Asianet Suvarna News Asianet Suvarna News

ರಾಜ್ಯಸಭೆ ಪ್ರತಿಪಕ್ಷ ನಾಯಕ ಸ್ಥಾನವೂ ‘ಕೈ’ ತಪ್ಪುವ ಆತಂಕ!

ಒಟ್ಟು 245 ಸದಸ್ಯಬಲದ ರಾಜ್ಯಸಭೆಯಲ್ಲಿ ಶೇ.10ರಷ್ಟುಸ್ಥಾನ ಹೊಂದಿದ ವಿಪಕ್ಷದ ಶಾಸಕಾಂಗ ಪಕ್ಷದ ನಾಯಕನಿಗೆ ಅಧಿಕೃತ ವಿಪಕ್ಷ ನಾಯಕ ಎಂಬ ಸ್ಥಾನಮಾನ ನೀಡಲಾಗುತ್ತದೆ

Congress may lose leader of opposition status in Rajya Sabha mnj
Author
Bengaluru, First Published Mar 12, 2022, 9:51 AM IST

ನವದೆಹಲಿ (ಮಾ. 12) : ಪಂಚರಾಜ್ಯ ಚುನಾವಣೆ ವೇಳೆ ಎಲ್ಲಾ 5 ರಾಜ್ಯಗಳಲ್ಲಿ ಕಳಪೆ ಸಾಧನೆ ತೋರಿ, ಕೈಯಲ್ಲಿದ್ದ ಒಂದು ರಾಜ್ಯವನ್ನೂ ಕಳೆದುಕೊಂಡ ಕಾಂಗ್ರೆಸ್‌, ತನ್ನ ಇದೇ ಸಾಧನೆ ಮುಂದುವರೆಸಿದರೆ ಶೀಘ್ರವೇ ರಾಜ್ಯಸಭೆಯಲ್ಲಿ ಅಧಿಕೃತ ವಿಪಕ್ಷ ಸ್ಥಾನವನ್ನು ಕಳೆದುಕೊಳ್ಳಬೇಕಾಗಿ ಬರಲಿದೆ. ಒಟ್ಟು 245 ಸದಸ್ಯಬಲದ ರಾಜ್ಯಸಭೆಯಲ್ಲಿ ಶೇ.10ರಷ್ಟುಸ್ಥಾನ ಹೊಂದಿದ ವಿಪಕ್ಷದ ಶಾಸಕಾಂಗ ಪಕ್ಷದ ನಾಯಕನಿಗೆ ಅಧಿಕೃತ ವಿಪಕ್ಷ ನಾಯಕ ಎಂಬ ಸ್ಥಾನಮಾನ ನೀಡಲಾಗುತ್ತದೆ. ಹಾಲಿ ಕಾಂಗ್ರೆಸ್‌ ರಾಜ್ಯಸಭೆಯಲ್ಲಿ 34 ಸ್ಥಾನ ಹೊಂದಿದ್ದು ಕನ್ನಡಿಗ ಮಲ್ಲಿಕಾರ್ಜುನ ಖರ್ಗೆ ವಿಪಕ್ಷ ನಾಯಕರಾಗಿದ್ದಾರೆ.

ಆದರೆ ಶೀಘ್ರವೇ 6 ರಾಜ್ಯಗಳಲ್ಲಿ 13 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಅದರಲ್ಲಿ ಕಾಂಗ್ರೆಸ್‌ 7 ಸ್ಥಾನ ಕಳೆದುಕೊಳ್ಳಲಿದೆ. ಜೊತೆಗೆ ಮುಂದಿನ ವರ್ಷ ಕೆಲ ಸದಸ್ಯರು ನಿವೃತ್ತಿಯಾಗಲಿದ್ದಾರೆ. ಅಷ್ಟರೊಳಗೆ ಗುಜರಾತ್‌ ಮತ್ತು ಕರ್ನಾಟಕ ವಿಧಾನಸಭೆ ಚುನಾವಣೆ ನಡೆಯಲಿದೆ. ಒಂದು ವೇಳೆ ಈ ಎರಡು ರಾಜ್ಯಗಳಲ್ಲಿ ಕಾಂಗ್ರೆಸ್‌ ಕಳಪೆ ಸಾಧನೆ ತೋರಿದರೆ, ಇಲ್ಲಿಂದ ಆಯ್ಕೆಯಾಗುವ ಸಾಧ್ಯತೆಯೂ ಕ್ಷೀಣವಾಗಿ ರಾಜ್ಯಸಭೆಯಲ್ಲಿ ಪಕ್ಷದ ಬಲ ಮತ್ತಷ್ಟುಕಡಿತಗೊಂಡು, ಕಾಂಗ್ರೆಸ್‌ ಅಧಿಕೃತ ವಿಪಕ್ಷ ಸ್ಥಾನಮಾನ ಕಳೆದುಕೊಳ್ಳಲಿದೆ.

