Asianet Suvarna News Asianet Suvarna News

ELection ಮ.ಪ.ದಲ್ಲಿ ಚುನಾವಣೆಗೆ ಸುಪ್ರೀಂ ಆದೇಶ, ರಾಜ್ಯದಲ್ಲೂ ಜಿಪಂ, ತಾಪಂ,ಬಿಬಿಎಂಪಿ ಎಲೆಕ್ಷನ್ ಘೋಷಣೆ?

- ಕಾನೂನು ತಜ್ಞರ ಮೊರೆ ಹೋದ ರಾಜ್ಯ ಚುನಾವಣಾ ಆಯೋಗ, ಸರ್ಕಾರ
- 2 ವರ್ಷದಿಂದ ಬಿಬಿಎಂಪಿ, 1 ವರ್ಷದಿಂದ ಜಿಪಂ, ತಾಪಂ ಚುನಾವಣೆ ಬಾಕಿ
- ಚುನಾವಣೆ ನಡೆಸದೇ ಇರುವುದು ಕಾನೂನಿನ ಸ್ಪಷ್ಟಉಲ್ಲಂಘನೆ ಎಂದ ಕೋರ್ಟ್
 

CM Basavaraj Bommai instructed law department to study supreme court order on local body election ckm
Author
Bengaluru, First Published May 11, 2022, 4:14 AM IST

ಬೆಂಗಳೂರು(ಮೇ.11): ಮಧ್ಯಪ್ರದೇಶದ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವ ಸಂಬಂಧ ಸುಪ್ರೀಂಕೋರ್ಚ್‌ ಆದೇಶ ನೀಡಿದ ಬೆನ್ನಲ್ಲೇ ರಾಜ್ಯದಲ್ಲಿ ಬಾಕಿ ಇರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವ ಬಗ್ಗೆ ಚರ್ಚೆ ಮುನ್ನೆಲೆಗೆ ಬಂದಿದ್ದು, ಕಾನೂನು ತಜ್ಞರ ಅಭಿಪ್ರಾಯದ ಮೇರೆಗೆ ಮುಂದಿನ ಹೆಜ್ಜೆ ಇಡಲು ಸರ್ಕಾರ ಮತ್ತು ರಾಜ್ಯ ಚುನಾವಣಾ ಆಯೋಗ ನಿರ್ಧರಿಸಿವೆ.

ಮಧ್ಯಪ್ರದೇಶದ ಸ್ಥಳೀಯ ಸಂಸ್ಥೆಗಳ ಚುನಾವಣೆ ಸಂಬಂಧ ನ್ಯಾಯಾಲಯವು ನೀಡಿರುವ ತೀರ್ಪು ಕಳೆದ ಎರಡು ವರ್ಷದಿಂದ ಚುನಾವಣೆ ಬಾಕಿ ಇರುವ ಬಿಬಿಎಂಪಿ ಮತ್ತು ಒಂದು ವರ್ಷದಿಂದ ಚುನಾವಣೆ ಬಾಕಿ ಇರುವ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿಗೆ ಅನ್ವಯವಾಗಲಿದೆಯೇ ಎಂಬುದರ ಬಗ್ಗೆ ಸ್ಪಷ್ಟಚಿತ್ರಣ ಮೂಡಬೇಕಿದೆ. ಈ ಸಂಬಂಧ ಬುಧವಾರ ಕಾನೂನು ತಜ್ಞರು ಸುಪ್ರೀಂಕೋರ್ಚ್‌ನ ತೀರ್ಪಿನ ಪ್ರತಿ ಪಡೆದ ಬಳಿಕ ಅಧ್ಯಯನ ನಡೆಸಲಿದ್ದಾರೆ. ನಂತರವಷ್ಟೇ ಬಿಬಿಎಂಪಿ, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯ ಬಗ್ಗೆ ಸ್ಪಷ್ಟಚಿತ್ರಣ ಹೊರಬೀಳುವ ನಿರೀಕ್ಷೆಯಿದೆ.

