Explained: ರಾಹುಲ್ ಗಾಂಧಿ ಇಂಗ್ಲೆಂಡ್‌ಗೆ ಹೋಗಲು ಸರ್ಕಾರದ ಪರವಾನಗಿ ಬೇಕೆ?
Rahul Gandhi Londin visit controversy: ಸರ್ಕಾರದ ಮೂಲಗಳ ಪ್ರಕಾರ ರಾಹುಲ್ ಗಾಂಧಿ ಇಂಗ್ಲೆಂಡ್ ಭೇಟಿ ಸಂಬಂಧ ಸರ್ಕಾರದ ಪರವಾನಗಿ ಪಡೆದಿಲ್ಲ ಮತ್ತು ಅವರ ಭೇಟಿ ಕಾನೂನು ಬಾಹಿರ ಎನ್ನುತ್ತಿವೆ. ಆದರೆ ಕಾಂಗ್ರೆಸ್ ಇದಕ್ಕೆ ತಿರುಗೇಟು ನೀಡಿದ್ದು, ಸಂಸದರು ಬೇರೆ ದೇಶಕ್ಕೆ ಭೇಟಿ ಕೊಡಲು ಸರ್ಕಾರದ ಪರ್ಮಿಷನ್ ಬೇಕಿಲ್ಲ, ಅವರು ಸರ್ಕಾರದ ನಿಯೋಗದಲ್ಲಿದ್ದರೆ ಮಾತ್ರ ಪಡೆಯಬೇಕು ಎಂದಿದೆ.
ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಲಂಡನ್ ಭೇಟಿ ಹೊಸ ವಿವಾದಕ್ಕೆ ಕಾರಣವಾಗಿದೆ (Rahul Gandhi London visit controversy). ಲಂಡನ್ ಭೇಟಿ ಸಂಬಂಧ ಕೇಂದ್ರ ಸರ್ಕಾರದಿಂದ ಪರವಾನಗಿ (Rahul Gandhi did not take political clearance) ಪಡೆದಿಲ್ಲ ಎಂದು ಮೂಲಗಳು ಆರೋಪಿಸಿವೆ. ರಾಹುಲ್ ಗಾಂಧಿ ಇಂಗ್ಲೆಂಡ್ ಹೋದ ದಿನದಿಂದ ಒಂದಲ್ಲಾ ಒಂದು ವಿವಾದ ಬೆನ್ನು ಬಿದ್ದಿದೆ. ಮೊದಲು ಭಾರತ ಒಂದು ದೇಶ ಹೌದಾ ಅಲ್ಲವಾ ಎಂಬ ರೀತಿಯ ಹೇಳಿಕೆ ವಿವಾದಕ್ಕೆ ಕಾರಣವಾದರೆ, ನಂತರ ಭಾರತದ ವಿರೋಧಿ ಬ್ರಿಟಿಷ್ ಲೇಬರ್ ಪಕ್ಷದ ಜೆರೆಮಿ ಕೋಬ್ರಿನ್ ಅವರನ್ನು ಭೇಟಿಯಾಗಿದ್ದನ್ನೇ ಬಿಜೆಪಿ ವಿವಾದ ಮಾಡಿತ್ತು. ಅದಾದ ನಂತರ ಪ್ರಧಾನಿ ನರೇಂದ್ರ ಮೋದಿಯವರು ಕೂಡ ಜರೆಮಿ ಕೋಬ್ರಿನ್ ಅವರನ್ನು ಭೇಟಿ ಮಾಡಿದ ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಇದೀಗ, ರಾಹುಲ್ ಗಾಂಧಿ ಸರ್ಕಾರದ ಪರವಾನಗಿ ಪಡೆಯದೇ ಇಂಗ್ಲೆಂಡ್ ಪ್ರವಾಸ ಮಾಡಿದ್ದಾರೆ ಎಂಬ ಹೊಸ ವಿವಾದ ಮುನ್ನಲೆಗೆ ಬಂದಿದೆ.
