'ಸೌತ್-ನಾರ್ತ್' ಕಾರ್ಡ್ ಪ್ಲೇ ಮಾಡಿದ ಕಾಂಗ್ರೆಸ್; ಭಾರತ್ ಜೋಡೋ ಅಂದ್ರೆ ಇದೇನಾ ಎಂದ ಬಿಜೆಪಿ!
ನಾಲ್ಕು ರಾಜ್ಯಗಳ ಪೈಕಿ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಸೋಲು ಕಂಡ ಬೆನ್ನಲ್ಲಿಯೇ ಪಕ್ಷದ ನಾಯಕರು ದಕ್ಷಿಣ ಹಾಗೂ ಉತ್ತರ ಭಾರತದ ಕಾರ್ಡ್ ಪ್ಲೇ ಮಾಡಲು ಆರಂಭಿಸಿದ್ದಾರೆ. ಇದರ ಬೆನ್ನಲ್ಲಿಯೇ ಬಿಜೆಪಿ ಕೂಡ ನೀವು ಹೇಳುವ ಭಾರತ ಜೋಡೋ ಅಂದ್ರೆ ಇದೇನಾ ಎಂದು ಪ್ರಶ್ನೆ ಮಾಡಿದ್ದಾರೆ.
ನವದೆಹಲಿ (ಡಿ.3): ಉತ್ತರ ಭಾರತದ ಪ್ರಮುಖ ರಾಜ್ಯಗಳಾದ ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಪಕ್ಷ ಸೋಲು ಕಾಣುವ ಹಂತ ತಲುಪಿದ ಬೆನ್ನಲ್ಲಿಯೇ ಕಾಂಗ್ರೆಸ್ ನಾಯಕರು, ಸೌತ್ ಇಂಡಿಯಾ-ನಾರ್ತ್ ಇಂಡಿಯಾ ಕಾರ್ಡ್ ಪ್ಲೇ ಮಾಡುವ ಮೂಲಕ ಎದೆ ತಟ್ಟುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಪಕ್ಷದ ಸೋಲಿನ ಸೂಚನೆ ಬೆನ್ನಲ್ಲಿಯೇ, ರಾಹುಲ್ ಗಾಂಧಿಯ ಆಪ್ತ ಪ್ರವೀಣ್ ಚಕ್ರವರ್ತಿ, ಈಗ ದಕ್ಷಿಣ ಹಾಗೂ ಉತ್ತರ ಭಾರತ ಎನ್ನುವ ಲೈನ್ ಇನ್ನಷ್ಟು ಸ್ಪಷ್ಟವಾಗಿ ಹಾಗೂ ಇನ್ನಷ್ಟು ದಪ್ಪವಾಗಿ ಕಂಡಿದೆ ಎಂದು ಬರೆದುಕೊಂಡಿದ್ದು, ಸೌತ್ ವರ್ಸ್ ನಾರ್ತ್ ಎನ್ನುವ ಪೋಸ್ಟರ್‌ಅನ್ನು ಶೇರ್ ಮಾಡಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಹಲವರು, ಉತ್ತರ ಭಾರತದಲ್ಲಿ ನಿಮ್ಮ ಆಟ ನಡೆಯೋದಿಲ್ಲ ಎನ್ನುವ ಕಾರಣಕ್ಕಾಗಿ ದಕ್ಷಿಣ ಹಾಗೂ ಉತ್ತರ ಭಾರತದ ಕಾರ್ಡ್ ಪ್ಲೇ ಮಾಡ್ತಾ ಇದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ.
