ಒಂದೆಡೆ ಅರವಿಂದ್‌ ಕೇಜ್ರಿವಾಲ್‌ರನ್ನು ಬಂಧಿಸಿರುವ ಬಗ್ಗೆ ಕಾಂಗ್ರೆಸ್‌ನ ಅಗ್ರ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರುತ್ತಿದ್ದರೆ, ಇನ್ನೊಂದೆಡೆ ಅರವಿಂದ್‌ ಕೇಜ್ರಿವಾಲ್‌ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಪ್ರಮುಖ ಕಾಂಗ್ರೆಸ್‌ ನಾಯಕರೊಬ್ಬರು ಆಗ್ರಹಿಸಿದ್ದಾರೆ. 

ನವದೆಹಲಿ (ಮಾ.23): ದೆಹಲಿಯಲ್ಲಿ ಅಕ್ರಮ ಮದ್ಯ ನೀತಿ ಪ್ರಕರಣದಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಲಾಗಿದೆ. ಇಡಿ ಕೋರ್ಟ್ ಅವರನ್ನು ಮಾರ್ಚ್ 28 ರವರೆಗೆ ರಿಮಾಂಡ್‌ಗೆ ಕಳುಹಿಸಿದೆ. ಈ ಮಧ್ಯೆ, ಕೇಜ್ರಿವಾಲ್ ಬಂಧನದ ಕುರಿತು ಕಾಂಗ್ರೆಸ್ ನಾಯಕ ಸಂಜಯ್ ನಿರುಪಮ್ ಪ್ರಮುಖ ಹೇಳಿಕೆ ನೀಡಿದ್ದಾರೆ. ಕೇಜ್ರಿವಾಲ್ ಜೈಲಿನಿಂದ ಸರ್ಕಾರವನ್ನು ನಡೆಸಿದರೆ, ಅದು ದೇಶದಲ್ಲಿ ಬಹಳ ತಪ್ಪು ಪ್ರವೃತ್ತಿಯನ್ನು ಹುಟ್ಟುಹಾಕುತ್ತದೆ ಎಂದು ಅವರು ಹೇಳಿದ್ದಾರೆ. 2011 ಮತ್ತು 2014 ರ ನಡುವೆ ಭಾರತದಲ್ಲಿ ಭ್ರಷ್ಟಾಚಾರ ವಿರೋಧಿ ಆಂದೋಲನದ ಸಮಯದಲ್ಲಿ ಅನೇಕ ಸಚಿವರು ನೈತಿಕ ಆಧಾರದ ಮೇಲೆ ರಾಜೀನಾಮೆ ನೀಡಿದ್ದರು ಎಂದು ಸಂಜಯ್ ನಿರುಪಮ್ ನೆನಪಿಸಿಕೊಂಡಿದ್ದಾರೆ ನೈತಿಕ ನೆಲೆಯಲ್ಲಿ ಬಹಳ ಮುಖ್ಯವಾದ ನಿಲುವನ್ನು ಕಾಂಗ್ರೆಸ್ ತೆಗೆದುಕೊಂಡಿತು. ಆ ಸಮಯದಲ್ಲಿ ಭ್ರಷ್ಟಾಚಾರದ ಆರೋಪ ಹೊತ್ತಿದ್ದ ಯುಪಿಎ ಸಚಿವರೆಲ್ಲರೂ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದರು ಎಂದಿದ್ದಾರೆ.