ಬಿಬಿಎಂಪಿ ಚುನಾವಣೆ ನಡೆಸಲು ಸುಪ್ರೀಂಕೋರ್ಟ್ ಸೂಚನೆ

ರಾಜ್ಯದ ಅರ್ಜಿ:
ಈ ನಡುವೆ ಸುಪ್ರೀಂಕೋರ್ಚ್‌ನಲ್ಲೇ ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ ಅರ್ಜಿಯ ವಿಚಾರಣೆ ನಡೆಯುತ್ತಿದ್ದು, ಇದೇ 20ರಂದು ಅರ್ಜಿ ವಿಚಾರಣೆಗೆ ಬರಲಿದೆ. ಈ ವೇಳೆ ನ್ಯಾಯಾಲಯ ನೀಡುವ ಸೂಚನೆ ಮೇರೆಗೆ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆಯೂ ಇದೆ. ಅಲ್ಲದೇ, ಹೈಕೋರ್ಚ್‌ನಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಸಂಬಂಧವೂ ವಿಚಾರಣೆ ನಡೆಯುತ್ತಿದೆ. ಈ ಬಗ್ಗೆಯೂ ಸ್ಪಷ್ಟತೆ ಮೂಡಬೇಕಿದೆ.

ಸಿಎಂ ಸೂಚನೆ:
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದೆಹಲಿ ಪ್ರವಾಸದಲ್ಲಿದ್ದು, ಕಾನೂನು ಇಲಾಖೆಗೆ ಮತ್ತು ಅಡ್ವೋಕೇಟ್‌ ಜನರಲ್‌ ಅವರಿಗೆ ಆದೇಶದ ಕುರಿತು ಸಂಪೂರ್ಣ ಅಧ್ಯಯನ ನಡೆಸುವಂತೆ ಸೂಚಿಸಿದ್ದಾರೆ. ದೆಹಲಿಯಿಂದ ಹಿಂತಿರುಗಿದ ಬಳಿಕ ಕಾನೂನು ತಜ್ಞರ ಜತೆ ಸಮಾಲೋಚನೆ ನಡೆಸಲಿದ್ದಾರೆ. ಅಲ್ಲದೇ, ಚುನಾವಣಾ ಆಯೋಗದಿಂದಲೂ ಮಾಹಿತಿ ಸಂಗ್ರಹಿಸಲಿದ್ದಾರೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವ ಸಂಬಂಧ ಸುಪ್ರೀಂಕೋರ್ಚ್‌ ಆದೇಶ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯೋಗವು ಕಾನೂನು ತಜ್ಞರ ಜತೆ ಸಮಾಲೋಚನೆ ನಡೆಸಲು ಮುಂದಾಗಿದೆ. ಬುಧವಾರ ಬಿಬಿಎಂಪಿ, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗಳ ಚುನಾವಣೆ ಸಂಬಂಧ ಚರ್ಚೆ ನಡೆಸಲಿದ್ದು, ತನ್ನ ಅಭಿಪ್ರಾಯವನ್ನು ಸರ್ಕಾರಕ್ಕೆ ತಿಳಿಸುವ ಸಾಧ್ಯತೆ ಇದೆ.

ಭಿನ್ನ ಅಭಿಪ್ರಾಯ:
ರಾಜ್ಯದಲ್ಲಿ ಕಾನೂನು ತಜ್ಞರಿಂದ ಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿದ್ದು, ಸುಪ್ರೀಂಕೋರ್ಚ್‌ ಆದೇಶವು ದೇಶದ ಎಲ್ಲಾ ರಾಜ್ಯಗಳಿಗೂ ಅನ್ವಯವಾಗಲಿದೆ ಎಂದು ಆದೇಶದಲ್ಲಿ ಉಲ್ಲೇಖಿಸಿರುವುದರಿಂದ ಬಿಬಿಎಂಪಿ, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗೂ ಅನ್ವಯವಾಗಲಿದೆ ಎಂಬ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಅಂತೆಯೇ 198 ವಾರ್ಡ್‌ಗಳಿಗೆ ಚುನಾವಣೆ ನಡೆಸಬೇಕಾಗುತ್ತದೆ ಎಂದು ಹೇಳುತ್ತಾರೆ. ಆದರೆ, ಇನ್ನು ಕೆಲ ಕಾನೂನು ತಜ್ಞರು, ಚುನಾವಣೆ ನಡೆಸುವ ಅಗತ್ಯ ಇಲ್ಲ ಎಂದಿದ್ದಾರೆ.

