* ಕಲ್ಲಿದ್ದಲು ಪೂರೈಕೆ ಹೆಚ್ಚಳ* ಮಂಗಳವಾರ ಉಷ್ಣ ಸ್ಥಾವರಗಳಿಗೆ 20 ಲಕ್ಷ ಟನ್‌ ಪೂರೈಕೆ* ವಿದ್ಯುತ್‌ ಉತ್ಪಾದನೆಗೆ ಬೇಕಾದಷ್ಟು ರವಾನೆ: ಸಚಿವ ಜೋಶಿ

ನವದೆಹಲಿ(ಅ.14): ಕಲ್ಲಿದ್ದಲು ಸಮಸ್ಯೆ(Coal Crisis) ಪರಿಹಾರಕ್ಕೆ ಪ್ರಧಾನಿ ನರೇಂದ್ರ ಮೋದಿ(Narendra Modi), ಕೇಂದ್ರ ಗೃಹ ಸಚಿವ ಅಮಿತ್‌ ಶಾ(Amit Shah) ಮತ್ತು ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಖಾತೆ ಸಚಿವ ಪ್ರಹ್ಲಾದ್‌ ಜೋಶಿ(Pralhad Joshi) ಪ್ರಯತ್ನಗಳ ಬೆನ್ನಲ್ಲೇ, ಮಂಗಳವಾರ ದೇಶಾದ್ಯಂತ ಇರುವ ಶಾಖೋತ್ಪನ್ನ ವಿದ್ಯುತ್‌ ಸ್ಥಾವರಗಳಿಗೆ 20 ಲಕ್ಷ ಟನ್‌ಗಳಷ್ಟು ಕಲ್ಲಿದ್ದಲು ಪೂರೈಕೆಯಾಗಿದೆ(Coal). ಇದು ಕಲ್ಲಿದ್ದಲಿನ ಕೊರತೆಯಿಂದಾಗಿ ವಿದ್ಯುತ್‌ ಕಡಿತ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ತಲುಪಿದ್ದ ರಾಜ್ಯ ಸರ್ಕಾರಗಳಿಗೆ ತುಸು ನೆಮ್ಮದಿ ತಂದಿದೆ.

ಈ ಕುರಿತು ಟ್ವೀಟರ್‌ ಮೂಲಕ ಮಾಹಿತಿ ನೀಡಿರುವ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ‘ಕೋಲ್‌ ಇಂಡಿಯಾ(Coal India) ಸೇರಿದಂತೆ ವಿವಿಧ ಮೂಲಗಳಿಂದ ಉಷ್ಣ ವಿದ್ಯುತ್‌ ಸ್ಥಾವರಗಳಿಗೆ(Power Plant) ಮಂಗಳವಾರ 20 ಲಕ್ಷ ಟನ್‌ ಕಲ್ಲಿದ್ದಲು ಪೂರೈಸಲಾಗಿದೆ. ಎಲ್ಲಾ ಉಷ್ಣ ವಿದ್ಯುತ್‌ ಸ್ಥಾವರಗಳಲ್ಲೂ ಅಗತ್ಯ ಪ್ರಮಾಣದ ಸಂಗ್ರಹ ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ನಾವು ಅವುಗಳಿಗೆ ಮಾಡುವ ಪೂರೈಕೆ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸಲಿದ್ದೇವೆ. ಕಲ್ಲಿದ್ದಲು ಆಧರಿತ ಉಷ್ಣಸ್ಥಾವರ ಮತ್ತು ಜನಸಾಮಾನ್ಯರಿಗೆ ನಾವು ಭರವಸೆ ನೀಡುವುದೆಂದರೆ, ವಿದ್ಯುತ್‌ ಉತ್ಪಾದನೆಗೆ ಎಷ್ಟು ಅಗತ್ಯವೋ ಅಷ್ಟು ಪ್ರಮಾಣದ ಕಲ್ಲಿದ್ದಲು ಪೂರೈಸಲು ನಮ್ಮ ಸಚಿವಾಲಯ ಬದ್ಧ’ ಎಂದು ಹೇಳಿದ್ದಾರೆ.

Scroll to load tweet…

ಇನ್ನು ಈ ಬಗ್ಗೆ ಮಾಹಿತಿ ನೀಡಿದ ಅಧಿಕಾರಿಗಳು, ರಾಜ್ಯಗಳ ಉಷ್ಣ ವಿದ್ಯತ್‌ ಸ್ಥಾವರಗಳಿಗೆ ಕಳೆದೆರಡು ದಿನಗಳಿಂದ 16.2 ಲಕ್ಷ ಟನ್‌ನಷ್ಟುಕಲ್ಲಿದ್ದಲು ಪೂರೈಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ನಿತ್ಯ ಸರಾಸರಿ 18.8 ಲಕ್ಷ ಟನ್‌ನಷ್ಟುಕಲ್ಲಿದ್ದಲು ಪೂರೈಸಲಾಗುತ್ತದೆ. ಇದು ಮಾಸಿಕ ಸರಾಸರಿ 17.5 ಲಕ್ಷ ಟನ್‌ಗಳಿಗಿಂತಲೂ ಹೆಚ್ಚು ಎಂದರು. ಅಲ್ಲದೆ ದಸರಾ ಬಳಿಕ ಹಲವು ಕಾರ್ಮಿಕರು ಕೆಲಸಕ್ಕೆ ಮರಳಲಿದ್ದು, ಕಲ್ಲಿದ್ದಲು ಉತ್ಪಾದನೆ ಮತ್ತಷ್ಟುಹೆಚ್ಚಲಿದೆ ಎಂದು ಹೇಳಿದರು.