ಪಂಚ ಸೋಲಿನ ಬೆನ್ನಲ್ಲೇ ಕಾಂಗ್ರೆಸ್‌ ಬಂಡಾಯ ನಾಯಕರ ತುರ್ತು ಸಭೆ:  ಪಂಚರಾಜ್ಯ ಚುನಾವಣೆಗಳಲ್ಲಿ ಕಾಂಗ್ರೆಸ್‌ ಸೋತ ಬೆನ್ನಲ್ಲೇ, ಗುಲಾಂ ನಬೀ ಆಜಾದ್‌ ನಿವಾಸದಲ್ಲಿ ಪಕ್ಷದ ಹಿರಿಯ ಭಿನ್ನಮತೀಯ ನಾಯಕರು ಶುಕ್ರವಾರ ಸಭೆ ಸೇರಿದ್ದಾರೆ. ಮಾಜಿ ಕೇಂದ್ರ ಸಚಿವ ಕಪಿಲ್‌ ಸಿಬಲ್‌, ಮನೀಶ್‌ ತಿವಾರಿ ಆಜಾದ್‌ ನಿವಾಸಕ್ಕೆ ಆಗಮಿಸಿದ್ದರು. ಜೊತೆಗೆ ಆನಂದ ಶರ್ಮಾ ಕೂಡಾ ಚರ್ಚೆಯಲ್ಲಿ ಭಾಗವಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ಇದನ್ನೂ ಓದಿ: ಹೋಳಿಗೂ ಮೊದಲೇ ಯೋಗಿ ಪ್ರಮಾಣ ವಚನ: ಪ್ರಧಾನಿ ಮೋದಿ, ಬಿಜೆಪಿ ಸಿಎಂಗಳಿಗೆ ಆಹ್ವಾನ?

2 ವರ್ಷಗಳ ಹಿಂದೆಯೇ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿಯವರಿಗೆ ಕಾಂಗ್ರೆಸ್‌ ಪಕ್ಷ ಬಲಪಡಿಸಲು ಪೂರ್ಣಪ್ರಮಾಣದ ನಾಯಕತ್ವ ಹಾಗೂ ವ್ಯಾಪಕ ಸಾಂಸ್ಥಿಕ ಬದಲಾವಣೆ ತರುವಂತೆ ಇವರು ಪತ್ರ ಬರೆದಿದ್ದರು. ಉತ್ತರಪ್ರದೇಶದಲ್ಲಿ ಹೈವೋಲ್ಟೇಜ್‌ ಪ್ರಚಾರ ನಡೆಸಿಯೂ ಪ್ರಿಯಾಂಕಾ ವಿಫಲವಾಗಿದ್ದ ಹಿನ್ನೆಲೆಯಲ್ಲಿ ಪಕ್ಷದ ನಾಯಕತ್ವ ಬದಲಾವಣೆ ನಿಟ್ಟಿನಲ್ಲಿ ಭಿನ್ನಮತೀಯ ನಾಯಕರು ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಪ್ರಧಾನಿ ಮೋದಿ ಸ್ವಕ್ಷೇತ್ರ ವಾರಣಾಸಿಯಲ್ಲಿ ಎಲ್ಲ 8 ಸ್ಥಾನಗಳು ಬಿಜೆಪಿಗೆ: ಪ್ರಧಾನಿ ನರೇಂದ್ರ ಮೋದಿಯವರ ಲೋಕಸಭಾ ಕ್ಷೇತ್ರವಾದ ವಾರಣಾಸಿಯಲ್ಲಿ ಬಿಜೆಪಿ ಮೈತ್ರಿಕೂಟ ಎಲ್ಲಾ 8 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. 2014ರಿಂದಲೂ ಮೋದಿ ಕ್ಷೇತ್ರ ವಾರಣಾಸಿಯಲ್ಲಿ ಬಿಜೆಪಿ ಗೆಲುವು ಸಾಧಿಸುತ್ತಾ ಬಂದಿದೆ. ಬಿಜೆಪಿಯು ಜಿಲ್ಲೆಯ ಏಳು ಸ್ಥಾನಗಳಲ್ಲಿ ಜಯಗಳಿಸಿದ್ದು, ಇನ್ನೊಂದರಲ್ಲಿ ಮೈತ್ರಿ ಪಕ್ಷವಾದ ಅಪ್ನ ದಳ ಗೆಲುವು ಸಾಧಿಸಿದೆ. 

ಇದನ್ನೂ ಓದಿಉತ್ತರ ಪ್ರದೇಶ ಮುಖ್ಯಮಂತ್ರಿ ಸ್ಥಾನಕ್ಕೆ ಯೋಗಿ ಆದಿತ್ಯನಾತ್ ರಾಜೀನಾಮೆ!

