ಹಿರಿಯ ಕಾಂಗ್ರೆಸ್ಸಿಗ ಬೂಟಾ ಸಿಂಗ್‌ ನಿಧನ| ಮಿದುಳಿನ ರಕ್ತಸ್ರಾವ ಸಮಸ್ಯೆಯಿಂದ ಕೊನಯುಸಿರು| 4 ಪ್ರಧಾನಿಗಳ ಅಡಿ ಸಚಿವರಾಗಿದ್ದರು| ಕಾಂಗ್ರೆಸ್‌ ‘ಹಸ್ತ’ ಚಿಹ್ನೆ ಪಡೆಯಲು ಶ್ರಮಿಸಿದ್ದರು|  8 ಬಾರಿ ಸಂಸದ, ಕೇಂದ್ರ ಸಚಿವ, ರಾಜ್ಯಪಾಲರಾಗಿದ್ದರು| ಬೂಟಾ ನಿಧನಕ್ಕೆ ಕೋವಿಂದ್‌, ನಾಯ್ಡು, ಮೋದಿ, ರಾಹುಲ್‌ ಶೋಕ

ನವದೆಹಲಿ(ಜ.03): ದೇಶದ ನಾಲ್ಕು ಪ್ರಧಾನಿಗಳ ಜತೆ ಕೆಲಸ ಮಾಡಿದ್ದ ಹಾಗೂ ಕಾಂಗ್ರೆಸ್‌ ಪಕ್ಷ ‘ಹಸ್ತ’ ಚಿಹ್ನೆ ಪಡೆಯಲು ಶ್ರಮಿಸಿದವರಲ್ಲಿ ಒಬ್ಬರಾದ ಕೇಂದ್ರದ ಮಾಜಿ ಸಚಿವ, ದಲಿತ ಮುಖಂಡ ಬೂಟಾ ಸಿಂಗ್‌ (86) ಅವರು ಶನಿವಾರ ನಿಧನ ಹೊಂದಿದರು. ಮಿದುಳಿನ ರಕ್ತಸ್ರಾವ ಆಗಿದ್ದ ಕಾರಣ ಕಳೆದ ಅಕ್ಟೋಬರ್‌ನಿಂದ ಅಸ್ವಸ್ಥರಾಗಿದ್ದ ಅವರು ಕೋಮಾವಸ್ಥೆಯಲ್ಲಿದ್ದರು. ಶನಿವಾರ ಬೆಳಗ್ಗೆ 7.10ಕ್ಕೆ ದಿಲ್ಲಿಯ ಏಮ್ಸ್‌ ಆಸ್ಪತ್ರೆಯಲ್ಲಿ ನಿಧನ ಹೊಂದಿದರು ಎಂದು ಅವರ ಕುಟುಂಬ ತಿಳಿಸಿದೆ. ಅವರಿಗೆ ಪುತ್ರಿ ಹಾಗೂ ಇಬ್ಬರು ಪುತ್ರರಿದ್ದಾರೆ. ಅಂತ್ಯಕ್ರಿಯೆ ಲೋಧಿ ಚಿತಾಗಾರದಲ್ಲಿ ಸಂಜೆ ನೆರವೇರಿತು.

ಬೂಟಾ ಸಿಂಗ್‌ ನಿಧನಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್‌, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ, ಮೊದಲಾದವರು ಶೋಕ ವ್ಯಕ್ತಪಡಿಸಿದ್ದಾರೆ.

8 ಬಾರಿ ಸಂಸದ, ಮಂತ್ರಿ, ರಾಜ್ಯಪಾಲ:

1934ರ ಮಾರ್ಚ್ 31ರಂದು ಪಂಜಾಬ್‌ನ ಜಲಂಧರ್‌ ಜಿಲ್ಲೆಯಲ್ಲಿ ಜನಿಸಿದ ಬೂಟಾ ಸಿಂಗ್‌ 8 ಸಲ ಸಂಸದರಾಗಿ, ಕೇಂದ್ರ ಸಚಿವರಾಗಿ ಹಾಗೂ ಬಿಹಾರ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು.

ದಲಿತ ನಾಯಕನಾದ ಬೂಟಾ, ಅಕಾಲಿ ದಳದ ಮೂಲಕ ರಾಜಕೀಯ ಪ್ರವೇಶಿಸಿ ನಂತರ, 60 ದಶಕದಲ್ಲಿ ಕಾಂಗ್ರೆಸ್‌ ಸೇರಿದರು. ಕಾಂಗ್ರೆಸ್‌ನ ಹರಿಜನ ಘಟಕದ ಸಂಚಾಲಕನಾಗಿ, ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ 70ರ ದಶಕದಲ್ಲಿ ಕಾರ್ಯನಿರ್ವಹಿಸಿದರು. 1974ರಲ್ಲಿ ರೈಲ್ವೆ ಸಚಿವರಾದ ಅವರು, ನಂತರ ವಿವಿಧ ಸಚಿವ ಖಾತೆಗಳನ್ನು ನಿರ್ವಹಿಸಿದರು. ಇಂದಿರಾ ಗಾಂಧಿ, ರಾಜೀವ್‌ ಗಾಂಧಿ, ಪಿ.ವಿ. ನರಸಿಂಹರಾವ್‌ ಹಾಗೂ ಐ.ಕೆ. ಗುಜ್ರಾಲ್‌ ಸರ್ಕಾರದಲ್ಲಿ ಸಚಿವರಾಗಿದ್ದರು.

ಇಂದಿರಾ ಗಾಂಧಿ ಅವರ ಪರಮಾಪ್ತರಾಗಿದ್ದ ಬೂಟಾ ಅವರು, ಆಪರೇಷನ್‌ ಬ್ಲೂಸ್ಟಾರ್‌ ಬಳಿಕ ಸ್ವರ್ಣಮಂದಿರದ ಮರುನಿರ್ಮಾಣದಲ್ಲಿ ಸಹಕರಿಸಿದ್ದರು. 1978ರಲ್ಲಿ ಕಾಂಗ್ರೆಸ್‌ ಇಬ್ಭಾಗವಾದಾಗ ಪಕ್ಷಕ್ಕೆ ಹಸ್ತ ಚಿಹ್ನೆ ದೊರಕಲು ಶ್ರಮಿಸಿದ್ದರು. 1982ರಲ್ಲಿ ಏಷ್ಯನ್‌ ಗೇಮ್ಸ್‌ ಸಂಘಟನಾ ಸಮಿತಿ ಮುಖ್ಯಸ್ಥರೂ ಆಗಿದ್ದರು.

ವಿವಾದಗಳು:

ಆದರೆ 1998ರಲ್ಲಿ ಜೆಎಂಎಂ ಲಂಚ ಹಗರಣದಲ್ಲಿ ಸಿಲುಕಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. 2005ರಲ್ಲಿ ಬಿಹಾರ ರಾಜ್ಯಪಾಲರಾಗಿದ್ದ ವೇಳೆ ಅವರು ವಿಧಾನಸಭೆ ವಿಸರ್ಜಿಸಿದ್ದನ್ನು ಸುಪ್ರೀಂ ಕೋರ್ಟ್‌ ಅಮಾನ್ಯ ಮಾಡಿತ್ತು. ಆಗ ಅವರು ರಾಜ್ಯಪಾಲ ಹುದ್ದೆಗೆ ರಾಜೀನಾಮೆ ನೀಡಿದ್ದರು.