Asianet Suvarna News Asianet Suvarna News

ಕಾಂಗ್ರೆಸ್‌ ಕಾರ್ಯಕರ್ತರ ಮೇಲೆ ಪೊಲೀಸರ ಅಮಾನವೀಯ ವರ್ತನೆ: ಬಿರ್ಲಾ, ನಾಯ್ಡುಗೆ ಕಾಂಗ್ರೆಸ್‌ ದೂರು

*  ಉಗ್ರರೊಡನೆ ವರ್ತಿಸುವಂತೆ ಕಾಂಗ್ರೆಸ್‌ ಸಂಸದರೊಂದಿಗೆ ದಿಲ್ಲಿ ಪೊಲೀಸ್‌ ವರ್ತನೆ
* ಕಚೇರಿಗೆ ನುಗ್ಗಿ ಸಂಸದರ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ರಹ
* ಇಂದು ರಾಷ್ಟ್ರಪತಿ ರಾಮ್‌ನಾಥ್‌ ಕೋವಿಂದ್‌ ಭೇಟಿಯಾಗಿ ಮನವಿ ಸಲ್ಲಿಕೆ ನಿರ್ಧಾರ
 

Congress complained to Venkaiah Naidu and Om Birla Against Delhi Police grg
Author
Bengaluru, First Published Jun 17, 2022, 3:00 AM IST

ನವದೆಹಲಿ(ಜೂ.17): ಬುಧವಾರ ಎಐಸಿಸಿ ಕಚೇರಿಯೊಳಗೆ ನುಗ್ಗಿದ್ದೂ ಅಲ್ಲದೆ, ಪ್ರತಿಭಟನಾ ನಿರತ ಸಂಸದರು ಮತ್ತು ಕಾರ್ಯಕರ್ತರ ಮೇಲೆ ದೆಹಲಿ ಪೊಲೀಸರು ಅಮಾನವೀಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿರುವ ಕಾಂಗ್ರೆಸ್‌ ಈ ಕುರಿತು ನಿನ್ನೆ(ಗುರುವಾರ) ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಮತ್ತು ರಾಜ್ಯಸಭೆಯ ಸಭಾಪತಿ ವೆಂಕಯ್ಯ ನಾಯ್ಡು ಅವರಿಗೆ ದೂರು ಸಲ್ಲಿಸಿದೆ. ಅಲ್ಲದೆ ಇಂದು(ಶುಕ್ರವಾರ) ರಾಷ್ಟ್ರಪತಿ ರಾಮ್‌ನಾಥ್‌ ಕೋವಿಂದ್‌ ಅವರನ್ನು ಭೇಟಿಯಾಗಿ ದೂರು ಸಲ್ಲಿಸಲೂ ನಿರ್ಧರಿಸಿದೆ.

ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ ನೇತೃತ್ವದ ನಿಯೋಗವು ಓಂ ಬಿರ್ಲಾರನ್ನು ಮತ್ತು ಮಲ್ಲಿಕಾರ್ಜುನ ಖರ್ಗೆ ನೇತೃತ್ವದ ನಿಯೋಗ ವೆಂಕಯ್ಯನಾಯ್ಡು ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದೆ. ಈ ವೇಳೆ, ‘ದೆಹಲಿ ಪೊಲೀಸರು ಉಗ್ರರೊಂದಿಗೆ ವರ್ತಿಸುವಂತೆ ಪ್ರತಿಭಟನಾ ನಿರತ ಕಾಂಗ್ರೆಸ್‌ ನಾಯಕರು, ಕಾರ್ಯಕರ್ತರ ಜೊತೆ ವರ್ತಿಸಿದ್ದಾರೆ. ಸಂಸತ್ತಿನ ಸದಸ್ಯರಾಗಿ ತಮಗಿರುವ ಸವಲತ್ತುಗಳನ್ನು ಉಲ್ಲಂಘಿಸಲಾಗಿದೆ. ಕಿರುಕುಳ ನೀಡಿದ ಪೊಲೀಸರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಕಾಂಗ್ರೆಸ್‌ ಸಂಸದರು ಆಗ್ರಹಿಸಿದ್ದಾರೆ. ಜೊತೆಗೆ ತಮ್ಮೊಂದಿಗೆ ಪೊಲೀಸರು ಅಸಭ್ಯವಾಗಿ ವರ್ತಿಸಿದ ವಿಡಿಯೋಗಳಿರುವ ಪೆನ್‌ಡ್ರೈವ್‌ ಅನ್ನು ಹಸ್ತಾಂತರಿಸಿದ್ದಾರೆ.

