ಪಂಚ ರಾಜ್ಯಗಳ ಹೀನಾಯ ಸೋಲಿನ ಹೊರತಾಗಿಯೂ ಗಾಂಧೀ ಕುಟುಂಬದ ಕುಡಿ ರಾಹುಲ್‌ ಗಾಂಧಿಗೇ ಮತ್ತೆ ಪಕ್ಷದ ಅಧ್ಯಕ್ಷ ಸ್ಥಾನ ನೀಡಬೇಕೆಂಬ ಬಲವಾದ ಕೂಗು ಕಾಂಗ್ರೆಸ್‌ ನಾಯಕರಿಂದ ಕೇಳಿಬಂದಿದೆ. 

ನವದೆಹಲಿ (ಮಾ.14): ಪಂಚ ರಾಜ್ಯಗಳ ಹೀನಾಯ ಸೋಲಿನ ಹೊರತಾಗಿಯೂ ಗಾಂಧೀ ಕುಟುಂಬದ ಕುಡಿ ರಾಹುಲ್‌ ಗಾಂಧಿಗೇ (Rahul Gandhi) ಮತ್ತೆ ಪಕ್ಷದ ಅಧ್ಯಕ್ಷ ಸ್ಥಾನ ನೀಡಬೇಕೆಂಬ ಬಲವಾದ ಕೂಗು ಕಾಂಗ್ರೆಸ್‌ ನಾಯಕರಿಂದ ಕೇಳಿಬಂದಿದೆ. ಇತ್ತೀಚಿನ ಚುನಾವಣಾ ಸೋಲಿನ ಪರಾಮರ್ಶೆಗೆ ಭಾನುವಾರ ಆಯೋಜನೆಗೊಂಡಿದ್ದ ಸಿಡಬ್ಲುಸಿ ಸಭೆಗೂ (CWC Meeting) ಮುನ್ನ ಪಕ್ಷದ ಹಲವಾರು ನಾಯಕರು ರಾಹುಲ್‌ ಪರ ಬ್ಯಾಟಿಂಗ್‌ ಮಾಡಿದ್ದಾರೆ.

ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌, ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಯುವ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ್‌, ಅಲ್ಕಾ ಲಂಬಾ ಸೇರಿದಂತೆ ಹಲವಾರು ನಾಯಕರು ರಾಹುಲ್‌ ಗಾಂಧಿ ಅವರನ್ನೇ ಪಕ್ಷದ ನೂತನ ಅಧ್ಯಕ್ಷರನ್ನಾಗಿ ನೇಮಿಸಬೇಕೆಂದು ಒತ್ತಾಯಿಸಿದ್ದಾರೆ. ಈ ನಡುವೆ ಗಾಂಧೀ ಕುಟುಂಬದ 2 ವರ್ಷಗಳಿಂದ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸುತ್ತಿರುವ ಜಿ-23 ನಾಯಕರು ಮಾತ್ರ, ಪಕ್ಷದ ಹಿರಿಯ ಮುಕುಲ್‌ ವಾಸ್ನಿಕ್‌ ಅವರಿಗೆ ಅಧ್ಯಕ್ಷ ಹುದ್ದೆ ನೀಡಬೇಕೆಂಬ ಪ್ರಸ್ತಾಪ ಮಾಡಿದ್ದಾರೆ.

ರಾಹುಲ್‌ಗೆ ಹುದ್ದೆ: ಸಿಡಬ್ಲ್ಯುಸಿ ಸಭೆಗೂ ಮುನ್ನ ಮಾತನಾಡಿದ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌, ಪ್ರಧಾನಿ ಮೋದಿ ವಿರುದ್ಧ ರಾಹುಲ್‌ ಗಾಂಧಿ ದೃಢ ನಿಶ್ಚಯದಿಂದ ಹೋರಾಡುವಷ್ಟುಯಾರೂ ಹೋರಾಡುತ್ತಿಲ್ಲ. ಪ್ರತಿ ಬಾರಿಯೂ ಪ್ರಧಾನಿ ತಮ್ಮ ಭಾಷಣವನ್ನು ರಾಹುಲ್‌ ಗಾಂಧಿ ಗುರಿಯಾಗಿಸಿಕೊಂಡೇ ಆರಂಭಿಸುತ್ತಾರೆ ಎನ್ನುವುದೇ ರಾಹುಲ್‌ ಸಾಮರ್ಥ್ಯಕ್ಕೆ ಸಾಕ್ಷಿ. ಹೀಗಾಗಿ ನಾವೆಲ್ಲರೂ ಮರಳಿ ರಾಹುಲ್‌ ಗಾಂಧಿ ಅವರೇ ಪಕ್ಷದ ಅಧ್ಯಕ್ಷರಾಗುವುದನ್ನು ಎದುರು ನೋಡುತ್ತಿದ್ದೇವೆ ಎಂದು ಹೇಳಿದ್ದಾರೆ.