ರಾಹುಲ್ ಗಾಂಧಿಯ ಆಪ್ತ ಪ್ರವೀಣ್ ಚಕ್ರವರ್ತಿ, ಈಗ ಉತ್ತರ ಹಾಗೂ ದಕ್ಷಿಣ ಭಾರತ ಎಂದು ಕ್ಲೇಮ್ ಮಾಡಲು ಮುಂದಾಗಿದ್ದಾರೆ. ಕಾಂಗ್ರೆಸ್ ಉತ್ತರ ಭಾರತದಲ್ಲಿ ಸೋಲಬಾರದು ಎನ್ನುವ ಕಾರಣಕ್ಕೆ ಈ ರೀತಿ ಹೇಳುತ್ತಿದ್ದೀರಿ. ನಿಮ್ಮ ಮೊಹಬ್ಬತ್ ಕಿ ದುಖಾನ್ ಮತ್ತು ಭಾರತ್ ಜೋಡೋ ಯಾತ್ರೆಯ ಉದ್ದೇಶ ಇದಾ? ಎಂದು ಅಂಕುರ್ ಸಿಂಗ್ ಎನ್ನುವವರು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಒಬ್ಬರು, 1947ರಲ್ಲಿ ಅಧಿಕಾರದ ಸಲುವಾಗಿ ಕಾಂಗ್ರೆಸ್ ಧರ್ಮದ ಆಧಾರದ ಮೇಲೆ ದೇಶವನ್ನು ವಿಭಜನೆ ಮಾಡಿತ್ತು. 2023ರಲ್ಲಿ ನಾರ್ತ್-ಸೌತ್ ಕಾರ್ಡ್ ಪ್ಲೇ ಮಾಡುವ ಮೂಲಕ ಇನ್ನೊಂದು ದೇಶದ ಪ್ಲ್ಯಾನ್ ಮಾಡುತ್ತಿದೆ. ಭಾರತದಲ್ಲಿ ಇರುವ ಕೊನೆಯ ಬ್ರಿಟಿಷ್ ಏಜೆನ್ಸಿ ಕಾಂಗ್ರೆಸ್, ಇದನ್ನು ಜನರು ಅರ್ಥ ಮಾಡಿಕೊಳ್ಳಬೇಕಿದೆ ಎಂದಿದ್ದಾರೆ.
ಇನ್ನು ಕರ್ನಾಟಕದ ಕೃಷಿ ಸಚಿವ ಚೆಲುವರಾಯಸ್ವಾಮಿ ಕೂಡ ಇದೇ ಅರ್ಥದ ಮಾತುಗಳನ್ನು ಆಡಿದ್ದಾರೆ. ಬಿಜೆಪಿ ಕಾಂಗ್ರೆಸ್ ಮುಕ್ತ ಭಾರತ ಮಾಡ್ತೇವೆ ಅಂದಿದ್ರು, ಆದರೀಗ ಬಿಜೆಪಿಯೇ ದಕ್ಷಿಣ ಭಾರತ ಮುಕ್ತವಾಗಿದೆ ಎಂದು ಹೇಳುವ ಮೂಲಕ ಉತ್ತರ ಭಾರತ ಬೇರೆ, ದಕ್ಷಿಣ ಭಾರತ ಬೇರೆ ಎನ್ನುವ ಮಾತು ಆಡಿದ್ದಾರೆ. 'ಳೆದ ಹತ್ತು ವರ್ಷದಿಂದ ಕೇಂದ್ರವನ್ನು ಮೋದಿ ನಾಯಕತ್ವದ ಬಿಜೆಪಿ ಆಳ್ವಿಕೆ ಮಾಡ್ತಾ ಇದೆ. ಇಂಡಿಯಾಕ್ಕೆ ಸ್ವಾತಂತ್ರ್ಯ ತಂದುಕೊಡಲು ಮೂಲತಃ ಹೋರಾಟ ಮಾಡಿದ್ದು ಕಾಂಗ್ರೆಸ್. ಕಾಂಗ್ರೆಸ್ ಅಂದ್ರೆ ಇಂಡಿಯಾ, ಇಂಡಿಯಾ ಅಂದ್ರೇ ಕಾಂಗ್ರೆಸ್. ಇಂಥ ಹೋರಾಟಗಾರರಿರುವ ಕಾಂಗ್ರೆಸ್ ಪಕ್ಷದ ಬಗ್ಗೆ ಪ್ರಧಾನಿ ಲಘುವಾಗಿ ಮಾತನಾಡಿದ್ದರು. ಕಾಂಗ್ರೆಸ್ ವಿರುದ್ಧ ಲಘುವಾಗಿ ಮಾತಾಡಿದ್ದನ್ನು ದಕ್ಷಿಣ ಭಾರತದ ಜನರು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಹೀಗಾಗಿ ಕಾಂಗ್ರೆಸ್ ಮುಕ್ತ ಮಾಡ್ತೇವೆ ಅಂದಿದ್ದ ಬಿಜೆಪಿಯನ್ನೇ ದಕ್ಷಿಣ ಭಾರತದಿಂದ ಕಿತ್ತೊಗೆದಿದ್ದಾರೆ' ಎಂದು ಹೇಳಿದ್ದಾರೆ.
