ವಾಷಿಂಗ್ಟನ್‌ (29): ಐಸಿಸ್‌ನ ಪರಮೋಚ್ಛ ನಾಯಕ ಅಬೂಬಕರ್‌ ಅಲ್‌ ಬಾಗ್ದಾದಿಯನ್ನು ಅಮೆರಿಕದ ಎಲೈಟ್‌ ಡೆಲ್ಟಾಫೋರ್ಸ್‌ ಮಟ್ಟಹಾಕಿದೆ. ಆತನ ಅಡಗುದಾಣ ಪತ್ತೆಗೆ ಕುರ್ದೀಶ್‌ ಹಾಗೂ ಇರಾಖ್‌ ಗುಪ್ತಚರ ಇಲಾಖೆಯೊಂದಿಗೆ ಅಮೆರಿಕದ ಕೇಂದ್ರಿಯ ಗುಪ್ತಚರ ದಳ (ಸಿಐಎ) ಹಲವು ತಿಂಗಳಿನಿಂದ ಕಾರ್ಯತಂತ್ರ ರೂಪಿಸಿತ್ತು ಎಂದು ತಿಳಿದು ಬಂದಿದೆ.

ಬಾಗ್ದಾದಿ ಸಾಂಭವ್ಯ ಅಡಗುದಾಣಗಳ ಬಗ್ಗೆ ಕಲೆ ಹಾಕುತ್ತಿದ್ದ ಸಿಐಗೆ ಸುಳಿವು ಕೊಟ್ಟಿದ್ದು, ಆತನ ಓರ್ವ ಹೆಂಡತಿ ಹಾಗೂ ಮಾಹಿತಿದಾರ ಬಂಧನ. ಕೆಲ ತಿಂಗಳ ಹಿಂದೆ ಅವರಿಬ್ಬರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಬಾಗ್ದಾದಿಯ ಅಡಗುದಾಣದ ಬಗ್ಗೆ ಬಾಯಿ ಬಿಟ್ಟಿದ್ದರು.

ಬಾಗ್ದಾದಿ ಸಾವು: ಹೇಡಿ ನಾಯಿ ಸತ್ತ ಎಂದ ಅಮೆರಿಕಾ ಅಧ್ಯಕ್ಷ ಟ್ರಂಪ್

ಇದರನ್ವಯ ಕುರ್ದೀಶ್‌ ಹಾಗೂ ಇರಾಖ್‌ ಗುಪ್ತಚರ ಇಲಾಖೆಯೊಂದಿಗೆ ಸೇರಿ ಆತನ ಚಲನ ವಲನಗಳ ಬಗ್ಗೆ ಸಿಐಎ ಮಾಹಿತಿ ಕಲೆ ಹಾಕಿತ್ತು. ಅಲ್ಲದೇ ಸಿರಿಯಾದಿಂದ ಅಮೆರಿಕ ಸೇನೆಯನ್ನು ಹಿಂಪಡೆಯುವುದಾಗಿ ಟ್ರಂಪ್‌ ಘೋಷಿಸಿದ ಬಳಿಕ ಆತನ ಅಡಗುದಾಣ ಸೇರಿದಂತೆ ಆತನ ಎಲ್ಲಾ ಮಾಹಿತಿಗಳು ಕುದ್‌ರ್‍ಗಳು ಸಿಐಎಗೆ ನೀಡುತ್ತಿದ್ದರು.

ಎರಡೆರಡು ಬಾರಿ ಕಾರ್ಯಾಚರಣೆ ವಾಪಸ್‌!