ಬಿಬಿಎಂಪಿ ಚುನಾವಣೆ ನಡೆಸುವ ಸಂಬಂಧ ಹೈಕೋರ್ಚ್‌ ನೀಡಿರುವ ತೀರ್ಪನ್ನು ಪ್ರಶ್ನಿಸಿ ರಾಜ್ಯ ಸರ್ಕಾರವು ಸಲ್ಲಿಸಿರುವ ಅರ್ಜಿಯು ಸುಪ್ರೀಂಕೋರ್ಚ್‌ ಮುಂದೆ ಬಾಕಿ ಇದೆ. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಚ್‌ನ ಆದೇಶ ಅನ್ವಯವಾಗುವುದಿಲ್ಲ ಎಂದು ಹೇಳಲಾಗುತ್ತಿದೆ. ಒಟ್ಟಾರೆ ಬಿಬಿಎಂಪಿ ಮತ್ತು ಜಿಲ್ಲಾ, ತಾಲೂಕು ಪಂಚಾಯಿತ್‌ ಚುನಾವಣೆಯು ಕುರಿತು ಕಾನೂನು ತಜ್ಞರ ಅಭಿಪ್ರಾಯದ ಮೇಲೆ ನಿಂತಿದ್ದು, ಸರ್ಕಾರ ಮತ್ತು ರಾಜ್ಯ ಚುನಾವಣಾ ಆಯೋಗವು ಯಾವ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಪ್ರತ್ಯೇಕ ರಾಜಕೀಯ ಪಕ್ಷ ರಚಿಸಲ್ಲ, ಆದ್ರೆ...: ಪ್ರಶಾಂತ್ ಕಿಶೋರ್ ಮಹತ್ವದ ಘೋಷಣೆ!

ಸುಪ್ರೀಂ ಹೇಳಿದ್ದೇನು?
- ಮಧ್ಯಪ್ರದೇಶದ 23000 ಸ್ಥಳೀಯ ಸಂಸ್ಥೆಗಳಿಗೆ 2 ವರ್ಷಗಳಿಂದ ಚುನಾವಣೆಯೇ ನಡೆದಿಲ್ಲ

- ಇಷ್ಟೊಂದು ಅವಧಿವರೆಗೆ ಚುನಾವಣೆ ನಡೆಸದೇ ಇರುವುದು ಕಾನೂನಿನ ಸ್ಪಷ್ಟಉಲ್ಲಂಘನೆ

- ಚುನಾವಣೆ ನಡೆಸಲು ಸ್ಥಳೀಯ ಸಂಸ್ಥೆಗಳ ಕ್ಷೇತ್ರ ಮರುವಿಂಗಡಣೆಗೆ ಕಾಯುವುದು ತಪ್ಪು

- ಸ್ಥಳೀಯ ಸಂಸ್ಥೆಯ 5 ವರ್ಷಗಳ ಅವಧಿ ಪೂರ್ಣಗೊಂಡಾಗ ಚುನಾವಣೆ ನಡೆಸಬೇಕು

- ಅವಧಿ ಮುಗಿದಾಗ ಎಷ್ಟುಕ್ಷೇತ್ರ ಇದ್ದವೋ ಅಷ್ಟುಕ್ಷೇತ್ರಕ್ಕೆ ಚುನಾವಣೆ ಆಯೋಜಿಸಬೇಕು

- ಒಬಿಸಿ ಮೀಸಲು ಜಾರಿ ಪ್ರಕ್ರಿಯೆ ಆಗಿಲ್ಲ ಎಂಬ ಕಾರಣಕ್ಕೆ ಚುನಾವಣೆ ಮುಂದೂಡಬಾರದು

- ‘ತ್ರಿವಳಿ ಪರೀಕ್ಷಾ ಪ್ರಕ್ರಿಯೆ’ ಮುಗಿಯುವವರೆಗೆ ಇತರೆ ಹಿಂದುಳಿದ ಮೀಸಲು ನೀಡುವಂತಿಲ್ಲ

- ಈ ಕುರಿತು 2010ರಲ್ಲೇ ಸುಪ್ರೀಂ ಆದೇಶಿಸಿದೆ. ಮೀಸಲು ಪ್ರಮಾಣ ಶೇ.50 ಮೀರುವಂತಿಲ್ಲ

- ತ್ರಿವಳಿ ಪರೀಕ್ಷಾ ವರದಿಗೆ ಕಾಯಬೇಕಿಲ್ಲ. ಅವಧಿ ಮುಗಿಯುತ್ತಿದ್ದಂತೆ ಚುನಾವಣೆ ನಡೆಸಬೇಕು

- ಯಾವುದೇ ಕಾರಣಕ್ಕೂ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆಗಳನ್ನು ಮುಂದೂಡಬಾರದು

- ಅವಧಿ ಮುಗಿದ ಬಳಿಕ ಹೊಸ ಪ್ರತಿನಿಧಿಗಳ ಆಯ್ಕೆಯಾಗದಿದ್ದರೆ ಆಡಳಿತ ಸರಪಳಿ ಕಡಿತವಾಗುತ್ತೆ

- 5 ವರ್ಷ ಅವಧಿ ಪೂರೈಸಿದ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುವುದು ಸಾಂವಿಧಾನಿಕ ಬಾಧ್ಯತೆ

