ನವದೆಹಲಿ(ಆ.01): ಜಗತ್ತಿನ ಅತ್ಯಂತ ಶಕ್ತಿಶಾಲಿ ಯುದ್ಧ ವಿಮಾನಗಳಲ್ಲಿ ಮುಂಚೂಣಿ ಸಾಲಿನಲ್ಲಿರುವ ರಫೇಲ್‌ ಲೋಹ ಹಕ್ಕಿಗಳು ಭಾರತೀಯ ವಾಯುಪಡೆಗೆ ಹಸ್ತಾಂತರವಾಗಿದ್ದೇ ತಡ ನೆರೆ ದೇಶಗಳು ತಲ್ಲಣಗೊಂಡಿರುವುದು ಸ್ಪಷ್ಟವಾಗುತ್ತಿದೆ. 

ರಫೇಲ್‌ ಯುದ್ಧ ವಿಮಾನ ಖರೀದಿ ಮೂಲಕ ಭಾರತ ಶಸ್ತ್ರಾಸ್ತ್ರ ಜಮಾವಣೆ ಮಾಡುತ್ತಿದೆ ಎಂದು ಪಾಕಿಸ್ತಾನ ಟೀಕಿಸಿದ ಬೆನ್ನಲ್ಲೇ, ರಫೇಲ್‌ ಯುದ್ಧ ವಿಮಾನವನ್ನು ಟೀಕಿಸುವ ಧಾವಂತದಲ್ಲಿ ಅದಕ್ಕೆ ಸರಿಸಾಟಿಯಾದ ವಿಮಾನ ತನ್ನಲ್ಲಿ ಇಲ್ಲ ಎಂದು ಪರೋಕ್ಷವಾಗಿ ಚೀನಾ ಕೂಡ ಒಪ್ಪಿಕೊಂಡಿದೆ.

ರಫೇಲ್‌ ಯುದ್ಧ ವಿಮಾನವನ್ನು ಭಾರತ ಖರೀದಿಸಿದಾಗ ಅದಕ್ಕಿಂತ ಶ್ರೇಷ್ಠವಾದ ಚೆಂಗ್ಡು ಜೆ-20 ವಿಮಾನ ತನ್ನಲ್ಲಿದೆ, ಅದು 5ನೇ ಪೀಳಿಗೆಯ ವಿಮಾನ ಎಂದು ಚೀನಾ ಬಡಾಯಿ ಕೊಚ್ಚಿಕೊಂಡಿತ್ತು. ಆದರೆ ಚೀನಾ ಸರ್ಕಾರದ ಅಧಿಕೃತ ಮುಖವಾಣಿಯಾಗಿರುವ ಗ್ಲೋಬಲ್‌ ಟೈಮ್ಸ್‌ ಪತ್ರಿಕೆ ರಫೇಲ್‌ ಸಾಮರ್ಥ್ಯವನ್ನು ಅಲ್ಲಗಳೆಯುವ ಭರದಲ್ಲಿ ಜೆ-20 ವಿಮಾನ 5ನೇ ಪೀಳಿಗೆಯದ್ದಲ್ಲ, 4ನೇ ಪೀಳಿಗೆಯದ್ದು ಎಂದು ಒಪ್ಪಿಕೊಂಡಿದೆ. ಈ ಮೂಲಕ 4.5ನೇ ಪೀಳಿಗೆಯ ರಫೇಲ್‌ ವಿಮಾನಕ್ಕಿಂತ ಜೆ-20 ಶ್ರೇಷ್ಠವಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.

ಅಂಬಾಲದಲ್ಲೇ ಯಾಕೆ ರಫೇಲ್ ಇಳಿಯಿತು? ಇಲ್ಲಿದೆ ಕಾರಣ

ಭಾರತದ ಬಳಿ ಇರುವ ಸುಖೋಯ್‌ ಯುದ್ಧ ವಿಮಾನಗಳು 4ನೇ ಪೀಳಿಗೆಯ ವಿಮಾನ ಎನಿಸಿಕೊಂಡಿವೆ. ಈ ವಿಮಾನಗಳಿಗೆ ರಾಡಾರ್‌ ಕಣ್ತಪ್ಪಿಸಿ ಹಾರಾಡುವ ಸಾಮರ್ಥ್ಯ ಇಲ್ಲ. ಚೀನಾ ತನ್ನ ಜೆ-20 ವಿಮಾನ 5ನೇ ಪೀಳಿಗೆಯದ್ದು ಎಂದು ಹೇಳಿಕೊಂಡರೂ ಆ ವಿಮಾನದ ಮೇಲೆ ಸುಖೋಯ್‌ ಈ ಹಿಂದೆ ನಿಗಾ ಇಟ್ಟ ನಿದರ್ಶನಗಳು ಇವೆ. ಈಗ ಚೀನಿ ಪತ್ರಿಕೆಯೇ ಆ ಸತ್ಯವನ್ನು ಪರೋಕ್ಷವಾಗಿ ಒಪ್ಪಿಕೊಂಡಿದೆ.

ಸುಖೋಯ್‌ ಯುದ್ಧ ವಿಮಾನಗಳಿಗಿಂತ ರಫೇಲ್‌ ಉತ್ಕೃಷ್ಟ ಏನಲ್ಲ. ರಫೇಲ್‌ 3ನೇ ಪೀಳಿಗೆಯ ವಿಮಾನ ಅಷ್ಟೆ. ಅದರಿಂದ ಲಾಭವೇನೂ ಆಗುವುದಿಲ್ಲ. ಜೆ20ಯಂತಹ 4ನೇ ಪೀಳಿಗೆಯ ವಿಮಾನವೂ ಅದಲ್ಲ ಎಂದು ಗ್ಲೋಬಲ್‌ ಟೈಮ್ಸ್‌ ಲೇಖನ ಪ್ರಕಟಿಸಿದೆ. 4ನೇ ಪೀಳಿಗೆಯ ವಿಮಾನಗಳು ರಾಡಾರ್‌ ಕಣ್ತಪ್ಪಿಸಲು ಆಗುವುದಿಲ್ಲ. ಆದರೆ ರಫೇಲ್‌ಗೆ ಆ ಸಾಮರ್ಥ್ಯ ಇದೆ.