ನವದೆಹಲಿ[ಮಾ.01]: ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ಇಂದು ಸ್ವದೇಶಕ್ಕೆ ಮರಳಿ ಬರಲಿದ್ದಾರೆ. ಭಾರತದ ಗಡಿ ಪ್ರವೇಶಿಸಿದ್ದ ಪಾಕ್ ಯುದ್ಧ ವಿಮಾನಗಳನ್ನು ಹೊಡೆದೋಡಿಸುವ ಸಂದರ್ಭದಲ್ಲಿ ಭಾರತೀಯ ವಾಯುಸೇನೆಯ ಮಿಗ್ 21 ಪತನಗೊಂಡಿದ್ದು, ಈ ವಿಮಾನ ಚಲಾಯಿಸುತ್ತಿದ್ದ ಪೈಲಟ್ ಅಭಿನಂದನ್ ಪಾಕ್ ಗಡಿಯೊಳಗೆ ಬಿದ್ದಿದ್ದರು. ಹೀಗಾಗಿ ಪಾಕ್ ಸೇನೆ ಅವರನ್ನು ಬಂಧಿಸಿತ್ತು. ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಭಾರತವು ಪಾಕ್ ಗೆ ಸಮನ್ಸ್ ಜಾರಿಗೊಳಿಸಿ, ಅಭಿ ಬಿಡುಗಡೆಗೆ ತೀವ್ರ ಒತ್ತಡ ಹೇರಿತ್ತು. ಕೊನೆಗೂ ಒತ್ತಡಕ್ಕೆ ಮಣಿದ ಪಾಕ್ ವಿಂಗ್ ಕಮಾಂಡರ್ ಅಭಿನಂದನ್ ರನ್ನು ಇಂದು ಮಾ. 1ರಂದು ಬಿಡುಗಡೆಗೊಳಿಸಲಿದೆ.

ಪಾಕಿಗಳಿಂದಲೇ ತಾನು ಬಿದ್ದ ಸ್ಥಳದ ಮಾಹಿತಿ ಪಡೆದ ಯೋಧ: ರಹಸ್ಯ ಕಾಪಾಡಲು ಹೀಗೆ ಮಾಡಿದ್ದರು!

ಭಾರತವು ತನ್ನ ವಾಯಯುಸೇನೆಯ ಪೈಲಟ್ ಅಭಿನಂದನ್ ರನ್ನು ಯಾವುದೇ ಷರತ್ತುಗಳನ್ನು ವಿಧಿಸದೆ ಬಿಡುಗಡೆಗೊಳಿಸಲು ಗುರುವಾರ ಖಡಕ್ ಎಚ್ಚರಿಕೆ ನೀಡಿತ್ತು. ಇದಾದ ಕೆಲವೇ ಸಮಯದಲ್ಲಿ ಪಾಕಿಸ್ತಾನವು ಶಾಂತಿಯ ಸಂಕೇತವಾಗಿ ಅಭಿನಂದನ್ ರನ್ನು ಬಿಡುಗಡೆಗೊಳಿಸುವುದಾಗಿ ತಿಳಿಸಿದೆ. ಪಾಕ್ ಪ್ರಧಾನಿ ಇಮ್ರಾನ್ ಖಾನ್ ಈ ಘೋಷಣೆ ಮಾಡುತ್ತಿದ್ದಂತೆಯೇ ಭಾರತದಾದ್ಯಂತ ಸಂಭ್ರಮ ಮನೆ ಮಾಡಿದ್ದು, ಇಡೀ ದೇಶವೇ ಈ ಧೀರ ಯೋಧನ ಆಗಮನಕ್ಕಾಗಿ ಹಾತೊರೆಯುತ್ತಿದೆ. 

ಫಲಿಸಿತು ಭಾರತೀಯರ ಪೂಜಾಫಲ: ಅಭಿನಂದನ್ ನಾಳೆ ಭಾರತಕ್ಕೆ!

ಹೀಗಿರುವಾಗಲೇ ಅತ್ತ ಅಭಿನಂದನ್ ತಂದೆ ತಾಯಿ ಕೂಡಾ ತನ್ನ ಮಗನನ್ನು ಬರ ಮಾಡಿಕೊಳ್ಳಲು ಚೆನ್ನೈನಿಂದ ದೆಹಲಿ ವಿಮಾನವೇರಿದ್ದರು. ವಿಮಾನ ರಾಷ್ಟ್ರ ರಾಜಧಾನಿಗೆ ತಲುಪುತ್ತಿದ್ದಂತೆಯೇ ಭಾರತದ ಈ ಧೀರನಿಗೆ ಜನ್ಮ ನೀಡಿದ ತಂದೆ ತಾಯಿಗೆ ಜನರೆಲ್ಲರೂ ಎದ್ದು ನಿಂತು ಚಪ್ಪಾಳೆ ಮೂಲಕ ಸ್ವಾಗತಿಸಿ ಗೌರವ ಸಲ್ಲಿಸಿದ್ದಾರೆ. ರಾತ್ರಿ ಸುಮಾರು 1.30ಗೆ ದೆಹಲಿ ತಲುಪಿದ ಅಭಿನಂದನ್ ತಂದೆ ತಾಯಿ ಬಳಿಕ ಫ್ಲೈಟ್ ಬದಲಾಯಿಸಿ ಅಮೃತಸರಕ್ಕೆ ತೆರಳಿದ್ದಾರೆ. ಇನ್ನು ಅಭಿನಂದನ್ ಸೈನಿಕರ ಕುಟುಂಬದಿಂದಲೆ ಬಂದವರೆಂಬುವುದು ಮತ್ತೊಂದು ಹೆಮ್ಮೆಯ ವಿಚರ. ಅವರ ತಂದೆ ಎಸ್. ವರ್ತಮಾನ್ ಭಾರತೀಯ ವಾಯುಪಡೆಯ ನಿವೃತ್ತ ಏರ್ ಮಾರ್ಷಲ್.

ವಿಂಗ್ ಕಮಾಂಡರ್ ಅಭಿನಂದನ್ ಬಿಡುಗಡೆಯಿಂದ ಉಭಯ ದೇಶಗಳ ನಡುವೆ ಮೂಡಿರುವ ಮನಸ್ತಾಪ ಕೊಂಚ ಮಟ್ಟಿಗೆ ಕಡಿಮೆಯಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ. ದೇಶದಾದ್ಯಂತ ವಿಂಗ್ ಕಮಾಂಡರ್ ಅಭಿನಂದನ್ ಸುರಕ್ಷಿತವಾಗಿ ಭಾರತಕ್ಕೆ ಮರಳಲಿ ಎಂದು ಜನರು ಪ್ರಾರ್ಥಿಸಿದ್ದರು. ಈ ಪ್ರಾರ್ಥನೆಯ ಫಲ ಎಂಬಂತೆ ಇಂದು ಅಭಿನಂದನ್ ತವರು ನಾಡಿಗೆ ಮರಳಲಿದ್ದಾರೆ. ಇವರನ್ನು ಸ್ವಾಗತಿಸಲು ವಾಘಾ ಬಾರ್ಡರ್ ನಲ್ಲಿ ಅಸಂಖ್ಯಾತ ಜನರು ಸೇರಿದ್ದಾರೆ.