಾ(ನ.27): ಬಾಟ್ಲಾ ಹೌಸ್ ಎನ್‌ಕೌಂಟರ್‌ನಲ್ಲಿ ಹತ್ಯೆಯಾದ ಉಗ್ರರ ಪರ ಕಾಂಗ್ರೆಸ್ ಕಣ್ಣೀರು ಹಾಕಿತು. ಅವರನ್ನು ಸಮರ್ಥಿಸಿಕೊಂಡು ನಮ್ಮ ಶಸಸ್ತ್ರ ಪಡೆ ನಡೆಸಿದ ಎನ್‌ಕೌಂಟರ್ ನಕಲಿ ಎಂದು ಹೇಳಿತು. ಆದರೆ ನ್ಯಾಯಾಲಯದ ತೀರ್ಪು ಈ ಮೊಸಳೆ ಕಣ್ಣೀರಿಗೆ ಉತ್ತರ ನೀಡಿದೆ. ಸರ್ಜಿಕಲ್ ಸ್ಟ್ರೈಕ್ ಮೇಲೆ ಅನುಮಾನ, ನಮ್ಮ ಸೇನೆಯ ಸಾಮರ್ಥ್ಯದ ಮೇಲೆ ಅನುಮಾನ, ವೋಟ್‌ಬ್ಯಾಂಕ್ ರಾಜಕೀಯ, ಭಯೋತ್ಪಾದಕರ ಮೇಲೆ ಅನುಕಂಪ ಹೊಂದಿದ ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳಿಂದ ಗುಜರಾತ್ ಹಾಗೂ ದೇಶವನ್ನು ದೂರವಿಡಬೇಕು ಎಂದು ಮೋದಿ ಹೇಳಿದ್ದಾರೆ. ಗುಜರಾತ್ ಚುನಾವಣೆ ಪ್ರಯುಕ್ತ ಖೇಡಾದಲ್ಲಿ ಆಯೋಜಿಸಿದ ಸಮಾವೇಶದಲ್ಲಿ ಪ್ರಧಾನಿ ಮೋದಿ ಮಾತನಾಡಿದ್ದಾರೆ. ಈ ವೇಳೆ ಮುಂಬೈ ದಾಳಿ ಸೇರಿದಂತೆ ಹಲವು ಘಟನೆಗಳನ್ನು ನೆನಪಿಸಿಕೊಂಡು ಕಾಂಗ್ರೆಸ್ ವಿರುದ್ಧ ಗುಡುಗಿದ್ದಾರೆ.
ನನಗೆ 14 ವರ್ಷದ ಹಿಂದೆ ಭಾರತದ ಮೇಲೆ ನಡೆದ ಭೀಕರ ದಾಳಿ ನೆನೆಪಿಗೆ ಬರುತ್ತಿದೆ. ಪಾಕಿಸ್ತಾನದಿಂದ ಬಂದ ಉಗ್ರರು ಮುಂಬೈ ಮೇಲೆ ಭೀಕರ ದಾಳಿ ನಡೆಸಿದರು. ಕೆಲ ದಿನಗಳ ಕಾಲ ಈ ದಾಳಿ ನಡೆದಿತ್ತು. ನಾವು ಇದೀಗ ನವೆಂಬರ್ 26ರಂದು ಉಗ್ರರ ವಿರುದ್ದ ಹೋರಾಡಿದ ವೀರ ಯೋಧರು, ಉಗ್ರರ ದಾಳಿಗೆ ಮಡಿದ ನಾಗರೀಕರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದೇವೆ. ಮುಂಬೈನಲ್ಲಿ ನಡೆದ ದಾಳಿ ಭಯೋತ್ಪಾದನೆಯ ಪರಾಕಾಷ್ಟೆಯಾಗಿತ್ತು. ನಮ್ಮ ಗುಜರಾತ್ ಹಲವು ವರ್ಷಗಳ ಕಾಲ ಭಯೋತ್ಪಾದಕರ ಕರಿನೆರಳಿನಲ್ಲಿತ್ತು. ಸೂರತ್, ಅಹಮ್ಮದಾಬಾದ್ ಸೇರಿದಂತೆ ಗುಜರಾತ್‌ನ ಕೆಲ ನಗರದಲ್ಲಿ ಸರಣಿ ಬಾಂಬ್ ಸ್ಫೋಟಗಳು ಸಂಭವಿಸಿತ್ತು. ಈ ಭಯೋತ್ಪಾದ ದಾಳಿಯಲ್ಲಿ ಗುಜರಾತ್‌ನ ನನ್ನ ಹಲವು ಸೋದರ ಸೋದರಿಯರು ಮಡಿದಿದ್ದಾರೆ. ಇತ್ತೀಚೆಗೆ ಅಹಮ್ಮದಾಬಾದ್ ಕೋರ್ಟ್ ಈ ಭಯೋತ್ಪಾದಕ ದಾಳಿಕೋರರಿಗೆ ಕಠಿಣ ಶಿಕ್ಷೆ ನೀಡಿತ್ತು ಎಂದು ಮೋದಿ ಹೇಳಿದ್ದಾರೆ.