CWC meeting: ಸೋನಿಯಾ ಪದತ್ಯಾಗ ಇಂಗಿತ, ಕಾಂಗ್ರೆಸ್ ಮುಂದಿನ ನಡೆ ಏನು!?

ಇನ್ನೊಂದೆಡೆ ಟ್ವೀಟ್‌ ಮಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ‘ಈ ಹಿಂದೆಯೂ ಹೇಳಿದಂತೆ ತಕ್ಷಣವೇ ರಾಹುಲ್‌ ಗಾಂಧಿ ಪಕ್ಷದ ಅಧ್ಯಕ್ಷ ಹುದ್ದೆ ವಹಿಸಿಕೊಳ್ಳಬೇಕು. ಇದು ದೇಶಾದ್ಯಂತ ಇರುವ ಪಕ್ಷದ ಲಕ್ಷಾಂತರ ಕಾರ್ಯಕರ್ತರ ಆಶಯ’ಎಂದಿದ್ದಾರೆ. ಮತ್ತೊಂದೆಡೆ ದೇಶದ ಅಖಂಡತೆಗಾಗಿ ಸರ್ವಸ್ವವನ್ನು ತ್ಯಾಗ ಮಾಡಿದ ಗಾಂಧಿ ಪರಂಪರೆಯನ್ನು ಅಳಿಸಿ ಹಾಕಲು ಹಲವು ಷಡ್ಯಂತ್ರಗಳು ನಡೆದಿವೆ. ಆದರೆ ಅವು ಎಂದಿಗೂ ಯಶಸ್ವಿಯಾಗಿಲ್ಲ. ಗಾಂಧಿ ಕುಟುಂಬವು ಕಾಂಗ್ರೆಸ್‌ ಮಾತ್ರವಲ್ಲದೇ ದೇಶದ ಎಲ್ಲಾ ವರ್ಗಗಳನ್ನು ಒಟ್ಟಿಗೆ ಸೇರಿಸುವ ದಾರವಾಗಿದೆ. ಇದು ಯಾವುದೇ ಚುನಾವಣೆಯ ಸೋಲು ಗೆಲುವಿನ ಮೇಲೆ ಅವಲಂಬಿತವಾಗಿಲ್ಲ ಎಂದು ಯುವ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್‌ ಗಾಂಧಿ ಕುಟುಂಬ ಮತ್ತು ರಾಹುಲ್‌ ಪರ ಬ್ಯಾಟಿಂಗ್‌ ಮಾಡಿದ್ದಾರೆ.

ಸಭೆಗೆ ಮನಮೋಹನ್‌ ಸೇರಿ ನಾಲ್ವರು ಹಿರಿಯರು ಗೈರು: ಪಂಚ ರಾಜ್ಯಗಳಲ್ಲಿ ಕಾಂಗ್ರೆಸ್‌ ಸೋಲಿನ ಹಿನ್ನೆಲೆಯಲ್ಲಿ ಸೋಲಿನ ಬಗ್ಗೆ ಚರ್ಚಿಸಲು ಭಾನುವಾರ ಕರೆದಿದ್ದ ಸಿಡಬ್ಲುಸಿ ಸಭೆಗೆ ಮಾಜಿ ಪ್ರಧಾನಿ ಕಾಂಗ್ರೆಸ್‌ನ ಹಿರಿಯ ನಾಯಕ ಮನಮೋಹನ್‌ ಸಿಂಗ್‌ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಗೈರಾಗಿದ್ದಾರೆ. ಮನಮೋಹನ್‌ ಸಿಂಗ್‌ ಮಾತ್ರವಲ್ಲದೆ ಮಾಜಿ ರಕ್ಷಣಾ ಸಚಿವ ಎ.ಕೆ. ಆಂಟೋನಿ ಸೇರಿ ಒಟ್ಟು ನಾಲ್ವರು ಪ್ರಮುಖ ನಾಯಕರು ಸಭೆಗೆ ಗೈರಾಗಿದ್ದು, ಆಂಟೋನಿ ಅವರು ಕೋವಿಡ್‌ನಿಂದ ಚೇತರಿಕೆಯಾಗದ ಹಿನ್ನೆಲೆಯಲ್ಲಿ ಸಭೆಗೆ ಹಾಜರಾಗಿಲ್ಲ ಎಂದು ಅವರ ಪುತ್ರ ಸ್ಪಷ್ಟಪಡಿಸಿದ್ದಾರೆ.ಇವರ ಜೊತೆಗೆ ಸಂಸದ ಎ.ಚೆಲ್ಲಾಕುಮಾರ್‌, ಮಣಿಪುರದ ಮಾಜಿ ಉಪ ಮುಖ್ಯಮಂತ್ರಿ ಗೈಖಾಂಗಮ್‌, ತಾರೀಕ್‌ ಹಮೀದ್‌ ಕರ್ರಾ ಮತ್ತು ಸಂಜೀವ್‌ ರೆಡ್ಡಿ ಅವರು ಈ ಸಭೆಗೆ ಗೈರು ಹಾಜರಾಗಿದ್ದರು.

