ಲಡಾಖ್‌ನಲ್ಲಿ ಒಎಫ್‌ಸಿ ಕೇಬಲ್: ಸಂಘರ್ಷ ಮುಂದುವರೆಸಲು ಚೀನಾ ಸಿದ್ಧತೆ!
ಲಡಾಖ್‌ನಲ್ಲಿ ಒಎಫ್‌ಸಿ ಕೇಬಲ್ ಎಳೆಯುತ್ತಿದೆ ಚೀನಾ| ಪ್ಯಾಂಗಾಂಗ್ ಲೇಕ್‌ನ ಉತ್ತರಕ್ಕೆ ಕೇಬಲ್ ಅಳವಡಿಸಿದ ನಂತರ ಈಗ ದಕ್ಷಿಣಕ್ಕೆ| ದೀರ್ಘಕಾಲ ಸಂಘರ್ಷ ಮುಂದುವರೆಸಲು ಚೀನಾ ಸಿದ್ಧತೆ: ಸೇನಾಧಿಕಾರಿಗಳು
ಲೇಹ್(ಸೆ.15) ಪೂರ್ವ ಲಡಾಖ್‌ನ ಪ್ಯಾಂಗಾಂಗ್ ಸರೋವರದ ಪ್ರದೇಶಗಳಲ್ಲಿ ಭಾರತದ ಜೊತೆಗೆ ತಿಂಗಳುಗಳಿಂದ ಸಂಘರ್ಷದಲ್ಲಿ ತೊಡಗಿರುವ ಚೀನಾ ಇದೀಗ ವಿವಾದಿತ ಪ್ರದೇಶಗಳಲ್ಲಿ ಉತ್ತಮ ಸಂವಹನಕ್ಕಾಗಿ ಆಪ್ಟಿಕಲ್ ಫೈಬರ್ ಕೇಬಲ್ (ಒಎಫ್‌ಸಿ) ಎಳೆಯತೊಡಗಿದೆ.
ತಿಂಗಳ ಹಿಂದೆ ಪ್ಯಾಂಗಾಂಗ್ ಸರೋವರದ ಉತ್ತರ ಭಾಗದಲ್ಲಿ ಈ ಕೇಬಲ್ ಅಳವಡಿಸಿದ್ದ ಚೀನಾ ಇದೀಗ ದಕ್ಷಿಣ ಭಾಗದಲ್ಲೂ ಕೇಬಲ್ ಎಳೆಯುತ್ತಿದೆ ಎಂದು ತಿಳಿದುಬಂದಿದೆ. ವಿವಾದಿತ ಪ್ರದೇಶದಿಂದ ಹಿಂದಿರುವ ತನ್ನ ಸೇನಾ ನೆಲೆಗಳ ಜೊತೆಗೆ ಸುಲಭವಾಗಿ ಮತ್ತು ಸುರಕ್ಷಿತವಾಗಿ ಸಂಪರ್ಕ ಸಾಧಿಸಲು ಚೀನಾ ಈ ಕೇಬಲ್ ಅಳವಡಿಸುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಈ ಪ್ರದೇಶಗಳಲ್ಲಿ ಭಾರತೀಯ ಯೋಧರು ರೇಡಿಯೋ ಮೂಲಕ ಸಂವಹನ ನಡೆಸುತ್ತಾರೆ. ಅದರ ಮಾಹಿತಿಯನ್ನು ಶತ್ರುಗಳು ಕದಿಯಬಹುದು. ಆದರೆ, ಒಎಫ್‌ಸಿ ಮೂಲಕ ನಡೆಸುವ ಮಾತುಕತೆಯನ್ನು ಕದ್ದಾಲಿಸಲು ಸಾಧ್ಯವಿಲ್ಲ. ಮೇಲಾಗಿ ವಿವಾದಿತ ಸ್ಥಳದಿಂದ ಚೀನಾ ತನ್ನ ಸೇನೆಯ ಮುಖ್ಯ ಕಚೇರಿಗಳಿಗೆ ಬೇಗ ಫೋಟೋ, ವಿಡಿಯೋ ಮುಂತಾದವುಗಳನ್ನು ರವಾನಿಸಬಹುದು ಎಂದು ಹೇಳಿದ್ದಾರೆ.
‘ಸ್ಥಳದಿಂದ ಎರಡೂ ದೇಶಗಳು ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು ಎಂದು ಕಳೆದ ವಾರ ಉಭಯ ದೇಶಗಳ ವಿದೇಶಾಂಗ ಸಚಿವರ ನಡುವಿನ ಮಾತುಕತೆಯಲ್ಲಿ ನಿರ್ಧಾರವಾಗಿದ್ದರೂ ಚೀನಾ ಒಎಫ್‌ಸಿ ಕೇಬಲ್ ಅಳವಡಿಸುತ್ತಿರುವುದನ್ನು ನೋಡಿದರೆ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುವ ಅಥವಾ ವಿವಾದ ಬಗೆಹರಿಸುವ ಇರಾದೆ ಆ ದೇಶಕ್ಕೆ ಇದ್ದಂತಿಲ್ಲ. ದೀರ್ಘಕಾಲ ಈ ಸಂಘರ್ಷ ಮುಂದುವರೆಸಲು ಚೀನಾ ಸಜ್ಜಾಗಿರುವಂತೆ ತೋರುತ್ತದೆ’ ಎಂದು ಭಾರತೀಯ ಸೇನೆಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.