ನವದೆಹಲಿ(ಆ. 31)  ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ಮೇಲೆ ಮತ್ತೆ ಕಿಡಿಕಾರಿದ್ದಾರೆ. ಕೆಲ ದಿನಗಳ ಹಿಂದೆ  ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಎಚ್ಚರಿಕೆ ಆಧರಿಸಿ ಆರ್ಥಿಕ ಸಲಹೆ ನೀಡಿದ್ದ ರಾಹುಲ್ ಈ ಬಾರಿಯೂ ಅರ್ಥವ್ಯವಸ್ಥೆಯ ಬಗ್ಗೆಯೇ ಮಾತನಾಡಿದ್ದಾರೆ.

ಸರಣಿ ಟ್ವಿಟ್ ಮಾಡಿರುವ ರಾಹುಲ್ ಕೇಂದ್ರ ಸರ್ಕಾರ ಕಳೆದ 6 ವರ್ಷಗಳಿಂದ ಅನೌಪಚಾರಿಕ ವಲಯಗಳನ್ನು ನಾಶಪಡಿಸುತ್ತಿದೆ.  ನೋಟ್‌ ಬ್ಯಾನ್‌, ಜಿಎಸ್‌ಟಿ ಹಾಗೂ ಲಾಕ್‌ಡೌನ್‌ ಎಂಬ ಮೂರು ನಿರ್ಧಾರಗಳು ಕೇಂದ್ರ ಸರ್ಕಾರದ ದೊಡ್ಡ ಪ್ರಮಾದ. ಯಾವುದೇ ಮುಂದಾಲೋಚನೆ ಪರ್ಯಾಯ ಕ್ರಮ ಆಲೋಚಿಸದೆ ಕೈಗೊಂಡ ನಿರ್ಧಾರಗಳು ಅರ್ಥ ವ್ಯವಸ್ಥೆ ಕುಸಿಯಲು ಕಾರಣವಾಗಿದೆ ಎಂದು ಆರೋಪಿಸಿದ್ದಾರೆ.

ಆರ್ಥಿಕ ತಜ್ಞರಾಗಿ ರಾಹುಲ್ ಗಾಂಧಿ ಕೇಂದ್ರಕ್ಕೆ ಕೊಟ್ಟ ಸಲಹೆ 

ಕೇಂದ್ರ ಹಣಕಾಸು ಇಲಾಖೆ ಬಿಡುಗಡೆ ಮಾಡಿರುವ ಜಿಡಿಪಿ ಡೇಟಾ ಆಧರಿಸಿಯೇ ದಾಳಿ ಮಾಡಿದ್ದಾರೆ.  ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ದೇಶದ ಅರ್ಥವ್ಯವಸ್ಥೆ ದೈವಿಚ್ಛೆ ಎಂಬ ಹೇಳಿಕೆಯನ್ನು ಖಂಡಿಸಿದ್ದಾರೆ.

ಬೇರೆಯವರ ಅಡಿಯಾಳಾಗಿ ಇರುವ ವ್ಯವಸ್ಥೆಯಿಂದ ದೇಶ ಹೊರತರಲು ಯುಪಿಎ ಸರ್ಕಾರ ಪ್ರಯತ್ನ ಮಾಡಿತ್ತು. ಆದರೆ ಎನ್‌ಡಿಎ ಸರ್ಕಾರ ಮತ್ತೆ ಎಲ್ಲ ವ್ಯವಸ್ಥೆಗಳನ್ನು ಗುಲಾಮಿ ಸಂಸ್ಕೃತಿ ಕಡೆಗೆ ತಳ್ಳಿದೆ ಎಂದು ಆರೋಪಿಸಿದ್ದಾರೆ.

ಯುಎಸ್‌ಎ, ಯುರೋಪ್, ಚೀನಾ, ಜಪಾನ್ ಸೇರಿದಂತೆ ಅನೇಕ ರಾಷ್ಟ್ರಗಳು ಆರ್ಥಿಕ ಸಂಕಷ್ಟ ಎದುರಿಸಿದರೂ ಭಾರತ ಹೊರತಾಗಿತ್ತು.  ನಾನು ಮನಮೋಹನ್ ಸಿಂಗ್ ಅವರ ಬಳಿ ಕೇಳಿದೆ, ಇಡೀ ಪ್ರಪಂಚ ಅರ್ಥ ವ್ಯವಸ್ಥೆ ಕುಸಿತ ಅನುಭವಿಸುತ್ತಿದದೆ, ಆದರೆ ಭಾರತಕ್ಕೆ ಈ ಪರಿಣಾಮ ತಾಗಿಲ್ಲ ಯಾಕೆ? ಎಂದೆ,  ಭಾರತ ಎರಡು ಅರ್ಥ ವ್ಯವಸ್ಥೆ ಹೊಂದಿದೆ,  ಔಪಚಾರಿಕ ಅಂದರೆ ದೊಡ್ಡ ದೊಡ್ಡ ಉದ್ಯಮ, ಅನೌಪಚಾರಿಕ ಅಂದರೆ  ರೈತರು ಮತ್ತು ಸಣ್ಣ ಉದ್ಯಮಗಳು,  ಎಲ್ಲಿಯವರೆಗೆ ಅನೌಪಚಾರಿಕ ಕ್ಷೇತ್ರದ ಮೇಲೆ ಕೆಟ್ಟ ಪರಿಣಾಮ ಆಗುವುದಿಲ್ಲವೋ ಅಲ್ಲಿವರೆಗೆ ಅರ್ಥ ವ್ಯವಸ್ಥೆ ಸುಭದ್ರವಾಗಿರುತ್ತದೆ ಎಂದು ಸಿಂಗ್ ಉತ್ತರಿಸಿದ್ದರು ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮೀಡಿಯಾ ಮಾರ್ಕೆಟಿಂಗ್ ಮಾಡುತ್ತ, ಪ್ರಚಾರವನ್ನೇ ಅಸ್ತ್ರವಾಗಿರಿಸಿಕೊಂಡು ಸರ್ಕಾರ ನಡೆಸುತ್ತಿದ್ದಾರೆ.  ಇದೆಲ್ಲದರ ಪರಿಣಾಮ ದೇಶ ನಲವತ್ತು ವರ್ಷದ ಹಿಂದೆ ಹೋಗಿದೆ.  ನಿರುದ್ಯೋಗ ತಲೆ ಎತ್ತಿದೆ ಎಂದಿದ್ದಾರೆ. ಕೇಂದ್ರ ಸರ್ಕಾರದ ತಪ್ಪು ಹೆಜ್ಜೆಗಳೇ ಆರ್ಥಿಕ ಕುಸಿತಕ್ಕೆ ಕಾರಣವಾಗಿದ್ದು  ಜನರನ್ನು ಮೋಸ ಮಾಡುವುದು ಬಿಟ್ಟು  ಪರಿಹಾರ ಕ್ರಮ ಆಲೋಚಿಸಿ ಎಂದು ಸಲಹೆ ನೀಡಿದ್ದಾರೆ.