ವಿಶ್ವಕಪ್‌ ಗೆದ್ದ ಭಾರತೀಯ ಮಹಿಳಾ ಟೀಂ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಒಂದಿಷ್ಟು ಸಮಯ ಮಾತನಾಡಿದ್ದಾರೆ, ಕೈಯಾರೆ ಊಟ ಬಡಿಸಿದ್ದಾರೆ. ಈ ಸಂವಾದದ ಪ್ರಶ್ನೆಗಳು, ಮೋದಿ ಅವರ ಉತ್ತರಗಳ ಬಗ್ಗೆ ಅವಿನಾಶ್‌ ನೀರಹಳ್ಳಿ ಅವರು ಬರೆದ ಬರಹವೊಂದು ವೈರಲ್‌ ಆಗ್ತಿದೆ.

ಅವಿನಾಶ್‌ ನೀರಹಳ್ಳಿ ಎನ್ನುವವರು ಫೇಸ್‌ಬುಕ್‌ನಲ್ಲಿ ಬರೆದುಕೊಂಡ ಬರಹವಿದು!

ನಿನ್ನೆ ನಡೆದ ಹೈಡ್ರೋಜನ್ ಬಾಂಬ್ ಕಾಮಿಡಿ ಶೋವಿನಲ್ಲಿ ರಾಹುಲ್ ಗಾಂಧಿಯ ಮೆದುಳು ಕಂಡು ಜನರು ಬಿದ್ದು ಬಿದ್ದು ನಕ್ಕ ಅದೇ ದಿನ ಇನ್ನೊಂದು ಕಡೆ ಭಾರತೀಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹೃದಯವನ್ನು ಮುಗುಳ್ನಗುವಿನೊಂದಿಗೆ ಜನರು ಕಂಡ ಕಾರ್ಯಕ್ರಮವೂ ನಡೆದಿತ್ತು..

ಕಚಗುಳಿ ಇಡುವ ಪ್ರಶ್ನೆಗಳಿಗೆ ಸುಂದರ ಉತ್ತರಗಳು

ಮಹಿಳಾ ವಿಶ್ವಕಪ್ ವಿಜೇತ ಭಾರತೀಯ ತಂಡವು ಪ್ರಧಾನಿ ನರೇಂದ್ರ ಮೋದಿಯವರ ಆಹ್ವಾನದ ಮೇರೆಗೆ ಅವರನ್ನು ಭೇಟಿ ಮಾಡಿ, ಅವರು ನೀಡಿದ ಔತಣಕೂಟವನ್ನು ಸ್ವೀಕರಿಸಿದ ಕಾರ್ಯಕ್ರಮವು ಅದಾಗಿತ್ತು. ಆಹಾ, ಎಂತಹ ಮಾತುಕತೆಗಳು, ಕಚಗುಳಿ ಇಡುವ ಪ್ರಶ್ನೆಗಳು ಅಷ್ಟೇ ಸುಂದರವಾದ ಉತ್ತರಗಳು..

ಭಾರತವನ್ನು ಗೆಲ್ಲಿಸಿದ ಕ್ಷಣ ಹೇಗಿತ್ತು?

ಅಲ್ಲಿ ಪ್ರಧಾನಿ ಅವರು ದೀಪ್ತಿ ಶರ್ಮಾ ಅವರ ಕೈಯಲ್ಲಿರುವ ಹನುಮಾನ್ ಸ್ವಾಮಿಯ ಟ್ಯಾಟೂ ಮತ್ತು Instagram ಬಯೋದಲ್ಲಿನ ಜೈ ಶ್ರೀರಾಮ್ ಕುರಿತು ಕೇಳುತ್ತಾರೆ. ನಾಯಕಿ ಹರ್ಮನ್ ಅವರನ್ನು ಆ ಕೊನೆಯ ಕ್ಯಾಚ್ ತೆಗೆದ ಚೆಂಡನ್ನು ಎತ್ತಿ ಪಾಕೆಟ್‌ನಲ್ಲಿ ಇಟ್ಟುಕೊಂಡಿದ್ದರ ಬಗ್ಗೆ ಕೇಳುತ್ತಾರೆ. ಸೆಮಿಫೈನಲ್‌ನಲ್ಲಿ ಭಾರತವನ್ನು ಗೆಲುವಿನತ್ತ ತಲುಪಿಸಿದ ಕ್ಷಣ ಹೇಗಿತ್ತು ಎಂದು ಜೆಮಿಮಾ ಅವರನ್ನು ಕೇಳುತ್ತಾರೆ.

