Asianet Suvarna News Asianet Suvarna News

ದೇಶ ತುಂಬಿಕೊಂಡ ಮೂರು 'ಸಿ', ಒಬ್ಬರಿಗೊಬ್ಬರ ಮಸಿ!

ದೇಶದೆಲ್ಲಡೆ 'ಸಿ' ಯದ್ದೇ ಚರ್ಚೆ/ ಮೂರು 'ಸಿ' ಗಳು/ ಚೀನಾ, ಕಾಂಗ್ರೆಸ್, ಕೊರೋನಾ/ ಆರೋಪ ಪ್ರತ್ಯಾರೋಪ/ ಮೂರು ವಿಚಾರಗಳು ಸದ್ಯದ ಚರ್ಚೆ

china coronavirus and congress debate in India
Author
Bengaluru, First Published Jun 28, 2020, 10:36 PM IST

ಡೆಲ್ಲಿ ಮಂಜು

ಸಿ ಫಾರ್... ಸಿ ಫಾರ್...ಸಿ ಫಾರ್..! ಇಡೀ ಒಂದು ವಾರದಿಂದ ಸದ್ದು ಮಾಡಿದ 'ಪದ' ಇದು. ದೆಹಲಿಯ ಚಾಣಕ್ಯಪುರಿ, ಜನಪಥ್ ನಿಂದ ಹಿಡಿದು ಗಾಲ್ವಾನ್ ಕಣಿವೆಯ ತನಕ  ಕೇಳುವಂತೆ ಸದ್ದು ಮಾಡ್ತು.
ಸಿ ಫಾರ್ ಅಂದ್ರೆ ಚೀನಾ...
ಸಿ ಫಾರ್ ಅಂದ್ರೆ ಕಾಂಗ್ರೆಸ್... 
ಸಿ ಫಾರ್ ಅಂದ್ರೆ ಕೊರೊನಾ..!

ಸಿ ಫಾರ್...!

'ಸಿ' ಫಾರ್..!  ಅಂದ್ರೆ ಚೀನಾ ಅಂಥ.. ಗಡಿ ತಂಟೆ ಮಾಡಿ ನಮ್ಮ 20 ವೀರ ಜವಾನರನ್ನು ಬಲಿ ತೆಗೆದುಕೊಂಡು ಬಿಡ್ತು. ಒಂದಿಷ್ಟು ಮಂದಿ ಗಾಯಗೊಂಡರು. ಇಂಡೋ-ಚೀನಾ ಗಡಿಯಲ್ಲಿ ಆಯುಧಗಳ ಬಳಕೆ ಮಾಡುವಂತೆ ಇಲ್ಲ ಅಂತಲೆ ನಮ್ಮ ಯೋಧರನ್ನು ಹುತಾತ್ಮರಾಗಿಸಿದ್ದು ಪ್ರತಿ ಭಾರತೀಯನ ರಕ್ತ ಕುದಿಯುವಂತೆ ಮಾಡಿದೆ.. ಗಾಲ್ವಾನ್ ಕಣಿವೆಯಲ್ಲಿ ಭಾರತ ಕೂಡ ಪ್ರತ್ಯುತ್ತರ ಕೊಟ್ಟಿದ್ದು ಸುಳ್ಳುಲ್ಲ.

ಅತ್ತ ಭಾರತದ ಬೆಂಬಲಕ್ಕೆ ಅಮೆರಿಕಾ  ನಿಂತಿದ್ದು, ಗಡಿಯಲ್ಲಿ ಕ್ಯಾತೆ ತೆಗೆದ್ರೆ ತಕ್ಕ ಶಾಸ್ತಿ ಗ್ಯಾರಂಟಿ ಅಂಥ ಸಂದೇಶ ಕಳುಹಿಸಿದ್ದೂ ಆಗಿದೆ.

