ನವದೆಹಲಿ(ಸೆ.30): ಪೂರ್ವ ಲಡಾಖ್‌ ಗಡಿಯಲ್ಲಿ ಆಕ್ರಮಣಕಾರಿ ವರ್ತನೆ ತೋರಿ, ಭಾರತ ನೀಡಿದ ತಿರುಗೇಟಿನಿಂದ ತತ್ತರಿಸಿ ಹೋಗಿರುವ ಚೀನಾ ಇದೀಗ ಹೊಸ ವರಸೆ ತೆಗೆದಿದೆ. ಲಡಾಖ್‌ ಕೇಂದ್ರಾಡಳಿತ ಪ್ರದೇಶಕ್ಕೆ ತನ್ನ ಮಾನ್ಯತೆ ಇಲ್ಲ ಎಂದು ಹೇಳುವ ಮೂಲಕ ಉದ್ಧಟತನ ಮೆರೆದಿದೆ. ಇದು ಭಾರತವನ್ನು ಪ್ರಚೋದಿಸುವ ಕ್ರಮವಲ್ಲದೆ ಮತ್ತೇನೂ ಅಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.

ಭಾರತ ಸರ್ಕಾರ ಲಡಾಖ್‌ಗೆ ಅಕ್ರಮವಾಗಿ ಕೇಂದ್ರಾಡಳಿತ ಪ್ರದೇಶ ಸ್ಥಾನಮಾನ ನೀಡಿದೆ. ಈ ಕೇಂದ್ರಾಡಳಿತ ಪ್ರದೇಶವನ್ನು ಚೀನಾ ಪರಿಗಣಿಸುವುದಿಲ್ಲ. ಸೇನಾ ಉದ್ದೇಶಗಳಿಗಾಗಿ ವಿವಾದಿತ ಪ್ರದೇಶಗಳಲ್ಲಿ ಮೂಲಸೌಕರ್ಯ ನಿರ್ಮಾಣಕ್ಕೆ ನಮ್ಮ ವಿರೋಧವಿದೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್‌ ವೆನ್‌ಬಿನ್‌ ತಿಳಿಸಿದ್ದಾರೆ.

ಇತ್ತೀಚೆಗೆ ಭಾರತ ಹಾಗೂ ಚೀನಾ ನಡುವೆ ಕೆಲವೊಂದು ವಿಷಯಗಳ ಸಂಬಂಧ ಒಮ್ಮತವೇರ್ಪಟ್ಟಿದೆ. ಆ ಪ್ರಕಾರ, ಪರಿಸ್ಥಿತಿಯನ್ನು ಮತ್ತಷ್ಟುಬಿಗಡಾಯಿಸುವಂತಹ ಯಾವುದೇ ಚಟುವಟಿಕೆಗಳನ್ನು ಗಡಿ ಪ್ರದೇಶಗಳಲ್ಲಿ ಉಭಯ ದೇಶಗಳೂ ಕೈಗೆತ್ತಿಕೊಳ್ಳುವಂತಿಲ್ಲ ಎಂದು ಅವರು ಹೇಳಿದ್ದಾರೆ ಎಂದು ಚೀನಾ ಸರ್ಕಾರದ ಮುಖವಾಣಿ ಪತ್ರಿಕೆ ಗ್ಲೋಬಲ್‌ ಟೈಮ್ಸ್‌ ಟ್ವೀಟ್‌ ಮಾಡಿದೆ.

ಜಮ್ಮು-ಕಾಶ್ಮೀರದ ಭಾಗವಾಗಿದ್ದ ಲಡಾಖ್‌ ಅನ್ನು ಕಳೆದ ವರ್ಷ ಆ.5ರಂದು ಪ್ರತ್ಯೇಕಿಸಿದ್ದ ಕೇಂದ್ರ ಸರ್ಕಾರ, ಕೇಂದ್ರಾಡಳಿತ ಪ್ರದೇಶದ ಸ್ಥಾನಮಾನ ನೀಡಿದೆ. ಪೂರ್ವ ಲಡಾಖ್‌ ಗಡಿಯಲ್ಲಿ ಸಂಘರ್ಷ ನಡೆಸಿದ್ದ ಚೀನಾಕ್ಕೆ ಭಾರತ ತಕ್ಕ ತಿರುಗೇಟು ಕೊಟ್ಟಿದೆ. ಗಡಿಯಲ್ಲಿ ಸೇನಾ ಜಮಾವಣೆ ಮಾಡಿದ್ದು, ಯುದ್ಧದ ರೀತಿಯ ವಾತಾವರಣ ಕಂಡುಬರುತ್ತಿದೆ. ಭಾರತದಿಂದ ಈ ರೀತಿಯ ಪ್ರತಿಕ್ರಿಯೆ ನಿರೀಕ್ಷಿಸದೇ ಇದ್ದ ಚೀನಾ ಹತಾಶೆಗೆ ಒಳಗಾಗಿ ಲಡಾಖ್‌ ವಿಷಯ ಪ್ರಸ್ತಾಪಿಸಿದೆ ಎಂದು ಹೇಳಲಾಗುತ್ತಿದೆ.

ಸಾಮ್ರಾಜ್ಯಶಾಹಿ ಮನಸ್ಥಿತಿ ಹೊಂದಿರುವ ಚೀನಾ ದೇಶ ಟಿಬೆಟ್‌ ಹಾಗೂ ಹಾಂಕಾಂಗ್‌ ಅನ್ನು ಅತಿಕ್ರಮಿಸಿಕೊಂಡಿದೆ ಎಂಬ ವಾದ ಮೊದಲಿನಿಂದಲೂ ಇದೆ. ಹಾಂಕಾಂಗ್‌ನಲ್ಲಿ ಪ್ರತಿಭಟನಾಕಾರರನ್ನು ಹತ್ತಿಕ್ಕುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆಂಗಣ್ಣಿಗೆ ಗುರಿಯಾಗಿದೆ.