ಎಎನ್‌ಐ ವರದಿಯ ಪ್ರಕಾರ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ರಾಜಕೀಯ ಪರವಾನಗಿಯನ್ನು ಸರ್ಕಾರದಿಂದ ಪಡೆಯದೇ ಇಂಗ್ಲೆಂಡ್‌ಗೆ ಭೇಟಿ ಕೊಟ್ಟಿದ್ದಾರೆ. ಜತೆಗೆ ಆರ್‌ಜೆಡಿಯ ಸಂಸದ ಮನೋಜ್ ಜಾ ಅವರು ಕಾನೂನು ಬದ್ಧವಾಗಿ ಎಲ್ಲ ಪರವಾನಗಿಯನ್ನು ಕೇಂದ್ರದಿಂದ ಪಡೆದು ಇಂಗ್ಲೆಂಡ್‌ಗೆ ಭೇಟಿ ನೀಡಿದ್ದಾರೆ ಎನ್ನಲಾಗಿದೆ. ಮನೋಜ್ ಜಾ ಕೂಡ ರಾಹುಲ್ ಗಾಂಧಿಯವರು ಬೇಟಿ ನೀಡಿದ ಸಭೆಗೆ ಹೋಗಿದ್ದಾರೆ, ಒಬ್ಬರು ಕಾನೂನುಬದ್ಧವಾಗಿ ನಡೆದರೆ, ಒಬ್ಬರು ಕಾನೂನಿನ ವಿರುದ್ಧವಾಗಿ ಹೋಗಿದ್ದಾರೆ ಎಂದು ಆರೋಪಿಸಲಾಗಿದೆ.
ಸಂಸದರ ಪ್ರವಾಸಕ್ಕೆ ನಿಯಮಾವಳಿಗಳೇನು? (Travel Rules of MPs):
ಸಾರ್ವಜನಿಕ ಸೇವೆಯಲ್ಲಿರುವ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ವಿದೇಶ ಪ್ರವಾಸ ಮಾಡುವಾಗ ಕೆಲವೊಂದು ನಿಯಮಾವಳಿಗಳನ್ನು ಪಾಲಿಸಬೇಕು. ಭೇಟಿಗೂ ಮುನ್ನ ಕ್ಲಿಯರೆನ್ಸ್ ಪಡೆಯಬೇಕು. ಕಾನೂನಿನ ಪ್ರಕಾರ ವಿದೇಶ ಪ್ರವಾಸಕ್ಕೂ ಮುನ್ನ ವಿದೇಶಾಂಗ ಸಚಿವಾಲಯ ಮತ್ತು ಗೃಹ ಸಚಿವಾಲಯದಿಂದ ಪರವಾನಗಿ ಪಡೆಯಬೇಕು.
ಇದನ್ನೂ ಓದಿ: ಭಾರತದ ಪರಿಸ್ಥಿತಿ ಚೆನ್ನಾಗಿಲ್ಲ, ಬಿಜೆಪಿ ದೇಶಾದ್ಯಂತ 'ಸೀಮೆಎಣ್ಣೆ' ಸಿಂಪಡಿಸಿದೆ: ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ರಾಗಾ!
ಬೇರೆ ದೇಶದ ಸರ್ಕಾರದಿಂದ ಅಥವಾ ಸಂಸ್ಥೆಗಳಿಂದ ಯಾವುದಾದರೂ ಕಾರ್ಯಕ್ರಮಕ್ಕೆ ಆಹ್ವಾನ ಬಂದರೆ, ಆಹ್ವಾನ ಪತ್ರಿಕೆಯ ಪ್ರತಿಯ ಜೊತೆ, ಕಾರ್ಯಕ್ರಮದ ಉದ್ದೇಶ, ಅಲ್ಲಿ ತಂಗುವ ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡಿ ಕ್ಲಿಯರೆನ್ಸ್ ಪಡೆಯಬೇಕು. ವಿದೇಶಾಂಗ ಸಚಿವಾಲಯ ಮತ್ತು ಗೃಹ ಸಚಿವಾಲಯದಿಂದ ಕ್ಲಿಯರೆನ್ಸ್ ಪಡೆದ ನಂತರ ಲೋಕಸಭಾ ಸ್ಪೀಕರ್ ಅಥವಾ ರಾಜ್ಯಸಭೆ ಉಪ ಸಭಾಪತಿ ಅವರಿಗೆ ಮಾಹಿತಿ ನೀಡಬೇಕು. ಎಷ್ಟು ದಿನಗಳ ಕಾಲ ಪ್ರವಾಸ ಹೋಗುತ್ತಿದ್ದಾರೆ ಮತ್ತು ದೇಶಕ್ಕೆ ಹಿಂತಿರುಗುವುದು ಯಾವಾಗ ಎಂಬ ಬಗ್ಗೆ ಮಾಹಿತಿ ನೀಡಬೇಕು. ಈ ಎಲ್ಲಾ ಪ್ರಕ್ರಿಯೆ ಮಾಡಿದ ನಂತರ ವಿದೇಶ ಪ್ರವಾಸಕ್ಕೆ ಹೋಗಬಹುದು.