ಸನಾತನ ವಿರೋಧಿಸಿ ಭಾರತದಲ್ಲಿ ರಾಜಕಾರಣ ಮಾಡಲು ಸಾಧ್ಯವಿಲ್ಲ, ಸೋಲಿನ ನಂತರ ಕಾಂಗ್ರೆಸ್ ನಾಯಕನ ಮಾತು!
'ನಾಳೆಯಿಂದ ಈ ಚುನಾವಣೆಯ ಚರ್ಚೆಗಳು ಜಾತಿಯ ವಿಚಾರದಿಂದ ಇನ್ನೊಂದು ಸಂಪೂರ್ಣ ವಿಭಜಕ ವಿಷಯಕ್ಕೆ ವಿಸ್ತರಣೆಯಾಗಲಿದೆ. ಉತ್ತರ ಹಾಗೂ ದಕ್ಷಿಣ ಭಾರತದ ವಿಭಜನೆ. ಇದನ್ನು ಮೊದಲು ಯಾರು ಪ್ರಸ್ತಾಪಿಸಿಬಹುದು' ಎಂದು ಹಿಂದೋಲ್ ಸೆನ್‌ಗುಪ್ತಾ ಟ್ವೀಟ್ ಮಾಡಿದ್ದರು. ಇದಕ್ಕೆ ಕೋಟ್‌ಟ್ವೀಟ್ ಮಾಡಿರುವ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್, 'ಈಗಾಗಲೇ ಆರಂಭವಾಗಿದೆ ಸರ್. ಅವರು ಯಾವತ್ತಿಗೂ ಎರಡು ಕಾರ್ಡ್ ರೆಡಿ ಇಟ್ಟಿರುತ್ತಾರೆ. ಈಗ ಅವರ 2ನೇ ಕಾರ್ಡ್‌ಅನ್ನು ಹೊರಹಾಕಿದ್ದಾರೆ. ಭಾರತ್ ಜೋಡೋ ಹಾಗೂ ಮೊಹಬ್ಬತ್ ಕಿ ದುಖಾನ್ ಡ್ರಾಯಿಂಗ್ ರೂಮ್‌ನಿಂದಲೇ ಇದನ್ನು ತೆಗೆದಿದ್ದಾರೆ' ಎಂದು ಉತ್ತರ ನೀಡಿದ್ದಾರೆ.
'ಈಗ ಹೇಳಿ ಪನೌತಿ ಯಾರು?..' ಕಾಂಗ್ರೆಸ್ ಸೋಲಿನ ಸೂಚನೆ ಬೆನ್ನಲ್ಲಿಯೇ ಪಾಕ್ ಕ್ರಿಕೆಟಿಗನ ಟ್ವೀಟ್ ವೈರಲ್!
ಇಂಡಿ ಒಕ್ಕೂಟ ಜಾತಿಯನ್ನು ವಿಭಜಿಸಲು ಟ್ರೈ ಮಾಡಿತು. ಇದಕ್ಕೆ ಜನರೇ ಉತ್ತರ ನೀಡಿದರು. ಈಗ ಭೌಗೋಳಿಕವಾಗಿ ವಿಭಜಿಸಲು ಪ್ರಯತ್ನ ಮಾಡಿದೆ. ಇದು ಪ್ರೀತಿಯ ಅಂಗಡಿಯಲ್ಲ. ಇದು ದ್ವೇಷದ ಅಂಗಡಿ ಎಂದು ಟ್ವೀಟ್ ಮಾಡಿದ್ದಾರೆ. 'ಮೊದಲು ಭಾರತ ಜೋಡೋ ಎಂದಿದ್ದೀರಿ, ಈಗ ಉತ್ತರ-ದಕ್ಷಿಣ ಭಾರತ ವಿಭಜಿಸಿ ಎನ್ನುತ್ತಿದ್ದೀರಿ. ಮೊದಲ ಕಾರ್ಡ್ ಫೇಲ್ ಆದ ಬಳಿಕ 2ನೇ ಕಾರ್ಡ್ ಪ್ಲೇ ಮಾಡ್ತಿದ್ದೀರಿ. ನೀವೆಂದಿಗೂ ಬದಲಾಗೋದಿಲ್ಲ' ಎಂದು ಕಾಂಗ್ರೆಸ್ ಪಕ್ಷವನ್ನು ಟೀಕೆ ಮಾಡಿದ್ದಾರೆ.
