* ಕೆಎಂಎಫ್ ಬ್ಯಾಂಕ್ ಸ್ಥಾಪಿಸಲು ಸಲಹೆ* ಹಾಲು ಉತ್ಪಾದಕರ ಬ್ಯಾಂಕಿಗೆ 100 ಕೋಟಿ ರೂ. ನೆರವು: ಸಿಎಂ* ಸರ್ಕಾರದಿಂದ ಬಂಡವಾಳದ ಭರವಸೆ* ಹಾಲಿನ ಪುಡಿ, ಪಶು ಆಹಾರ ಘಟಕ ಸೇರಿ 10ಕ್ಕೂ ಹೆಚ್ಚು ಯೋಜನೆ ಉದ್ಘಾಟನೆ
ಬೆಂಗಳೂರು(ಸೆ.30): ರಾಜ್ಯದಲ್ಲಿ ಹಾಲು ಉತ್ಪಾದಕರ ಬ್ಯಾಂಕ್(Karnataka Milk Federation Bank) ತೆರೆದರೆ ರಾಜ್ಯ ಸರ್ಕಾರ 100 ಕೋಟಿ ರು. ಬಂಡವಾಳ ಹೂಡಲಿದೆ. ಒಂದು ವೇಳೆ ಬ್ಯಾಂಕ್ ಆರಂಭಗೊಂಡರೆ ಅದರಲ್ಲಿ ಹಾಲು ಉತ್ಪಾದಕರ ಕೊಡುಗೆಯೊಂದಿಗೆ ಬಾಹ್ಯ ಹೂಡಿಕೆಯೂ ಹೆಚ್ಚಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Chief Minister Basavaraj Bommai) ಸಲಹೆ ನೀಡಿದ್ದಾರೆ.
ಬುಧವಾರ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ ನಿಯಮಿತ (KMF) ಅರಮನೆ ಮೈದಾನದಲ್ಲಿ(Palace Ground) ಆಯೋಜಿಸಿದ್ದ ಸಮಾರಂಭದಲ್ಲಿ ರಾಜ್ಯದ ವಿವಿಧೆಡೆ ಹಾಲು ಒಕ್ಕೂಟಗಳು ನಿರ್ಮಿಸಿರುವ ನೂತನ ಹಾಲಿನ ಪುಡಿ ಘಟಕ, ಪಶು ಆಹಾರ ಘಟಕ, ಸಂಶೋಧನಾ ಕೇಂದ್ರ ಸೇರಿದಂತೆ 10ಕ್ಕೂ ಹೆಚ್ಚು ಯೋಜನೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರ್ವ ಸ್ವತಂತ್ರವಾಗಿ ಸಹಕಾರಿ ಬ್ಯಾಂಕ್ ಸ್ಥಾಪನೆ ಕುರಿತು ಮುಂದಿನ ನಿರ್ದೇಶಕ ಮಂಡಳಿಯಲ್ಲಿ ನಿರ್ಣಯವನ್ನು ತೆಗೆದುಕೊಂಡು ಕಾರ್ಯೋನ್ಮುಖವಾಗಬೇಕು. ಹಣವನ್ನು ಸರಿಯಾದ ಮಾರ್ಗ ಮತ್ತು ಕ್ಷೇತ್ರದಲ್ಲಿ ಹೂಡಿಕೆ ಮಾಡಬೇಕು. ಆಗ ಮಾತ್ರ ಲಾಭದಾಯಕವಾಗಲು ಸಾಧ್ಯ. ಹಾಲು ಉತ್ಪಾದಕರು ಮತ್ತು ಹಾಲು ಒಕ್ಕೂಟದವರನ್ನು ಸರ್ಕಾರ ನಂಬುತ್ತದೆ. ಆದ್ದರಿಂದ ಹಾಲು ಉತ್ಪಾದಕರ ಬ್ಯಾಂಕ್‌ಗೆ ಬಂಡವಾಳ ಹೂಡಿಕೆ ಮಾಡಲು ಸಿದ್ಧವಿದೆ ಎಂದು ಹೇಳಿದರು.
ಜಾಗತೀಕರಣ ಬಂದ ಮೇಲೆ ಮಾರುಕಟ್ಟೆಆಧಾರಿತವಾಗಿ ಎಲ್ಲ ವ್ಯವಹಾರ, ವಹಿವಾಟು ನಡೆಯುತ್ತಿದೆ. ಮಾರುಕಟ್ಟೆನಿಯಂತ್ರಣ ಬೇರೆ ಬೇರೆಯವರ ಕೈಯಲ್ಲಿದೆ. ಮಾರುಕಟ್ಟೆವಿಸ್ತರಣೆಗೆ ಕೆಎಂಎಫ್ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದ ಅವರು, ಸದ್ಯ ರಾಜ್ಯದಲ್ಲಿ ಹಾಲು ಉತ್ಪಾದನೆ 92 ಲಕ್ಷ ಲೀಟರ್ ಇದ್ದು, ಮುಂದಿನ ಮೇ-ಜೂನ್ ಅಂತ್ಯದೊಳಗೆ 100 ಲಕ್ಷ ಲೀಟರ್ ಹಾಲು ಉತ್ಪಾದನೆ ಮಾಡಬೇಕು. ಅದಕ್ಕೆ ಬೇಕಾದ ಮಾರುಕಟ್ಟೆಸಿದ್ಧ ಮಾಡಿಕೊಳ್ಳಬೇಕು ಎಂದು ಹೇಳಿದರು.
