ಚಂದ್ರಯಾನ-3ರ ಇಸ್ರೋ ವಿಜ್ಞಾನಿಗಳನ್ನು ವಿಧಾನಸೌಧಕ್ಕೆ ಆಹ್ವಾನಿಸಿದ ಸಿಎಂ ಸಿದ್ದರಾಮಯ್ಯ
ಚಂದ್ರಯಾನ -3 ಮಿಷನ್ ಯಶಸ್ವಿಗೊಳಿಸಿದ ಇಸ್ರೋ ವಿಜ್ಞಾನಿಗಳನ್ನು ಭೇಟಿ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಲ್ಲ ವಿಜ್ಞಾನಿಗಳನ್ನು ವಿಧಾನಸೌಧಕ್ಕೆ ಬರುವಂತೆ ಆಹ್ವಾನಿಸಿದ್ದಾರೆ.
ಬೆಂಗಳೂರು (ಆ.24): ಜಾಗತಿಕ ಮಟ್ಟದಲ್ಲಿ ದೇಶಕ್ಕೆ ಕೀರ್ತಿ ತಂದುಕೊಡುವ ಸಾಧನೆ ಮಾಡಿದ ಚಂದ್ರಯಾನ-3 ಮಿಷನ್ ಯಶಸ್ವಿಯಾದ ಬೆನ್ನಲ್ಲಿಯೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ (ISRO) ತೆರಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆಯನ್ನು ಸಲ್ಲಿಸಿ, ಎಲ್ಲರೂ ವಿಧಾನಸೌಧಕ್ಕೆ ಬರಬೇಕು ಎಂದು ಆಹ್ವಾನ ನೀಡಿದ್ದಾರೆ.
ಹೌದು, ಚಂದ್ರಯಾನ 3 ಯಶಸ್ವಿ ಲ್ಯಾಂಡಿಂಗ್, ಬೆಂಗಳೂರಿನಲ್ಲಿರುವ ಇಸ್ರೋ ಕೇಂದ್ರಕ್ಕೆ ಭೇಟಿ ನೀಡಿದ ಸಿಎಂ ಸಿದ್ದರಾಮಯ್ಯ ಚಂದ್ರಯಾನ-3 ಯಶಸ್ಸಿಗೆ ಕಾರಣರಾದ ಇಸ್ರೋ ಅಧ್ಯಕ್ಷ ಸೋಮನಾಥ್ & ವಿಜ್ಞಾನಿಗಳನ್ನು ಅಭಿನಂದಿಸಿ ಮಾತನಾಡಿದರು. ಈ ವೇಳೆ, ಇಸ್ರೋ ಅಧ್ಯಕ್ಷರಿಗೆ ಹಾಗೂ ವಿಜ್ಞಾನಿಗಳಿಗೆ ಸರ್ಕಾರದ ವತಿಯಿಂದ ಗೌರವಿಸಲಾಗುತ್ತದೆ. ವಿಧಾನಸೌಧದ ಬಾಂಕ್ವೆಟ್ ಹಾಲ್ ನಲ್ಲಿ ಗೌರವ ಸಲ್ಲಿಸುವ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗುತ್ತಿದ್ದು, ಎಲ್ಲರೂ ಆಗಮಿಸಬೇಕು ಎಂದು ಸ್ವತಃ ಆಹ್ವಾನಿಸಿದರು. ಇಸ್ರೋ ವಿಜ್ಞಾನಿಗಳ ಸಾಧನೆ ನಮಗೆಲ್ಲ ಹೆಮ್ಮೆ ತರುವಂತಹ ವಿಚಾರವಾಗಿದೆ. ನಾನು ಕೂಡ ನಿನ್ನೆ ಸಂಜೆ ವೇಳೆ ವಿಕ್ರಂ ರೋವರ್ ಲ್ಯಾಂಡಿಂಗ್ ವೀಕ್ಷಣೆ ಮಾಡಿದ್ದೇನೆ ಖುಷಿ ಆಯ್ತು, ಬಹಳ ಹೆಮ್ಮೆ ಅನಿಸ್ತು. ಇದೊಂದು ದೊಡ್ಡ ಸಾಧನೆಯಾಗಿದೆ. ಈ ಅದ್ಭುತ ಕ್ಷಣಕ್ಕಾಗಿ ಹಲವು ವರ್ಷಗಳಿಂದ ವಿಜ್ಞಾನಿಗಳು ಶ್ರಮ ಪಡ್ತಿದ್ದಾರೆ. ಅಂದಾಜು 500 ವಿಜ್ಞಾನಿಗಳ ಪರಿಶ್ರಮದ ಫಲ ಇದು ಎಂದು ಕೊಂಡಾಡಿದರು.