ನಿರ್ಣಾಯಕ ಕ್ಯಾಚ್ ತಗೊಂಡವ್ರಿಗೆ ಎಷ್ಟು ಟೆನ್ಶನ್‌ ಆಗಿತ್ತು?

ಶಫಾಲಿ ಅವರನ್ನು, ಕ್ಯಾಚ್ ಹಿಡಿದ ನಂತರ ಹಲವರು ನಗುವುದನ್ನು ನೋಡಿದ್ದೇವೆ, ಆದರೆ ಚೆಂಡು ಬರುವ ಮೊದಲೇ ನಗಲು ಶುರುಮಾಡಿದ್ದು ಹೇಗೆ ಎಂದು ಕೇಳಿ ನಗುತ್ತಾರೆ. ನಿರ್ಣಾಯಕ ಕ್ಯಾಚ್ ತೆಗೆದ ಅಮನ್‌ಜೋತ್ ಅವರಿಗೆ ಎಷ್ಟು ಟೆನ್ಷನ್ ಇತ್ತು, ನೀವು ಹಿಡಿದಿರುವುದು ಬರೇ ಕ್ಯಾಚ್ ಅಲ್ಲ, ಅದೇ ಕಪ್ ಎಂದು ಹೇಳುತ್ತಾರೆ. ರೇಣುಕಾ ಸಿಂಗ್ ಅವರ ಬಳಿ, ನಿಮ್ಮನ್ನು ಬೆಳೆಸಿ ಈ ಮಟ್ಟಕ್ಕೆ ತಲುಪಿಸಿದ ನಿಮ್ಮ ಅಮ್ಮನ‌ ಬಗ್ಗೆ ನನಗೆ ದೊಡ್ಡ ಗೌರವವಿದೆ ಎಂದು ಹೇಳುತ್ತಾರೆ.

ಕೋಚ್ ಅವರ ಬಳಿ ಇಷ್ಟು ವಿಭಿನ್ನವಾಗಿರುವವರನ್ನು ಒಗ್ಗೂಡಿಸಿ ಇಂತಹ ಸಾಧನೆ ಮಾಡಿದ್ದು ಹೇಗೆ ಎಂದು ಕೇಳಿ, ಅವರಿಗೆ ಅಭಿನಂದನೆಗಳನ್ನು ತಿಳಿಸುತ್ತಾರೆ. ಆ ಆಟಗಾರರ ಬದುಕಿನ ಎಷ್ಟೊಂದು ಸವಿಯಾದ ನಿಮಿಷಗಳು ಆಗಿರಬಹುದು ಇದು ಎಂಬುದು ಅಲ್ಲಿ ಅವರ ಮುಖಭಾವವೇ ಹೇಳುತ್ತಿತ್ತು..

ಪ್ರಧಾನಿ ಜೊತೆ ತಮಾಷೆ, ಹರಟೆ

ಒಬ್ಬ ಪ್ರಧಾನಮಂತ್ರಿಯನ್ನು ಭೇಟಿಯಾಗಿ ಔಪಚಾರಿಕವಾಗಿ ನಾಲ್ಕು ಮಾತುಗಳನ್ನು ಮಾತನಾಡುವುದು, ಎರಡು ಫೋಟೋಗಳನ್ನು ತೆಗೆಯುವುದು ಎಂಬ ಭಾವನೆ ಎಲ್ಲೂ ಬರದೆ, ಭಾರತದ ಹೆಮ್ಮೆಯನ್ನು ಹೆಚ್ಚಿಸಿದ ಆ ಹುಡುಗಿಯರು ನರೇಂದ್ರ ಮೋದಿಯವರೊಂದಿಗೆ ಬಹಳ ಆತ್ಮೀಯವಾಗಿ ಬೆರೆಯುತ್ತಾರೆ, ಮಾತನಾಡುತ್ತಾರೆ, ತಮಾಷೆ ಮಾಡುತ್ತಾರೆ, ಪರಸ್ಪರ ತಮಾಷೆ ಮಾಡಿಕೊಳ್ಳುತ್ತಾರೆ, ಪಂದ್ಯಗಳ ನಡುವಿನ ಅವರ ವಿಷಯಗಳನ್ನು ನೆನಪಿಸಿಕೊಳ್ಳುತ್ತಾರೆ, ಅವರ ತಮಾಷೆಗಳಿಗೆ ಮನಸ್ಸು ಬಿಚ್ಚಿ ‌ನಗುತ್ತಾರೆ..