ಗೋಶಾಲೆ ನಿರ್ವಹಣೆ ಜವಾಬ್ದಾರಿ :
ಗೋವುಗಳು ಹಾಲು ಕೊಡುವುದನ್ನು ನಿಲ್ಲಿಸಿದ ಬಳಿಕವೂ ಅವುಗಳ ರಕ್ಷಣೆ ಮಾಡಬೇಕು. ಸರ್ಕಾರ ಮಟ್ಟದಲ್ಲಿ ಗೋಹತ್ಯೆ ನಿಷೇಧಿಸಿದ್ದೇವೆ. ಎಲ್ಲ ಜಿಲ್ಲೆಗಳಲ್ಲಿ ಗೋಶಾಲೆ ನಿರ್ಮಿಸಲು ಬೇಕಾದ ಅನುದಾನ ಬಿಡುಗಡೆ ಮಾಡುತ್ತೇವೆ. ಆದರೆ, ಗೋವುಗಳಿಗೆ ಆಹಾರ, ಚಿಕಿತ್ಸೆಗೆ ವೈದ್ಯರನ್ನು ಕಳುಹಿಸಿ ಕೊಡುವ ಹೊಣೆಯನ್ನು ಕೆಎಂಎಫ್ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.
ನಂ.1 ಸಂಸ್ಥೆಯಾಗಲಿ:
ಕೆಎಂಎಫ್ ಸಂಸ್ಥೆ ಇಡೀ ದೇಶದಲ್ಲಿ ನಂ.1 ಸಂಸ್ಥೆಯಾಗಬೇಕು. ಹೊಸ ತಂತ್ರಜ್ಞಾನ ಬಳಸುವ ಮೂಲಕ ಹಾಲು ಉತ್ಪಾದನೆ ಹೆಚ್ಚಿಸಿ ಹೊಸ ಉತ್ಪನ್ನಗಳು ಮಾರುಕಟ್ಟೆಗೆ ಬರಬೇಕು. ಉತ್ತರ ಕರ್ನಾಟಕದಲ್ಲಿಯೂ ಹಾಲು ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಬೇಕು. ದಕ್ಷಿಣ ಕರ್ನಾಟಕದ ಮಾದರಿಯಲ್ಲಿ ಹಾಲು ಉತ್ಪಾದನೆಯಲ್ಲಿ ಅಭಿವೃದ್ಧಿ ಹೊಂದಬೇಕು. ಬೆಳಗಾವಿ, ವಿಜಯಪುರ, ಬಾಗಲಕೋಟೆ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ನೀರಾವರಿ ಹೊಂದಿರುವ ಪ್ರದೇಶದ ಜನರು ಹೈನುಗಾರಿಕೆಗೆ ಆದ್ಯತೆ ನೀಡಬೇಕು ಎಂದು ಹೇಳಿದರು.
ನೂತನ ಉತ್ಪನ್ನ, ಸಂಚಿಕೆ ಬಿಡುಗಡೆ
ಪಶು ಆಹಾರ ಸಂಬಂಧ ಎಮ್ಮೆಗಳಿಗಾಗಿ ನಂದಿನಿ ಎಮ್ಮೆ-ಪಶು ಆಹಾರವನ್ನು ಪಶು ಸಂಗೋಪನಾ ಸಚಿವ ಪ್ರಭು ಬಿ.ಚವ್ಹಾಣ್ ಬಿಡುಗಡೆ ಮಾಡಿದರು. ನಂದಿನಿ ಹೊಸ ಉತ್ಪನ್ನಗಳನ್ನು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಬಿಡುಗಡೆ ಮಾಡಿದರು. ಇದೇ ಸಂದರ್ಭದಲ್ಲಿ ’ಸುವರ್ಣ ಪಥದತ್ತ ಕರ್ನಾಟಕ ಹಾಲು ಮಹಾಮಂಡಳ’ ಸ್ಮರಣಸಂಚಿಕೆ, ಪಶುಸಂಗೋಪನಾ ಇಲಾಖೆಯಿಂದ ಎರಡು ವರ್ಷದ ಸಾಧನೆ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು.