ಬಾಗ್ದಾದಿಯನ್ನು ಜೀವಂತ ಹಿಡಿಯುವ ಅಥವಾ ಆತನನ್ನು ಕೊಲ್ಲುವ ಯೋಜನೆಗೆ ಭಾರೀ ಅಡಚಣೆ ಉಂಟು ಮಾಡಿದ್ದು, ಆತ ಅಡಗಿದ್ದ ಸ್ಥಳ. ಐಸಿಸ್‌ನ ಕಪಿ ಮುಷ್ಠಿಯಲ್ಲಿದ್ದ ಆ ಸ್ಥಳದ ವಾಯು ಸೀಮೆ ರಷ್ಯಾ ಹಾಗೂ ಸಿರಿಯಾದ ಸುಪರ್ದಿಯಲ್ಲಿದ್ದರಿಂದ, ದಾಳಿ ನಡೆಸುವುದು ಸವಾಲಿನ ಕೆಲಸವಾಗಿತ್ತು. ಹಲವು ಬಾರಿ ತಾಲೀಮು ನಡೆಸಿ, ಯೋಜನೆ ರೂಪಿಸಿದ್ದರೂ ಎರಡೆರಡು ಬಾರಿ ಕೊನೆ ಕ್ಷಣದಲ್ಲಿ ಅಮೆರಿಕ ಸೈನ್ಯ ಕಾರ್ಯಾಚರಣೆ ವಾಪಸ್‌ ಪಡೆದಿತ್ತು ಎಂದು ಮೂಲಗಳು ತಿಳಿಸಿವೆ.

ಒಂದೆರಡು ದಿನ ತಡವಾಗಿದ್ದರೆ ತಪ್ಪಿಸಿಕೊಳ್ಳುತ್ತಿದ್ದ ಕಿರಾತಕ

ಎರಡೆರಡು ಬಾರಿ ದಾಳಿ ನಡೆಸಲು ಸಜ್ಜಾಗಿ, ಕೊನೆ ಕ್ಷಣದಲ್ಲಿ ವಾಪಸ್‌ ಪಡೆದಿದ್ದ ಅಮೆರಿಕ ಸೇನೆ, ಇನ್ನೂ ಒಂದೆರಡು ದಿನ ತಡವಾಗಿದ್ದರೆ ಬಾಗ್ದಾದಿ ಅಲ್ಲಿಂದ ತಪ್ಪಿಸಿಕೊಳ್ಳುತ್ತಿದ್ದ ಎಂದು ತಿಳಿದು ಬಂದಿದೆ. ಆತ ಅಡಗುದಾಣವನ್ನು ಬದಲಾಯಿಸುವ ಮಾಹಿತಿ ಬಂದ ಕ್ಷಣ ಕಾರ್ಯ ಪ್ರವೃತರಾದ ಎಲೈಟ್‌ ಪಡೆ ತಡ ಮಾಡದೇ ದಾಳಿ ಮಾಡಿ ಆತನನ್ನು ಹೊಸಕಿ ಹಾಕಿದೆ. ಆತ ವಾಸ ಸ್ಥಳ ಬದಲಿಸಿದ್ದರೆ, ಮತ್ತೆ ಆತನ ಪತ್ತೆ ಭಾರೀ ಕಷ್ಟವಾಗುತ್ತಿತ್ತು. ಹಾಗಾಗಿ ಮೂರೇ ದಿನದಲ್ಲಿ ಯೋಜನೆಯಂತೆ ಎಲ್ಲಾ ಮಾಡಿ ಮುಗಿಸಲಾಗಿದೆ ಎಂದು ಗೊತ್ತಾಗಿದೆ.

ಕಮಾಂಡರ್‌ ಮನೆಯಲ್ಲಿ ಆಶ್ರಯ

ಹತ್ಯೆಯಾಗುವ ವೇಳೆ ಬಾಗ್ದಾದಿ ಮತ್ತೊಂದು ಉಗ್ರ ಸಂಘಟನೆ ಹುರಾಸ್‌-ಅಲ್‌ ದೀನ್‌ನ ಕಮಾಂಡರ್‌ ಅಬೂ ಮೊಹಮ್ಮದ್‌ ಸಲಾಮ ಎಂಬಾತನ ಮನೆಯಲ್ಲಿ ಆಶ್ರಯ ಪಡೆದಿದ್ದ. ಅಲ್ಲೇ ಅವನನ್ನು ಕೊಲ್ಲಲಾಗಿದ್ದು, ದಾಳಿ ವೇಳೆ ಸಲಾಮನನ್ನು ಕೊಲ್ಲಾಗಿದೆಯೇ ಅಥವಾ ಅತನಿಗೂ ಬಾಗ್ದಾದಿಗೂ ಇರುವ ಸಂಬಂಧದ ಬಗ್ಗೆ ತಿಳಿದು ಬಂದಿಲ್ಲ.