ಕೊಯಂಬತ್ತೂರು[ನ.28]: ಯುವಕರನ್ನು ಟಿಕ್ ಟಾಕ್ ಗೀಳು ಹಿಡಿದಿದ್ದು, ಅನೇಕ ಮಂದಿ ತಾವು ಸ್ಟಾರ್ ಆಗಬೇಕೆಂಬ ಹುಚ್ಚಾಸೆಯಿಂದ ಅಪಾಯವನದ್ನು ಮೈಮೇಲೆ ಎಳೆದುಕೊಳ್ಳುತ್ತಾರೆ. ಈಗಾಗಲೇ ಅನೇಕ ಮಂದಿ ಟಿಕ್ ಟಾಕ್ ಗೆ ಬಲಿಯಾಗಿದ್ದು, ಕೊಯಂಬತ್ತೂರಿನ 22 ವರ್ಷದ ಯುವಕನೂ ಈ ಪಟ್ಟಿಗೆ ಸೇರ್ಪಡೆಯಾಗಿದ್ದಾನೆ.

ನವೆಂಬರ್ 21ರಂದು ಈ ಘಟನೆ ನಡೆದಿದ್ದು, ಕೊಯಂಬತ್ತೂರಿನ 22 ವರ್ಷದ ಯುವಕ ವಿಘ್ನೇಶ್ವರನ್ ಟಿಕ್ ಟಾಕ್ ಗೀಳಿಗೆ ಬಲಿಯಾಗಿದ್ದಾನೆ. ಈತ ಗೂಳಿಯೊಂದಿಗೆ ವಿಡಿಯೋ ಚಿತ್ರೀಕರಿಸುವ ವೇಳೆ ಕೆರೆಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾನೆ.

ಪ್ರಕರಣ ಸಂಬಂಧ ಮಾಹಿತಿ ನೀಡಿರುವ ಪೊಲೀಸರು 'ವಿಘ್ನೇಶ್ವರನ್ ಗೂಳಿ ಸಾಕಣಿಕೆಯಲ್ಲಿ ಅತ್ಯಂತ ಆಸಕ್ತಿ ಹೊಂದಿದ್ದ. ಅಲ್ಲದೇ ಈತ ಅನೇಕ ಗೂಳಿಗಳನ್ನು ಸಾಕಿಕೊಂಡಿದ್ದ. ರೇಕ್ಲಾ ರೇಸ್ ಹಾಗೂ ಜಲ್ಲಿಕಟ್ಟಿನಲ್ಲಿ ಪಾಲ್ಗೊಳ್ಳುವ ಸಲುವಾಗಿಯೇ ಈತ ಅವುಗಳ ವಿಶೇಷ ಆರೈಕೆ ಮಾಡುತ್ತಿದ್ದ. ಇಷ್ಟೇ ಅಲ್ಲದೇ ಮನರಂಜನೆ ಆ್ಯಪ್ ಟಿಕ್ ಟಾಕ್ ನಲ್ಲೂ ಈತ ಗೂಳಿಗಳೊಂದಿಗಿನ ವಿಡಿಯೋ ಮೂಲಕ ಫೇಮಸ್ ಆಗಿದ್ದ' ಎಂದಿದ್ದಾರೆ.

ಘಟನೆಯ ಕುರಿತು ಮಾಹಿತಿ ನೀಡಿರುವ ಪೊಲೀಸರು 'ನವೆಂಬರ್ 20ರಂದು ವಿಘ್ನೇಶ್ವರನ್ ಹಾಗೂ ಆತನ ಗೆಳೆಯರಾದ ಭುವನೇಶ್ವರನ್, ಪರಮೇಶ್ವರನ್ ಹಾಗೂ ಮಾಧವನ್ ಗೂಳಿ ಸ್ನಾನ ಮಾಡಿಸುವ ಸಲುವಾಗಿ ಕೆರೆ ಬಳಿ ತೆರಳಿದ್ದರು. ಈ ವೇಳೆ ಗೂಳಿಯೊಂದಿಗೆ ವಿಡಿಯೋವೊಂದನ್ನು ಚಿತ್ರೀಕರಿಸಿ ಟಿಕ್ ಟಾಕ್ ಗೆ ಅಪ್ಲೋಡ್ ಮಾಡಿದ್ದರು. ಈ ವಿಡಿಯೋ 1 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದರು. ಹೀಗಾಗಿ ಇದು ಅವರಿಗೆ ಮತ್ತೊಂದು ವಿಡಿಯೋ ಮಾಡಲು ಪ್ರೇರೇಪಿಸಿತು' ಎಂದಿದ್ದಾರೆ.

ಹಿಂದಿನ ದಿನದಂತೆ ಮರುದಿನವೂ ಅವರು ವಿಡಿಯೋ ಮಾಡುವ ಸಲುವಾಗಿ ಗೂಳಿಯೊಂದಿಗೆ ಮತ್ತೆ ಕೆರೆ ಬಳಿ ತೆರಳಿದ್ದರು. ವಿಘ್ನೇಶ್ವರನ್ ಕಳೆದ 6 ದಿನಗಳ ಹಿಂದೆ ತನ್ನ ಟಿಕ್ ಟಾಕ್ ಪೇಜ್ ನಲ್ಲಿ ವಿಡಿಯೋ ಒಂದನ್ನು ಅಪ್ಲೋಡ್ ಮಾಡಿದ್ದು, ಇದರಲ್ಲಿ ಗೂಳಿ ತನ್ನ ಬೆನ್ನಿನ ಮೇಲೆ ಕುಳಿತಿದ್ದ ವ್ಯಕ್ತಿ[ವಿಘ್ನೇಶ್ವರನ್]ಯನ್ನು ಜಾಡಿಸಿ ನೀರಿಗೆ ಎಸೆಯುವುದನ್ನು ನೋಡಬಹುದಾಗಿದೆ. ಈಜು ತಿಳಿಯದ ವಿಘ್ನೇಶ್ವರನ್ ಒದ್ದಾಡಲಾರಂಭಿಸಿದ್ದಾನೆ. ಈ ವೇಳೆ ದೂರದಲ್ಲಿ ನಿಂತು ವಿಡಿಯೋ ಚಿತ್ರೀಕರಿಸುತ್ತಿದ್ದ ಆತನ ಗೆಳೆಯರು ಸಹಾಯಕ್ಕೆ ಧಾವಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಪರಿಸ್ಥಿತಿ ಕೈ ಮೀರಿದ್ದು, ವಿಘ್ನೇಶ್ವರನ್ ನೀರಿನಾಳ ಸೇರಿದ್ದಾನೆ. 

ವಿಘ್ನೇಶ್ವರನ್ ಗೆಳೆಯರು ಕೂಡಲೇ ಅಗ್ನಿಶಾಮಕ ದಳ ಸಿಬ್ಬಂದಿಗೆ ಮಾಹಿತಿ ರವಾನಿಸಿದ್ದಾರೆ. ಸ್ಥಳಕ್ಕಾಗಮಿಸಿದ ಸಿಬ್ಬಂದಿ ತೀವ್ರ ಹುಡುಕಾಟ ನಡೆಸಿ ವಿಘ್ನೇಶ್ವರನ್ ಮೇತದೇಹ ಹೊರ ತೆಗೆದಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.