ಸಂಪುಟ, ಮೀಸಲಾತಿ: ಸಿಎಂ, ಅಮಿತ್ ಶಾ 2.5 ತಾಸು ಚರ್ಚೆ
ಪಂಚಮಸಾಲಿ, ಒಕ್ಕಲಿಗ ಸೇರಿದಂತೆ ವಿವಿಧ ಸಮುದಾಯಗಳು ಮೀಸಲಾತಿ ಹೆಚ್ಚಳಕ್ಕಾಗಿ ಹೋರಾಟ ನಡೆಸುತ್ತಿರುವಾಗಲೇ, ಸಾಮಾಜಿಕ ನ್ಯಾಯದ ಮಾನದಂಡ ಇಟ್ಟುಕೊಂಡು ಮೀಸಲಾತಿ ನೀಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬಿಜೆಪಿ ವರಿಷ್ಠರು ಸೂಚನೆ ನೀಡಿದ್ದಾರೆ.
ನವದೆಹಲಿ (ಡಿ.27): ಪಂಚಮಸಾಲಿ, ಒಕ್ಕಲಿಗ ಸೇರಿದಂತೆ ವಿವಿಧ ಸಮುದಾಯಗಳು ಮೀಸಲಾತಿ ಹೆಚ್ಚಳಕ್ಕಾಗಿ ಹೋರಾಟ ನಡೆಸುತ್ತಿರುವಾಗಲೇ, ಸಾಮಾಜಿಕ ನ್ಯಾಯದ ಮಾನದಂಡ ಇಟ್ಟುಕೊಂಡು ಮೀಸಲಾತಿ ನೀಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬಿಜೆಪಿ ವರಿಷ್ಠರು ಸೂಚನೆ ನೀಡಿದ್ದಾರೆ. ಇದೇ ವೇಳೆ, ಸಂಪುಟ ವಿಸ್ತರಣೆ/ಪುನಾರಚನೆ ಕುರಿತು ಬೊಮ್ಮಾಯಿ ಅವರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಆದರೆ ಈ ಬಗ್ಗೆ ಯಾವುದೇ ತೀರ್ಮಾನವನ್ನೂ ತಿಳಿಸದೇ ಇರುವುದು ಕುತೂಹಲ ಕೆರಳಿಸಿದೆ.
ಮಾಜಿ ಸಚಿವರಾದ ಕೆ.ಎಸ್.ಈಶ್ವರಪ್ಪ ಹಾಗೂ ರಮೇಶ್ ಜಾರಕಿಹೊಳಿ ಅವರಿಂದ ಸಂಪುಟ ಸೇರ್ಪಡೆ ಮತ್ತು ವಿವಿಧ ಸಮುದಾಯಗಳಿಂದ ಮೀಸಲಾತಿ ಹೆಚ್ಚಳಕ್ಕೆ ಒತ್ತಡ ತೀವ್ರವಾದ ಹಿನ್ನೆಲೆಯಲ್ಲಿ ಬೊಮ್ಮಾಯಿ ಅವರು ಸೋಮವಾರ ಸಂಜೆ ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದರು. ಈ ವೇಳೆ ಬಿಜೆಪಿ ರಾಷ್ಟ್ರೀಯ ಜೆ.ಪಿ.ನಡ್ಡಾ ಹಾಗೂ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ತಮ್ಮ ನಿವಾಸಕ್ಕೇ ಕರೆಸಿಕೊಂಡ ಅಮಿತ್ ಶಾ ಅವರು ಬೊಮ್ಮಾಯಿ ಸಮ್ಮುಖ ವಿವಿಧ ವಿಚಾರಗಳ ಬಗ್ಗೆ ಸುದೀರ್ಘ ಸಮಾಲೋಚನೆ ನಡೆಸಿದರು.