ಪ್ರಧಾನಿ ಮೋದಿ ಹತ್ಯೆಗೆ ಸ್ಕೆಚ್, ದಾವುದ್ ಹೆಸರಿನಲ್ಲಿ ಪೊಲೀಸರಿಗೆ ಬಂತು ಆಡಿಯೋ ಕ್ಲಿಪ್ ಬೆದರಿಕೆ!
ಗುಜರಾತ್ ಜನತೆ ಈ ಭಯೋತ್ಪಾದಕ ದಾಳಿಗೆ ಅಂತ್ಯ ಹಾಡಲು ಬಯಸಿದ್ದರು. ಇದಕ್ಕೆ ಪೂರಕವಾಗಿ ಬಿಜೆಪಿ ಸರ್ಕಾರ ಗುಜರಾತ್‌ನಲ್ಲಿನ ಸ್ಲೀಪರ್ ಸೆಲ್ ಮೇಲೂ ಭಾರಿ ದಾಳಿ ನಡೆಸಿತ್ತು. ಗುಜರಾತ್‌ನಲ್ಲಿ ಭಯೋತ್ಪಾದಕರನ್ನು ಅರೆಸ್ಟ್ ಮಾಡಿ ಅವರ ವಿರುದ್ಧ ಕ್ರಮ ಜರುಗಿಸುವವರೆಗೂ ನಿರಂತರ ಹೋರಾಟವನ್ನು ಬಿಜೆಪಿ ನಡೆಸಿದೆ. ಆದರೆ ದೆಹಲಿಯಲ್ಲಿ ಕುಳಿತಿದ್ದ ಕಾಂಗ್ರೆಸ್ ಸರ್ಕಾರ ಭಯೋತ್ಪಾದಕರ ಪರ ಮಾತನಾಡುತ್ತಿತ್ತು. ಉಗ್ರರ ಟಾರ್ಗೆಟ್ ಮಾಡಿ ಎಂದು ನಾವು ಹೇಳುತ್ತಲೇ ಇದ್ದೆವು. ಆದರೆ ಕಾಂಗ್ರೆಸ್ ಉಗ್ರರ ಬಿಟ್ಟು ಮೋದಿಯನ್ನು ಟಾರ್ಗೆಟ್ ಮಾಡಲು ಆರಂಭಿಸಿತು ಎಂದರು.
ಕಾಂಗ್ರೆಸ್ ಈ ಧೋರಣೆಯಿಂದ ದೇಶದಲ್ಲಿ ಭಯೋತ್ಪಾದನೆ ಚಟುವಟಿಕೆ ಹೆಚ್ಚಾಯಿತು. ದೆಹಲಿಯಲ್ಲಿ ಬಾಟ್ಲಾ ಹೌಸ್ ಎನ್‌ಕೌಂಟರ್ ನಡೆಯಿತು. ಈ ವೇಳೆ ಕಾಂಗ್ರೆಸ್ ನಾಯಕರು ಹತ್ಯೆಯಾದ ಉಗ್ರರ ಪರ ಕಣ್ಣೀರು ಹಾಕಿದರು. ಸಮರ್ಥನೆ ಮಾಡಿಕೊಂಡರು. ನ್ಯಾಯಾಲಯದ ತೀರ್ಪು ಕಾಂಗ್ರೆಸ್ ಕಣ್ಣೀರಿಗೆ ತಕ್ಕ ಉತ್ತರ ನೀಡಿದೆ. ಕಾಂಗ್ರೆಸ್ ಎಲ್ಲವನ್ನೂ ತುಷ್ಠೀಕರಣದ ದೃಷ್ಟಿಯಿಂದ ನೋಡುತ್ತದೆ. ಇದು ಕೇವಲ ಕಾಂಗ್ರೆಸ್ ಮಾತ್ರವಲ್ಲ, ಹಲವು ಹೊಸ ಹೊಸ ಪಕ್ಷಗಳು ಹುಟ್ಟಿಕೊಂಡು ಇದೇ ಮಾಡುತ್ತಿದೆ ಎಂದು ಮೋದಿ ಹೇಳಿದ್ದಾರೆ.
