Rahul Gandhi South America visi: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬ್ರೆಜಿಲ್, ಕೊಲಂಬಿಯಾ ಸೇರಿದಂತೆ ದಕ್ಷಿಣ ಅಮೆರಿಕ ಪ್ರವಾಸ ಕೈಗೊಂಡಿದ್ದಾರೆ. ಈ ಭೇಟಿ ಭಾರತದ ಜಾಗತಿಕ ಸಂಬಂಧಗಳನ್ನು ಬಲಪಡಿಸುವ ಗುರಿ ಹೊಂದಿದೆ ಎಂದು ಕಾಂಗ್ರೆಸ್ ಹೇಳಿದರೆ, ಬಿಜೆಪಿ ಇದನ್ನು 'ಭಾರತ ವಿರೋಧಿ' ಎಂದು ಟೀಕಿಸಿದೆ.

Rahul Gandhi South America visit: ಕಾಂಗ್ರೆಸ್ ನಾಯಕ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ದಕ್ಷಿಣ ಅಮೆರಿಕಾದ ನಾಲ್ಕು ರಾಷ್ಟ್ರಗಳಾದ ಬ್ರೆಜಿಲ್, ಕೊಲಂಬಿಯಾ ಸೇರಿದಂತೆ ಇತರ ದೇಶಗಳಿಗೆ ಭೇಟಿ ನೀಡಿದ್ದಾರೆ. ಈ ಪ್ರವಾಸದಲ್ಲಿ ಅವರು ಜಾಗತಿಕ ನಾಯಕರು, ವಿದ್ಯಾರ್ಥಿಗಳು ಮತ್ತು ಉದ್ಯಮಿಗಳೊಂದಿಗೆ ಸಂವಾದ ನಡೆಸಲಿದ್ದಾರೆ ಎನ್ನಲಾಗಿದೆ. ಆದರೆ, ಈ ಭೇಟಿಯನ್ನು ಬಿಜೆಪಿ 'ಭಾರತ ವಿರೋಧಿ' ಎಂದು ಆರೋಪಿಸಿ ತೀವ್ರವಾಗಿ ಟೀಕಿಸಿದೆ.

Add Asianetnews Kannada as a Preferred SourcegooglePreferred

ಕಾಂಗ್ರೆಸ್ ಪಕ್ಷದ ಮಾಧ್ಯಮ ವಿಭಾಗದ ಉಸ್ತುವಾರಿ ಪವನ್ ಖೇರಾ ಅವರು Xನಲ್ಲಿ ಪೋಸ್ಟ್ ಮಾಡಿರುವಂತೆ, 'ರಾಹುಲ್ ಗಾಂಧಿ ಅವರು ದಕ್ಷಿಣ ಅಮೆರಿಕಾದಲ್ಲಿ ರಾಜಕೀಯ ಮುಖಂಡರು, ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ವ್ಯಾಪಾರ ಸಮುದಾಯದೊಂದಿಗೆ ಮಾತುಕತೆ ನಡೆಸಲಿದ್ದಾರೆ. ಈ ಭೇಟಿಯು ಭಾರತ ಮತ್ತು ದಕ್ಷಿಣ ಅಮೆರಿಕಾದ ಐತಿಹಾಸಿಕ ಬಂಧವನ್ನು ಬಲಪಡಿಸಲಿದ್ದು, ವ್ಯಾಪಾರ, ತಂತ್ರಜ್ಞಾನ, ಸುಸ್ಥಿರತೆ ಮತ್ತು ಜನರಿಂದ ಜನರಿಗೆ ವಿನಿಮಯದಲ್ಲಿ ಹೊಸ ಸಹಕಾರಕ್ಕೆ ದಾರಿ ಮಾಡಿಕೊಡಲಿದೆ' ಎಂದಿದ್ದಾರೆ.

ಜಾಗತಿಕ ನಾಯಕರೊಂದಿಗೆ ಸಂವಾದ:

ರಾಹುಲ್ ಗಾಂಧಿ ಅವರು ಬ್ರೆಜಿಲ್ ಮತ್ತು ಕೊಲಂಬಿಯಾದಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವುದರ ಜೊತೆಗೆ, ಬಹು ದೇಶಗಳ ಅಧ್ಯಕ್ಷರು ಮತ್ತು ಹಿರಿಯ ನಾಯಕರೊಂದಿಗೆ ಸಭೆಗಳನ್ನು ನಡೆಸಿ, ಪ್ರಜಾಪ್ರಭುತ್ವ ಮತ್ತು ಕಾರ್ಯತಂತ್ರದ ಸಂಬಂಧಗಳನ್ನು ಗಟ್ಟಿಗೊಳಿಸಲಿದ್ದಾರೆ. ಅಮೆರಿಕದ ಸುಂಕಗಳ ಹಿನ್ನೆಲೆಯಲ್ಲಿ ಭಾರತದ ವ್ಯಾಪಾರ ವೈವಿಧ್ಯಕರಣಕ್ಕೆ ಈ ಭೇಟಿ ಅವಕಾಶಗಳನ್ನು ತೆರೆಯಲಿದೆ ಎಂದು ಕಾಂಗ್ರೆಸ್ ಪಕ್ಷ ತಿಳಿಸಿದೆ.

ರಾಹುಲ್ ಗಾಂಧಿ ಭಾರತ ವಿರೋಧಿ ಎಂದ ಬಿಜೆಪಿ:

ಭಾರತದ ಮೇಲೆ ಅಮೆರಿಕದ ಸುಂಕ ಬೆದರಿಕೆ ನಡುವೆ ರಾಹುಲ್ ಗಾಂಧಿ ದ.ಅಮೆರಿಕ ಭೇಟಿ ನೀಡಿರುವುದನ್ನ ಖಂಡಿಸಿರುವ ಬಿಜೆಪಿ, ರಾಹುಲ್ ಗಾಂಧಿ ಕಾರ್ಯಕ್ರಮವನ್ನು ಭಾರತದ ವಿರೋಧಿ' ಎಂದು ಕರೆದಿದೆ. ಈ ಆರೋಪಕ್ಕೆ ಕಾಂಗ್ರೆಸ್ ತೀವ್ರವಾಗಿ ಪ್ರತಿಕ್ರಿಯಿಸಿದ್ದು, ಈ ಭೇಟಿಯು ಭಾರತದ ಜಾಗತಿಕ ಉಪಸ್ಥಿತಿಯನ್ನು ಬಲಪಡಿಸುವ ಗುರಿಯನ್ನು ಹೊಂದಿದೆ ಎಂದು ಸಮರ್ಥಿಸಿಕೊಂಡಿದೆ.

ಈ ಭೇಟಿಯು ಭಾರತ ಮತ್ತು ದಕ್ಷಿಣ ಅಮೆರಿಕಾದ ದೀರ್ಘಕಾಲೀನ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸುವ ಜೊತೆಗೆ, ಜಾಗತಿಕ ದಕ್ಷಿಣದ ಒಗ್ಗಟ್ಟಿನ ಸಂಪ್ರದಾಯವನ್ನು ಮುಂದುವರೆಸಲಿದೆ ಎಂದು ಕಾಂಗ್ರೆಸ್ ವಿಶ್ವಾಸ ವ್ಯಕ್ತಪಡಿಸಿದೆ.