ಕಾಂಗ್ರೆಸ್ ಗ್ಯಾರೆಂಟಿಯಿಂದ ದಿವಾಳಿಯಾಗಲಿದೆ ದೇಶ, ಉಚಿತ ಘೋಷಣೆ ವಿರುದ್ದ ಪ್ರಧಾನಿ ಮೋದಿ ವಾಗ್ದಾಳಿ!
ಕಾಂಗ್ರೆಸ್ ಉಚಿತ ಗ್ಯಾರೆಂಟಿ ಘೋಷಿಸುತ್ತಿದೆ. ಈ ಗ್ಯಾರೆಂಟಿಗಳಿಂದ ದೇಶ ದಿವಾಳಿಯಾಗಲಿದೆ. ಬಡವರ ದಾರಿ ತಪ್ಪಿಸುವ ಕಾಂಗ್ರೆಸ್ ಈ ಹಿಂದೆ ಬಡನತ ನಿರ್ಮೂಲನೆ ಘೋಷಣೆ ಮಾಡಿತ್ತು. ಈ ಘೋಷಣೆ ಏನಾಗಿದೆ ಎಂದು ಪ್ರಧಾನಿ ಮೋದಿ ಕಿಡಿ ಕಾರಿದ್ದಾರೆ.

ಅಜ್ಮೇರ್(ಮೇ.31) : ಹಿಮಾಚಲ ಪ್ರದೇಶ, ಕರ್ನಾಟಕ ಸೇರಿದಂತೆ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಉಚಿತ ಗ್ಯಾರೆಂಟಿ ಘೋಷಿಸಿ ಭರ್ಜರಿ ಗೆಲುವು ಸಾಧಿಸಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಗ್ಯಾರೆಂಟಿ ಭಾರಿ ಚರ್ಚೆಯಾಗುತ್ತಿದೆ. ಹೆಜ್ಜೆ ಹೆಜ್ಜೆಗೂ ಜನರು ಪ್ರಶ್ನೆ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಗ್ಯಾರೆಂಟಿಯೇ ಟ್ರೋಲ್ ಆಗುತ್ತಿದೆ. ಇತ್ತ ಸಿದ್ದರಾಮಯ್ಯ ಸರ್ಕಾರ ಯೋಜನೆ ಜಾರಿಗೆ ಭಾರಿ ಸರ್ಕಸ್ ನಡೆಸುತ್ತಿದೆ. ಇದರ ನಡುವೆ ಇಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಉಚಿತ ಗ್ಯಾರೆಂಟಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಜ್ಯ ಚುನಾವಣೆಗಳಲ್ಲಿ ಕಾಂಗ್ರೆಸ್ ಅನುಸರಿಸುತ್ತಿರುವ ಗ್ಯಾರಂಟಿ ಸೂತ್ರದಿಂದಾಗಿ ಆರ್ಥಿಕತೆಗೆ ಪೆಟ್ಟು ಬೀಳಲಿದ್ದು, ದೇಶ ದಿವಾಳಿಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಎಚ್ಚರಿಸಿದ್ದಾರೆ. ಈ ಮೂಲಕ ಕರ್ನಾಟಕದಲ್ಲಿ ಕಾಂಗ್ರೆಸ್ ಘೋಷಿಸಿರುವ ಉಚಿತ ಯೋಜನೆಗಳ ಬಗ್ಗೆ ಕಿಡಿಕಾರಿದ್ದಾರೆ.