ಡಿ.30ಕ್ಕೆ ಮಂಡ್ಯದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ರ್ಯಾಲಿ
ಸಂಪುಟ ವಿಸ್ತರಣೆ ಬೇಡಿಕೆ ಕುರಿತ ಸಮಾಲೋಚನೆ ವೇಳೆ ಅಮಿತ್ ಶಾ ಅವರು ಪ್ರಾಂತ್ಯವಾರು ಹಾಗೂ ಜಾತಿವಾರು ಸಚಿವರ ಮಾಹಿತಿ ಪಡೆದರು. ಸಂಪುಟ ವಿಸ್ತರಣೆ ಕುರಿತು ಮತ್ತಷ್ಟುಚರ್ಚೆ ನಡೆಸಿ ತಿಳಿಸುವುದಾಗಿ ಹೇಳಿದರು ಎನ್ನಲಾಗಿದೆ. ಇದೇ ವೇಳೆ, ಕರ್ನಾಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಭೇಟಿ ನೀಡುವ ಕುರಿತಂತೆಯೂ ಈ ಮಾತುಕತೆ ವೇಳೆ ಪ್ರಸ್ತಾಪವಾಯಿತು ಎಂದು ಹೇಳಲಾಗಿದೆ.
ನ್ಯಾಯ ಕೊಡಿ ಎಂದರು- ಸಿಎಂ: ಸಭೆ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಸಿಎಂ, ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ವರಿಷ್ಠರು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಜನವರಿ 12ರಂದು ಪ್ರಧಾನಿ ಮೋದಿ, ಡಿ.30ರಂದು ಅಮಿತ್ ಶಾ ಅವರು ಕರ್ನಾಟಕಕ್ಕೆ ಭೇಟಿ ನೀಡಲಿದ್ದಾರೆ. ಸಭೆ ವೇಳೆ ಅವರ ಭೇಟಿ ಕುರಿತಾಗಿ ಚರ್ಚೆ ನಡೆಸಲಾಯಿತು. ಅಲ್ಲದೆ, ರಾಜ್ಯ ಸಚಿವ ಸಂಪುಟದ ಬಗ್ಗೆಯೂ ಶಾ ಅವರು ಮಾಹಿತಿ ಪಡೆದುಕೊಂಡಿದ್ದಾರೆ. ಇದೇ ವೇಳೆ, ವಿವಿಧ ಸಮುದಾಯಗಳಿಂದ ಬರುತ್ತಿರುವ ಮೀಸಲಾತಿ ಬೇಡಿಕೆ ಕುರಿತಾಗಿಯೂ ಚರ್ಚೆ ನಡೆಸಲಾಯಿತು. ಯಾರು, ಯಾರಿಗೆ ನ್ಯಾಯ ಕೊಡಬೇಕೋ ಅವರಿಗೆ ನ್ಯಾಯ ಕೊಡಿ. ಸಾಮಾಜಿಕ ನ್ಯಾಯದ ಮಾನದಂಡ ಇಟ್ಟುಕೊಂಡು ಮೀಸಲಾತಿ ಕೊಡಿ ಎಂದು ಅವರು ಸಲಹೆ ನೀಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಕೂಡ ಈ ವೇಳೆ ಉಪಸ್ಥಿತರಿದ್ದರು ಎಂದು ತಿಳಿಸಿದರು.
ಫೆಬ್ರವರಿಯಲ್ಲಿ ರಾಜ್ಯ ಬಜೆಟ್: ಸಿಎಂ ಬಸವರಾಜ ಬೊಮ್ಮಾಯಿ
ಇದಕ್ಕೂ ಮೊದಲು, ಸೋಮವಾರ ಬೆಳಗ್ಗೆ ಬೆಳಗಾವಿಯಲ್ಲಿ ಅಧಿವೇಶನದಲ್ಲಿ ಪಾಲ್ಗೊಂಡಿದ್ದ ಸಿಎಂ ರಾಜ್ಯಮಟ್ಟದ ಮಾಳಿ, ಮಾಲಗಾರ ಸಮಾವೇಶದಲ್ಲಿ ಭಾಗವಹಿಸಿದ್ದರು. ತರಾತುರಿಯಲ್ಲಿ ಸಮಾವೇಶ ಉದ್ಘಾಟಿಸಿ ಬಳಿಕ ಅವರು ದೆಹಲಿಗೆ ತೆರಳಿದರು. ಸಂಜೆ 7 ಗಂಟೆಗೆ ದೆಹಲಿಗೆ ಆಗಮಿಸಿದ ಸಿಎಂ, ನೇರವಾಗಿ ದೆಹಲಿಯ ಕೃಷ್ಣಮೆನನ್ ಮಾರ್ಗದಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ನಿವಾಸಕ್ಕೆ ತೆರಳಿ, ಶಾ ಜೊತೆ ಸುದೀರ್ಘ ಮಾತುಕತೆ ನಡೆಸಿದರು.