ಅಮೃತ್‌ಸರ್ (ಮಾ.01): ಇಡೀ ದೇಶ ಕಾತುರದಿಂದ ಕಾಯುತ್ತಿದ್ದ ಕ್ಷಣ ಕೊನೆಗೂ ಬಂದಿದೆ. ಮೂರು ದಿನ ಪಾಕ್ ವಶದಲ್ಲಿದ್ದ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ಕೊನೆಗೂ ಸುರಕ್ಷಿತವಾಗಿ ಭಾರತ ತಲುಪಿದ್ದಾರೆ. ಹಸ್ತಾಂತರ ಪ್ರಕ್ರಿಯೆ ವಿಳಂಬವಾಗಬಹುದು ಎಂಬ ಕಾರಣಕ್ಕೆ ಭಾರತ ಬೀಟಿಂಗ್ ರೀಟ್ರೀಟನ್ನು ಕ್ಯಾನ್ಸಲ್ ಮಾಡಿತ್ತು. ಆದರೆ, ಪಾಕಿಸ್ತಾನ ರೀಟ್ರೀಟ್ ಪ್ರಕ್ರಿಯೆಯನ್ನು ಪೂರೈಸಿದ ಬಳಿಕವೇ ಭಾರತೀಯ ವೀರಪುತ್ರನನ್ನು ಪಾಕಿಸ್ತಾನ ತನ್ನ ಗಡಿ ದಾಟಿಸಿ,ಭಾರತದ ನೆಲಕ್ಕೆ ತಲುಪಿಸಿತು.

ವಾಘಾ ಗಡಿ ಮೂಲಕ ಭಾರತ ಪ್ರವೇಶಿಸಿದ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಭಾರತೀಯ ವಾಯುಸೇನೆಯ ಅಧಿಕಾರಿಗಳ ತಂಡ ಬರಮಾಡಿಕೊಂಡಿತು. ಈ ವೇಳೆ ಅಭಿನಂದನ್ ತಂದೆ ನಿವೃತ್ತ ಏರ್ ಮಾರ್ಷಲ್ ಸಿಂಹಕುಟ್ಟಿ ವರ್ತಮಾನ್ ಮತ್ತು ತಾಯಿ ಡಾ.ಶೋಭಾ ವರ್ತಮಾನ್ ಸಹ ಹಾಜರಿದ್ದರು.

ಇನ್ನು ಅಭಿನಂದನ್ ಬರುವಿಕೆಯನ್ನೇ ಕಾಯುತ್ತಿದ್ದ ಸಾವಿರಾರು ಭಾರತೀಯರು ಅಭಿನಂದನ್ ಭಾರತದ ನೆಲಕ್ಕೆ ಕಾಲಿಡುತ್ತಿದ್ದಂತೇ ಹರ್ಷೋದ್ಘಾರ ಮಾಡಿದರು. ತ್ರಿವರ್ಣ ಧ್ವಜಗಳು ಆಗಸದಲ್ಲಿ ರಾರಾಜಿಸಿದವು. ಅಭಿನಂದನ್ ಜಿಂದಾಬಾದ್ ಘೋಷಣೆಗಳು ಮುಗಿಲು ಮುಟ್ಟಿದವು.

ಸದ್ಯ ಅಭಿನಂದನ್ ವಾಯುಸೇನೆ ಸುಪರ್ದಿಯಲ್ಲಿದ್ದು, ವಾಘಾದಿಂದ ಅವರನ್ನು ನವದೆಹಲಿಗೆ ಕರೆತರಲಾಗುವುದು ಎಂದು ಮೂಲಗಳು ತಿಳಿಸಿವೆ.

ಭಾರತ-ಪಾಕ್ ಗಡಿ ಪ್ರದೇಶದಲ್ಲಿ ನಡೆದ ಹೋರಾಟದಲ್ಲಿ, ವಿಮಾನ ಪತನಗೊಂಡ ಪರಿಣಾಮ ಅಭಿನಂದನ್ ಪಾಕಿಸ್ತಾನದ ಗಡಿಗೆ ಹೋಗಿ ಬಿದ್ದಿದ್ದರು. ಅಲ್ಲಿ ಪಾಕಿಸ್ತಾನ ಸೇನೆ ಅವರನ್ನು ವಶಕ್ಕೆ ಪಡೆದಿತ್ತು. ಅಭಿನಂದನ್ ಅವರನ್ನು ಬಿಡುಗಡೆಗೊಳಿಸುವಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೆಚ್ಚಿದ್ದರಿಂದ, ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಶಾಂತಿ ದ್ಯೋತಕವಾಗಿ ತನ್ನ ವಶದಲ್ಲಿರುವ ಅಭಿನಂದನ್ ಅವರನ್ನು ಬಿಡುಗಡೆಗೊಳಿಸುವುದಾಗಿ ಸಂಸತ್ತಿನಲ್ಲಿಯೇ ಫೆ.28ರಂದು ಘೋಷಿಸಿದ್ದರು.