ವರ್ಷಾಂತ್ಯಕ್ಕೆ ಚುನಾವಣೆಗೆ ಸಜ್ಜಾಗಿರುವ ರಾಜಸ್ಥಾನದ ಅಜ್ಮೇರ್‌ನಲ್ಲಿ ಬುಧವಾರ ಬೃಹತ್ ಜನಸಂಪರ್ಕ ರಾರಯಲಿಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ‘ಕಾಂಗ್ರೆಸ್ ಇದೀಗ ಗ್ಯಾರಂಟಿಗಳನ್ನು ನೀಡುವ ಹೊಸ ಸೂತ್ರವನ್ನು ಕಂಡುಕೊಂಡಿದೆ. ಆದರೆ ಈ ಗ್ಯಾರಂಟಿಗಳನ್ನು ಅವರು ಪೂರೈಸುತ್ತಿದ್ದಾರೆಯೇ? ಅವರು ನೀಡುತ್ತಿರುವ ಗ್ಯಾರಂಟಿಗಳು ದೇಶವನ್ನು ದಿವಾಳಿ ಮಾಡುತ್ತವೆ. 50 ವರ್ಷದ ಹಿಂದೆ ಬಡತನವನ್ನು ನಿರ್ಮೂಲನೆ ಮಾಡುವುದಾಗಿ ಕಾಂಗ್ರೆಸ್ ಭರವಸೆ ನೀಡಿತ್ತು. ಆದರೆ ಬಡತನ ನಿರ್ಮೂಲನೆ ಬದಲಿಗೆ ಅವರು ಬಡವರಿಗೆ ದ್ರೋಹ ಮಾಡಿದರು. ಬಡವರನ್ನು ದಾರಿ ತಪ್ಪಿಸುವುದು ಮತ್ತು ಅವರಿಗೆ ಅವಕಾಶಗಳು ಸಿಗದಂತೆ ಮಾಡುವುದು ಕಾಂಗ್ರೆಸ್‌ನ ನೀತಿಯಾಗಿದೆ’ ಎಂದು ಕಿಡಿಕಾರಿದರು.
ಪುಷ್ಕರದಲ್ಲಿನ ಬ್ರಹ್ಮ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ!
2014ಕ್ಕೂ ಮುನ್ನ ಜನರು ಭ್ರಷ್ಟಾಚಾರದ ವಿರುದ್ಧ ಬೀದಿಗಿಳಿಯುತ್ತಿದ್ದರು, ದೇಶದ ಪ್ರಮುಖ ನಗರಗಳಲ್ಲಿ ಭಯೋತ್ಪಾದನಾ ದಾಳಿಗಳು ನಡೆಯುತ್ತಿದ್ದವು. ಜೊತೆಗೆ ಕಾಂಗ್ರೆಸ್ ಅಭಿವೃದ್ಧಿಪಡಿಸಿದ್ದ ಭ್ರಷ್ಟಾಚಾರದ ವ್ಯವಸ್ಥೆ, ದೇಶದ ರಕ್ತವನ್ನು ಕುಡಿದು, ಅಭಿವೃದ್ಧಿಯನ್ನು ಕುಂಠಿತಗೊಳಿಸಿತ್ತು. ಆದರೆ ಇದೀಗ ಇಡೀ ವಿಶ್ವ ಭಾರತ ಮತ್ತು ಭಾರತದ ಸಾಮರ್ಥ್ಯದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸುತ್ತಿದೆ. ದೇಶ ಗಂಭೀರ ಬಡತವನ್ನು ನಿರ್ಮೂಲನೆ ಮಾಡುವ ಸನಿಹದಲ್ಲಿದೆ ಎಂದರು.
ಕಾರ್ಮಿಕರಿಗೆ ಅವಮಾನ: ನೂತನ ಸಂಸತ್ ಕಟ್ಟಡದ ಉದ್ಘಾಟನೆಗೆ ಆಗಮಿಸದೇ ವಿಪಕ್ಷಗಳು 60 ಸಾವಿರ ಕಾರ್ಮಿಕರಿಗೆ ಅವಮಾನ ಮಾಡಿವೆ. ಭಾರತಕ್ಕೆ 3 ದಿನದ ಹಿಂದೆ ಭವ್ಯವಾದ ಸಂಸತ್ ಕಟ್ಟಡ ದೊರಕಿದೆ. ಇಂತಹ ಅವಕಾಶ ತಲೆಮಾರಿಗೆ ಒಮ್ಮೆ ಸಿಗುವುದು ಕಷ್ಟ. ಆದರೆ ಇದನ್ನು ಸ್ವಾರ್ಥದ ಪ್ರತಿಭಟನೆಗಾಗಿ ಕಾಂಗ್ರೆಸ್ ಬಲಿ ನೀಡಿತು. ಕಾಂಗ್ರೆಸ್ ಜೊತೆಗೆ ಹಲವು ವಿಪಕ್ಷಗಳು ಸೇರಿ 60 ಸಾವಿರ ಕಾರ್ಮಿಕರು ಮತ್ತು ದೇಶದ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣ ನನ್ನ ಗುರಿ, ಬಡವರ ಹಾಗೂ ದೇಶದ ಘನತೆ ಎತ್ತಿಹಿಡಿಯಲು ಶ್ರಮ: ಮೋದಿ