Chandrayaan-3 Mission: ಲ್ಯಾಂಡರ್‌ನಿಂದ ಯಶಸ್ವಿಯಾಗಿ ಕೆಳಗಿಳಿದ ರೋವರ್, ಚಂದ್ರನ ಮೇಲೆ ನಡೆದಾಡಿದ ಭಾರತ
ಕರ್ನಾಟಕದ 500 ತಂಡಗಳ ಶ್ರಮವಿದೆ: ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಇಸ್ರೋ ತಂಡವನ್ನು ಸನ್ಮಾನಿಸಲು ಸರ್ಕಾರದಿಂದ ವಿಶೇಷ ಸಮಾರಂಭ ಮಾಡುತ್ತೇವೆ. 3,84,000 ಸಾವಿರ ಕಿಮೀ ದೂರ ಉಪಗ್ರಹ ಸಾಗಿದೆ. ನಾವೆಲ್ಲ ಹೆಮ್ಮೆ ಪಡುವ ಸಾಧನೆಯಾಗಿದ್ದು, ಬಹಳ ಖುಷಿ ಕೊಡುವ ವಿಚಾರ ಇದು. ವೈಯಕ್ತಿಕವಾಗಿ ನನಗೆ ಬಹಳ ಸಂತೋಷ ತಂದಿದೆ. ಅವರೆಲ್ಲರೂ ಬಹಳ ವರ್ಷಗಳಿಂದ ಪರಿಶ್ರಮ ಪಡ್ತಿದಾರೆ. ಈ ಸಾಧನೆಯಲ್ಲಿ ಕರ್ನಾಟಕದ 500 ವಿಜ್ಞಾನಿಗಳು ಭಾಗವಹಿಸಿದ್ದಾರೆ. ಭಾರತದಾದ್ಯಂತ ಸಾವಿರ ವಿಜ್ಞಾನಿಗಳು ಈ ಸಾಧನೆಯಲ್ಲಿ ಪಾಲ್ಗೊಂಡಿದ್ದಾರೆ ಎಂದರು.
ಇಡೀ ಜಗತ್ತೇ ಭಾರತದತ್ತ ನೋಡುವ ಸಾಧನೆ ಮಾಡಿದ ಇಸ್ರೋ: ಚಂದ್ರಯಾನ 3 ಸಾಧನೆ ಐತಿಹಾಸಿಕ ಸಾಧನೆಯಿಂದ ಇಡೀ ಜಗತ್ತು ಭಾರತದ ಕಡೆ ನೋಡ್ತಿದೆ. ರಷ್ಯಾ, ಅಮೆರಿಕ, ಚೀನಾ, ಭಾರತ ರಾಷ್ಟ್ರಗಳು ಮಾತ್ರ ಚಂದ್ರನಿಗೆ ಉಪಗ್ರಹ ಕಳಿಸಿದ್ದಾರೆ. ಈಗ ನಮ್ಮ ದೇಶ ಮಾತ್ರ ಚಂದ್ರನ ದಕ್ಷಿಣ ಧ್ರುವಕ್ಕೆ ಉಪಗ್ರಹ ಕಳಿಸಿದೆ. ನಾವೆಲ್ರೂ ಇಸ್ರೋದ ಈ ಸಾಧನೆಯನ್ನು ಅಭಿನಂದಿಸಿ ಖುಷಿ ಪಡಬೇಕು ಎಂದು ಹೇಳಿದರು.
ಬೆಂಗಳೂರಿನ ಇಸ್ರೋ ಕಚೇರಿಗೆ ಪ್ರಧಾನಿ ಮೋದಿ ಆಗಮನ: ವಿಜ್ಞಾನಿಗಳೊಂದಿಗೆ ಚರ್ಚಿಸುವ ವಿಷಯಗಳಿವು!
ಇಸ್ರೋ ವಿಜ್ಞಾನಿಗೆ ಅದ್ಧೂರಿ ಸ್ವಾಗತ ಕೋರಿದ ಸ್ಥಳೀಯರು: ಚಂದ್ರಯಾನ-3 ಯಶಸ್ವಿ ಬೆನ್ನಲ್ಲೇ ಇಸ್ರೋ ವಿಜ್ಞಾನಿಗೆ ನಿನ್ನೆ ಅದ್ದೂರಿ ಸ್ವಾಗತ ಕೋರಲಾಗಿದೆ. ನಿನ್ನೆ ಸಂಜೆ ಬೆಂಗಳೂರಿನ ರೈನ್ ಬೋ ಲೇಔಟ್‌ನಲ್ಲಿ ಇಸ್ರೋ ವಿಜ್ಞಾನಿಗಳಿಗೆ ಲೇಔಟ್ ನಿವಾಸಿಗಳು ಅದ್ಧೂರಿ ಸ್ವಾಗತ ಕೋರಿದ್ದಾರೆ. ಸ್ಥಳೀಯರು ವಾಲಗದ ಸದ್ದಿನೊಂದಿಗೆ ಪಟಾಕಿ ಹಚ್ಚಿ ಅದ್ಧೂರಿ ಸ್ವಾಗತ ಕೋರಿದ್ದು, ತಮ್ಮ ನೆರೆಹಿರೆಯವರ ಸ್ವಾಗತಕ್ಕೆ ವಿಜ್ಞಾನಿ ಸಂತಸಗೊಂಡಿದ್ದಾರೆ. ಚಂದ್ರಯಾನ -3 ಯಶಸ್ವಿಗೆ ಬೆಂಗಳೂರಿನ ಇಸ್ರೋ ವಿಜ್ಞಾನಿ ಪಾರ್ವತಿ ಶಂಕರ್ ಕೂಡ ಶ್ರಮವಹಿಸಿದ್ದಾರೆ. ಅವರಿಗೆ ಸ್ಥಳೀಯರು ಹೂಗುಚ್ಛ ಕೊಟ್ಟು ಸ್ವಾಗತ ಕೋರಿದರು.