ಆದ್ರೆ ಯುದ್ಧವೊಂದೇ ಪರಿಹಾರವಾ? ಶಾಂತಿಗೆ ಜಾಗ ಇಲ್ವಾ? ಅನ್ನೋ ಪ್ರಶ್ನೆ ದೆಹಲಿಯ ಚಾಣಕ್ಯಪುರಿಯ (ವಿಶ್ವದ ಎಲ್ಲಾ ದೇಶಗಳ ರಾಯಭಾರಿ ಕಚೇರಿಗಳು, ಹೈ ಕಮೀಷನರ್ ಕಚೇರಿಗಳು ಇರುವ ಜಾಗ) ಮೂಲೆ ಮೂಲೆಯಲ್ಲೂ ಕೇಳಿಬರುತ್ತಿದೆ.

ಈ ವರ್ಷದ ಆರಂಭದಲ್ಲಿ ಮಹಾಬಲಿಪುರಂ ನಲ್ಲಿ ನಡೆದ ಇಂಡೋ-ಚೀನಾ ಮಾತುಕತೆ ಅಷ್ಟಾಗಿ ಫಲಪ್ರದವಾದಂತೆ ಇಲ್ಲ ಅನ್ನೋ ವಲಯ ಒಂದು ಕಡೆಯಾದ್ರೆ, ಚೀನಾಗೆ ಸರಿಯಾದ ಉತ್ತರ ಕೊಡಲು ಇಂಡಿಯಾಕ್ಕೆ ಸಕಾಲ. ನಾವೂ ಏನು ಕಮ್ಮಿ ಇಲ್ಲ ಅನ್ನೋ ವಲಯ ಮತ್ತೊಂದು ಕಡೆ. ಇಷ್ಟರ ನಡುವೆ ರಾಜತಾಂತ್ರಿಕರ ಸಭೆಗಳು ನಡೆದಿವೆ, ಮಿಲಿಟರಿ ಹಿರಿಯ ಅಧಿಕಾರಿಗಳ ನಡುವೆ ಮಾತುಕತೆ ನಡೆದಿದೆ. ಇನ್ನೇನಿದ್ದರು ಎರಡು ರಾಷ್ಟ್ರಗಳ ಲೀಡರ್ ಗಳು ಮಾತಾಡಿಕೊಂಡು ಸಮಸ್ಯೆ ಬಗೆಹರಿಸಿಕೊಳ್ಳಬೇಕಿದೆ ಅನ್ನೋದೇ ಬಹುತೇಕ ಶಾಂತಿಪ್ರಿಯರ ಅನಿಸಿಕೆ.

ಕೈಮೀರಿದ ಕೊರೋನಾ, ಹೊಸ ಮಾತ್ರೆ ಬಂದಿದೆ ನೋಡೋಣ

ಮಿಲಿಟರಿ ಪರೇಡ್ ಗಳು, ಏರ್ ಶೋ ಗಳಲ್ಲಿ ಪ್ರದರ್ಶನಕ್ಕೆ ಇಟ್ಟು ಆಯುಧಗಳ ಬಳಕಗೆ ಯಾವುದೇ ದೇಶ ಮುಂದಾದ್ರೂ ಇಬ್ಬರಿಗೂ ಒಳಿತಲ್ಲ ಅನ್ನೋದು ಸತ್ಯಸಂಗತಿ. ಹಾಗಂತ ದೇಶದ ಭದ್ರತೆ ಯೊಂದಿಗೆ ರಾಜಿ ಮಾಡಿಕೊಳ್ಳೊದು ಕೂಡ ಸರಿ ಅಲ್ಲ. 

ಸಿ ಫಾರ್...!

