* ಎಲ್‌ಜೆಪಿ ವರ್ಸಸ್‌ ಎಲ್‌ಜೆಪಿ* ಪಶುಪತಿ ಬಣದಿಂದ ಚಿರಾಗ್‌ ಉಚ್ಚಾಟನೆ* ಇದಕ್ಕೆ ಪ್ರತಿಯಾಗಿ 5 ಸಂಸದರ ಉಚ್ಚಾಟಿಸಿದ ಚಿರಾಗ್‌

ನವದೆಹಲಿ/ಪಟನಾ(ಜೂ.16): ಬಿಹಾರದ ಲೋಕ ಜನಶಕ್ತಿ ಪಕ್ಷದಲ್ಲಿ (ಎಲ್‌ಜೆಪಿ) ಆಂತರಿಕ ಕಲಹ ತಾರಕ್ಕೇರಿದೆ. ಎಲ್‌ಜೆಪಿ ಅಧ್ಯಕ್ಷ ಚಿರಾಗ್‌ ಪಾಸ್ವಾನ್‌ ತಮ್ಮ ಪಕ್ಷದ ಐವರು ಸಂಸದರನ್ನು ಉಚ್ಚಾಟನೆ ಮಾಡಿದ್ದಾರೆ. ಆದರೆ, ಇದಕ್ಕೆ ಪ್ರತಿಯಾಗಿ ಚಿರಾಗ್‌ ಅವರನ್ನೇ ಪಕ್ಷದ ಅಧ್ಯಕ್ಷ ಹುದ್ದೆಯಿಂದ ಚಿಕ್ಕಪ್ಪ ಪಶುಪತಿ ಕುಮಾರ್‌ ಪಾರಸ್‌ ವಜಾ ಮಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಚಿರಾಗ್‌ ವಿರುದ್ಧ ಬಂಡೆದ್ದಿರುವ ಸಂಸದರ ಗುಂಪು ಪಾರಸ್‌ ಅವರನ್ನು ಸಂಸದೀಯ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಿತ್ತು. ಆ ಬಳಿಕ ಪಕ್ಷದ ಮೇಲೆ ನಿಯಂತ್ರಣ ಸಾಧಿಸಲು ಚಿರಾಗ್‌ ಹಾಗೂ ಪಾರಸ್‌ ಗುಂಪಿನ ಮಧ್ಯೆ ಪೈಪೋಟಿ ಆರಂಭವಾಗಿದೆ. ಇತರ ಐವರು ಸಂಸದರು ಪಾರಸ್‌ ಬೆಂಬಲಕ್ಕೆ ನಿಂತಿರುವುದರಿಂದ ಏಕಾಂಗಿಯಾಗಿರುವ ಚಿರಾಗ್‌ ಪಾಸ್ವಾನ್‌ ಇತರ ನಾಯಕರ ಬೆಂಬಲ ಪಡೆಯಲು ಯತ್ನ ನಡೆಸಿದ್ದಾರೆ.

ಇದೇ ವೇಳೆ ಎರಡೂ ಗುಂಪಿನ ಸದಸ್ಯರು ಪಕ್ಷ ತಮಗೇ ಸೇರಿದ್ದು ಎಂದು ಹೇಳಿಕೊಂಡಿದ್ದು, ಪಕ್ಷ ಯಾರಿಗೆ ಸೇರಿದ್ದು ಎಂಬುದು ಚುನಾವಣಾ ಆಯೋಗದ ಮೆಟ್ಟಿಲೇರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿದೆ.

ಮಾತೃದ್ರೋಹ ಸಲ್ಲದು- ಚಿರಾಗ್‌:

ಇದೇ ವೇಳೆ ಪಕ್ಷದಿಂದಲೇ ತಮ್ಮನ್ನು ಹೊರಹಾಕಿರುವುದರ ಕುರಿತು ಪ್ರತಿಕ್ರಿಯಿಸಿರುವ ಚಿರಾಗ್‌ ಪಾಸ್ವಾನ್‌, ಪಕ್ಷ ತಾಯಿಗೆ ಸಮಾನ. ಅದಕ್ಕೆ ಯಾರೂ ದ್ರೋಹ ಎಸಗಬಾರದು. ತಂದೆ ರಾಮ್‌ ವಿಲಾಸ್‌ ಪಾಸ್ವಾನ್‌ ಅವರಿಂದ ಸ್ಥಾಪಿತವಾದ ಪಕ್ಷ ಮತ್ತು ಕುಟುಂಬವನ್ನು ಒಟ್ಟಾಗಿ ಕೊಂಡೊಯ್ಯುವ ತಮ್ಮ ಪ್ರಯತ್ನ ವಿಫಲವಾಗಿದೆ ಎಂದು ಹೇಳಿದ್ದಾರೆ.