- ಎಸ್ಸಿ, ಎಸ್ಟಿಕ್ಷೇತ್ರಗಳನ್ನು ಹೊರತುಪಡಿಸಿ ಮಿಕ್ಕ ಕ್ಷೇತ್ರಗಳನ್ನು ‘ಸಾಮಾನ್ಯ’ ಎಂದು ಪರಿಗಣಿಸಿ

- ಅದರಂತೆ ಚುನಾವಣೆ ನಡೆಸಿ. ಈ ಕುರಿತು ಎರಡು ವಾರದಲ್ಲಿ ಅಧಿಸೂಚನೆ ಹೊರಡಿಸಿ

ಎಲ್ಲ ಚುನಾವಣೆಗೂ ಸಿದ್ಧ
ಮಧ್ಯಪ್ರದೇಶ ಸ್ಥಳೀಯ ಸಂಸ್ಥೆ ಚುನಾವಣೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಚ್‌ ನೀಡಿರುವ ಆದೇಶದ ಬಗ್ಗೆ ಸಂಪೂರ್ಣ ಅಧ್ಯಯನ ಮಾಡುವಂತೆ ಕಾನೂನು ಇಲಾಖೆ ಮತ್ತು ರಾಜ್ಯದ ಅಡ್ವೋಕೇಟ್‌ ಜನರಲ… ಅವರಿಗೆ ಸೂಚಿಸಿದ್ದೇನೆ. ಸುಪ್ರೀಂಕೋರ್ಚ್‌ ಆದೇಶ ಎಲ್ಲಾ ರಾಜ್ಯಗಳಿಗೆ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಅನ್ವಯವಾಗುತ್ತದೆ. ಆದರೆ, ಆದೇಶದ ಪ್ರತಿ ನಮಗೆ ಬಂದಿಲ್ಲ. ಆದೇಶದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಏನು ತೀರ್ಮಾನ ಮಾಡುತ್ತದೆಯೊ ಅದನ್ನು ಪಾಲಿಸಲಾಗುವುದು. ಚುನಾವಣಾ ಆಯೋಗದೊಂದಿಗೆ ಚರ್ಚೆ ಮಾಡಲಾಗುವುದು. ಬಿಜೆಪಿ ಎಲ್ಲ ಚುನಾವಣೆಗಳಿಗೂ ಸಿದ್ಧವಿದೆ.
- ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

ನಮಗೂ ತೀರ್ಪು ಅನ್ವಯ
ಸುಪ್ರೀಂ ಕೋರ್ಚ್‌ ನೀಡಿರುವ ಆದೇಶ ಎಲ್ಲ ರಾಜ್ಯಗಳಿಗೂ ಅನ್ವಯಿಸುತ್ತದೆ. ಹಾಗಾಗಿ ನಾವೂ ಈ ಆದೇಶ ಪಾಲಿಸಿ ಬಿಬಿಎಂಪಿ ಚುನಾವಣೆ ನಡೆಸಬೇಕಾಗುತ್ತದೆ. ವಾರ್ಡ್‌ ಪುನರ್‌ ವಿಂಗಡಣೆ ಪ್ರಕ್ರಿಯೆ ಚಾಲ್ತಿಯಲ್ಲಿದ್ದರೂ ಸುಪ್ರೀಂ ಆದೇಶದ ಹಿನ್ನೆಲೆಯಲ್ಲಿ ಇದುವರೆಗೆ ಇದ್ದ 198 ವಾರ್ಡುಗಳಿಗೇ ಚುನಾವಣೆ ನಡೆಸಬೇಕಾಗುತ್ತದೆ. ಇನ್ನು ಮೀಸಲಾತಿ ವಿಚಾರದಲ್ಲಿ ಕೊಂಚ ಗೊಂದಲವಿದೆ. ರಾಜ್ಯ ಅಡ್ವೊಕೇಟ್‌ ಜನರಲ್‌ ಅವರ ಅಭಿಪ್ರಾಯ ಪಡೆಯಲಾಗುವುದು. ಚುನಾವಣೆಗೆ ಬಿಜೆಪಿ ಹೆದರುವುದಿಲ್ಲ. ಹೇಗಿದ್ದರೂ ನಾವೇ ಗೆಲ್ಲುತ್ತೇವೆ. ಇದು ಶತಃಸಿದ್ಧ. ಹೀಗಿರುವಾಗ ಹೆದರಿಕೆ ಏಕೆ?
- ಆರ್‌. ಅಶೋಕ್‌ ಕಂದಾಯ ಸಚಿವ
 

Follow Us:
Download App:
  • android
  • ios