ಶ್ರೀಲಂಕಾ ಬಂದರಿಗೆ ಬರಲಿದೆ ಚೀನಾದ ಹಡಗು, ನೌಕಾಸೇನೆ ಹೈ ಅಲರ್ಟ್!
ತೈವಾನ್ ಗಡಿಯಲ್ಲಿ ಚೀನಾ ತನ್ನ ಸೇನಾ ಸಮರಾಭ್ಯಾಸ ಆರಂಭಿಸಿದ ಬೆನ್ನಲ್ಲಿಯೇ ಗುರುವಾರ ಮಧ್ಯಾಹ್ನದ ವೇಳೆ ಸಿಡಿಸಿದ 11 ಕ್ಷಿಪಣಿಗಳ ಪೈಕಿ 5 ಕ್ಷಿಪಣಿಗಳು ಜಪಾನ್ ದೇಶದ ಪ್ರದೇಶದಲ್ಲಿ ಬಿದ್ದಿವೆ. ಯುದ್ಧಾಂತಕ ಹೆಚ್ಚಾಗಿರುವ ಸಮಯದಲ್ಲಿಯೇ ಚೀನಾದ ಸಂಶೋಧನಾ ಮತ್ತು ಸರ್ವೇಕ್ಷಣಾ ಹಡಗು ಮುಂದಿನ ವಾರ ಶ್ರೀಲಂಕಾದ ಬಂದರಿಗೆ ಆಗಮಿಸಲಿರುವುದು ಭಾರತದ ಆತಂಕಕ್ಕೆ ಕಾರಣವಾಗಿದೆ.
ನವದೆಹಲಿ (ಆ.4): ತೈವಾನ್ ಗಡಿಯಲ್ಲಿ ಚೀನಾದ ಸಮರಾಭ್ಯಾಸ ಆರಂಭವಾದ ಬೆನ್ನಲ್ಲಿಯೇ ಏಷ್ಯಾ ಪೆಸಿಪಿಕ್ ವಲಯದಲ್ಲಿ ಯುದ್ಧಾಂತಕ ಶುರುವಾಗಿದೆ. ಇದರ ನಡುವೆ ಗುರುವಾರ ಚೀನಾ ತೈವಾನ್ ಭಾಗದ ಬಳಿ ಉಡಾವಣೆ ಮಾಡಿದ 11 ಖಂಡಾಂತರ ಕ್ಷಿಪಣಿಗಳ ಪೈಕಿ 5 ಕ್ಷಿಪಣಿಗಳು ಜಪಾನ್‌ನ ವಿಶೇಷ ಆರ್ಥಿಕ ವಲಯದಲ್ಲಿ ಬಿದ್ದಿರುವುದು ಕೋಲಾಹಲಕ್ಕೆ ಕಾರಣವಾಗಿದೆ. ತಕ್ಷಣವೇ ಚೀನಾ ತನ್ನ ಸಮರಾಭ್ಯಾಸ ನಿಲ್ಲಿಸುವಂತೆ ಜಪಾನ್ ಹೇಳಿರುವ ನಡುವೆಯೇ, ಭಾರತದ ಪ್ರದೇಶದಲ್ಲೂ ಚೀನಾದ ಆತಂಕ ಶುರುವಾಗಿದೆ. ಚೀನಾದ ಸಂಶೋಧನಾ ಮತ್ತು ಸರ್ವೇಕ್ಷಣಾ ಹಡಗು ಮುಂದಿನ ವಾರ ಶ್ರೀಲಂಕಾದ ಬಂದರಿಗೆ ಆಗಮಿಸಲಿರುವುದು ಭಾರತದ ಆತಂಕಕ್ಕೆ ಕಾರಣವಾಗಿದೆ.ಚೀನಾದ ಹಡಗು ಯುವಾನ್ ವಾಂಗ್ 5, ಶ್ರೀಲಂಕಾದ ಹಂಬಂಟೋಟ ಬಂದರಿನಲ್ಲಿ ಮರುಪೂರಣಕ್ಕೆ ಅವಕಾಶ ನೀಡುವಂತೆ ಶ್ರೀಲಂಕಾಕ್ಕೆ ಮನವಿ ಮಾಡಿದೆ. ಆಗಸ್ಟ್ 11 ರಂದು ಶ್ರೀಲಂಕಾದ ಬಂದರಿಗೆ ಈ ಹಡಗು ಬರಲಿದೆ. ಶ್ರೀಲಂಕಾ ನೆಲದಲ್ಲಿ ಚೀನಾದ ಒಡೆತನದಲ್ಲಿರುವ ಹಂಬಂಟೋಟ ಬಂದರಿನಲ್ಲಿ ಚೀನಾ ತನ್ನ ಹಡಗಿನ ಮರುಪೂರಣ ಮಾಡಿಕೊಳ್ಳಲಿದೆ. ಭಾರತ ಈ ಪರಿಸ್ಥಿತಿಯನ್ನು ಗಮನಿಸುತ್ತಿರುವುದಾಗಿ ಹೇಳಿದೆ. ಇನ್ನೊಂದೆಡೆ ಶ್ರೀಲಂಕಾ ಇದರ ಬಗ್ಗೆ ಹೆಚ್ಚಿನ ಆತಂಕ ಬೇಡ ಎಂದು ಭಾರತಕ್ಕೆ ಹೇಳಿದೆ.
