ಬಿಜೆಪಿಯ ರಾಜಕೀಯ ಚಾಣಾಕ್ಷ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಡಿ.30ರಂದು ಸಕ್ಕರೆ ನಾಡು ಮಂಡ್ಯ ಜಿಲ್ಲೆಗೆ ಆಗಮಿಸುತ್ತಿದ್ದಾರೆ. 2023ರ ಚುನಾವಣೆಯಲ್ಲಿ ಹಳೇ ಮೈಸೂರು ಭಾಗದಲ್ಲಿ ಕಮಲ ಅರಳಿಸಲು ಸಂಕಲ್ಪ ಮಾಡಿರುವ ಬಿಜೆಪಿ ನಾಯಕರು, ಮಂಡ್ಯದಲ್ಲಿ ಚುನಾವಣಾ ರಣಕಹಳೆ ಮೊಳಗಿಸಲಿದ್ದಾರೆ. 

ಮಂಡ್ಯ (ಡಿ.25): ಬಿಜೆಪಿಯ ರಾಜಕೀಯ ಚಾಣಾಕ್ಷ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಡಿ.30ರಂದು ಸಕ್ಕರೆ ನಾಡು ಮಂಡ್ಯ ಜಿಲ್ಲೆಗೆ ಆಗಮಿಸುತ್ತಿದ್ದಾರೆ. 2023ರ ಚುನಾವಣೆಯಲ್ಲಿ ಹಳೇ ಮೈಸೂರು ಭಾಗದಲ್ಲಿ ಕಮಲ ಅರಳಿಸಲು ಸಂಕಲ್ಪ ಮಾಡಿರುವ ಬಿಜೆಪಿ ನಾಯಕರು, ಮಂಡ್ಯದಲ್ಲಿ ಚುನಾವಣಾ ರಣಕಹಳೆ ಮೊಳಗಿಸಲಿದ್ದಾರೆ. ಜಿಲ್ಲೆಯಲ್ಲಿ ಈ ಬಾರಿ ಕನಿಷ್ಠ 6 ವಿಧಾನಸಭಾ ಕ್ಷೇತ್ರಗಳನ್ನು ಗೆಲ್ಲುವ ಗುರಿಯೊಂದಿಗೆ ಮುಖಂಡರು, ಕಾರ್ಯಕರ್ತರಲ್ಲಿ ರಣೋತ್ಸಾಹ ತುಂಬಲು ಸಜ್ಜಾಗಿದ್ದಾರೆ. ಡಿ.30ರಂದು ಬೆಳಗ್ಗೆ ಬೆಂಗಳೂರಿಗೆ ಆಗಮಿಸಲಿರುವ ಶಾ, ಅಲ್ಲಿಂದ ಮದ್ದೂರಿನ ಗೆಜ್ಜಲಗೆರೆಯಲ್ಲಿ ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ಮೆಗಾ ಡೇರಿಗೆ ಚಾಲನೆ ನೀಡಲಿದ್ದಾರೆ. 

ಬಳಿಕ, ಮಂಡ್ಯ ವಿಶ್ವವಿದ್ಯಾನಿಲಯದ ಆವರಣದಲ್ಲಿ ಆಯೋಜಿಸಿರುವ ಬಹಿರಂಗ ಸಭೆಯಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಸಚಿವ ಸಂಪುಟದ ಸಚಿವರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸಭೆ ಮುಗಿದ ಬಳಿಕ ಅಮಿತ್‌ ಶಾ ಅವರು ಬೆಂಗಳೂರು ಮೂಲಕ ದೆಹಲಿಗೆ ವಾಪಸ್ಸಾಗಲಿದ್ದಾರೆ ಎಂದು ತಿಳಿದು ಬಂದಿದೆ. ಅಮಿತ್‌ ಶಾ ಆಗಮನದ ವೇಳೆ ಲಕ್ಷಾಂತರ ಜನರನ್ನು ಕರೆ ತಂದು ಶಕ್ತಿ ಪ್ರದರ್ಶಿಸಲು ಬಿಜೆಪಿ ಸಜ್ಜಾಗಿದೆ. ಸಭೆ ಹಿನ್ನೆಲೆಯಲ್ಲಿ ಬಿಜೆಪಿಯ ಸ್ಥಳೀಯ ಮುಖಂಡರು ಶನಿವಾರ ಮಂಡ್ಯ ವಿಶ್ವವಿದ್ಯಾನಿಲಯದ ಬಳಿ ಸ್ಥಳ ಪರಿಶೀಲನೆ ನಡೆಸಿದರು.

ಸಂಪುಟ ವಿಸ್ತರಣೆಗೆ ಮತ್ತೆ ಸಮಯ ನೀಡ್ತೇನೆಂದ ಅಮಿತ್‌ ಶಾ!

ಫೆಬ್ರವರಿಯಲ್ಲಿ ಮೋದಿ ಭೇಟಿ?: ಫೆಬ್ರವರಿಯಲ್ಲಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌-ವೇ ಉದ್ಘಾಟನೆಗಾಗಿ ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯಕ್ಕೆ ಭೇಟಿ ನೀಡಲಿದ್ದು, ಆ ವೇಳೆ, ಮಂಡ್ಯಕ್ಕೂ ಭೇಟಿ ನೀಡಲಿದ್ದಾರೆ. ಮಂಡ್ಯದಲ್ಲಿ ಬೃಹತ್‌ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ಬಿಜೆಪಿಯ ಮೂಲಗಳು ತಿಳಿಸಿವೆ.