ಈ 'ಸಿ' ಫಾರ್ ಗೆ ಚೀನಾ ಸಂಬಂಧ ತಳಕು ಹಾಕಿಕೊಂಡಿದೆ. ಆಗಲೇ ಹೇಳಿದಂತೆ 'ಸಿ' ಫಾರ್ ಅಂದ್ರೆ ಕಾಂಗ್ರೆಸ್. ಆ ಚೀನಾ ಮತ್ತು ಈ ಕಾಂಗ್ರೆಸ್ ಎರಡೂ ಸಂಕಷ್ಟಕ್ಕೆ ಸಿಲುಕಿವೆ.
ಮೇ ನಲ್ಲೇ ಚೀನಾ ಯೋಧರು ಇಂಡಿಯಾ ಗಡಿದಾಟಿದ್ರು. ಲಡಾಯಿ ನಡೆಸಿ ನಮ್ಮ ಸೈನಿಕರನ್ನು ಹುತಾತ್ಮರಾಗಿಸಿದ್ದು ಕೂಡ ಇಂಡಿಯಾ ಜಾಗದಲ್ಲೇ. ರಾಷ್ಟ್ರೀಯ ಭದ್ರತೆ ವಿಷಯದಲ್ಲಿ  ಮೋದಿ ಸರ್ಕಾರ ರಾಜಿಯಾಗಿದೆ. ಗಡಿಯಲ್ಲಿ ನಡೆದ ಘಟನೆಯೇ ಬೇರೆ. ಮೋದಿ ಸರ್ಕಾರ ಹೇಳುತ್ತಿರುವುದೇ ಬೇರೆ. ವಾಸ್ತವವಾಗಿ ಏನ್ ನಡೀತು ? 'ಇಂಡಿಯಾ ವಾಂಟ್ಸ್  ಟು ನೋ ' ಅಂಥ ಕಾಂಗ್ರೆಸ್ ಪಟ್ಟು ಹಿಡಿದಿದೆ.

ಕಾಂಗ್ರೆಸ್ ಹೀಗೆ ಪ್ರಶ್ನೆ ಕೇಳ್ತಾ... ಕೇಳ್ತಾ.. ? ರಾಜೀವ್ ಗಾಂಧಿ ಫೌಂಡೇಶನ್ ಗೆ ಅದೇ ಚೀನಾ ದೇಶದಿಂದ ಪಡೆದ 90 ಲಕ್ಷ ರೂಪಾಯಿ ಈಗ ಲೆಕ್ಕ ಕೊಡುವ ಸ್ಥಿತಿಗೆ ಬಂದಿದೆ.

ರಾಷ್ಟ್ರೀಯ ಭದ್ರತೆ ಹೆಸರಿನಲ್ಲಿ ಶುರುವಾದ ಪ್ರಶ್ನೆಗಳು, ಈಗ ಅದೇ ಕಾಂಗ್ರೆಸ್ ಕೊರಳಿಗೆ ಉರುಳಾಗುತ್ತಿವೆ. ಈ ಕಡೆ ಬಿಜೆಪಿ ರಾಷ್ಟ್ರಾಧ್ಯಕ್ಷರ ಆದಿಯಾಗಿ ಕಾಂಗ್ರೆಸ್ ಗೆ ಸವಾಲುಗಳ ಮೇಲೆ ಸವಾಲು ಎಸೆದಿದ್ದಾರೆ. ಈಗ ರಾಷ್ಟ್ರೀಯ ಭದ್ರತೆಯ ಹೆಸರಲ್ಲಿ ಲೂಟ್ಸನ್ ಜೋನ್ ನಲ್ಲಿ  ಈಗ ಚರ್ಚೆಯಾಗುತ್ತಿರುವುದು ಇದೆ. ಉತ್ತರ ಮಾತ್ರ ಯಾರಿಗೂ ಗೊತ್ತಾಗುತ್ತಿಲ್ಲ.

'ಸಿ' ಫಾರ್...!

ಈ 'ಸಿ' ಫಾರ್ ಗೂ ಕೂಡ ಚೀನಾ ಲಿಂಕ್ ಇದೆ. ವೀಸಾ ಇಲ್ಲದೇ ಇಂಡಿಯಾ ಪ್ರವೇಶಿಸಿರುವ ಕೊರೊನಾ ವೈರಸ್ ಕೂಡ ಚೀನಾದ್ದೇ ಅನ್ನೋದು ಮತ್ತೆ ಹೇಳಬೇಕಿಲ್ಲ. ಇಂಥ ಕೊರೊನಾ ಇಡೀ ದೇಶದಲ್ಲಿ ಆತಂಕ ಉಂಟು ಮಾಡುತ್ತಿರುವುದು ಸುಳ್ಳಲ್ಲ.