ಶ್ರೀಲಂಕಾದ ರಕ್ಷಣಾ ಸಚಿವಾಲಯದ ಮಾಧ್ಯಮ ವಕ್ತಾರ ಕರ್ನಲ್ ನಳಿನ್ ಹೆರಾತ್, ಹಡಗು ಮಿಲಿಟರಿ ಸ್ಥಾಪನೆಗಳನ್ನು ಮೇಲ್ವಿಚಾರಣೆ ಮಾಡುವ ಸಾಮರ್ಥ್ಯವನ್ನು ಹೊಂದಿರುವುದರಿಂದ ಭಾರತದ ಕಾಳಜಿಯನ್ನು ಶ್ರೀಲಂಕಾ ಅರ್ಥಮಾಡಿಕೊಂಡಿದೆ, ಆದರೆ ಇದು ಚೀನಾದ ವಾಡಿಕೆಯ ವ್ಯಾಯಾಮವಾಗಿದೆ. "ಭಾರತ, ಚೀನಾ ರಷ್ಯಾ, ಜಪಾನ್ ಮತ್ತು ಮಲೇಷ್ಯಾದ ನೌಕಾಪಡೆಯ ಹಡಗುಗಳು ಕಾಲಕಾಲಕ್ಕೆ ವಿನಂತಿಸಿದ ಕಾರಣ ನಾವು ಚೀನಾಕ್ಕೆ ಅನುಮತಿ ನೀಡಿದ್ದೇವೆ. ಪರಮಾಣು ಸಾಮರ್ಥ್ಯದ ಹಡಗು ನಮ್ಮ ದಾರಿಯಲ್ಲಿ ಬಂದಾಗ ಮಾತ್ರ ನಾವು ಪ್ರವೇಶವನ್ನು ನಿರಾಕರಿಸಬಹುದು. ಇದು ಪರಮಾಣು ಸಾಮರ್ಥ್ಯದ ಹಡಗು ಆಗಿರದ ಕಾರಣ ಅನುಮತಿ ನಿರಾಕರಿಸಲು ಸಾಧ್ಯವಿಲ್ಲ ಎಂದು ಕರ್ನಲ್ ಹೆರಾತ್ ಹೇಳಿದ್ದಾರೆ. ಹಡಗನ್ನು ಹಿಂದೂ ಮಹಾಸಾಗರದಲ್ಲಿ ಕಣ್ಗಾವಲು ಮತ್ತು ಸಂಚರಣೆಗಾಗಿ ಕಳುಹಿಸುತ್ತಿರುವುದಾಗಿ ಚೀನಾ, ಶ್ರೀಲಂಕಾಕ್ಕೆ ತಿಳಿಸಿದ್ದಾರೆ.
ತೈವಾನ್ ಕಡೆ 5 ಕ್ಷಿಪಣಿ ಹಾರಿಸಿದ ಚೀನಾ, ಜಪಾನ್‌ನ ಆರ್ಥಿಕ ವಲಯದಲ್ಲಿ ಬ್ಲಾಸ್ಟ್!