NEWS HOUR: ನ್ಯಾಷನಲ್‌ ಹೆರಾಲ್ಡ್‌ ಪ್ರಕರಣ: ನಾಳೆಯ ವಿಚಾರಣೆಗೆ ವಿನಾಯಿತಿ ಕೇಳಿದ ರಾಹುಲ್‌ ಗಾಂಧಿ

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಚೌಧರಿ ‘ಕಾಂಗ್ರೆಸ್‌ ಪಕ್ಷವನ್ನು ಒಡೆಯಲು ಸಂಚು ರೂಪಿಸಲಾಗಿದೆ. ಯಾವುದೇ ರಾಜಕೀಯ ನಾಯಕನು ಇಷ್ಟೊಂದು ದಿನಗಳ ಕಾಲ ವಿಚಾರಣೆಗೆ ಒಳಗಾಗುವುದನ್ನು ನೋಡಿದ್ದೀರಾ? ನಮ್ಮ ನಾಯಕನನ್ನು ಬೆಂಬಲಿಸಲು, ಒಗ್ಗಟ್ಟು ಸೂಚಿಸಲು ನಾವು ಪ್ರತಿಭಟನೆ ನಡೆಸಿದ್ದೆವು. ಆದರೆ ಪೊಲೀಸರು ಉಗ್ರರೊಂದಿಗೆ ವರ್ತಿಸುವಂತೆ ನಮ್ಮೊಂದಿಗೆ ವರ್ತಿಸಿದ್ದಾರೆ. ಮಹಿಳಾ ಸಂಸದೆಯರ ಮೇಲೂ ಹಲ್ಲೆ ಮಾಡಲಾಗಿದ್ದು, ಅವರ ವಸ್ತ್ರಗಳು ಹರಿದಿದೆ. ಇದು ಅಮೃತ ಕಾಲವೇ? ಮೋದಿ, ಅಮಿತ್‌ ಶಾ ಅಮೃತ ಕಾಲವನ್ನು ವಿಷದ ಕಾಲವಾಗಿ ಪರಿವರ್ತಿಸುತ್ತಿದ್ದಾರೆ’ ಎಂದು ಕಿಡಿಕಾರಿದ್ದಾರೆ.

ಇದೇ ವೇಳೆ ಖರ್ಗೆ ‘ರಾಜ್ಯಸಭಾ ಮುಖ್ಯಸ್ಥ, ಸ್ಪೀಕರ್‌ಗೆ ಪೂರ್ವಭಾವಿಯಾಗಿ ತಿಳಿಸುವ ಮೊದಲೇ ಕಾಂಗ್ರೆಸ್‌ ಸಂಸದರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅವರಿಗೆ ಮಾನಸಿಕ ಕಿರುಕುಳ ನೀಡಿದ್ದಾರೆ. ಸಂಸದರಾಗಿ ನಮಗೆ ನೀಡಲಾಗುವ ಸವಲತ್ತುಗಳ ಉಲ್ಲಂಘನೆಯಾದ ಹಿನ್ನೆಲೆಯಲ್ಲಿ ಕಠಿಣ ಕ್ರಮಕ್ಕೆ ಆಗ್ರಹಿಸುತ್ತೇವೆ’ ಎಂದು ಹೇಳಿದ್ದಾರೆ.
 

Follow Us:
Download App:
  • android
  • ios