* ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣ* ಮಮತಾ ಸೋದ​ರ​ಳಿ​ಯ​ಗೆ ಇ.ಡಿ ಸಮನ್ಸ್‌

ನವದೆಹಲಿ(ಆ.29): ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಡಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋದರಳಿಯ, ಸಂಸದ ಅಭಿಷೇಕ್‌ ಬ್ಯಾನರ್ಜಿ ಮತ್ತು ಅವರ ಪತ್ನಿ ರುಜಿರಾ ಬ್ಯಾನರ್ಜಿಗೆ ಜಾರಿ ನಿರ್ದೇಶನಾಲಯ (ಇ.ಡಿ) ಸಮನ್ಸ್‌ ಜಾರಿ ಮಾಡಿದೆ. ಅಭಿಷೇಕ್‌ ಬ್ಯಾನರ್ಜಿ ತೃಣಮೂಲ ಕಾಂಗ್ರೆಸ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ ಆಗಿದ್ದಾರೆ.

ಪ್ರಕರಣದ ತನಿಖಾ ಅಧಿಕಾರಿಯ ಮುಂದೆ ಸೆಪ್ಟೆಂಬರ್‌ 6ರಂದು ವಿಚಾರಣೆಗೆ ಹಾಜರಾಗುವಂತೆ ಅಭಿಷೇಕ್‌ ಬ್ಯಾನರ್ಜಿಗೆ ಸಮನ್ಸ್‌ ಜಾರಿ ಮಾಡಿದ್ದರೆ, ಅವರ ಪತ್ನಿಗೆ ಸೆಪ್ಟಂಬರ್‌ 1ರಂದು ಹಾಜರಾಗುವಂತೆ ಹೇಳಿದೆ. ಪೂರ್ವ ಕಲ್ಲಿದ್ದಲು ಪ್ರಾಧಿಕಾರದಲ್ಲಿ ಅಕ್ರಮ ನಡೆದಿದೆ ಎಂದು ಕಳೆದ ವರ್ಷ ನವೆಂಬರ್‌ನಲ್ಲಿ ಸಿಬಿಐ ಪ್ರಕರಣ ದಾಖಲಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಇಬ್ಬರನ್ನು ಬಂಧಿಸಲಾಗಿದೆ.

ಮಮತಾ ಕಿಡಿ:

ಬಿಜೆಪಿ ಸರ್ಕಾರ ಕೇಂದ್ರದ ಏಜೆನ್ಸಿಗಳನ್ನು ನಮ್ಮ ವಿರುದ್ಧ ಬಳಸಿಕೊಳ್ಳುತ್ತಿದೆ ಎಂದು ಮಮತಾ ಬ್ಯಾನರ್ಜಿ ತಮ್ಮ ಅಳಿಯನಿಗೆ ಸಮನ್ಸ್‌ ನೀಡಿದ ನಂತರ ಕೇಂದ್ರ ಸರ್ಕಾರ ಮೇಲೆ ಹರಿಹಾಯ್ದಿದ್ದಾರೆ. ‘ಜಾರಿ ನಿರ್ದೇಶನಾಲಯವನ್ನು ಏಕೆ ನಮ್ಮ ವಿರದ್ಧ ಛೂಬಿಡುತ್ತಿದ್ದೀರಿ. ನಿಮ್ಮ ಹಲವಾರು ಪ್ರಕರಣಗಳು ನಮಗೂ ಗೊತ್ತಿದೆ. ಗುಜರಾತ್‌ನ ಇತಿಹಾಸ ಗೊತ್ತಿದೆ. ಇದರ ವಿರುದ್ಧ ನಾವು ಹೋರಾಡುತ್ತೇವೆ. ಬಂಗಾಳದ ಬಿಜೆಪಿ ನಾಯಕರೂ ಕಲ್ಲಿದ್ದಲು ಲೂಟಿ ಮಾಡಿದ್ದಾರೆ. ಕೇಂದ್ರ ದೇಶ ಮಾರಲು ಹೊರಟಿದೆ’ ಎಂದು ಅವರು ಹೇಳಿದ್ದಾರೆ.