ನವದೆಹಲಿ( ಸೆ. 15)  ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಮೇಲೆ ವಾಗ್ದಾಳಿ ಮುಂದುವರಿಸಿದ್ದಾರೆ.

ಕೊರೋನಾ ಲಾಕ್ ಡೌನ್ ಪರಿಣಾಮ ವಲಸೆ ಕಾರ್ಮಿಕರು ಸಾವನಪ್ಪಿರುವುದನ್ನು ಇಡೀ ಜಗತ್ತೇ ನೋಡಿದ್ದರೂ, ಮೋದಿ ಸರಕಾರಕ್ಕೆ ಮಾತ್ರ ಈ ವಿಚಾರವೇ ತಿಳಿದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಸೋಮವಾರದಿಂದ ಮುಂಗಾರು ಅಧಿವೇಶನ ಆರಂಭವಾಗಿದೆ. ಅಧಿವೇಶನದ ವೇಳೆ ಲಾಕ್‌ಡೌನ್‌ ಸಂದರ್ಭದಲ್ಲಿ ಎಷ್ಟು ವಲಸೆ ಕಾರ್ಮಿಕರು ಸಾವನಪ್ಪಿದ್ದರು ಎಂದು ವಿಪಕ್ಷಗಳು ಕೇಂದ್ರ ಸರಕಾರವ ಪ್ರಶ್ನೆ ಮಾಡಿದ್ದವು. ಇದಕ್ಕೆ ಉತ್ತರ ನೀಡಿದ ಪ್ರಧಾನಿ ಮೋದಿ ನೇತೃತ್ವದ ಸರಕಾರ ನಮ್ಮಲ್ಲಿ ಮಾಹಿತಿ ಇಲ್ಲ ಎಂದು ಹೇಳಿತ್ತು. ಇದು ವಿಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿತ್ತು.

ಮೋದಿ ನಿರ್ಮಿತ ಆರು ವಿಪತ್ತುಗಳ ಪಟ್ಟಿ ಕೊಟ್ಟ ರಾಹುಲ್

ಕೊರೋನಾ ಲಾಕ್ ಡೌನ್ ಕಾರಣಕ್ಕೆ ಎಷ್ಟು ಜನ ಕೆಲಸ ಕಳೆದುಕೊಂಡರು, ಎಷ್ಟು ಜನ ತಮ್ಮ ಪ್ರಾಣ ಕಳೆದುಕೊಂಡರು ಎಂಬ ವಿಚಾರವೇ ಕೇಂದ್ರಕ್ಕೆ ಗೊತ್ತಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

ನೀವು ಲೆಕ್ಕ ಮಾಡಿಲ್ಲ ಎಂಬುವುದರ ಅರ್ಥ ವಲಸೆ ಕಾರ್ಮಿಕರು ಸತ್ತಿಲ್ಲ  ಎನ್ನುವುದಾ? ಸರಕಾರ ವಲಸೆ ಕಾರ್ಮಿಕರು ಸಾವನಪ್ಪಿರುವ ಮಾಹಿತಿ ಕಲೆ ಹಾಕುವ ಗೋಜಿಗೆ ಹೋಗಿಲ್ಲ ಎನ್ನುವುದು ನಿಜಕ್ಕೂ ವಿಷಾದದ ಸಂಗತಿ ಎಂದಿದ್ದಾರೆ.

ಅಧಿವೇಶನದಲ್ಲಿ ಮಾತನಾಡಿದ್ದ ಕೇಂದ್ರ ಕಾರ್ಮಿಕ ಇಲಾಖೆ ರಾಜ್ಯ ಖಾತೆ ಸಚಿವ ಸಂತೋಷ್ ಕುಮಾರ್ ವಲಸೆ ಕಾರ್ಮಿಕರ ಸಾವಿನ ಮಾಹಿತಿ ಇಲ್ಲ ಎಂದಿದ್ದರು. ಲಾಕ್ ಡೌನ್ ವೇಳೆ ಊರಿಗೆ ತೆರಳಲಾಗದೆ ಹರಸಾಹಸ ಪಡುತ್ತಿದ್ದ ಕಾರ್ಮಿಕರನ್ನು ರಾಹುಲ್ ಗಾಂಧಿ ಭೇಟಿ ಮಾಡಿದ್ದರು. ಜಿಎಸ್‌ಟಿ, ನೋಟ್ ಬ್ಯಾನ್ ಮತ್ತು ಕೊರೋನಾ ಲಾಕ್ ಡೌನ್ ವಿಚಾರ ಇಟ್ಟುಕೊಂಡು ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿ ಮಾಡುತ್ತಲೇ ಬಂದಿದ್ದಾರೆ.