India to import coal: ಬರೋಬ್ಬರಿ ಏಳು ವರ್ಷಗಳ ನಂತರ ಭಾರತ ಕಲ್ಲಿದ್ದಲು ಆಮದಿಗೆ ಮುಂದಾಗಿದೆ. ಮೂರನೇ ತ್ರೈಮಾಸಿಕದಲ್ಲಿ ವಿದ್ಯುತ್‌ ಉತ್ಪಾದನೆಗೆ ಕಲ್ಲಿದ್ದಲು ಕೊರತೆ ಎದುರಾಗಲಿದೆ, ಈ ಕಾರಣಕ್ಕಾಗಿಯೇ ಆಮದು ಮಾಡಿಕೊಳ್ಳಲಾಗುವುದು ಎಂದು ಕೋಲ್‌ ಇಂಡಿಯಾ ತಿಳಿಸಿದೆ.

ನವದೆಹಲಿ: ಪ್ರಪಂಚದ ಅತಿದೊಡ್ಡ ಕಲ್ಲಿದ್ದಲು ಉತ್ಪಾದನಾ ಸಂಸ್ಥೆ ಕೋಲ್‌ ಇಂಡಿಯಾ (Coal India) ಏಳು ವರ್ಷಗಳಲ್ಲಿ ಮೊದಲ ಬಾರಿಗೆ ಕಲ್ಲಿದ್ದಲು ಆಮದು ಮಾಡಿಕೊಳ್ಳಲು ನಿರ್ಧರಿಸಿದೆ. ಈ ಬಗ್ಗೆ ರಾಯ್ಟರ್ಸ್‌ ಶನಿವಾರ ವರದಿ ಮಾಡಿದ್ದು, ಕಲ್ಲಿದ್ದಲು ಕೊರತೆ ಹಿನ್ನೆಲೆಯಲ್ಲಿ ಇಂಧನ ಇಲಾಖೆ ಕಲ್ಲಿದ್ದಲು ಆಮದು ಮಾಡಿಕೊಳ್ಳಲು (India to import coal after 7 years) ಮುಂದಾಗಿದೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಏಪ್ರಿಲ್‌ ತಿಂಗಳಲ್ಲಿ ಒಂದೆಡೆ ದೇಶಾದ್ಯಂತ ವಿಪರೀತ ಸೆಖೆ ಮತ್ತೊಂದೆಡೆ ಇಡೀ ದೇಶಕೆ ನೀಡುವಷ್ಟು ವಿದ್ಯುತ್‌ ಉತ್ಪಾದನೆಗೆ ಬೇಕಾದ ಕಲ್ಲಿದ್ದಲು ಕೊರತೆಯಿಂದ ಸಾಕಷ್ಟು (Coal shortage in India) ಸಮಸ್ಯೆ ಎದುರಾಗಿತ್ತು. ಮತ್ತೆ ಅದೇ ಸ್ಥಿತಿ ಬರುವ ಮುನ್ನ ಕಲ್ಲಿದ್ದಲು ಆಮದು ಮಾಡಿಕೊಳ್ಳಲು ಕೋಲ್‌ ಇಂಡಿಯಾ ಈಗ ಮುಂದಾಗಿದೆ. 

2015ರ ನಂತರ ಮೊದಲ ಬಾರಿಗೆ ಕಲ್ಲಿದ್ದಲನ್ನು ಭಾರತ ಖರೀಸಿದಲಿದೆ. ಏಳು ವರ್ಷಗಳಿಂದ ಭಾರತ ಕಲ್ಲಿದ್ದಲನ್ನು ಆಮದು ಮಾಡಿಕೊಂಡಿರಲಿಲ್ಲ. ಕೇಂದ್ರ ಮತ್ತು ಒಕ್ಕೂಟ ರಾಜ್ಯಗಳು ಕಲ್ಲಿದ್ದಲು ದಾಸ್ತಾನು ಮಾಡಲು ಯತ್ನಿಸುತ್ತಿದ್ದರೂ, ಅಗತ್ಯವಿದ್ದಷ್ಟು ಕಲ್ಲಿದ್ದಲು ದೇಶದಲ್ಲಿ ಉತ್ಪಾದನೆಯಾಗುತ್ತಿಲ್ಲ. ಏಪ್ರಿಲ್‌ ತಿಂಗಳಲ್ಲಿ ಹಿಂದೆಂದೂ ಇರದಷ್ಟು ಪವರ್‌ ಕಟ್‌ಗೆ ಇಡೀ ದೇಶ ಸಾಕ್ಷಿಯಾಗಿತ್ತು. ಈ ಸಮಸ್ಯೆ ಮತ್ತೆ ತಲೆದೂರದಂತೆ ತಡೆಯಲು ಸಾಕಷ್ಟು ಕಲ್ಲಿದ್ದಲನ್ನು ಆಮದು ಮಾಡಿ ಸಂಗ್ರಹಿಸಿಡುವ ಅನಿವಾರ್ಯತೆಯಿದೆ. 

ಮೇ 28ರಂದು ಹೊರಡಿಸಿದ ಇಂಧನ ಇಲಾಖೆ (Power Ministry) ಪತ್ರದಲ್ಲಿ, "ಕೋಲ್‌ ಇಂಡಿಯಾ ಕಲ್ಲಿದ್ದಲನ್ನು ಆಮದು ಮಾಡಿಕೊಂಡು ರಾಜ್ಯಾವಾರು ವಿದ್ಯುತ್‌ ಉತ್ಪಾದನಾ ಘಟಕಗಳಿಗೆ ಪೂರೈಕೆ ಮಾಡಲಿದೆ. ಜತೆಗೆ ಖಾಸಗಿ ಪವರ್‌ ಪ್ಲಾಂಟ್‌ಗಳಿಗೂ ಕೋಲ್‌ ಇಂಡಿಯಾವೇ ಪೂರೈಕೆ ಮಾಡಲಿದೆ," ಎಂದು ತಿಳಿಸಲಾಗಿದೆ. 