ಸ್ಕಿನ್‌ ಕೇರ್‌ ರೊಟಿನ್‌ ಏನು?

ಅದೇ ರೀತಿ, ಆ ಆಟಗಾರರು ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಕೇಳಬೇಕಿದ್ದ ಪ್ರಶ್ನೆಗಳು ಇನ್ನೂ ಆಸಕ್ತಿಕರವಾಗಿದ್ದವು. ಹರ್ಲೀನ್ ಡಿಯೋಲ್ ಅವರು ಮೋದಿಜಿಯವರ ಸ್ಕಿನ್ ಕೇರ್ ರೊಟೀನ್ ಏನು ಎಂದು ಕೇಳಿತ್ತಾರೆ. ಒಂದು ಕ್ಷಣ ಮುಖ ಮುಚ್ಚಿ ನಕ್ಕ ನರೇಂದ್ರ ಮೋದಿಯವರ ಬಳಿ, ನೀವು ನೋಡಲು ತುಂಬಾ ಸುಂದರವಾಗಿದ್ದೀರಿ ಮತ್ತು ನಿಮ್ಮ ತ್ವಚೆ ಗ್ಲೋಯಿಂಗ್ ಆಗಿದೆ ಎಂದು ಅವರು ಹೇಳುತ್ತಾರೆ. ಅದನ್ನು ಕೇಳಿದ ಕೋಚ್ ಅವರು, "ನೋಡಿರಲ್ವಾ ಸರ್, ಎಂತಹ ಪ್ರಶ್ನೆಗಳು ಬರುತ್ತಿವೆ ಎಂದು, ಹೀಗೆ ಇವರ ಜೊತೆ ಸೇರಿ ನನ್ನ ತಲೆಕೂದಲೆಲ್ಲಾ ಬೆಳ್ಳಗಾಗಿ ಹೋಯಿತು ಸರ್" ಎಂದು ಹೇಳಿದಾಗ ಮೋದಿಜೀ ಅವರು ಜೋರಾಗಿ ನಗುತ್ತಾರೆ..

ಅರುಂಧತಿ ತಾಯಿಗೂ ಹೆಮ್ಮೆ

ಅರುಂಧತಿ ಹೇಳುತ್ತಾರೆ, ನನ್ನ ಅಮ್ಮ ಇವತ್ತು ಇಲ್ಲಿಗೆ ಬರುವ ಮೊದಲು ನನಗೆ 10 ಬಾರಿ ಫೋನ್ ಮಾಡಿ ಹೇಳಿದರು "ನೀನು ನನ್ನ ಹೀರೋ ಅನ್ನು ನೋಡಲು ಹೋಗುತ್ತಿದ್ದೀಯಾ, ನೀನು ತುಂಬಾ ಅದೃಷ್ಟಶಾಲಿ" ಎಂದು. ಅದಕ್ಕೆ ಮೋದಿಜೀ, "ನೀವೇ ಇವತ್ತು ಈ ದೇಶದ ಗುರುತುಗಳು" ಎಂದು ಉತ್ತರಿಸುತ್ತಾರೆ..