ಆರೆಸ್ಸೆಸ್ ಇಂದ ಬ್ರಿಡ್ಜಿಂಗ್ ಸೌತ್ ಅಭಿಯಾನ: ಇದರ ನಡುವೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಡಿಸೆಂಬರ್ 12 ರಂದು 'ಬ್ರಿಡ್ಜಿಂಗ್ ಸೌತ್' ಎಂಬ ಅಭಿಯಾನವನ್ನು ಪ್ರಾರಂಭಿಸಲಿದೆ. 'ಕಟಿಂಗ್ ಸೌತ್' ಕಾರ್ಯಕ್ರಮವನ್ನು ಕೇರಳ ಮತ್ತು ಚೆನ್ನೈನಲ್ಲಿಒಂದು ಗುಂಪು ನಡೆಸುತ್ತಿದ್ದು, ಅದಕ್ಕೆ ವಿರೋಧವಾಗಿ ಬ್ರಿಡ್ಜಿಂಗ್ ಸೌತ್ ಅಭಿಯಾನ ಆರಂಭಿಸಿದೆ. ಪ್ರಜ್ಞಾ ಪ್ರವಾಹದ ರಾಷ್ಟ್ರೀಯ ಸಂಚಾಲಕ ಮತ್ತು ಆರ್‌ಎಸ್‌ಎಸ್ ಸದಸ್ಯ ಅಖಿಲ ಭಾರತ ಕಾರ್ಯಕಾರಿ ಜೆ.ನಂದಕುಮಾರ್ ಗುರುವಾರ ಈ ಬಗ್ಗೆ ಮಾತನಾಡಿದ್ದು, ಬ್ರಿಡ್ಜಿಂಗ್ ಸೌತ್ ಅನ್ನು ಡಿಸೆಂಬರ್ 12 ರಂದು ದೆಹಲಿಯಲ್ಲಿ ಉದ್ಘಾಟಿಸಲಾಗುವುದು ಎಂದಿದ್ದಾರೆ. ಉತ್ತರದಿಂದ ದಕ್ಷಿಣಕ್ಕೆ ಭಾರತ ಒಂದು, ಸಮುದ್ರದ ತನಕ ಭಾರತ ಒಂದೇ ಎಂದು ವೇದಗಳಲ್ಲಿ ಹೇಳಲಾಗಿದೆ ಎಂದರು. ನಾವು ಸಾಂಸ್ಕೃತಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಒಂದಾಗಿದ್ದೇವೆ. ಆದರೆ ಇತ್ತೀಚೆಗೆ ಒಡೆದು ಆಳುವ ಮನಸ್ಥಿತಿಯ ಕೆಲವು ಅಂಶಗಳು ಭಾರತವನ್ನು ವಿಭಜಿಸಲು ಪ್ರಯತ್ನಿಸುತ್ತಿವೆ. ಕೆಲವು ಸಂಘಟನೆಗಳು ಭಾರತವನ್ನು ವಿಭಜಿಸುವ ಸಂದೇಶಗಳನ್ನು ನೀಡಲು ಅಭಿಯಾನಗಳನ್ನು ಪ್ರಾರಂಭಿಸಿವೆ. ನಾವು ಈ ಮನಸ್ಥಿತಿಯನ್ನು ಎದುರಿಸುತ್ತೇವೆ ಮತ್ತು ನಮ್ಮ ಅಭಿಯಾನದೊಂದಿಗೆ ಪ್ರಚಾರ ಮಾಡುತ್ತೇವೆ ಎಂದಿದ್ದಾರೆ.