ಮೋದಿ ಸಮಾವೇಶದಲ್ಲಿ ಭಾರಿ ಭದ್ರತಾ ವೈಫಲ್ಯ: ಡ್ರೋನ್ ಹಾರಾಟ: 3 ಜನರ ಬಂಧನ
ಹೊಸ ಪಕ್ಷಗಳು ಶಾಟ್ ಕಟ್ ದಾರಿಯಲ್ಲಿ ಸಾಗುತ್ತಿದೆ. ವೋಟ್ ಬ್ಯಾಂಕ್ ರಾಜಕೀಯ ಮಾಡುತ್ತಿದೆ. ಇಂತಹ ಪಕ್ಷಗಳಿಂದ ಗುಜರಾತ್ ಹಾಗೂ ದೇಶವನ್ನು ದೂರವಿಡಬೇಕಾದ ಅವಶ್ಯಕತೆ ಇದೆ. 2014ರಲ್ಲಿ ನಿಮ್ಮ ಆಶೀರ್ವಾದದಿಂದ, ನಿಮ್ಮ ಮತದಿಂದ ನಮ್ಮ ಸರ್ಕಾರ ಭಯೋತ್ಪಾದಕ ವಿರುದ್ಧ ಹೋರಾಟಕ್ಕೆ ಹೊಸ ಅಧ್ಯಾಯ ಬರೆಯಲು ಸಾಧ್ಯವಾಯಿತು. ಇದೀಗ ಭಾರತದ ನೆಲದೊಳಗೆ ಮಾತ್ರವಲ್ಲ, ವಿದೇಶಿ ನೆಲದೊಳಗೆ ನುಗ್ಗಿ ಹೊಡೆಯಬಲ್ಲ ಸಾಮರ್ಥ್ಯ ಹೊಂದಿದೆ. ಆದರೆ ಕಾಂಗ್ರೆಸ್ ಹಾಗೂ ಇತರ ಕೆಲ ಪಕ್ಷಗಳು ನಮ್ಮ ಸರ್ಜಿಕಲ್ ಸ್ಟ್ರೈಕ್ ಮೇಲೆ ಅನುಮಾನ ವ್ಯಕ್ತಪಡಿಸಿತು. ನಮ್ಮ ಸೇನೆ ಮೇಲೆ ಅನುಮಾನ ವ್ಯಕ್ತಪಡಿಸಿದೆ ಎಂದು ಮೋದಿ ಹೇಳಿದ್ದಾರೆ.
ಎಲ್ಲೀವರೆಗೆ ವೋಟ್ ಬ್ಯಾಂಕ್ ಇರುತ್ತೆ, ಅಲ್ಲೀವರೆಗೆ ಭಯೋತ್ಪಾದಕತೆಯೂ ಇರುತ್ತೆ. ನಮ್ಮ ಬಿಜೆಪಿ ಸರ್ಕಾರ ಈ ಉಗ್ರರ ವಿರುದ್ದ ಸತತ ಹೋರಾಟ ನಡೆಸುತ್ತಿದೆ. ಗುಜರಾತ್‌ನ ಈ ಜನಾಂಗ ಕರ್ಫ್ಯೂ ನೋಡಿಲ್ಲ. ಈ ಯುವ ಪೀಳಿಗೆಯನ್ನು ಬಾಂಬ್, ಭಯೋತ್ಪಾದಕರ ದಾಳಿಯಿಂದಲೂ ರಕ್ಷಿಸಬೇಕು. ಈ ಕೆಲಸವನ್ನು ಬಿಜೆಪಿಯ ಡಬಲ್ ಎಂಜಿನ್ ಸರ್ಕಾರ ಮಾಡಲಿದೆ ಎಂದು ಮೋದಿ ಹೇಳಿದ್ದಾರೆ.