ಫೈನಲ್‌ ಕಪ್‌ ಕಳೆದುಕೊಂಡಾಗಲೂ ಸ್ವಾಗತ ಮಾಡಿದ್ರಿ

2017ರ ಫೈನಲ್‌ನಲ್ಲಿ ಕಪ್ ಕಳೆದುಕೊಂಡು ಬಂದಾಗ ಮೋದಿಜೀ ನೀಡಿದ ಸ್ವಾಗತದ ಬಗ್ಗೆ ಮತ್ತು ಅವರು ನೀಡಿದ ಆತ್ಮವಿಶ್ವಾಸದ ಬಗ್ಗೆ ನಾಯಕಿ ಹರ್ಮನ್ ಬಹಳಷ್ಟು ಒತ್ತಿ ಹೇಳುತ್ತಾರೆ. ಭಗವಂತನ ಕೃಪೆಯಿಂದ ನಮಗೆ ಗೆಲ್ಲಲು ಸಾಧ್ಯವಾಯಿತು ಎಂದು ಎರಡು ಮೂರು ಬಾರಿ ಪುನರಾವರ್ತಿಸಿದಾಗ, ರಾಧಾ ಯಾದವ್ ಅವರಿಗೆ ಮೋದಿಜೀ, "ಹಾಗೆ ಮಾತ್ರ ಅಲ್ಲ, ನೀವು ಇದಕ್ಕಾಗಿ ತುಂಬಾ ಕಠಿಣವಾಗಿ ಶ್ರಮಿಸಿದ್ದೀರಿ, ಅದರ ಫಲ ಇದು" ಎಂದು ಹೇಳುತ್ತಾರೆ..

ಫಿಟ್‌ ಇಂಡಿಯಾ ಕಾನ್ಸೆಪ್ಟ್‌ ಮರೆಯದ ಮೋದೀಜಿ

ಇಷ್ಟೆಲ್ಲಾ ತಮಾಷೆಗಳ ನಡುವೆಯೂ ದೇಶದ ಪ್ರಧಾನಿಯ ಜವಾಬ್ದಾರಿ ಮರೆಯದ ಮೋದೀಜಿ ಅವರು "ಫಿಟ್ ಇಂಡಿಯಾ" ಕಾನ್ಸೆಪ್ಟ್‌ನಲ್ಲಿ ಪಾಲುದಾರರಾಗಲು ಭಾರತೀಯ ಮಹಿಳಾ ಕ್ರಿಕೆಟ್ ಆಟಗಾರರ ಬಳಿ ವಿನಂತಿಸುತ್ತಾರೆ. ಬೊಜ್ಜು, ಫಿಟ್‌ನೆಸ್ ಕೊರತೆ, ದೈಹಿಕ ಸಾಮರ್ಥ್ಯದ ಕೊರತೆ ಭಾರತದ ಮಕ್ಕಳನ್ನು, ವಿಶೇಷವಾಗಿ ಹೆಣ್ಣುಮಕ್ಕಳನ್ನು, ಇಂದು ಹಲವು ರೀತಿಯಲ್ಲಿ ಬಾಧಿಸುತ್ತಿದೆ. ಆದ್ದರಿಂದ, ನೀವು ಇದರ ನಂತರ ಸಿಗುವ ಅವಕಾಶಗಳಲ್ಲಿ ಶಾಲೆಗಳನ್ನು ಕೇಂದ್ರೀಕರಿಸಿ ಗುಂಪುಗಳಾಗಿ ಅಥವಾ ವೈಯಕ್ತಿಕವಾಗಿ ಭೇಟಿ ನೀಡಿ ಅವರಿಗೆ ಪ್ರೋತ್ಸಾಹ ನೀಡಿದರೆ, ಅವರೊಂದಿಗೆ ಪ್ರಶ್ನೋತ್ತರಗಳು ಮತ್ತು ಇನ್ನಿತರ ಚಟುವಟಿಕೆಗಳನ್ನು ನಡೆಸಿದರೆ, ಅದು "ಫಿಟ್ ಇಂಡಿಯಾ" ಯೋಜನೆಗೆ ಬಹಳ ಸಹಾಯಕವಾಗುತ್ತದೆ ಎಂದು ಮೋದಿಜೀ ಹೇಳುತ್ತಾರೆ.

