ಕಾಂಗ್ರೆಸ್ ನಾಯಕ ವೇಣುಗೋಪಾಲ್ ಅವರನ್ನು ಸಿಬಿಐ ವಿಚಾರಣೆ ನಡೆಸಿದೆ. ಕೇರಳದ ಪ್ರಮುಖ ಸೋಲಾರ್ ಹಗರಣದ ಲೈಂಗಿಕ ಕಿರುಕುಳ ಸಮಬಮಧ ಈ ವಿಚಾರಣೆ ನಡೆದಿದೆ.
ಕೇರಳದ ಬಹುಕೋಟಿ ಸೌರಶಕ್ತಿ ಹಗರಣದ ಪ್ರಮುಖ ಆರೋಪಿ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬ ಆರೋಪ ಸಂಬಂಧದ ತನಿಖೆಯನ್ನು ಸಿಬಿಐ ನಡೆಸುತ್ತಿದೆ. ಇದರಿಂದಾಗಿ ಈ ಪ್ರಕರಣದಲ್ಲಿ ಆರೋಪಿಗಳಾಗಿರುವ ಕೇರಳದ ಮಾಜಿ ಮುಖ್ಯಮಂತ್ರಿ ಊಮ್ಮನ್ ಚಾಂಡಿ ಹಾಗೂ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಸೇರಿದಂತೆ ಇನ್ನಿತರ ರಾಜಕೀಯ ನಾಯಕರಿಗೆ ಸಂಕಷ್ಟ ಎದುರಾಗಿದೆ. ಈ ಮಧ್ಯೆ, ಈಗಾಗಲೇ ವೇಣುಗೋಪಾಲ್ ಅವರ ವಿಚಾರಣೆ ನಡೆಸಿರುವುದಾಗಿ ಸಿಬಿಐ ಅಧಿಕಾರಿಗಳು ಹೇಳಿದ್ದಾರೆ.
ಲೈಂಗಿಕ ಕಿರುಕುಳದ ಪ್ರಕರಣ ಸಂಬಂಧ ಸಿಬಿಐ ಕಾಂಗ್ರೆಸ್ ಸಂಸದ ಕೆ.ಸಿ. ವೇಣುಗೋಪಾಲ್ ಅವರ ವಿಚಾರಣೆ ನಡೆಸಿ ಹೇಳಿಕೆ ಪಡೆಯಲಾಗಿದೆ ಎಂದು ಸಿಬಿಐ ಅಧಿಕಾರಿಗಳು ಮಂಗಳವಾರ ಮಾಹಿತಿ ನೀಡಿದ್ದಾರೆ. ಕಳೆದ ವಾರವೇ ವಿಚಾರಣೆ ನಡೆಸಿರುವುದಾಗಿಯೂ ಅಧಿಕಾರಿಗಳು ತಿಳಿಸಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಾಂಗ್ರೆಸ್ ನಾಯಕನ ವಿಚಾರಣೆ ನಡೆದಿರುವುದಾಗಿ ತಿಳಿದುಬಂದಿದೆ. ಮೇ 2012ರಲ್ಲಿ ಅಂದಿನ ಪ್ರವಾಸೋದ್ಯಮ ಸಚಿವ ಎ.ಪಿ. ಅನಿಲ್ ಕುಮಾರ್ ಅವರ ನಿವಾಸದಲ್ಲಿ ವೇಣುಗೋಪಾಲ್ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಪ್ರಕರಣದ ರೂವಾರಿ ಮಹಿಳೆ ಆರೋಪಿಸಿದ್ದರು.
ಲೈಂಗಿಕ ಕಿರುಕುಳ ಕೇಸಲ್ಲಿ ಚಾಂಡಿ, ವೇಣುಗೋಪಾಲ್‌ಗೆ ತನಿಖೆ ಬಿಸಿ!