ಹೊಸ ಅಧ್ಯಕ್ಷನ ಸೂಚಿಸಿದ ಬಂಡಾಯ ನಾಯಕರು: ಪಂಚ ರಾಜ್ಯಗಳ ಸೋಲಿನಿಂದ ಕಂಗೆಟ್ಟಿರುವ ಕಾಂಗ್ರೆಸ್ ದೆಹಲಿಯಲ್ಲಿ ಪರಾಮರ್ಶೆ ಸಭೆ ನಡೆಸುತ್ತಿದೆ. ಕಾಂಗ್ರೆಸ್ ಡಿಸಿಶನ್ ಮೇಕಿಂಗ್ ಬಾಡಿ, ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ಸೇರಿ ಮಹತ್ವದ ಚರ್ಚೆ ನಡೆಸುತ್ತಿದೆ. ಸಭೆಯಲ್ಲಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ, ನಾಯಕ ರಾಹುಲ್ ಗಾಂಧಿ ಸೇರಿ ಹಲವರು ಭಾಗಿಯಾಗಿದ್ದಾರೆ. ಈ ಸಭೆಗೂ ಮುನ್ನ ಕಾಂಗ್ರೆಸ್ ಜಿ23 ಬಂಡಾಯ ನಾಯಕರು ಹೊಸ ಅಧ್ಯಕ್ಷನ ಹೆಸರನ್ನು ಸೂಚಿಸಿದೆ. ಹೀಗಾಗಿ ಇಂದಿನ ಸಭೆ ಮತ್ತಷ್ಟು ಕಗ್ಗಂಟಾಗಿದೆ. ಪಂಚ ರಾಜ್ಯಗಳ ಸೋಲು ಕಾಂಗ್ರೆಸ್ ಪಕ್ಷಕ್ಕೆ ಇನ್ನಿಲ್ಲದ ಹಿನ್ನಡೆ ತಂದುಕೊಟ್ಟಿದೆ. 

Congress Working Committee Meet ಇಂದು ಐತಿಹಾಸಿಕ ಘಟನೆ ನಡೆವ ಬಗ್ಗೆ ಭಾರಿ ವದಂತಿ

ಪಂಜಾಬ್‌ನಲ್ಲಿ ಅಧಿಕಾರವನ್ನು ಕಳೆದುಕೊಂಡಿರುವ ಕಾಂಗ್ರೆಸ್ ಮುಂಬರವು ಚುನಾವಣೆಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರಲು ಮಾರ್ಗಸೂಚಿಗಳನ್ನು ರೂಪಿಸಲು ಹಾಗೂ ಪಕ್ಷದಲ್ಲಿನ ಭಿನ್ನಮತ ಶಮನಗೊಳಿಸಲು ಈ ಸಭೆಯಲ್ಲಿ ಪ್ರಮುಖವಾಗಿ ಚರ್ಚಿಸಲಾಗಿದೆ. ಈ ಸಭೆಗೂ ಮುನ್ನ ಜಿ23 ಬಂಡಾಯ ನಾಯಕರು ಹಿರಿಯ ನಾಯಕ ಗುಲಾಮ್ ನಬಿ ಆಜಾದ್ ನಿವಾಸದಲ್ಲಿ ಸಭೆ ಸೇರಿ ಮಹತ್ವದ ನಿರ್ಧಾರ ಪ್ರಕಟಿಸಿದ್ದಾರೆ. ಕಾಂಗ್ರೆಸ್ ಹಿರಿಯನ ನಾಯಕ ಮುಕುಲ್ ವಾಸ್ನಿಕ್‌ಗೆ ಕಾಂಗ್ರೆಸ್ ಅಧ್ಯಕ್ಷ ಪಟ್ಟ ಕಟ್ಟಲು ಬಂಡಾಯ ನಾಯಕರು ಸೂಚಿಸಿದ್ದಾರೆ.