ಅದರಲ್ಲೂ ಸಮಯಕ್ಕೆ ಸರಿಯಾಗಿ ಬೆಡ್, ಟ್ರೀಟ್ ಮೆಂಟ್ ಸಿಗದೇ ಮೃತರಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ.  ದಿನಕ್ಕೆ ನಾಲ್ಕು ನೂರರಿಂದ ಐದು ನೂರು ಮಂದಿಯ ತನಕ ಸಾವಿನ ಕದ ತಟ್ಟುತ್ತಿದ್ದಾರೆ. ನಿತ್ಯ ಸುಮಾರು 20 ಸಾವಿರ ಮಂದಿಗೆ ಸೋಂಕು ತಗಲುತ್ತಿದೆ. ಸೋಂಕಿತರ ಸಂಖ್ಯೆ ಐದೂವರೆ ಲಕ್ಷ ದಾಟಿದೆ.

ದೆಹಲಿಯಲ್ಲಂತೂ ಪ್ರತಿ ನೂರು ಮಂದಿಯಲ್ಲಿ 25 ರಿಂದ 30ಗೆ ಸೋಂಕು ಹರಡುತ್ತಿದೆ ಅನ್ನೋದು ಮತ್ತಷ್ಟು ಆತಂಕ ಸೃಷ್ಟಿಸಿದೆ. ಅದರಲ್ಲೂ ಹೆಚ್ಚು ಕಡಿಮೆ 2,600 ಮಂದಿ ಈಗಾಗಲೇ ಸಾವಿನ ಕದ ತಟ್ಟಿರುವುದು ದೆಹಲಿ ನಿವಾಸಿಗಳಲ್ಲಿ ಆತಂಕ ಹೆಚ್ಚಿಸಿದೆ. ಈ ಎಲ್ಲ ಸಾವಿಗೆ ಸೂಕ್ತ ಚಿಕಿತ್ಸೆ ಸಮಯಕ್ಕೆ ಸರಿಯಾಗಿ ಸಿಗದೇ ಇರುವುದೇ ಇದಕ್ಕೆ ಕಾರಣ ಅನ್ನೋದು ಡೆಲ್ಲಿ ಸರ್ಕಾರ ಒಪ್ಪಿಕೊಂಡಿದೆ.

ಬೆಡ್ ಗಳ ಕೊರತೆ ಹಿನ್ನೆಲೆಯಲ್ಲಿ ಸೌತ್ ಡೆಲ್ಲಿ ಬಾಟಿ ಮೈನ್ಸ್ ನ ರಾಧಾಸ್ವಾಮಿ ಸತ್ಸಂಗ್ ನಲ್ಲಿ ದೊಡ್ಡ ಶೆಡ್ ನಿರ್ಮಾಣ ಮಾಡಿ ಬರೋಬ್ಬರಿ 10 ಸಾವಿರ ಬೆಡ್ ಗಳು ಸಿದ್ಧ ಮಾಡಲಾಗಿದೆ. ಆದ್ರೆ ಸೋಂಕು ಹರಡುತ್ತಿರುವ ವೇಗಕ್ಕೆ ಇವೆಷ್ಟು ದಿನ ಅನ್ನೋದೇ ಪ್ರಶ್ನೆ.

ಲಾಸ್ಟ್ ಲೈನ್: ಇನ್ನು ಈ 'ಸಿ'ಗಳ  ಆತಂಕ ಕಡಿಮೆಯಾಗುವುದು ಯಾವಾಗ? ಅಂದ್ರೆ ಡೆಲ್ಲಿಗರು ಜೋಕ್ ಮಾಡುವಂತೆ, ಮುಖಕ್ಕೆ ಮಾಸ್ಕ್, ಕೈಯಲ್ಲಿ ಸ್ಯಾನಿಟೇಜರ್ ಹಾಗು ಸಾಮಾಜಿಕ ಅಂತರ ಅಷ್ಟೆ..!

Follow Us:
Download App:
  • android
  • ios