ಕೈಯಾರೆ ಊಟ ಬಡಿಸಿದ ನರೇಂದ್ರ ಮೋದಿ

ಭಾರತೀಯ ನಾಯಕಿ ಮತ್ತು ಉಪನಾಯಕಿ ಅದಕ್ಕೆ ಸಂಪೂರ್ಣ ಬೆಂಬಲವನ್ನು ನೀಡುವುದಾಗಿ ಭರವಸೆ ನೀಡುತ್ತಾರೆ. ನಂತರ ಅವರಿಗೆ ಮೋದಿಜೀ ತಾವೇ ಸ್ವತಃ ತಮ್ಮ ಕೈಯಾರೆ ಊಟ ಬಡಿಸುತ್ತಾರೆ. ಪ್ರತಿ ಆಟಗಾರ್ತಿಯ ಆಹಾರದ ಬಗ್ಗೆ ಕೇಳಿ ತಿಳಿದುಕೊಳ್ಳುತ್ತಾರೆ. ದೀಪ್ತಿ ಶರ್ಮಾ ಅವರಿಗೆ ಇಷ್ಟವಾದ ತಿಂಡಿ ಅಲ್ಲಿದೆ ಎಂದು ತೋರಿಸುತ್ತಾರೆ. ಸಿಹಿ ತೆಗೆದುಕೊಡುವ ಸಮಯದಲ್ಲಿ ಕೋಚ್‌ಗೆ, ಈಗ ಡಯಟ್‌ಗೆ ಸಂಬಂಧಿಸಿದ ನಿರ್ಬಂಧಗಳು ಇವೆಯೇ ಎಂದು ನಗುತ್ತಾ ಕೇಳುತ್ತಾರೆ..

ಕಚಗುಳಿ ನೀಡಿದ ಒಂದಿಷ್ಟು ಸಮಯ

ಕೊನೆಗೆ ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರರು ಆಟಗಾರರ ಸಹಿಯುಳ್ಳ ಮತ್ತು ಮೋದಿ ಎಂಬ ಹೆಸರಿನಿಂದ ಕೂಡಿದ ಭಾರತೀಯ ಕ್ರಿಕೆಟ್ ತಂಡದ ಜರ್ಸಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಿ‌ ಸಂಭ್ರಮಿಸುತ್ತಾರೆ. ಒಂದಿಷ್ಟೂ ಕಪಟತೆ,‌ ನಾಟಕೀಯತೆ, ರಾಜಕೀಯ ಇಲ್ಲದ, ಮನಸ್ಸಿಗೆ ನವಿರಾದ ಕಚಗುಳಿ ನೀಡಿದ ಒಂದಿಷ್ಟು ಸಮಯವನ್ನು ಮೋದಿಜೀ ಅವರು ಆ ಆಟಗಾರರಿಗೆ ಮಾತ್ರವಲ್ಲದೆ ಸಮಸ್ತ ಭಾರತೀಯರಿಗೂ ನೀಡುತ್ತಾರೆ..

ದಂಗೆಯೆದ್ದ Genx ಪೀಳಿಗೆ

ಒಂದು ಕಡೆ ನೇಪಾಳದಲ್ಲಿ ಆದ ಗಲಭೆಯನ್ನು ಕಂಡು ಅದರಂತೆ ಇಲ್ಲೂ ದೇಶದೊಳಗೆ ಗಲಭೆ ದಂಗೆ ಮಾಡಿಸಿ ಅಧಿಕಾರ ಹಿಡಿಯಬಹುದು ಎಂಬ ದುರಾಲೋಚನೆಯೊಂದಿಗೆ ವಿದೇಶೀ ಏಜೆಂಟ್ ರಾಹುಲ್ ಗಾಂಧಿ GenZ ಜನಾಂಗವನ್ನು ಕೆರಳಿಸುವ ಕೆಲಸ ಮಾಡುತ್ತಿರುವಾಗ..

ಇತ್ತ ಕಡೆ ರಾಜಕೀಯದ ಚಿಂತೆ ಇಲ್ಲದೆ, ದೇಶದ ಹೆಮ್ಮೆಯ ಹೆಣ್ಮಕ್ಕಳೊಂದಿಗೆ ಪ್ರಧಾನಮಂತ್ರಿಯು ಒಂದಿಷ್ಟು ಸಮಯ ಕಳೆಯುತ್ತಾರೆ, ಆ ಸಮಯದ ಮೂಲಕ ಪ್ರಧಾನಮಂತ್ರಿಯ ಜವಾಬ್ದಾರಿಯನ್ನೂ ನೆರವೇರಿಸುತ್ತಾರೆ. ಈ ದೇಶದ GenZ ತಲೆಮಾರು ಎಲ್ಲವನ್ನೂ ಸೂಕ್ಷ್ಮವಾಗಿ ನೋಡುತ್ತಿದೆ, ಮತ್ತು ಸೂಕ್ತವಾದುದನ್ನೇ ಆಯ್ಕೆ ಮಾಡುತ್ತದೆ.