ಅಜಗರ, ಸೇವಾಪುರಿ, ಶಿವಪುರ, ವಾರಣಾಸಿ ಕಂಟೋನ್‌ನ್ಮೆಂಟ್‌, ವಾರಣಾಸಿ ಉತ್ತರ, ವಾರಣಾಸಿ ದಕ್ಷಿಣ, ಪಿಂಡ್ರಾದಲ್ಲಿ ಬಿಜೆಪಿ ಜಯಗಳಿಸಿದ್ದು ರೊಹೊನಿಯಾದಲ್ಲಿ ಅಪ್ನದಳ ಜಯಗಳಿಸಿದೆ. ಮೋದಿಯವರ ಲೋಕಸಭಾ ಕ್ಷೇತ್ರವಾಗಿರುವ ವಾರಣಾಸಿಯಲ್ಲಿ ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿತ್ತು. ಕಳೆದ ಬಾರಿ ಮೋದಿ ವಾರಣಾಸಿಯಲ್ಲಿ ಕಾಶಿ ವಿಶ್ವನಾಥ್‌ ಕಾರಿಡಾರ್‌ ಉದ್ಘಾಟನೆಗೆ ಬಂದಾಗ 2 ದಿನಗಳ ಕಾಲ ಚುನಾವಣಾ ಪ್ರಚಾರ ನಡೆಸಿ ರೋಡ್‌ ಶೋನಲ್ಲೂ ಕೂಡ ಪಾಲ್ಗೊಂಡಿದ್ದರು.

ಆಪ್‌ ಗೆಲ್ಲಲು ಖಲಿಸ್ತಾನಿ ಮತ, ಬಂಡವಾಳ ಕಾರಣ: ಎಸ್‌ಎಫ್‌ಜೆ: ಪಂಜಾಬ್‌ನಲ್ಲಿ ಆಮ್‌ ಆದ್ಮಿ ಪಕ್ಷ ಗೆಲ್ಲಲು ಖಲಿಸ್ತಾನ ಪರವಾದ ಮತ ಮತ್ತು ಬಂಡವಾಳ ಕಾರಣ ಎಂದು ಖಲಿಸ್ತಾನಿ ಪರ ಸಂಘಟನೆ ಸಿಖ್‌್ಸ ಫಾರ್‌ ಜಸ್ಟೀಸ್‌ ಗಂಭೀರ ಆರೋಪ ಮಾಡಿದೆ. ಈ ಕುರಿತು ಪಂಜಾಬ್‌ನ ನೂತನ ನಿಯೋಜಿತ ಸಿಎಂ ಭಗವಂತ್‌ ಸಿಂಗ್‌ ಮಾನ್‌ಗೆ ಪತ್ರ ಬರೆದಿರುವ ಎಸ್‌ಎಫ್‌ಜೆ ಪ್ರಧಾನ ಕಾರ್ಯದರ್ಶಿ ಗುರುಪತ್ವಂತ್‌ ಸಿಂಗ್‌, ‘ಪ್ರತ್ಯೇಕ ಪಂಜಾಬ್‌ ರಾಜ್ಯ ಸ್ಥಾಪನೆಯ ಪರವಾಗಿರುವ ಮತದಾರರನ್ನು ಬೇಡಿಕೊಳ್ಳುವ ಮೂಲಕ ಅತಿ ಹೆಚ್ಚು ಮತಗಳನ್ನು ಆಪ್‌ ಪಡೆದುಕೊಂಡಿದೆ. 

ಅಷ್ಟೇ ಅಲ್ಲದೇ ಅಮೆರಿಕ, ಬ್ರಿಟನ್‌, ಕೆನಡಾ, ಆಸ್ಪ್ರೇಲಿಯಾ ಮತ್ತು ಯುರೋಪಿನ ರಾಷ್ಟ್ರಗಳಲ್ಲಿರುವ ಖಲಿಸ್ತಾನ ಪರವಾದ ಸಿಖ್ಖರಿಂದ ದೊಡ್ಡಮಟ್ಟದ ಹಣಕಾಸಿನ ಸಹಕಾರ ಪಡೆದುಕೊಂಡಿದೆ. ಆಪ್‌ ಗ್ರಾಮೀಣ ಪ್ರದೇಶಗಳಲ್ಲಿ ಶೇ.70ರಷ್ಟುಮತಗಳನ್ನು ಪಡೆದುಕೊಂಡಿದೆ. ಖಲಿಸ್ತಾನ್‌ ಎನ್ನುವುದು ಸಿಖ್‌ ಮತ್ತು ಭಾರತದ ನಡುವಿನ ವಿವಾದ. ಈ ವಿಷಯದಲ್ಲಿ ಆಮ್‌ಆದ್ಮಿ ಪಕ್ಷ ಮಧ್ಯಪ್ರವೇಶ ಮಾಡಬಾರದು. ಖಲಿಸ್ತಾನ ಪರ ಪಂಜಾಬ್‌ನಲ್ಲ ಜನಮತಗಣನೆಗೆ ಅವಕಾಶ ನೀಡಿ. ಈ ವಿಷಯದಲ್ಲಿ ಮಧ್ಯಪ್ರವೇಶ ಮಾಡಿದ ಹಿಂದಿನ ನಾಯಕರ ಕಥೆ ಏನಾಯಿತು ಎಂದು ಮರೆಯಬೇಡಿ’ ಎಂದು ಮಾನ್‌ಗೆ ಎಚ್ಚರಿಕೆ ನೀಡಿದೆ.

Follow Us:
Download App:
  • android
  • ios