ಇದನ್ನೂ ಓದಿ: ಭಾರತ ಯಾರಿಗಾದರೂ ಸ್ವಂತ ಎಂದರೆ ಅದು ಆದಿವಾಸಿಗಳಿಗೆ ಮತ್ತು ದ್ರಾವಿಡನ್ನರಿಗೆ: ಓವೈಸಿ

ಕೋಲ್‌ ಇಂಡಿಯಾದ ಮುಖ್ಯಸ್ಥರ ಹೆಸರಿನಲ್ಲಿ ಈ ಪತ್ರ ರಾಜ್ಯದ ಮತ್ತು ಕೇಂದ್ರ ಎಲ್ಲಾ ಇಂಧನ ಇಲಾಖೆ ಅಧಿಕಾರಿಗಳಿಗೆ, ಖಾಸಗಿ ವಿದ್ಯುತ್‌ ಉತ್ಪಾದಕರಿಗೆ ಕಳಿಸಲಾಗಿದೆ. 2022ರ ಮೂರನೇ ತ್ರೈಮಾಸಿಕದಲ್ಲಿ ಕಲ್ಲಿದ್ದಲು ಕೊರತೆ ಇನ್ನಷ್ಟು ಹೆಚ್ಚಲಿದೆ ಎಂದು ಅಂದಾಜಿಸಲಾಗಿದೆ. ವಿದ್ಯುತ್‌ ಬೇಡಿಕೆ ಕೂಡ ಹೆಚ್ಚಾಗಲಿದ್ದು, ಕಲ್ಲಿದ್ದಲು ಪೂರೈಕೆಯಾಗದಿದ್ದಲ್ಲಿ ಮತ್ತೆ ವಿದ್ಯುತ್‌ ಪವರ್‌ ಕಟ್‌ ಅನಿವಾರ್ಯವಾಗಲಿದೆ. ಈ ಸಮಸ್ಯೆ ತಲೆದೂರಬಾರದು ಎಂಬ ಕಾರಣಕ್ಕೆ ಕೋಲ್‌ ಇಂಡಿಯಾ ಈ ಬಾರಿ ಬೇಗ ಕಾರ್ಯಪ್ರವೃತ್ತವಾಗಿದೆ. 

ರಾಜ್ಯ ಸರ್ಕಾರದ ಅಧೀನದಲ್ಲಿರುವ ಮತ್ತು ರಾಜ್ಯಗಳಲ್ಲಿರುವ ಖಾಸಗಿ ಪವರ್‌ ಪ್ಲಾಂಟ್‌ಗಳು ಪ್ರತ್ಯೇಕವಾಗಿ ಕಲ್ಲಿದ್ದಲು ಆಮದಿಗೆ ಟೆಂಡರ್‌ ಕರೆದಿದ್ದವು. ಇದರಿಂದ ಆಮದು ಮತ್ತು ಪೂರೈಕೆಗೆ ಸಮಸ್ಯೆಯಾಗಲಿದೆ, ಈ ಕಾರಣಕ್ಕಾಗಿಯೇ ಕೇಂದ್ರ ಸರ್ಕಾರದ ಕೋಲ್‌ ಇಂಡಿಯಾದಿಂದಲೇ ಆಮದು ಮಾಡಿಸಿಕೊಂಡು ರಾಜ್ಯವಾರು ಪವರ್‌ ಪ್ಲಾಂಟ್‌ಗಳಿಗೆ ಹಂಚಿಕೆ ಮಾಡುವುದೇ ಸೂಕ್ತ ಎಂದು ನಿರ್ಧರಿಸಿ ಈ ಆದೇಶ ಹೊರಡಿಸಲಾಗಿದೆ. ಇದರಿಂದ ಕಲ್ಲಿದ್ದಲು ಆಮದಿನ ಬೆಲೆಯೂ ಕಡಿಮೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ. 

ಇದನ್ನೂ ಓದಿ: Mann Ki Baat: ಚಾರ್‌ ಧಾಮ್‌ ಯಾತ್ರೆ, ಸ್ವಚ್ಛತೆ ಕಾಪಾಡಲು ಭಕ್ತರಿಗೆ ಮೋದಿ ಮನವಿ

ಇತ್ತೀಚೆಗೆ ಎಲ್ಲಾ ಪವರ್‌ ಪ್ಲಾಂಟ್‌ಗಳಿಂದ ಕಲ್ಲಿದ್ದಲು ಆಮದು ಮಾಡಿಕೊಳ್ಳಬೇಕೆಂದು ಮನವಿ ಕೇಳಿಬಂದಿತ್ತು. ಸ್ಥಳೀಯ ಕಲ್ಲಿದ್ದಲು ಮತ್ತು ಆಮದು ಮಾಡಿಕೊಂಡ ಕಲ್ಲಿದ್ದಲು ಎರಡನ್ನೂ ಮಿಶ್ರಣ ಮಾಡಿ ವಿದ್ಯುತ್‌ ಉತ್ಪಾದನೆ ಮಾಡುವ ಇರಾದೆಯನ್ನು ಪವರ್‌ ಪ್ಲಾಂಟ್‌ಗಳು ಹೊರ ಹಾಕಿದ್ದವು. ಇದೀಗ ಕೇಂದ್ರದಿಂದಲೇ ಕಲ್ಲಿದ್ದಲು ಆಮದಾಗುತ್ತಿದ್ದು, ಅಗತ್ಯಕ್ಕೆ ತಕ್ಕಂತೆ ಹಂಚಿಕೆಯಾಗಲಿದೆ.