ಆದರೆ ರಾಹುಲ್ ಗಾಂಧಿ ವಿದೇಶಾಂಗ ಸಚಿವಾಲಯಕ್ಕಾಗಲೀ ಅಥವಾ ಗೃಹ ಸಚಿವಾಲಯಕ್ಕಾಗಲೀ ಮಾಹಿತಿ ನೀಡಿಲ್ಲ. ಪರವಾನಗಿ ಪಡೆದಿಲ್ಲ ಮತ್ತು ಸ್ಪೀಕರ್‌ಗೂ ಮಾಹಿತಿ ನೀಡಿಲ್ಲ ಎನ್ನಲಾಗಿದೆ. ಇದೇ ಕಾರಣಕ್ಕೆ ರಾಹುಲ್ ಗಾಂಧಿ ಮತ್ತೆ ವಿವಾದದ ಕೇಂದ್ರ ಬಿಂದುವಾಗಿದ್ದಾರೆ. ರಾಹುಲ್ ಕಾಲಿಟ್ಟಲ್ಲೆಲ್ಲಾ ಒಂದಲ್ಲಾ ಒಂದು ವಿವಾದ ಅವರ ಬೆನ್ನ ಬೀಳುತ್ತದೆ ಅಂತದ್ದೇ ಒಂದು ವಿವಾದ ಈಗ ಸೃಷ್ಟಿಯಾಗಿದೆ.
ಇದನ್ನೂ ಓದಿ: ಲಂಡನ್ ನಲ್ಲಿ ಭಾರತದ ವಿರೋಧಿ ಜೆರೆಮಿ ಕಾರ್ಬಿನ್ ಭೇಟಿ ಮಾಡಿದ ರಾಹುಲ್ ಗಾಂಧಿ, ಬಿಜೆಪಿಯಿಂದ ಟೀಕೆ!
ಈ ಹಿಂದೆ ಕೆಲ ದಿನಗಳ ಹಿಂದೆ ನೇಪಾಳಕ್ಕೆ (Rahul Gandhi Nepal visit controversy) ಮದುವೆಯೊಂದಕ್ಕೆ ತೆರಳಿದಾಗ ವಿವಾದ ಸೃಷ್ಟಿಯಾಗಿತ್ತು. ಚೀನಾದ ಹನಿ ಟ್ರಾಪರ್ ಒಬ್ಬರ ಜೊತೆ ರಾಹುಲ್ ಗಾಂಧಿ ಕಾಣಿಸಿಕೊಂಡಿದ್ದಾರೆ, ಆಕೆ ಚೀನಾದ ಏಜೆಂಟ್ ಎಂದೆಲ್ಲಾ ಸುಳ್ಳು ಸುದ್ದಿ ಹಬ್ಬಿಸಲಾಗಿತ್ತು. ರಾಜಕೀಯ ನಾಯಕರಿಗೂ ವೈಯಕ್ತಿಕ ಜೀವನವಿರುತ್ತದೆ ಎಂದು ರಂದೀಪ್ ಸಿಂಗ್ ಸುರ್ಜೆವಾಲಾ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದರು. ಜತೆಗೆ ಹಲವು ಕಾಂಗ್ರೆಸ್ ನಾಯಕರು ಟ್ರೋಲ್‌ಗಳನ್ನು ಖಂಡಿಸಿದ್ದರು.