ಅಭಿವೃದ್ಧಿಗಾಗಿ ಅಮಿತ್‌ ಶಾ ಬರುತ್ತಿಲ್ಲ: ರಾಜ್ಯದ ಅಭಿವೃದ್ಧಿಗಾಗಿ ಅಮಿತ್‌ ಶಾ ಮಂಡ್ಯಕ್ಕೆ ಬರುತ್ತಿಲ್ಲ. ಚುನಾವಣಾ ಉದ್ದೇಶವನ್ನಿಟ್ಟುಕೊಂಡು ಬರುತ್ತಿದ್ದಾರೆ. ರಾಜ್ಯದ ಜನರ ಸಮಸ್ಯೆ ಬಗೆಹರಿಸಲು ಅವರಾರ‍ಯರೂ ಬರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಟೀಕಿಸಿದರು. ಶ್ರೀರಂಗಪಟ್ಟಣ ತಾಲೂಕು ಕೆಆರ್‌ಎಸ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮಂಡ್ಯಕ್ಕೆ ಅಮಿತ್‌ ಶಾ ಬರುತ್ತಿರುವುದರಲ್ಲಿ ಆಶ್ಚರ್ಯವಿಲ್ಲ. ಇನ್ನೂ ಮೂರು ತಿಂಗಳು ಕರ್ನಾಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಎಲ್ಲರೂ ಬರಬಹುದು. ಈಗಾಗಲೇ ಕೇಂದ್ರ ಸರ್ಕಾರದ ಮಂತ್ರಿಗಳ ದಂಡು ಬರುತ್ತಲೇ ಇದೆ. ಅಮಿತ್‌ ಶಾ, ಮೋದಿ ಚುನಾವಣೆಗಾಗಿ ಬರುತ್ತಿದ್ದಾರೆಯೇ ವಿನಃ ಕರ್ನಾಟಕದ ಅಭಿವೃದ್ಧಿಗೆ ಬರುತ್ತಿಲ್ಲ ಎಂದು ಕಿಡಿಕಾರಿದರು.

ಸಂಪುಟ ಸರ್ಕಸ್‌: ಸೋಮವಾರ ಸಿಎಂ ಬೊಮ್ಮಾಯಿ ದಿಲ್ಲಿಗೆ

ಕರ್ನಾಟಕ ಜಲ, ಗಡಿ, ಭಾಷೆ ಹಾಗೂ ಜನರ ಸಮಸ್ಯೆ ಬಗೆಹರಿಸಲು ಅವರು ಯಾವತ್ತಿಗೂ ಬರೋಲ್ಲ. ಚುನಾವಣೆಯಲ್ಲಿ ಮತ ಕೇಳಲು ಮಾತ್ರ ಬರುತ್ತಾರೆ. ಇವೆಲ್ಲವೂ ಜನರಿಗೆ ಗೊತ್ತಿದೆ. ಅವರು ಏನೇ ಮಾಡಿದರೂ ಈ ಭಾಗದಲ್ಲಿ ಅವರ ಆಟ ಏನೂ ನಡೆಯೋಲ್ಲ ಎಂದು ವಿಶ್ವಾಸದಿಂದ ನುಡಿದರು. ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗುತ್ತೇನೆ ಎಂದು ಹೇಳಿರುವ ವಿಚಾರವಾಗಿ ಪ್ರಶ್ನಿಸಿದಾಗ, ಬೇರೆ ಪಕ್ಷದ ನಾಯಕರು ಅವರ ಪಕ್ಷಕ್ಕೆ ಮತ ಹಾಕಿ ಎಂದು ಜನರನ್ನು ಕೇಳುವುದರಲ್ಲಿ ತಪ್ಪಿಲ್ಲ. ಆದರೆ, ನಾನೇ ಮುಖ್ಯಮಂತ್ರಿಯಾಗುತ್ತೇನೆ ಎನ್ನುವುದರಲ್ಲಿ ಅರ್ಥವಿಲ್ಲ. ರಾಜ್ಯದಲ್ಲಿ ಬಹಳ ಜನ ಮುಖ್ಯಮಂತ್ರಿಯಾಗುತ್ತೇನೆ ಎಂದು ಆಸೆ ಪಟ್ಟಿದ್ದಾರೆ. ಯಾರು ಮುಖ್ಯಮಂತ್ರಿ ಆಗಬೇಕೆಂದು ನಿರ್ಧಾರ ಮಾಡುವವರು ಜನ. ದೇವರ ಇಚ್ಚೆ ಹಾಗೂ ಜನರ ತೀರ್ಮಾನ ಏನಿದೆಯೋ ಕಾದುನೋಡಬೇಕಲ್ಲವೇ ಎಂದರು. ಶಾಸಕರಾದ ಸಿ.ಎಸ್‌.ಪುಟ್ಟರಾಜು, ರವೀಂದ್ರ ಶ್ರೀಕಂಠಯ್ಯ ಇದ್ದರು.