ಅತ್ಯಾಧುನಿಕ ಹಡಗು: ಚೀನಾದ ಹಡಗು ಯುವಾನ್ ವಾಂಗ್ 5, ಮರುಪೂರಣಕ್ಕೆ ಶ್ರೀಲಂಕಾ ಅನುಮತಿ ಕೋರಿದೆ. ಡಾಕಿಂಗ್‌ಗೆ ಬಫರ್ ಸಮಯವು ಆಗಸ್ಟ್ 11 ರಿಂದ 17 ರವರೆಗೆ ಇರುತ್ತದೆ. "ಹಿಂದೂ ಮಹಾಸಾಗರದಲ್ಲಿ ಕಣ್ಗಾವಲು ಮತ್ತು ಸಂಚರಣೆಗಾಗಿ ಅವರು ತಮ್ಮ ಹಡಗನ್ನು ಕಳುಹಿಸುತ್ತಿದ್ದಾರೆ ಎಂದು ಚೀನಾ ನಮಗೆ ತಿಳಿಸಿದೆ" ಎಂದು ಕರ್ನಲ್ ಹೆರಾತ್ ಹೇಳಿದ್ದಾರೆ. ಶ್ರೀಲಂಕಾದ ರಕ್ಷಣಾ ಸಚಿವಾಲಯದ ಮೂಲಗಳ ಪ್ರಕಾರ ಚೀನಾದ ಹಡಗು ಬಹಳಷ್ಟು ಅತ್ಯಾಧುನಿಕ ಸಾಮರ್ಥ್ಯಗಳನ್ನು ಹೊಂದಿರುವ ಅತ್ಯಂತ ಸಮರ್ಥ, ಸುಧಾರಿತ ನೌಕಾ ಹಡಗು ಎಂದು ಹೇಳಿದೆ.
ನ್ಯಾನ್ಸಿ ಪೆಲೋಸಿ ಭೇಟಿ ಬಳಿಕ ತೈವಾನ್ ಬಳಿ ಮಿಲಿಟರಿ ಕಸರತ್ತು ಆರಂಭಿಸಿದ ಚೀನಾ
2014ರಲ್ಲೂ ಇದೇ ರೀತಿಯ ಪರಿಸ್ಥಿತಿ: 2014ರಲ್ಲಿ ಚೀನಾದ ಎರಡು ಜಲಾಂತರ್ಗಾಮಿ ನೌಕೆಗಳು ಹಂಬನ್‌ತೋಟ ಬಂದರಿಗೆ ಬಂದಾಗಲೂ ಇದೇ ರೀತಿಯ ಪರಿಸ್ಥಿತಿ ನಿರ್ಮಾಣವಾಗಿತ್ತು. ಆಗ ಚೀನಾ, ಜಲಾಂತರ್ಗಾಮಿ ನೌಕೆಯನ್ನು ಕಳುಹಿಸಿರುವ ಬಗ್ಗೆ ಭಾರತ ಹೋಗಲಿ ಸ್ವತಃ ಶ್ರೀಲಂಕಾಕ್ಕೂ ತಿಳಿಸಿರಲಿಲ್ಲ. ಅಂದಿನಿಂದ, ಶ್ರೀಲಂಕಾ ಬಂದರುಗಳಿಗೆ ಅಂತಹ ಯಾವುದೇ ಚೀನೀ ಜಲಾಂತರ್ಗಾಮಿ ಭೇಟಿಗಳು ನಡೆದಿಲ್ಲ. ಭಾರತವು "ಭಾರತದ ಭದ್ರತೆ ಮತ್ತು ಆರ್ಥಿಕ ಹಿತಾಸಕ್ತಿಗಳ ಮೇಲೆ ಯಾವುದೇ ಬೇರಿಂಗ್ ಅನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತದೆ ಮತ್ತು ಅವುಗಳನ್ನು ರಕ್ಷಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ" ಎಂದು ಭಾರತ ಸ್ಪಷ್ಟಪಡಿಸಿದೆ. $1.4-ಬಿಲಿಯನ್ ಹಂಬಂಟೋಟಾ ಬಂದರು ಸೇರಿದಂತೆ ಮೂಲಸೌಕರ್ಯ ಯೋಜನೆಗಳಿಗಾಗಿ ಬೀಜಿಂಗ್‌ಗೆ ಹೆಚ್ಚಿನ ಮೊತ್ತದ ಹಣವನ್ನು ನೀಡಬೇಕಿರುವ ಶ್ರೀಲಂಕಾದಲ್ಲಿ ಚೀನಾದ ಹೆಚ್ಚುತ್ತಿರುವ ಪ್ರಭಾವದ ಬಗ್ಗೆ ಭಾರತವು ಕೂಡ ಎಚ್ಚರಿಕೆಯಲ್ಲಿದೆ.