ಪವನ್ ಬನ್ಸಾಲ್ ಆಗಿರಲಿ ಅಥವಾ ಶಶಿ ತರೂರ್ ಆಗಿರಲಿ. ಇದಕ್ಕೆ ಇತ್ತೀಚಿನ ಉದಾಹರಣೆ ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಆಗಿರಲಿ. ಬಂಧನಕ್ಕೂ ಮುನ್ನ ಹೇಮಂತ್ ಸೊರೆನ್ ಕೂಡ ರಾಜೀನಾಮೆ ನೀಡಿದ್ದರು. ಅರವಿಂದ್ ಕೇಜ್ರಿವಾಲ್ ಜೈಲಿನಿಂದ ಸರ್ಕಾರ ನಡೆಸುತ್ತಾರೆ ಎಂದು ನನಗೆ ತಿಳಿದಿದೆ. ಹೀಗಾದರೆ ದೇಶದಲ್ಲಿ ಅಪಾಯಕಾರಿ ಟ್ರೆಂಡ್ ಶುರುವಾಗಲಿದೆ. ನೈತಿಕತೆಯ ಆಧಾರದ ಮೇಲೆ ಅವರು ಕೆಳಗಿಳಿಯಬೇಕು. ರಾಜೀನಾಮೆ ನೀಡಬೇಕು ಎಂದು ಹೇಳಿದ್ದಾರೆ.

ಕೇಜ್ರಿವಾಲ್ ಜೈಲಿನಿಂದ ಸರ್ಕಾರ ನಡೆಸಿದರೆ ಸರ್ಕಾರದ ಗೌಪ್ಯ ಮಾಹಿತಿ ಆರೋಪಿಗಳ ಬಳಿ ಹೋಗುತ್ತದೆ. ಇದು ಸರಿಯಲ್ಲ ಎಂದು ಸಂಜಯ್ ನಿರುಪಮ್ ಹೇಳಿದ್ದಾರೆ. ಅರವಿಂದ್‌ ಕೇಜ್ರಿವಾಲ್‌ ಯುಪಿಎ ಸರ್ಕಾರದ ಮಾನಹಾನಿ ಮಾಡಿದ ರೀತಿಯನ್ನು ನಾನಾಗಲೀ ಕಾಗ್ರೆಸ್ಸಿಗರಾಗಲಿ ಮರೆಯಲು ಸಾಧ್ಯವಿಲ್ಲ. ಅಂದು ನನ್ನ ಮನೆಯ ಹೊರಗೆ ಪ್ರತಿಭಟನೆಗಳು ನಡೆದಿದ್ದವು ಎಂದು ಹೇಳಿದ್ದಾರೆ.

News Hour: ಕಾಂಗ್ರೆಸ್ ಬಯಲಿಗೆ ತಂದ ಕೇಸ್​ನಲ್ಲಿ ಅರವಿಂದ್‌ ಕೇಜ್ರಿವಾಲ್ ಅರೆಸ್ಟ್

ಕೇಜ್ರಿವಾಲ್ ಅವರು ಇಂಡಿಯಾ ಮೈತ್ರಿಕೂಟದ ಭಾಗವಾಗಿದ್ದಾರೆ ಎಂದು ನನಗೆ ತಿಳಿದಿದೆ. ಅವರ ಬಗ್ಗೆ ಕಾಂಗ್ರೆಸ್ ನಿಲುವು ತಳೆದಿದೆ ಮತ್ತು ನಾನು ಅದನ್ನು ಬೆಂಬಲಿಸುತ್ತೇನೆ. ಆದರೆ, ನಮ್ಮ ದೇಶದ ರಾಜಕೀಯದಲ್ಲಿ ನೈತಿಕತೆ ಎಂಬ ಪದಕ್ಕೆ ಬಹಳ ಮಹತ್ವವಿದೆ. ಕೇಜ್ರಿವಾಲ್ ಅವರು ತಮ್ಮನ್ನು ಪ್ರಾಮಾಣಿಕರೆಂದು ಕರೆದರೆ, ಅವರು ನೈತಿಕ ಆಧಾರದ ಮೇಲೆ ರಾಜೀನಾಮೆ ನೀಡಬೇಕು ಎಂದು ಹೇಳಿದ್ದಾರೆ.

Breaking: ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ಗೆ 7 ದಿನ ಕಸ್ಟಡಿ!