ಖರ್ಗೆಗೆ ಆಹ್ವಾನ ನೀಡದೇ ಸರ್ಕಾರವು ದೇಶದಲ್ಲಿರುವ ಶೇ.60ರಷ್ಟು ಜನರ ನಾಯಕನಿಗೆ ಬೆಲೆ ಕೊಡುವುದಿಲ್ಲ ಎಂಬುದನ್ನು ತೋರಿಸುತ್ತದೆ. ಅವರು (ಬಿಜೆಪಿ ಸರ್ಕಾರ) ಏನು ಮಾಡುತ್ತಿದೆ ಮತ್ತು ಅದರ ಹಿಂದಿನ ಉದ್ದೇಶವೇನು ಎಂಬುದನ್ನು ಜನರು ಯೋಚಿಸಬೇಕು ಎಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
ನವದೆಹಲಿ(ಸೆ.09): ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು(ಶನಿವಾರ) ಆಯೋಜಿಸಿರುವ ಜಿ20 ನಾಯಕರುಗಳ ಔತಣಕೂಟಕ್ಕೆ ಆಹ್ವಾನಿಸಿರುವ ಪ್ರಮುಖ ಅತಿಥಿಗಳ ಪೈಕಿ ರಾಜ್ಯಸಭೆಯ ವಿಪಕ್ಷ ನಾಯಕ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಆಹ್ವಾನ ನೀಡಲಾಗಿಲ್ಲ.
ಈ ಬಗ್ಗೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ‘ಖರ್ಗೆಗೆ ಆಹ್ವಾನ ನೀಡದೇ ಸರ್ಕಾರವು ದೇಶದಲ್ಲಿರುವ ಶೇ.60ರಷ್ಟು ಜನರ ನಾಯಕನಿಗೆ ಬೆಲೆ ಕೊಡುವುದಿಲ್ಲ ಎಂಬುದನ್ನು ತೋರಿಸುತ್ತದೆ. ಅವರು (ಬಿಜೆಪಿ ಸರ್ಕಾರ) ಏನು ಮಾಡುತ್ತಿದೆ ಮತ್ತು ಅದರ ಹಿಂದಿನ ಉದ್ದೇಶವೇನು ಎಂಬುದನ್ನು ಜನರು ಯೋಚಿಸಬೇಕು’ ಎಂದಿದ್ದಾರೆ. ಈ ಮೂಲಕ ‘ಖರ್ಗೆ ಅವರು ದಲಿತ ಎಂಬ ಕಾರಣಕ್ಕೆ ಅವರಿಗೆ ಆಹ್ವಾನ ನೀಡಿಲ್ಲ’ ಎಂದು ಪರೋಕ್ಷವಾಗಿ ಕಿಡಿಕಾರಿದ್ದಾರೆ. ಸದ್ಯ ಯೂರೋಪ್ ಪ್ರವಾಸಲ್ಲಿರುವ ರಾಹುಲ್ ಬ್ರಸೆಲ್ಸ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ದೇಶಕ್ಕೆ ಬಂದ ಮಗಳು ಅಳಿಯ, ಸಾಂಪ್ರದಾಯಿಕವಾಗಿ ಕಚ್ಚೆ ಪಂಚೆ ಧರಿಸಿ ಸ್ವಾಗತಿಸಿದ ಕೇಂದ್ರ ಸಚಿವ!
ಈ ನಡುವೆ ಖರ್ಗೆಗೆ ಆಹ್ವಾನ ನೀಡದ್ದಕ್ಕೆ ಬಿಜೆಪಿ ಮತ್ತು ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ತಮಿಳುನಾಡು ಕಾಂಗ್ರೆಸ್ ನಾಯಕ ಮೋಹನ್ ಕುಮಾರಮಂಗಲಂ ‘ಔತಣಕ್ಕೆ ದೇಶೀಯ ನಾಯಕರುಗಳಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಹ್ವಾನಿಸದೆ ಪ್ರಧಾನಿ ಮೋದಿ ಸರ್ಕಾರ ಜಾತೀಯತೆ ಮಾಡುತ್ತಿದೆ. ಅವರು ಮೋದಿಯೋ ಅಥವಾ ‘ಮನು’ವೋ (ಮನುಸ್ಮೃತಿ ಕರ್ತೃ)’ ಎಂದು ಪ್ರಶ್ನಿಸಿದ್ದಾರೆ.