ಈಗಾಗಲೇ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಅವರನ್ನು ಸಿಬಿಐ 3 ಬಾರಿ ವಿಚಾರಣೆ ನಡೆಸಿದೆ. ಆದರೆ, ನಂತರ ಈ ಪ್ರಕರಣದ ರೂವಾರಿ ಮಹಿಳೆ ಕಾಂಗ್ರೆಸ್ ನಾಯಕನ ವಿರುದ್ದ ಡಿಜಿಟಲ್ ಪುರಾವೆಗಳನ್ನು ನೀಡಿದ ನಂತರ ಮತ್ತೊಮ್ಮೆ ವೇಣುಗೋಪಾಲ್ ಅವರನ್ನು ವಿಚಾರಣೆ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಇನ್ನು, ವೇಣುಗೋಪಲ್ ಮಾತ್ರವಲ್ಲದೆ, ಕೇರಳದ ಮಾಜಿ ಮುಖ್ಯಮಂತ್ರಿ ಊಮ್ಮನ್ ಚಾಂಡಿ ಸೇರಿ 6 ರಾಜಕೀಯ ನಾಯಕರ ವಿರುದ್ಧ ಕೇರಳ ಪೊಲೀಸರು ಪ್ರಕರಣ ದಾಖಲಿಸಿದ್ದರು. 6 ಪ್ರತ್ಯೇಕ ಎಫ್‌ಐಆರ್‌ಗಳನ್ನು ಈ 6 ರಾಜಕೀಯ ನಾಯಕರ ವಿರುದ್ಧ ಹೊರಿಸಲಾಗಿದೆ ಎಂದು ಸಿಬಿಐ ಅಧಿಕಾರಿಗಳು ಹೇಳಿದ್ದಾರೆ. ಅಲ್ಲದೆ, ರಾಜ್ಯ ಸರ್ಕಾರದ ಶಿಫಾರಸಿನ ಮೇರೆಗೆ ಕಳೆದ ವರ್ಷ ಸಿಬಿಐ ಈ ಪ್ರಕರಣವನ್ನು ಕೈಗೆತ್ತಿಕೊಂಡಿತ್ತು ಎಂದೂ ಅವರು ಹೇಳಿದ್ದಾರೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ಮಾಜಿ ಮುಖ್ಯಮಂತ್ರಿ ಊಮ್ಮನ್ ಚಾಂಡಿ ಅವರಲ್ಲದೆ ಹೀಬಿ ಈಡನ್, ಅಡೂರ್ ಪ್ರಕಾಶ್, ಎಂಎಲ್‌ಎ ಎ.ಪಿ. ಅನಿಲ್ ಕುಮಾರ್ ಹಾಗೂ ಬಿಜೆಪಿ ನಾಯಕ ಎ.ಪಿ. ಅಬ್ದುಲ್ಲಾ ಕುಟ್ಟಿ ಸಹ ಈ ಪ್ರಕರಣದ ಇತರೆ ಆರೋಪಿಗಳಾಗಿದ್ದಾರೆ. ಬಿಜೆಪಿ ಶಾಸಕ ಕುಟ್ಟಿ ವಿರುದ್ಧ 2014ರಲ್ಲಿ ಕೇಸ್ ದಾಖಲಿಸಲಾಗಿತ್ತು. ಆ ವೇಳೆ ಅವರು ಕಣ್ಣೂರಿನ ಕಾಂಗ್ರೆಸ್ ಶಾಸಕರಾಗಿದ್ದರು ನಂತರ, ಅವರು ಬಿಜೆಪಿಗೆ ಸೇರಿದ್ದಾರೆ ಎಂದು ತಿಳಿದುಬಂದಿದೆ.
ಜುಲೈ 19, 2013ರಲ್ಲಿ ಪೊಲೀಸ್ ಕಮೀಷನರ್‌ಗೆ ಪತ್ರ ಬರೆದಿದ್ದ ಸೋಲಾರ್ ಹಗರಣದ ಪ್ರಮುಖ ರೂವಾರಿ ಮಹಿಳೆಯು ಹಲವು ಕಾಂಗ್ರೆಸ್ ಹಾಗೂ ಯುಡಿಎಫ್ ನಾಯಕರ ವಿರುದ್ಧ ಲೈಂಗಿಕ ಕಿರುಕುಳ ಹಾಗೂ ಭ್ರಷ್ಟಾಚಾರದ ಆರೋಪಗಳನ್ನು ಮಾಡಿದ್ದರು. ಈ ಪೈಕಿ ಕೇರಳ ಮಾಜಿ ಮುಖ್ಯಮಂತ್ರಿ ಚಾಂಡಿ, ಅವರು ಸಿಎಂ ಆಗಿದ್ದ ಅವಧಿಯಲ್ಲಿ ಸಚಿವರಾಗಿದ್ದ ಇಬ್ಬರು ಹಾಗೂ ಇಬ್ಬರು ಕೇಂದ್ರದ ಮಾಜಿ ಸಚಿವರ ವಿರುದ್ಧವೂ ಆ ಮಹಿಳೆ ಆರೋಪಗಳನ್ನು ಮಾಡಿದ್ದರು.
ಈ ಹಿಂದೆ ಕೇರಳದ ಕ್ರೈಂ ಬ್ರ್ಯಾಂಚ್ ಕೇರಳದ ಬಹುಕೋಟಿ ಸೋಲಾರ್ ಹಗರಣದ ತನಿಖೆ ವಹಿಸಿಕೊಂಡಿತ್ತು. ನಂತರ, ಈ ಸಂಬಂಧ ಪಿಣರಾಯಿ ವಿಜಯನ್ ಸರ್ಕಾರವು ಸಿಬಿಐ ತನಿಖೆಗೆ ಶಿಫಾರಸು ಮಾಡಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಪೊಲೀಸರು ತನಿಖೆ ನಡೆಸಿದ್ದ ಈ ಪ್ರಕರಣದ ತನಿಖೆಯನ್ನು ಸಿಬಿಐ ಕಳೆದ ವರ್ಷ ಕೈಗೆತ್ತಿಕೊಂಡಿದೆ. ಕಳೆದ 8 ತಿಂಗಳಿಂದ ಸಿಬಿಐ ಈ ಪ್ರಕರಣದ ವಿಚಾರಣೆಯನ್ನೂ ನಡೆಸುತ್ತಿದೆ.
